ಗುಡಿಬಂಡೆ: ಬಾಗೇಪಲ್ಲಿ ಕ್ಷೇತ್ರದಲ್ಲಿ ಏನಾದರೂ ಅಭಿವೃದ್ಧಿಯಾಗಿದೆ ಎಂದರೆ ಅದು ಸಿಪಿಐಎಂನ ಅವಧಿಯಲ್ಲಿ ಮಾತ್ರ ಎಂದು ಸಿಪಿಐಎಂನ ಮುಖಂಡ ಡಾ.ಅನಿಲ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆವಿಗೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಮೂರು ಭಾರಿ ನಮ್ಮ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಗೊಂಡಾಗ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ಇಂದಿಗೂ ಶಾಶ್ವತವಾಗಿ ಉಳಿದಿದೆಯೇ ಹೊರತು ಬೇರೆ ಶಾಸಕರು ಅಭಿವೃದ್ಧಿ ಮಾಡಿರುವುದು ಏನೂ ಇಲ್ಲ, ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಆ ಕೆಲಸ ಮಾಡಿದ್ದೇವೆ, ಈ ಕೆಲಸ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುವುದೇ ಅಗಿದೆಯೇ ಹೊರತು ಅವರು ಮಾಡಿರುವ ಕೆಲಸಗಳು ಯಾರಿಗೂ ಪ್ರತ್ಯಕ್ಷವಾಗಿ ಗೋಚರಿಸುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.
ನಮ್ಮ ಪಕ್ಷದ ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರು ಶಾಸಕರಾಗಿ ಆಯ್ಕೆಯಾದ ಎರಡು ಭಾರಿಯೂ ರಾಜ್ಯ ಸರ್ಕಾರದ ಆಡಳಿತ ಮುಖ್ಯಮಂತಿ ಹಾಗೂ ಮಂತ್ರಿಗಳಿಗೆ ಸದನದಲ್ಲಿ ಚಳಿ ಬಿಡಿಸಿ, ಅನುದಾನವನ್ನು ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ, ಈಗಿನ ಹಾಲಿನ ಶಾಸಕರು ಸತತವಾಗಿ ಎರಡು ಭಾರಿ ಚುನಾಯಿತರಾದ ಕೇವಲ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಕೆಲಸ ಮಾಡುತ್ತಿದ್ದಾರೆಯೇ ಹೊರತು, ವಿಶೇಷ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಹಾಲಿ ಶಾಸಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಪುನಃ ಮಾತೃ ಪಕ್ಷಕ್ಕೆ: ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ಕೆಲವು ಕಾರಣಾಂತರಗಳಿಂದ ಸಿಪಿಐಎಂ ಪಕ್ಷವನ್ನು ತೊರೆದು ಪಿಎಸ್‌ಎಸ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಪುನಃ ನಮ್ಮ ಪಕ್ಷದ ಹಿರಿಯ ಮುಖಂಡರು ಅವರೊಂದಿಗೆ ಚರ್ಚಿಸಿ, ಮಾತುಕತೆ ನಡೆಸಿದ್ದು, ಇನ್ನೇನು ಅವರನ್ನು ಮರಳಿ ಮಾತೃ ಪಕ್ಷಕ್ಕೆ ಕರೆತರುವ ಸಿದ್ಧತೆಗಳನ್ನು ನಡೆಸುತ್ತಿದ್ದ ಸಮಯದಲ್ಲಿ ಅವರು ದೆ„ವಾದೀನರಾಗಿದ್ದು, ಅವರೊಂದಿಗೆ ಪಕ್ಷವನ್ನು ತೊರೆದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸುತ್ತಿದ್ದು, ಅವರನ್ನು ಪುನಃ ಮಾತೃ ಪಕ್ಷಕ್ಕೆ ಕರೆತರುವ ವಿಶ್ವಾಸವಿದೆ ಎಂದು ಹೇಳಿದರು.
ಪಕ್ಷೇತರಿಗೆ ಬೆಂಬಲಿಸಿದರೆ ತೊಂದರೆ ಇಲ್ಲ : ದಿ. ಜಿ.ವಿ.ಶ್ರೀರಾಮರೆಡ್ಡಿ ರವರು ಸ್ಥಾಪಿಸಿದ ಪಿ.ಎಸ್.ಎಸ್. ಸಂಘಟನೆಯ ಕೆಲವು ಮುಖಂಡರು ಪಕ್ಷೇತರ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವವರಿಗೆ ಬೆಂಬಲಿಸುತ್ತಿರುವುದು ತಿಳಿದು ಬಂದಿದ್ದು, ಅವರಿಂದ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಯಾವುದೇ ಒಡೆತ ಆಗುವುದಿಲ್ಲ, ಹಾಗೂ ನಮ್ಮ ಪಕ್ಷದ ಮೂಲ ಕಾರ್ಯಕರ್ತರರನ್ನು ಬೇರೆಡೆಗೆ ಸೆಳೆಯಲು ಸಹ ಸಾಧ್ಯವಾಗುವುದಿಲ್ಲ ಎಂದು ಸಿಪಿಐಎಂನ ಮುಖಂಡ ಡಾ.ಅನಿಲ್ ಹೇಳಿದರು.