Advertisement

ಒಗ್ಗಟ್ಟಿನಿಂದ ಶ್ರಮಿಸಿದರೆ ಗ್ರಾಮದ ಅಭಿವೃದ್ಧಿ : ಅಂಗಾರ

02:14 PM Feb 14, 2018 | Team Udayavani |

ಕಡಬ: ಗ್ರಾಮದ ಅಭಿವೃದ್ಧಿಯಾಗ ಬೇಕಾದರೆ ಅಲ್ಲಿನ ಜನರು ಒಗ್ಗಟ್ಟಿನಿಂದ ಶ್ರಮಿಸಬೇಕು. ಊರವರು ಏಕ ಮನಸ್ಸಿನಿಂದ ಪ್ರಯತ್ನಿಸಿದರೆ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಕುಟ್ರಾಪ್ಪಾಡಿಯ ಅಲಾರ್ಮೆ ಪ್ರದೇಶವೇ ಉದಾಹರಣೆ ಎಂದು ಸುಳ್ಯ ಶಾಸಕ ಎಸ್‌. ಅಂಗಾರ ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ಕುಟ್ರಾಪ್ಪಾಡಿ ಗ್ರಾಮದ ಅಲಾರ್ಮೆ ಅಂಗನವಾಡಿ ಕೇಂದ್ರಕ್ಕೆ 2017-18ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ತಮ್ಮ ಊರಿನ ಮೂಲಸೌಕರ್ಯಗಳ ಕುರಿತು ಅಲಾರ್ಮೆಯ ಜನರು ನಿರಂತರವಾಗಿ ಜನಪ್ರತಿನಿಧಿಗಳಿಗೆ ಒತ್ತಡ ತರುವ ಮೂಲಕ ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಂದು ಗ್ರಾಮದಲ್ಲೂ ಜನರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ದೇಶ ಉತ್ತುಂಗಕ್ಕೆ ಏರಲಿದೆ. 

ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳು ತಮಗೆ ಸಿಕ್ಕಿರುವ ಅವಕಾಶವನ್ನು ಅಧಿಕಾರ ಎಂದು ಭಾವಿಸಬಾರದು. ಅದೊಂದು ಜವಾಬ್ದಾರಿ ಎಂದು ತಿಳಿದು ಪ್ರಾಮಾಣಿಕತೆ ಮತ್ತು ಸೇವಾ ಭಾವದಿಂದ ಕೆಲಸ ಮಾಡಿದಾಗ ಜನರ ಮನಸ್ಸನ್ನು ಗೆಲ್ಲಲು ಸಾಧ್ಯ ಎಂದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌, ಸರಕಾರಗಳು ಗ್ರಾಮಗಳ ಅಭಿವೃದ್ಧಿಗಾಗಿ ಅನುದಾನ ನೀಡುತ್ತವೆ. ಆದರೆ ಅದನ್ನು ಪಡೆದುಕೊಳ್ಳುವ ಮುತುವರ್ಜಿ ಗ್ರಾಮಸ್ಥರಿಗೆ ಇರಬೇಕು. ಸರಕಾರದ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸುವಲ್ಲಿ ಊರವರು ಕೈಜೋಡಿಸಿದಾಗ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಲು ಸಾಧ್ಯ ಎಂದರು.

ತಾ.ಪಂ. ಸದಸ್ಯ ಗಣೇಶ್‌ ಕೈಕುರೆ ನಾಮಫಲಕ ಅನಾವರಣ ಮಾಡಿದರು. ಗ್ರಾ.ಪಂ. ಅಧ್ಯಕ್ಷೆ ಜಾನಕಿ ಅಧ್ಯಕ್ಷತೆ ವಹಿಸಿದ್ದರು. ಕಡಬ ನಾಡಕಚೇರಿಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಆನಂದ ಪೂಜಾರಿ ಅಲಾರ್ಮೆ, ಸದಸ್ಯೆ ವಿದ್ಯಾ ಕಿರಣ್‌ ಗೋಗಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಭವಾನಿ, ಉದ್ಯೋಗ ಖಾತರಿ ಯೋಜನೆಯ ಎಂಜಿನಿಯರ್‌ ಮನೋಜ್‌ ಕುಮಾರ್‌, ನೂತನ ಕಟ್ಟಡ ಉದ್ಘಾಟನ ಸಮಿತಿಯ ಅಧ್ಯಕ್ಷ ಚಂದ್ರಹಾಸ ಅಮೈ ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರದ ಅಭಿವೃದ್ಧಿಯಲ್ಲಿ ಶ್ರಮಿಸಿದ ಶಶಾಂಕ ಗೋಖಲೆ, ಕ್ಸೇವಿಯರ್‌ ಬೇಬಿ, ಲೀಲಾದೇವಿ ಅಲಾರ್ಮೆ,
ಅಝೀಜ್‌ ಅಲಾರ್ಮೆ, ಆನಂದ ಪೂಜಾರಿ ಅಲಾರ್ಮೆ ಹಾಗೂ ಉದ್ಯೋಗ ಖಾತರಿ ಯೋಜನೆಯ ಎಂಜಿನಿಯರ್‌ ಮನೋಜ್‌ ಕುಮಾರ್‌ ಅವರನ್ನು ಗೌರವಿಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಆಲಾರ್ಮೆ ಆದರ್ಶ ಸ್ತ್ರೀಶಕ್ತಿ ಸಂಘದ ಸದಸ್ಯರು ಕಬ್ಬಿಣದ ಕಪಾಟು, ಗ್ರಾ.ಪಂ. ಸದಸ್ಯ ಮಹ್ಮದಾಲಿ ಅವರು ಗೋಡೆ ಗಡಿಯಾರ ಹಾಗೂ ಏಡಿಯಪ್ಪ ಗೌಡ ಅಮೈ ಅವರು ಫ್ಯಾನ್‌ ಕೊಡುಗೆಯಾಗಿ ನೀಡಿದರು.

Advertisement

ಕುಟ್ರಾಪ್ಪಾಡಿ ಪಿಡಿಒ ವಿವಿಲ್ಫ್ರೆಡ್ ಲಾರೆನ್ಸ್‌ ರೋಡ್ರಿಗಸ್‌ ಸ್ವಾಗತಿಸಿ, ಕ್ಸೇವಿಯರ್‌ ಬೇಬಿ ಪ್ರಸ್ತಾವನೆಗೈದರು. ಹೊಸ್ಮಠ ಸಿ.ಎ. ಬ್ಯಾಂಕ್‌ ನಿರ್ದೇಶಕ ಶಶಾಂಕ ಗೋಖಲೆ ಹಾಗೂ ಕುಟ್ರಾಪ್ಪಾಡಿ ಶಾಲಾ ಮುಖ್ಯಶಿಕ್ಷಕ ಮಾಯಿಲ್ಪ ಜಿ. ನಿರೂಪಿಸಿದರು.

ರಸ್ತೆ ಅಭಿವೃದ್ಧಿಗೆ 50 ಕೋ. ರೂ.
ಸಂಸದ ನಳಿನ್‌ಕುಮಾರ್‌ ಕಟೀಲು ಅವರೊಂದಿಗೆ ದಿಲ್ಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಯ ಫಲವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌)ಯಿಂದ 50 ಕೋಟಿ. ರೂ. ವಿಶೇಷ ಅನುದಾನ ಒದಗಿಸಲು ಸಚಿವ ನಿತಿನ್‌ ಗಡ್ಕರಿ ಸಮ್ಮತಿಸಿದ್ದಾರೆ. ತಾವು ಶಾಸಕನಾದ ಬಳಿಕ ಕ್ಷೇತ್ರದಲ್ಲಿ 108 ಹೊಸ ಸೇತುವೆಗಳ ನಿರ್ಮಾಣವಾಗಿದ್ದು, 42 ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ.
 -ಎಸ್‌. ಅಂಗಾರ, ಸುಳ್ಯ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next