Advertisement

Mangaluru-Bengaluru, ಬೀದರ್‌-ಬೆಂಗಳೂರು ಕಾರಿಡಾರ್‌ ಅಭಿವೃದ್ಧಿ

08:27 PM Feb 16, 2024 | Team Udayavani |

ವಿಧಾನಸಭೆ: ಮುಂಬೈ-ಚೆನ್ನೈ ಕಾರಿಡಾರ್‌ ಮಾದರಿಯಲ್ಲಿ ಮಂಗಳೂರು-ಬೆಂಗಳೂರು ಸೇರಿದಂತೆ ಎರಡು ಆರ್ಥಿಕ ಕಾರಿಡಾರ್‌ ಅಭಿವೃದ್ಧಿಪಡಿಸಲು ಈ ಬಜೆಟ್‌ನಲ್ಲಿ ಉದ್ದೇಶಿಸಿದೆ.

Advertisement

ಒಂದು ಕಾರಿಡಾರ್‌ ಮಂಗಳೂರು ಬಂದರಿನಿಂದ ಬೆಂಗಳೂರುವರೆಗೆ ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಬಂದರು ಸಂಪರ್ಕ ಸುಲಭವಾಗುವುದಲ್ಲದೆ, ಯುರೋಪ್‌ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸರಕು ಸಾಗಾಣಿಕೆ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ. ಇನ್ನೊಂದು ಕಾರಿಡಾರ್‌ನ್ನು ಬೀದರ್‌ ಹಾಗೂ ಬೆಂಗಳೂರು ನಡುವೆ ಅಭಿವೃದ್ಧಿಪಡಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕ ಅಭಿವೃದ್ಧಿ ಚುರುಕುಗೊಳಿಸಲು ತೀರ್ಮಾನಿಸಲಾಗಿದೆ. ಆದರೆ ಈ ಯೋಜನೆಗಳಿಗೆ ವೆಚ್ಚವಾಗುವ ಹಣಕಾಸು ವಿಚಾರಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ.

ಇತರೆ ಅಂಶಗಳು :
ಪ್ರಸಕ್ತ ಸಾಲಿನಲ್ಲಿ ಕೆಶಿಪ್‌ -4 ಯೋಜನೆ ಜಾರಿಗೊಳಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ಇದಕ್ಕಾಗಿ ಬಾಹ್ಯ ಹಣಕಾಸು ಸಂಸ್ಥೆಯ ನೆರವು (ಸಾಲ) ಪಡೆಯಲು ನಿರ್ಧರಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 875 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಯನ್ನು 5,736 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
– ರಾಜ್ಯದಲ್ಲಿನ 1,300 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳನ್ನು 4,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಎಸ್‌ಎಚ್‌ಡಿಪಿ ) ಹಂತ-5 ಪ್ರಾರಂಭ.
– ಬೆಳಗಾವಿ ನಗರ ಪರಿಮಿತಿಯಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ದಟ್ಟಣೆ ನಿವಾರಿಸಲು ಕೇಂದ್ರದ ಸಹಕಾರದೊಂದಿಗೆ 450 ಕೋಟಿ ರೂ. ವೆಚ್ಚದಲ್ಲಿ 4.50 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ.
– ಬೆಂಗಳೂರು-ಮಂಡ್ಯ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೈಸೂರು ಹೊರವಲಯದಲ್ಲಿರುವ ಜಂಕ್ಷನ್‌ನಲ್ಲಿ ವಾಹನ ಸಂಚಾರ ದಟ್ಟಣೆ ನೀಗಿಸಲು ಎನ್‌ಎಚ್‌ಎಐ ಸಹಯೋಗದೊಂದಿಗೆ ಮೇಲುಸೇತುವೆ ನಿರ್ಮಾಣ.
– ಮೈಸೂರಿನ ಕುಕ್ಕರಹಳ್ಳಿ ಬಳಿ ಹಾಗೂ ಕೆಆರ್‌ಎಸ್‌ ರಸ್ತೆ, ಶಿವಮೊಗ್ಗ-ಬೊಮ್ಮನಕಟ್ಟೆ ರಸ್ತೆ, ಗದಗ ಜಿಲ್ಲೆಯ ರೋಣದ ಮಲ್ಲಾಪುರ, ಚನ್ನಪಟ್ಟಣ-ಬೈರಾಪಟ್ಟಣ ಮಾರ್ಗ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 6 ರೈಲ್ವೆ ಮೇಲು ಹಾಗೂ ಕೆಳಸೇತುವೆಗಳ ನಿರ್ಮಾಣವನ್ನು 350 ಕೋಟಿ ರೂ. ಮೊತ್ತದಲ್ಲಿ ಪ್ರಾರಂಭ.

Advertisement

Udayavani is now on Telegram. Click here to join our channel and stay updated with the latest news.

Next