Advertisement

ಆರಕ್ಷಕರ ಗೈರು ಹಾಜರಿ ಗೀಳಿಗೆ ಬಿಸಿಮುಟ್ಟಿಸಿದ ಡಿಜಿಪಿ

12:18 PM Nov 11, 2018 | Team Udayavani |

ಬೆಂಗಳೂರು: ವರ್ಗಾವಣೆಗೊಂಡ ಸ್ಥಳದಲ್ಲಿ ತತ್‌ಕ್ಷಣ ಕರ್ತವ್ಯ ವರದಿ ಮಾಡಿಕೊಳ್ಳದೆ ಹಲವು ಕುಂಟು ನೆಪ, ವೈದ್ಯಕೀಯ ರಜೆಯ ಲಾಭ ಪಡೆದು ವಿಳಂಬ ಧೋರಣೆ ಅನುಸರಿಸುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ತನೆಗೆ ಶೀಘ್ರವೇ ಕಡಿವಾಣ ಬೀಳಲಿದೆ! 

Advertisement

ಬೇರೊಂದು ಸ್ಥಳಕ್ಕೆ ವರ್ಗಾವಣೆ ಆದ ಕೂಡಲೇ ಕೆಲವು ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರಾಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು, ವರ್ಗಾವಣೆ ಸಮಯದಲ್ಲಿಯೇ ಪದೇ ಪದೆ ವೈದ್ಯಕೀಯ ರಜೆ ಪಡೆಯುವ ಪೊಲೀಸ್‌ ಸಿಬ್ಬಂದಿ ಎಕ್ಸಿಕ್ಯೂಟೀವ್‌ ಹುದ್ದೆ ನಿರ್ವಹಿಸುವುದು ಸೂಕ್ತವಲ್ಲ,

ಅವರ ದೈಹಿಕ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಪರಿಗಣಿಸಿ ಕಡ್ಡಾಯವಾಗಿ 6 ತಿಂಗಳು ಅಥವಾ 1 ವರ್ಷ ನಾನ್‌ ಎಕ್ಸಿಕ್ಯೂಟೀವ್‌ ಹುದ್ದೆಗೆ ವರ್ಗಾಯಿಸುವ ಶಿಫಾರಸಿನ ಕುರಿತು ನ. 2ರಂದು ಸುತ್ತೋಲೆ ಹೊರಡಿಸಿದ್ದಾರೆ. ವರ್ಗಾವಣೆ ಸಮಯದಲ್ಲಿ ಗೈರು ಹಾಜರಿ, ವೈದ್ಯಕೀಯ ದಾಖಲೆಗಳನ್ನು ಸಲ್ಲಿಸುವ ಸಿಬ್ಬಂದಿ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಶಿಫಾರಸುಗಳ ಬಗ್ಗೆ ಘಟಕಾಧಿಕಾರಿಗಳು, ಡಿವೈಎಸ್‌ಪಿ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗೆ ಕೆಲವು ಸೂಚನೆ ನೀಡಿದ್ದಾರೆ. 

ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗಾವಣೆ ಸಮಯದಲ್ಲಿ ವೈದ್ಯಕೀಯ ರಜೆ ಮಂಜೂರಾತಿ ಕುರಿತು ಪ್ರಧಾನ ಕಚೇರಿಗೆ ವರದಿ ಪ್ರಸ್ತಾವನೆ ಸಲ್ಲಿಸುವ ಮುನ್ನವೇ, ಸಿಬ್ಬಂದಿ ವಿಚಾರಣೆ ಕೈಗೊಂಡು, ಖಚಿತತೆ ಪ್ರಸ್ತುತ ಪಡಿಸಬೇಕು.

 ಜತೆಗೆ, ಅಧಿಕಾರಿಗಳು/ ಸಿಬ್ಬಂದಿ ಅನಾರೋಗ್ಯದ ನಿಮಿತ್ತ ವರ್ಗಾವಣೆಯಾದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲದ್ದರೆ, ಅವರು ಮೊದಲು ವರ್ಗಾವಣೆ ಆದ ಸ್ಥಳದಲ್ಲಿ ಕರ್ತವ್ಯ ವರದಿ ಮಾಡಿಕೊಂಡು, ನಂತರ ಆಯಾ ಘಟಕದ ನಿಯಂತ್ರಣಾಧಿಕಾರಿಗಳಿಗೆ ವೈದ್ಯಕೀಯ ರಜೆಗೆ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಬೇಕು. ಆ ಮನವಿಗಳನ್ನು ಕೂಲಂಕಶವಾಗಿ ಪರಿಗಣಿಸಿ ನಿಯಮಾನುಸಾರ ರಜೆ ಮುಂಜೂರಾತಿ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 

Advertisement

ವರ್ಗಾವಣೆ ಆದೇಶದಂತೆ ಹಿಂದಿನ ಘಟಕದ ಕರ್ತವ್ಯದಿಂದ ಬಿಡುಗಡೆ ಹೊಂದಿದ ನಂತರ ಅರ್ಹ ಕಾಲಾವಧಿ ನಂತರವೂ ವರದಿ ಮಾಡಿಕೊಳ್ಳದಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರಗಳಿಗೆ ಸೂಕ್ತ ದಾಖಲೆಗಳೊಂದಿಗೆ ತಕ್ಷಣವೇ ವರದಿ ಸಲ್ಲಿಸಬೇಕು.

ಎಕ್ಸಿಕ್ಯೂಟೀವ್‌ ಹುದ್ದೆ ನಿರ್ವಹಣೆಗೆ ಅಸಮರ್ಥ ಎಂದು ನಮೂದಿಸಿ: ಯಾವುದೇ ಸಿಬ್ಬಂದಿ ವರ್ಗಾವಣೆಯ ಸಂದರ್ಭಧಲ್ಲಿಯೇ ವೈದ್ಯಕೀಯ ರಜೆ ಮೇಲೆ ತೆರಳಿದ್ದಾಗ ಅವರ ಸೇವಾ ಪುಸ್ತಕದಲ್ಲಿ ಈ ಬಗ್ಗೆ ಮಾಹಿತಿ ಉಲ್ಲೇಖೀಸಬೇಕು.

ಇದೇ ಚಾಳಿಯನ್ನು ರೂಢಿಸಿಕೊಂಡಿರುವ ಅಧಿಕಾರಿ, ಸಿಬ್ಬಂದಿ ಕಾನೂನು ಸುವ್ಯವಸ್ಥೆ ಹಾಗೂ ಎಕ್ಸಿಕ್ಯೂಟೀವ್‌ ಹುದ್ದೆ ನಿರ್ವಹಿಸಲು ಸೂಕ್ತವಲ್ಲ ಎಂದು ಸೇವಾ ಪುಸ್ತಕದಲ್ಲಿ ದಾಖಲಿಸಬೇಕು. ಅಂತಹ ಸಿಬ್ಬಂದಿ ಅಧಿಕಾರಿ ಸಿಬ್ಬಂದಿ ಎಕ್ಸಿಕ್ಯೂಟೀವ್‌/ ನಾನ್‌ ಎಕ್ಸಿಕ್ಯೂಟೀವ್‌ ಹುದ್ದೆಗೆ ನಿಯುಕ್ತಿಗೊಳಿಸುವ ಬಗ್ಗೆ ಪೊಲೀಸ್‌ ಸಿಬ್ಬಂದಿ ಮಂಡಳಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ.

ಕಾದು ನೋಡುವ ತಂತ್ರ: ಡಿವೈಎಸ್‌ಪಿ ಹಂತದಿಂದ ಕಾನ್ಸ್‌ಟೇಬಲ್‌ ಹಂತದವರೆಗಿನ ಕೆಲವು ಸಿಬ್ಬಂದಿ ವರ್ಗಾವಣೆ ಆದ ಸಂದರ್ಭದಲ್ಲಿ ತಕ್ಷಣ ಹೊಸದಾಗಿ ನಿಯುಕ್ತಿಗೊಂಡ ಸ್ಥಳದಲ್ಲಿ ಕರ್ತವ್ಯ ವರದಿ ಮಾಡಿಕೊಳ್ಳುತ್ತಿರಲಿಲ್ಲ. ಎರಡನೇ ವರ್ಗಾವಣೆ ಪಟ್ಟಿಯಲ್ಲಿ ತಮಗೆ ಬೇಕಾದ ಪೊಲೀಸ್‌ ಠಾಣೆಯಲ್ಲಿ ವರ್ಗಾವಣೆಗೆ ಅವಕಾಶ ಸಿಗಬಹುದು ಎಂದು ಕಾದು ನೋಡುತ್ತಿದ್ದರು.

ಇನ್ನೂ ಕೆಲವು ಸಿಬ್ಬಂದಿ ವರ್ಗಾವಣೆ ವೇಳೆಯಲ್ಲಿಯೇ ಅನಾರೋಗ್ಯದ ನೆಪ ಹೇಳಿ ರಜೆ ಪಡೆಯುತ್ತಿದ್ದರು. ಬಳಿಕ, ವೈದ್ಯಕೀಯ ರಜೆ ಮಂಜೂರಾತಿ ಕೋರುತ್ತಿದ್ದರು. ಈ ಹಂತದಲ್ಲಿ ವರ್ಗಾವಣೆಗೊಂಡ ವಿಭಾಗ, ಇಲ್ಲವೇ ಠಾಣೆಯಲ್ಲಿ ಸಿಬ್ಬಂದಿ ಕೊರತೆ, ಅಲ್ಲಿನ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಡಿಜಿಪಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ಉನ್ನತ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇಲಾಖೆಯ ವಿವಿಧ ಕಚೇರಿಗಳಿಂದ ಹೊರಡಿಸಲಾಗುತ್ತಿರುವ ವರ್ಗಾವಣೆ ಆದೇಶದಂತೆ ಕೆಲವು ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಗೊಂಡ ಬಳಿಕ ವರ್ಗಾವಣೆಗೊಂಡ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಅನಧಿಕೃತವಾಗಿ ಗೈರು ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳ ಈ ಪ್ರವೃತ್ತಿ ಶಿಸ್ತಿನ ಇಲಾಖೆಯ ಕಾರ್ಯ ವೈಖರಿ ಮೇಲೆ ಪರಿಣಾಮ ಬೀರಲಿದೆ. 
-ನೀಲಮಣಿ ಎನ್‌.ರಾಜು, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ 

Advertisement

Udayavani is now on Telegram. Click here to join our channel and stay updated with the latest news.

Next