ವಿಜಯಪುರ: ದೇವೂರ ಬಳಿ ಹಳ್ಳದ ಸೇತುವೆ ಕುಸಿದಿದ್ದು, ಅಪಾಯದಲ್ಲಿರುವ ಸೇತುವೆ ಮೇಲೆ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ.
ದೇವರಹಿಪ್ಪರಗಿ ಬಳಿಯ ದೇವೂರ ಹಳ್ಳದ ಸೇತುವೆ ಕುಸಿತವಾಗಿದ್ದು, ತಾಳಿಕೋಟಿ ದೇವರಹಿಪ್ಪರಗಿ ಮಧ್ಯೆ ರಸ್ತೆ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.
ಶುಕ್ರವಾರ ರಾತ್ರಿ ಹಳ್ಳದ ಸೇತುವೆಯ ಮಧ್ಯ ಭಾಗದಲ್ಲಿ ಸೇತುವೆ ಕುಸಿತವಾಗಿ ಭಾರಿ ಗಾತ್ರದ ಗುಂಡಿ ಬಿದ್ದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ಅಪಾಯದ ಎಚ್ಚರಿಕೆ ನೀಡಲು ಗುಂಡಿಯ ಸುತ್ತಲೂ ಕಲ್ಲುಗಳನ್ನು ಇರಿಸಿ, ಮುಳ್ಳು ಬೇಲಿಯನ್ನು ಹಾಕಿದ್ದಾರೆ.
ಪರಿಣಾಮ ಕುಸಿದಿರುವ ಸದರಿ ಸೇತುವೆ ಮೇಲೆ ದ್ವಿಚಕ್ರ ವಾಹನಗಳು ಹೊರತಾಗಿ ಇತರೆ ವಾಹನ ಸಂಚಾರ ಸಂಪೂರ್ಣ ಅಪಾಯ ಎಂಬ ಮಟ್ಡಿಗೆ ಸೇತುವೆ ದುರ್ಬಲಗೊಂಡಿದೆ.
ವಿಷಯ ತಿಳಿಯುತ್ತಲೇ ದೇವರಹಿಪ್ಪರಗಿ ಠಾಣೆ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ತ್ವರಿತವಾಗಿ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಸುದೀರ್ಘ ಅವಧಿಗೆ ಸಂಚಾರ ನಿರ್ಬಂಧ ಇಲ್ಲದಂತೆ ಸೇತುವೆ ನಿರ್ಮಿಸುವುದಾಗಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಭರವಸೆ ನೀಡಿದ್ದಾರೆ.