Advertisement

ಕೇಂದ್ರದಿಂದ ಅಭಿವೃದ್ಧಿ ಪೂರಕ ಬಜೆಟ್‌: ಬಿ.ವೈ. ರಾಘವೇಂದ್ರ

06:37 PM Feb 14, 2021 | Team Udayavani |

ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್‌ ಅಭಿವೃದ್ಧಿಗೆ ಪೂರಕವಾಗಿದ್ದು ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರಾ ನಂತರ ಮಂಡಿಸಲಾದ ಕೆಲವೇ ಕೆಲವು ಬಜೆಟ್‌ಗಳಲ್ಲಿ ಉತ್ತಮ ಬಜೆಟ್‌ ಇದಾಗಿದೆ. 2025 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್‌ ಆರ್ಥಿಕ ವ್ಯವಸ್ಥೆಯತ್ತ ಒಯ್ಯಲಿದೆ ಎಂದರು. ಕೃಷಿ ಉತ್ಪಾದನೆ ಪ್ರಮಾಣ ಮತ್ತು ಮೂಲ ಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ಅಭಿವೃದ್ಧಿಗೆ ಈ ಬಜೆಟ್‌ ಪೂರಕ ಎನಿಸಲಿದೆ. ಅಂತಾರಾಷ್ಟ್ರೀಯ ಹಣಕಾಸು ನಿ ಧಿಯು (ಐಎಂ. ಎಫ್‌) ಭಾರತವು ಅತಿ ವೇಗದಿಂದ ಅಭಿವೃದ್ಧಿ ಸಾ  ಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ಮೂಲ ಸೌಕರ್ಯಕ್ಕೆ ಗರಿಷ್ಟ ಒತ್ತನ್ನು ನೀಡಲಾಗಿದೆ ಎಂದರು.

ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂಲ ಸೌಕರ್ಯ ವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುವುದು. 2021-22 ನೇ ಸಾಲಿನ ಕೇಂದ್ರ ಬಜೆಟ್‌ನಡಿ 34,83,236 ಕೋಟಿ ರೂ. ವಿವಿಧ ಕ್ಷೇತ್ರಗಳಡಿ ವ್ಯಯಿಸಲು ಉದ್ದೇಶಿಸಲಾಗಿದೆ. ವಿತ್ತೀಯ ಕೊರತೆ ಕಳೆದ ಬಾರಿ ಶೇ 4.6 ರಷ್ಟಿದ್ದು, ಈ ಬಾರಿ ಶೇ 6.8 ರಷ್ಟಿದ್ದರೂ ಮೂಲ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡುವ ಕಾರಣ ಸರಕು ಸೇವಾ ಕ್ಷೇತ್ರ, ಆರೋಗ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎನಿಸಲಿದ್ದು, ಈ ಬಜೆಟ್‌ನ್ನು ಸ್ವಾಗತಿಸುತ್ತೇನೆ ಎಂದರು. ಈ ಬಜೆಟ್‌ನಲ್ಲಿ ರೈತರ ಕಲ್ಯಾಣಕ್ಕೆ, ಸಮಗ್ರ ಆರೋಗ್ಯ-ಯೋಗಕ್ಷೇಮಕ್ಕೆ, ಶುದ್ಧ ನೀರಿಗೆ, ರಾಷ್ಟ್ರೀಯ ಹೆದ್ದಾರಿಗೆ, ನೈಸರ್ಗಿಕ ಅನಿಲ ಪೂರೈಕೆ, ಇಂಧನ ಕ್ಷೇತ್ರಕ್ಕೆ, ದೇಶೀಯ ಉತ್ಪಾದನೆಗೆ, ಸರ್ವರಿಗೂ ತಲೆಯ ಮೇಲೊಂದು ಸೂರು, ಆದಾಯ ತೆರಿಗೆ ಸುಧಾರಣೆಗೆ ಹಾಗೂ ಸಂಪನ್ಮೂಲ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲು ಬಜೆಟ್‌ ನಲ್ಲಿ ಪ್ರಯತ್ನಿಸಲಾಗಿದೆ. 13 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮೂಲ ಸೌಕರ್ಯ ವ್ಯವಸ್ಥೆ ನಿರ್ಮಾಣ, ಬೆಂಗಳೂರಿನಲ್ಲಿ 2ನೇ ಹಂತದ ಮೆಟ್ರೋ ನಿರ್ಮಾಣ ಸೇರಿದಂತೆ ಇನ್ನಿತರೆ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ ಎಂದರು.

ಶಿವಮೊಗ್ಗದಲ್ಲಿ ಏ.15 ರಂದು ಮಧ್ಯಾಹ್ನ 12.30ಕ್ಕೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಭದ್ರಾವತಿಯ ಕಡದಕಟ್ಟೆಯಲ್ಲಿ 25.92ಕೋಟಿ ವೆಚ್ಚದ, ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ 60.70 ಕೋಟಿ ರೂ. ವೆಚ್ಚದ ಹಾಗೂ ಕಾಶಿಪುರದಲ್ಲಿ 29.63ಕೋಟಿ ರೂ. ವೆಚ್ಚದ ರೈಲ್ವೆ ಮೇಲು ಸೇತುವೆಗಳಿಗೆ ಕೇಂದ್ರ ರೈಲ್ವೆ ಸಚಿವ ಪಿಯುಶ್‌ ಗೋಯಲ್‌ ವರ್ಚುಯಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಪಕ್ಷದ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್‌.ರುದ್ರೇಗೌಡ, ಕೆ.ಬಿ.ಅಶೋಕ್‌ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ಮುಖಂಡರಾದ ಎಂ.ಬಿ.ಭಾನು ಪ್ರಕಾಶ್‌, ಎಸ್‌.ದತ್ತಾತ್ರಿ, ಡಿ.ಎಸ್‌.ಅರುಣ್‌, ಪವಿತ್ರ ರಾಮಯ್ಯ, ಎಸ್‌.ಎಸ್‌. ಜ್ಯೋತಿಪ್ರಕಾಶ್‌, ಜಗದೀಶ್‌, ಜ್ಞಾನೇಶ್ವರ್‌, ಚನ್ನಬಸಪ್ಪ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next