ಹರಪನಹಳ್ಳಿ: ರಾಜ್ಯದ ಮುಜರಾಯಿ ಇಲಾಖೆಯಡಿ “ಎ’ ಗ್ರೇಡ್‌ನಲ್ಲಿರುವ 250 ದೇವಸ್ಥಾನಗಳ ಪೈಕಿ ಮೊದಲ ಹಂತದಲ್ಲಿ ಉಚ್ಚೆಂಗೆಮ್ಮ ದೇವಸ್ಥಾನವನ್ನೊಳಗೊಂಡು 25 ದೇವಸ್ಥಾನಗಳನ್ನು 140 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಉತ್ಸವಾಂಬ ದೇವಿಯ ಹಿರೇ ಹಬ್ಬದ ಜಾತ್ರಾ ಮಹೋತ್ಸವ ಅಂಗವಾಗಿ ಬೆಂಗಳೂರು ಗಂಧರ್ವ ಇವೆಂಟ್ಸ್ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶಿಷ್ಟ ಭೌಗೊಳಿಕ ಸಂಪತ್ತು, ವೈವಿಧ್ಯತೆ, ಸಂಸ್ಕೃತಿ ಸಾಧು-ಸಂತರು ಆಳಿದ ನಾಡಾಗಿರುವ ಭಾರತ ದೇಶವನ್ನು ವಿಶ್ವವೇ ಹಿಂತಿರುಗಿ ನೋಡುವಂತಿದೆ. ಅಲ್ಲದೆ ದೇವಸ್ಥಾನಗಳು ಮನುಷ್ಯನಿಗೆ ಭಯ ಭಕ್ತಿ ಪೂಜ್ಯನೀಯವಾದ ಭಾವ ಸೃಷ್ಟಿಸುವ ಪವಿತ್ರ ಕೇಂದ್ರಗಳಾಗಿವೆ. ಮನುಷ್ಯನ ಶಾರೀರಿಕ ರೋಗಕ್ಕೆ ಆಸ್ಪತ್ರೆಯ ಮದ್ದು ಲಭ್ಯ. ಆದರೆ ಮಾನಸಿಕ ರೋಗಕ್ಕೆ ದೇವಾಲಯಗಳಲ್ಲಿ ಮಾತ್ರ ಶಾಂತಿ ಸುಖ ದೊರೆಯುವುದು. ಆದ್ದರಿಂದಲೇ ದೇಶದ ಪ್ರತಿ ಹಳ್ಳಿಗಳಲ್ಲಿಯೂ ದೇವಸ್ಥಾನಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ,ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಪೈಪ್‌ಲೈನ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಉದ್ಘಾಟನೆಯನ್ನು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಜಲನಿಗಮದ ಅನುಮೋದನೆ ಪಡೆದಿದ್ದು, ಏಪ್ರಿಲ್ ತಿಂಗಳಲ್ಲಿ ಜಗಳೂರಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆದಿದೆ. ಇದು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಇರುವವರೆಗೂ ಶಾಸಕರಾಗಿ ಗೆಲ್ಲಿಸಿ ಮಂತ್ರಿಯಾಗಿ ನೋಡಲು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಉತ್ಸವಾಂಬ ದೇವಿಯ ಸನ್ನಿಧಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರ ಆಗಮನ ಸಂತಸ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ರಾಷ್ಟ್ರೀಯ ಜಲನಿಗಮದಿಂದ 2.4 ಟಿಎಂಸಿ ಅಡಿ ಮಾನ್ಯತೆ ಕೊಡಿಸಿದ ಸಂಸದ ಸಿದ್ದೇಶ್ ಅಣ್ಣನವರು ನಮಗೆ ಸ್ಫೂರ್ತಿ ಎಂದರು.
ಉಚ್ಚಂಗಿದುರ್ಗ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. 2 ಕೋಟಿ ವೆಚ್ಚದಲ್ಲಿ ಹಾಲಮ್ಮನ ತೋಪಿನ ಸಿಸಿ ರಸ್ತೆ ಕಾಮಗಾರಿಗೆ ಇಂದು ಸಚಿವರಿಂದ ಶಂಕುಸ್ಥಾಪನೆ ನೆರವೇರಿದೆ. ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಮಳೆಗಾಲದ ವೇಳೆಗೆ ಕೆರೆಗಳಿಗೆ ನೀರು ಭರ್ತಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಾಯಿತ್ರಿ ಸಿದ್ದೇಶ್ವರ್, ಇಂದಿರಾ ರಾಮಚಂದ್ರ, ಬಿಜೆಪಿ ದಾವಣಗೆರೆ ಜಿಲ್ಲಾ ಮುಖಂಡ ಯಶವಂತರಾವ್ ಜಾಧವ್, ದಾವಣಗೆರೆ ಡಿಸಿ ಮಹಾಂತೇಶ್ ಬಿಳಗಿ, ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷೆ ಕಾಳಮ್ಮ, ಮುಖಂಡರಾದ ಸೊಕ್ಕೆ ನಾಗರಾಜ್, ವೈ.ಡಿ. ಅಣ್ಣಪ್ಪ, ಹನುಮಂತಪ್ಪ, ಕೆಂಚಪ್ಪ, ಸಿದ್ದಪ್ಪ, ಬಾಲೇನಹಳ್ಳಿ ಕೆಂಚನಗೌಡ, ಫಣಿಯಾಪುರ ಲಿಂಗರಾಜ್ ಇದ್ದರು.