ಹೊಸದಿಲ್ಲಿ: ಟಿಎಂಸಿ ಸಂಸದ ವಿಪಕ್ಷಗಳ ಪ್ರತಿಭಟನೆಯ ವೇಳೆ ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್ ಅವರ ಮಿಮಿಕ್ರಿ ಮಾಡಿದ ವಿವಾದ ಬುಧವಾರ ರಾಜಕೀಯ ರಂಗದ ಕೇಂದ್ರಬಿಂದುವಾಗಿದ್ದು, ಸಂಸತ್ತಿನ ಒಳಗೆ ಮತ್ತು ಹೊರಗೆ ಈ ವಿಷಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ನಮ್ಮ ಗೌರವಾನ್ವಿತ ಉಪರಾಷ್ಟ್ರಪತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ಕಂಡು ನಾನು ದಿಗ್ಭ್ರಮೆಗೊಂಡೆ. ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ವ್ಯಕ್ತಪಡಿಸಲು ಮುಕ್ತವಾಗಿರಬೇಕು, ಆದರೆ ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳೊಳಗಿರಬೇಕು. ಅದು ನಾವು ಹೆಮ್ಮೆಪಡುವ ಸಂಸದೀಯ ಸಂಪ್ರದಾಯವಾಗಿದೆ ಮತ್ತು ಭಾರತದ ಜನರು ಅದನ್ನು ಎತ್ತಿಹಿಡಿಯುವುದನ್ನು ನಿರೀಕ್ಷಿಸುತ್ತಾರೆ” ಎಂದು ದ್ರೌಪದಿ ಮುರ್ಮು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿ ಧನ್ಖರ್ ” ಮೂಲಭೂತ ಸೌಜನ್ಯಗಳು ಯಾವಾಗಲೂ ಉಳಿಯಬೇಕು ಎಂಬ ಸಮಯೋಚಿತ ಜ್ಞಾಪನೆಗಾಗಿ ರಾಷ್ಟ್ರಪತಿ ಜೀ ಅವರಿಗೆ ಧನ್ಯವಾದಗಳು.ನನ್ನ ಕೊನೆಯ ಉಸಿರು ಇರುವವರೆಗೂ ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯಲು ನಾನು ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳು ನನ್ನ ಕೆಲಸ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ”ಎಂದು ಪ್ರತಿಕ್ರಿಯಿಸಿದ್ದಾರೆ.
ಸಂಸದರ ಅಮಾನತಿನ ವಿರುದ್ಧ ಸಂಸತ್ತಿನ ಮೆಟ್ಟಿಲುಗಳ ಮೇಲೆ ಮಂಗಳವಾರ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದ ವೇಳೆ, ರಾಹುಲ್ ಗಾಂಧಿ ಅವರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಆ ಬಳಿಕ ತೀವ್ರ ರಾಜಕೀಯ ಗದ್ದಲ ಏರ್ಪಟ್ಟಿತ್ತು.