ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅಂಗೀಕರಿಸಿರುವುದಾಗಿ ಮೂಲಗಳು ತಿಳಿಸಿವೆ. 170 ಶಾಸಕರ ಬೆಂಬಲ ಇರುವುದಾಗಿ ಘೋಷಿಸಿರುವ ಬಿಜೆಪಿ ಮುಂದಿನ ಎರಡು, ಮೂರು ದಿನಗಳಲ್ಲಿ ಹೊಸ ಸರ್ಕಾರ ರಚಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉದಯಪುರ ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸಬೇಕು: ಸಿಎಂ ಬೊಮ್ಮಾಯಿ
ಮಹಾರಾಷ್ಟ್ರದ ಮಹಾ ಅಘಾಡಿ ಮೈತ್ರಿ ಸರ್ಕಾರದ ಶಿವಸೇನಾದ ಏಕನಾಥ ಶಿಂಧೆ ಬಂಡಾಯವೆದ್ದ ಪರಿಣಾಮ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ 2.5 ವರ್ಷಗಳ ನಂತರ ಪತನಗೊಂಡಿದೆ. ಶಿಂಧೆ ಬಿಜೆಪಿ ಜತೆ ಕೈಜೋಡಿಸುವ ಮೂಲಕ ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಿದ್ಧತೆ ನಡೆಸಿದೆ.
ಸಚಿವ ಸ್ಥಾನದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅವೆಲ್ಲವೂ ಅಂತಿಮಗೊಳ್ಳುವವರೆಗೆ ಊಹಾಪೋಹಕ್ಕೆ ಕಿವಿಗೊಡಬಾರದು ಎಂದು ಶಿಂಧೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ವಿಶ್ವಾಸಮತ ಸಾಬೀತುಪಡಿಸುವ ಅಗತ್ಯ ಇಲ್ಲ ಎಂದು ಗವರ್ನರ್ ತಿಳಿಸಿದ್ದಾರೆ.
ದೇವೇಂದ್ರ ಫಡ್ನವೀಸ್ ಬುಧವಾರ ರಾಜ್ಯಪಾಲ ಕೋಶಿಯಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಕುರಿತು ಮಹಾರಾಷ್ಟ್ರ ಬಿಜೆಪಿ ಮರಾಠಿಯಲ್ಲಿ ಟ್ವೀಟ್ ಮಾಡಿದ್ದು, ನೂತನ ಮಹಾರಾಷ್ಟ್ರದ ರಚನೆಗಾಗಿ, ನಾನು ಮತ್ತೆ ಬಂದಿದ್ದೇನೆ. ಜೈ ಮಹಾರಾಷ್ಟ್ರ ಎಂದು ಉಲ್ಲೇಖಿಸಿದೆ.
ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಏಕನಾಥ ಶಿಂಧೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.