ತಿ.ನರಸೀಪುರ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲದಿ ದ್ದರೂ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಮುಂದಿನ ಅವಧಿಯಲ್ಲಿ ಗ್ರಾಮಗಳು ಅಭಿವೃದ್ಧಿ ಪರ್ವವನ್ನೇ ಕಾಣಲಿವೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕಾಲುವೆ ಮತ್ತು ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ 1.7 ಕೋಟಿ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ತಂದೆಯವರು ವರುಣಾ ಕ್ಷೇತ್ರದ ಶಾಸಕರಾಗಿ ಹಾಗೂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಬಹುತೇಕ ಗ್ರಾಮಗಳು ಹಿಂದೆಂದೂ ಕಾಣದ ಅಭಿವೃದ್ಧಿ ಕಂಡಿವೆ. ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ನೀಡುವ ಮೂಲಕ ರಾಜ್ಯದ ಯಾವುದೇ ಭಾಗದಲ್ಲಿಯೂ ಆಗದಷ್ಟು ಅಭಿವೃದ್ಧಿ ಕಾಮಗಾರಿಗಳು ವರುಣಾ ಕ್ಷೇತ್ರದಲ್ಲಾಗಿವೆ ಎಂದರು.
ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಪರ್ವವನ್ನು ಕ್ಷೇತ್ರದ ಜನತೆ ಸಹ ಗಮನಿಸಿದ್ದಾರೆ. ತಂದೆ ಅವಧಿಯ ನಂತರ ಶಾಸಕನಾದ ನಾನೂ ಸಹ ನಮ್ಮ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೂ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ನೂರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿದ್ದೇನೆ. ಬಿಜೆಪಿ ಪಕ್ಷದವರ ತಾರತಮ್ಯ ನೀತಿಯ ನಡುವೆಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿರುವ ಕ್ಷೇತ್ರದ ಜನತೆ ಮತ್ತೂಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಮಾಡಿ ಕೊಟ್ಟಲ್ಲಿ ಇನ್ನೂ ಹೆಚ್ಚಿನ ಜನೋಪಯೋಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಚಿಂತನೆ ನಡೆಸ ಬೇಕಿದೆ ಎಂದರು.
ಇದೇ ವೇಳೆ ಶಾಸಕರು ಕೆಆರ್‌ಐಡಿಎಲ್ ಇಲಾಖೆಯಿಂದ ಹುನುಗನಹಳ್ಳಿ ಹಾಗೂ ರಂಗಸಮುದ್ರ ಗ್ರಾಮಗಳಲ್ಲಿ ತಲಾ 20 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಕುಪ್ಯಾ ಗ್ರಾಮದಲ್ಲಿ 5 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸುವ ಆಸ್ಪತ್ರೆ ಪಾರ್ಕಿಂಗ್, ತುಂಬಲ ಗ್ರಾಮದಲ್ಲಿ 25 ಲಕ್ಷ, ಹಿಟ್ಟುವಳ್ಳಿಯಲ್ಲಿ 10 ಲಕ್ಷ ಮತ್ತು ಪಟ್ಟೇಹುಂಡಿ ಗ್ರಾಮದಲ್ಲಿ 10 ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಕಾವೇರಿ ನೀರಾವರಿ ನಿಗಮದ ವತಿಯಿಂದ ಮಾದೇಗೌಡನ ಹುಂಡಿ ಹಾಗು ರಂಗನಾಥಪುರಹುಂಡಿ ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ಕಾಲುವೆ ಏರಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ವತಿಯಿಂದ, ವಿವೇಕಾ ಶಾಲಾ ಯೋಜನೆಯಡಿ ಕುಪ್ಯ, ಇಂಡವಾಳು ಹಾಗು ರಾಮನಾಥಪುರ ಹುಂಡಿ ಗ್ರಾಮಗಳಲ್ಲಿ ತಲಾ 15 ಲಕ್ಷ ರೂ.ಗಳ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.