ಪಣಜಿ: ನಾನು ನನ್ನ ಬದುಕನ್ನು ಕನ್ನಡಕ್ಕಾಗಿ ಮೀಸಲಿಟ್ಟಿದ್ದೇನೆ. ನನ್ನ ಮೊದಲನೇಯ ಕೆಲಸ ಕನ್ನಡ, ಕನ್ನಡಕ್ಕಾಗಿ ನಾನು ಯಾವತ್ತೂ ಕೂಡ ಸಿದ್ಧ, ಸನ್ನದ್ಧ. ಕನ್ನಡ ಎಂದು ಯಾರು ಕರೆದರೂ ನಾನು ತೆರಳುತ್ತೇನೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿ ಗೋವಾದಲ್ಲಿ ಕನ್ನಡದ ಜಾತ್ರೆಯನ್ನು ಮಾಡೋಣ, ಕನ್ನಡಕ್ಕಾಗಿ ಶಿಸ್ತನ್ನು ಪಾಲಿಸೋಣ ಎಂದು ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಗೋವಾದ ಮಾಪ್ಸಾದ ಬೊಡಗೇಶ್ವರ ಸಭಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಗೋವಾ ಜಿಲ್ಲಾ ಘಟಕ ಹಾಗೂ ತಾಲೂಕಾ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ನೂತನ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಉಧ್ಘಾಟನೆ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ದಣ್ಣ ಮೇಟಿ ಮಾತನಾಡಿ- ಗಡಿಗೆ ಸುಟ್ಟಷ್ಟೂ ಗಟ್ಟಿಯಾಗುತ್ತದೆ, ಸುಟ್ಟ ಗಡಿಗೆ ಮಣ್ಣಿನ ಮಡಿಕೆಯಾಗಿ ಹೊರಬಹುತ್ತದೆ. ನಾವು ಸುಟ್ಟ ಗಡಿಗೆಯಾಗಬೇಕು ಎಂದ ಅವರು- ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ರವರು ಹಾವೇರಿಯಲ್ಲಿ ನಡೆಯಲಿರುವ 86 ನೇಯ ಜಕನ್ನಡ ಸಾಹಿತ್ಯ ಸಮ್ಮೇಳನದ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವುದರಿಂದ ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ ಎಂದರು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇಂಡೋ ಪೋರ್ಚುಗೀಸ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಅರವಿಂದ ಯಾಳಗಿ ಮಾತನಾಡಿ-ಗೋವಾದಲ್ಲಿ ನಡೆಯುತ್ತಿರುವ ಕನ್ನಡ ಚಟುವಟಿಕೆಯನ್ನು ಕಂಡಾಗ ಮಹಳ ಸಂತೋಷವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕಾ ಘಟಕ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ , ಉತ್ತರ ಗೋವಾ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಕೊಟ್ಟಿಗೇರಿ, ಗೌರವ ಕೋಶಾಧ್ಯಕ್ಷ ನಾಗರಾಜ ಶಾನಭಾಗ, ಗೌ. ಕಾರ್ಯದರ್ಶಿ ನಿಂಗಪ್ಪ ಪಾಟೋಳೆ , ಮಾಪ್ಸಾ ನಗರಾಧ್ಯಕ್ಷೆ ವಾಯಂಗಣಕರ್, ವಿಜಯಪುರ ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ನಗರಸಭಾ ಸದಸ್ಯ ಸುಶಾಂತ ಹರಮಲಕರ್, ಕಸಾಪ ಗೋವಾ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಕಸಾಪ ದಕ್ಷಿಣ ಗೋವಾ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕಾ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಗೌ. ಕಾರ್ಯದರ್ಶಿ ನಿಂಗಪ್ಪ ಪಾಟೋಳೆ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು, ಉತರ ಕರ್ನಾಟಕ ಕನ್ನಡ ಕಲಾವಿದರ ಸಂಘ ಹಾವೇರಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕುಮಾರಿ ರೇಣುಕಾ ಪಾಟೀಲ ಸಂಗಡಿಗರಿಂದ ನಾಡಗೀತೆ ಹಾಡಿದರು.