Advertisement

ದೆವ್ವ ಓಡಿಸೋ ಪ್ರೋಗ್ರಾಂ!

11:06 AM Mar 03, 2018 | |

ಎಲ್ಲಾದರೂ ದೆವ್ವದ ಕಾಟವಿದೆ, ದಾರಿಹೋಕರ ಕಣ್ಣಿಗೆ ರಾತ್ರಿ ದೆವ್ವ ಕಾಣಿಸುತ್ತದೆ ಎಂದು ಗೊತ್ತಾದರೆ ಆ ತಂಡವು ದೆವ್ವದ ಬೆನ್ನತ್ತಿ ಹೊರಡುತ್ತದೆ. ದೆವ್ವ ಓಡಾಡುವ ಜಾಗಕ್ಕೆ ಕ್ಯಾಮರಾ ಇಡೋದು ಆ ತಂಡದ ಅಭ್ಯಾಸ. ಕೇಳಲು ಇದು ತುಂಬಾ ಚೆನ್ನಾಗಿರುತ್ತದೆ. ಸಿನಿಮಾ ಆರಂಭವಾಗುತ್ತಿದ್ದಂತೆ ತೆರೆಮೇಲೆ ಒಂದಷ್ಟು ಮಂದಿ ಹೀಗೆ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. “ನಾವು ದೆವ್ವವನ್ನು ಹುಡುಕಿಕೊಂಡು ಟ್ರೆಕ್ಕಿಂಗ್‌ ಹೋಗುತ್ತೇವೆ.

Advertisement

ಈ ಸಂದರ್ಭದಲ್ಲಿ ಸಾಕಷ್ಟು ರೋಚಕ ಘಟನೆಗಳು ನಡೆದಿವೆ. ಅದರಲ್ಲೊಂದು ಈ ಘಟನೆ ಕೂಡಾ’ ಎಂದು ತುಂಬಾ ರೋಚಕವಾಗಿ ಹೇಳುತ್ತಾರೆ. ಆ ರೋಚಕತೆಯನ್ನು ತೆರೆಮೇಲೆ ಕಣ್ತುಂಬಿಕೊಳ್ಳಬಹುದು ಎಂದು ಕುತೂಹಲದಿಂದ ನೀವು ಸೀಟಿನಂಚಿಗೆ ಬಂದರೆ ಬೇಗನೇ ನಿಮಗೆ ನಿರಾಸೆಯಾಗುತ್ತದೆ ಮತ್ತು ಸೀಟಿಗೆ ಒರಗಿಬಿಡುತ್ತೀರಿ. ಮಾತಲ್ಲಷ್ಟೇ ರೋಚಕತೆ ಇದೆಯೇ ಹೊರತು ದೃಶ್ಯಗಳಲ್ಲಿ ಇಲ್ಲ.

ಮುಖ್ಯವಾಗಿ ತಾವು ಏನು ಹೇಳಲು ಹೊರಟಿದ್ದೇವೆಂಬುದನ್ನು ಮರೆತು ಸಿನಿಮಾ ಮಾಡಿದರೆ ಏನಾಗುತ್ತದೋ ಅದೇ ಇಲ್ಲಿ ಆಗಿದೆ. ಹಾಗಾಗಿ, ಇಲ್ಲಿ ಯಾವುದೇ ರೋಚಕತೆಯನ್ನು ನಿರೀಕ್ಷಿಸುವಂತಿಲ್ಲ. ಸಹಜವಾಗಿಯೇ ಹಾರರ್‌ ಸಿನಿಮಾಗಳು ಪಾಲಿಸುವ ಗಾಳಿ, ಬಾಗಿಲು ಬೀಳ್ಳೋ ಸದ್ದು, ಖಾಲಿ ಬಂಗಲೆಯಲ್ಲಿ ಯಾರೋ ಓಡಾಡಿದಂತೆ ಭಾಸವಾಗುವ ಅಂಶಗಳ ಮೂಲಕ ಪ್ರೇಕ್ಷಕರನ್ನು ಹೆದರಿಸುವ ಪ್ರಯತ್ನ ಮಾಡಲಾಗಿದೆ.

ಆದರೆ, ಹಾರರ್‌ ಸಿನಿಮಾಗಳನ್ನು ನೋಡಿ ಪಂಟರ್‌ ಆಗಿರುವ ಪ್ರೇಕ್ಷಕನಿಗೆ ಇವೆಲ್ಲವೂ ಕಾಮಿಡಿಯಾಗಿ ಕಾಣುತ್ತದೆ. ಹಾರರ್‌ ಸಿನಿಮಾದಲ್ಲಿ ಗಟ್ಟಿಕಥೆಯ ಜೊತೆಗೆ ಲೊಕೇಶನ್‌ ಹಾಗೂ ನಿರೂಪಣೆ ಕೂಡಾ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, “3000’ನಲ್ಲಿ ನಿರ್ದೇಶಕರು ತೆರೆಹಿಂದೆ ನಿಂತು ಮಾಡಬೇಕಾದ ಕೆಲಸವನ್ನು ಮರೆತು ತೆರೆಮುಂದೆ ಬಂದಿದ್ದಾರೆ. ಹಾರರ್‌ ಸಿನಿಮಾ ಮಾಡುವ ಪ್ರತಿಯೊಬ್ಬರು ಚಿತ್ರೀಕರಣ ವೇಳೆ ನಮಗೆ ಆ ತರಹ ಅನುಭವಾಯಿತು,

ಈ ತರಹ ಆಯಿತು ಎಂದು ಹೇಳುತ್ತಲೇ ಇದ್ದಾರೆ. “3000′ ಸಿನಿಮಾ ಕೂಡಾ ಆರಂಭವಾಗೋದು ಹಾಗೆಯೇ. ತೆರೆಮೇಲೆ ಸಂದರ್ಶಕನ ಜೊತೆ ಚಿತ್ರದ ನಿರ್ಮಾಪಕ, ನಿರ್ದೇಶಕರು ತಮ್ಮಗಾದ ರೋಚಕ ಅನುಭವಗಳನ್ನು ಹೇಳಿಕೊಳ್ಳುತ್ತಲೇ ಸಿನಿಮಾ ತೆರೆದುಕೊಳ್ಳುತ್ತದೆ. ಸಿನಿಮಾ ಆರಂಭವಾಗಿ ಮುಗಿಯುವ ಹೊತ್ತಿಗೆ ಇದು ಹಾರರ್‌ ಸಿನಿಮಾವಲ್ಲ ಆತ್ಮಗಳನ್ನು ಓಡಿಸುವ “ಪ್ರೋಗ್ರಾಂ’ ಎಂಬುದು ಸ್ಪಷ್ಟವಾಗುತ್ತದೆ.

Advertisement

ಮನುಷ್ಯರಲ್ಲಿ ಸೇರಿಕೊಂಡಿರುವ ಆತ್ಮಗಳನ್ನು ಚರ್ಚ್‌ ಪಾದ್ರಿಯೊಬ್ಬರು ತಮ್ಮ ಧರ್ಮದ ಅನುಸಾರ ಹೇಗೆ ಓಡಿಸುತ್ತಾರೆ ಎಂಬಲ್ಲಿಗೆ ಕಥೆ ಮುಗಿದು ಹೋಗುತ್ತದೆ. ಸಿನಿಮಾದ ನಿಜವಾದ ಕಥೆ ಕೂಡಾ ಇದೇ. ಈ ಅಂಶವನ್ನು ನೀಟಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಹೇಳುವ ಅವಕಾಶ ನಿರ್ದೇಶಕರಿಗಿತ್ತು. ಆದರೆ, ಕಥೆಯನ್ನು ದ್ವೀಪವೊಂದರಲ್ಲಿ ನಡೆಯುತ್ತದೆ ಎನ್ನುತ್ತಾ ಮಬ್ಬು-ಬೆಳಕಿನಲ್ಲಿ ಚಿತ್ರೀಕರಿಸಿದ್ದಾರೆ.

ಇಲ್ಲಿ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳುವುದು ಕೂಡಾ ಪ್ರೇಕ್ಷಕನಿಗೆ ಸವಾಲಿನ ಕೆಲಸ. ಸಿನಿಮಾ ಆರಂಭವಾಗಿ ಮುಗಿಯುವ ಹೊತ್ತಿಗೆ ಅದೆಷ್ಟು ಬಾರಿ “ಮುಂದಿನ ಐದು ನಿಮಿಷದ ದೃಶ್ಯ ಡಿಲೀಟ್‌ ಆಗಿದೆ’ ಎಂದು ಬರುತ್ತದೋ ಲೆಕ್ಕವಿಲ್ಲ. ಸಿನಿಮಾ ಆರಂಭವಾಗಿ ಮಧ್ಯಂತರದವರೆಗೆ ದೆವ್ವ ಹುಡುಕಲು ಹೊರಟ ತಂಡದ ಮೋಜು-ಮಸ್ತಿಯೇ ತೆರೆಮೇಲೆ ರಾರಾಜಿಸುತ್ತದೆ. ಇನ್ನೇನು ತಂಡಕ್ಕೆ ದೆವ್ವ ಸಿಕ್ಕೇ ಬಿಡ್ತು ಎಂದು ನಿಮ್ಮಲ್ಲಿ ಕುತೂಹಲ ಮೂಡಿಸುವಷ್ಟರಲ್ಲಿ ನಿಮಗೆ ದೆವ್ವವಲ್ಲ,

3000 ಸಾವಿರ ಆತ್ಮಗಳು ಸೇರಿಕೊಂಡಿರುವ ಹುಡುಗಿ ಎಂದು ಗೊತ್ತಾಗುತ್ತದೆ. ಕ್ಷಣಕ್ಷಣಕ್ಕೊಂದು ಅವತಾರವೆತ್ತುವುದರಿಂದ ನೀವು “ಮಲ್ಟಿಪಲ್‌ ಪರ್ಸನಾಲಿಟಿ ದೆವ್ವ’ ಎಂದು ಕರೆಯಬಹುದು. ಚಿತ್ರದಲ್ಲಿ ರಬ್ಬುನಿ ಕೀರ್ತಿ, ಸುಹಾನ್‌, ಪ್ರಸಾದ್‌, ಮಹಂತೇಶ್‌, ಸ್ವಾತಿ, ಉಜ್ಜಾಲ, ಕಾವ್ಯ, ಪಲ್ಲವಿ ಸೇರಿದಂತೆ ಅನೇಕರು ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರ ನಟನೆ ಬಗ್ಗೆ ಹೇಳುವಂಥದ್ದೇನಿಲ್ಲ. ಹಾರರ್‌ ಸಿನಿಮಾಗಳ ಮಬ್ಬುಗತ್ತಲು, ಬೆಚ್ಚಿ ಬೀಳಿಸೋ ಹಿನ್ನೆಲೆ ಸಂಗೀತ ಇಲ್ಲೂ ಮುಂದುವರೆದಿದೆ.

ಚಿತ್ರ: 3000
ನಿರ್ಮಾಣ: ಶಂಕರ್‌ 
ನಿರ್ದೇಶನ: ರಬ್ಬುನಿ ಕೀರ್ತಿ
ತಾರಾಗಣ: ರಬ್ಬುನಿ ಕೀರ್ತಿ, ಸುಹಾನ್‌, ಪ್ರಸಾದ್‌, ಮಹಂತೇಶ್‌, ಸ್ವಾತಿ, ಉಜ್ಜಾಲ, ಕಾವ್ಯ, ಪಲ್ಲವಿ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next