Advertisement

ಆರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡಿದರೆ ಅಭಿವೃದ್ಧಿ ಸಾಧ್ಯ

09:30 PM Oct 20, 2019 | Lakshmi GovindaRaju |

ಚಾಮರಾಜನಗರ: ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವ ನೀಡಿ ಉತ್ತಮ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಸಾಧಿಸಬಹುದೆಂದು ಪ್ರಾಥಮಿಕ, ಪ್ರೌಢ ಶಿಕ್ಷಣ, ಸಕಾಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಪಾಕ್ಷಿಕ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಜನರಲ್ಲಿ ಹೊಸ ಭರವಸೆ: ಆಯುಷ್ಮಾನ್‌ ಭಾರತ ಯೋಜನೆ ಆರೋಗ್ಯ ಸಹಾಯ ಒದಗಿಸುವ ಉದ್ದೇಶದಿಂದ ರೂಪುಗೊಂಡಿದೆ. ಒಬ್ಬ ವ್ಯಕ್ತಿಯ ಅನಾರೋಗ್ಯ ಆ ಇಡೀ ಕುಟುಂಬವನ್ನು ಮಾನಸಿಕ, ಆರ್ಥಿಕ ಹಾಗೂ ಶಾರೀರಿಕವಾಗಿ ಜರ್ಜರಿತಗೊಳಿಸಿ ಬಿಡುತ್ತದೆ. ಈ ಕಾರಣಕ್ಕಾಗಿ ಆಯುಷ್ಮಾನ್‌ ಭಾರತ ಆರಂಭಗೊಂಡಿದ್ದು, ದೇಶದ ಜನರಲ್ಲಿ ಹೊಸ ಭರವಸೆಯನ್ನು ನೀಡಿದೆ. ತನ್ಮೂಲಕ ಸಾಮಾನ್ಯರಿಗೂ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ ಎಂದರು.

ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ: ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ನಿಜವಾದ ಆರೋಗ್ಯ ರಾಯಭಾರಿಗಳಿದ್ದಂತೆ. ಆಯುಷ್ಮಾನ್‌ ಭಾರತ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಅಗತ್ಯವಿರುವವರಿಗೆ ತಿಳಿಸುವ ಕೆಲಸ ನಿಮ್ಮ ಮೇಲೆ ಇರುತ್ತದೆ. ಆರೋಗ್ಯ ಕಾರ್ಡುಗಳನ್ನು ಮಾಡಿಸುವ ಪ್ರಕ್ರಿಯೆಯಿಂದ, ಯೋಜನೆ ಕಾರ್ಯನಿರ್ವಹಣೆಯ ರೂಪುರೇಷೆ ಬಗ್ಗೆ ಮಾಹಿತಿ ನೀಡಬೇಕು. ಹೆಚ್ಚಿನ ಕುಟುಂಬಗಳು ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಆರೋಗ್ಯದ ಬಗ್ಗೆ ಕಾಳಜಿವಹಿಸಿ: ಪ್ರತಿಯೊಬ್ಬರೂ ಆರೋಗ್ಯ ಕಾಳಜಿಯನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. ಕೆಲವು ಮುಂಜಾಗ್ರತಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅನಾರೋಗ್ಯಕ್ಕೆ ತುತ್ತಾಗುವುದನ್ನು ಕಡಿಮೆ ಮಾಡಬಹುದು. ಹೀಗಾಗಿ ಎಲ್ಲರೂ ದೈಹಿಕವಾಗಿ ಸಮರ್ಥರಾಗಿರುವತ್ತ ಹೆಚ್ಚು ಗಮನ ನೀಡಬೇಕು ಎಂದು ಸುರೇಶ್‌ ಕುಮಾರ್‌ ಹೇಳಿದರು.

Advertisement

ಆಯುಷ್ಮಾನ್‌ ಭಾರತ ಉತ್ತಮ ಯೋಜನೆ: ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಆಯುಷ್ಮಾನ್‌ ಭಾರತ ಉತ್ತಮ ಯೋಜನೆಯಾಗಿದೆ. ಇದರ ಪ್ರಯೋಜನ ಪ್ರತಿಯೊಬ್ಬರಿಗೂ ತಲುಪುವ ಕೆಲಸ ಆಗಬೇಕು. ಮುಖ್ಯವಾಗಿ ಇದರ ಬಗ್ಗೆ ಮಾಹಿತಿ ನೀಡುವ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಗಳು ನಡೆಯಬೇಕು. ಇದರಿಂದ ಯೋಜನೆಯನ್ನು ತಳಮಟ್ಟದ ವ್ಯಕ್ತಿಗೂ ತಲುಪಿಸಬಹುದಾಗಿದೆ ಎಂದರು.

ಸಚಿವರಲ್ಲಿ ಮನವಿ: ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್‌ ಮಾತನಾಡಿ, ಆಯುಷ್ಮಾನ್‌ ಭಾರತ್‌ ಯೋಜನೆ ಉದ್ದೇಶ ಉತ್ತಮವಾಗಿದೆ. ಆದರೆ ಕೆಲವು ತೊಡಕುಗಳು ಅದರ ವೇಗವನ್ನು ಕಡಿಮೆಗೊಳಿಸಿವೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕಾದಲ್ಲಿ ಜಿಲ್ಲಾ ಆಸ್ಪತ್ರೆಯಿಂದ ಸೂಚನಾ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪ್ರವೇಶವನ್ನೇ ನೀಡುತ್ತಿಲ್ಲ. ಇದರಿಂದ ಚಿಕಿತ್ಸೆಗೆ ತೊಡಕು ಉಂಟಾಗುತ್ತಿದ್ದು, ಅದನ್ನು ಶೀಘ್ರವೇ ಸಡಿಲಗೊಳಿಸಬೇಕು ಎಂದು ಮನವಿ ಮಾಡಿದರು.

5 ಲಕ್ಷ ರೂ. ಗಳವರೆಗೆ ಉಚಿತ ಚಿಕಿತ್ಸೆ: ಆಯುಷ್ಮಾನ್‌ ಭಾರತ ಯೋಜನೆಯ ಜಿಲ್ಲಾ ಸಮಾಲೋಚಕ ಡಾ. ಶಾಂತಕುಮಾರ್‌ ಮಾತನಾಡಿ, ಆಯುಷ್ಮಾನ್‌ ಯೋಜನೆಯಲ್ಲಿ ಬಿಪಿಎಲ್‌ ಕಾರ್ಡ್‌ ಮತ್ತು ವಿಮಾ ಯೋಜನೆಯಲ್ಲಿ ನೋಂದಾಯಿತರಾದವರಿಗೆ ವರ್ಷಕ್ಕೆ 5 ಲಕ್ಷ ರೂ. ಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇತರರಿಗೆ 1.50ಲಕ್ಷ ರೂ.ಗಳ ಚಿಕಿತ್ಸೆ ಲಭ್ಯವಿರುತ್ತದೆ. ಜತೆಗೆ ಅರೋಗ್ಯ ಸಮಸ್ಯೆಗಳನ್ನು ನಾಲ್ಕು ಹಂತದಲ್ಲಿ ವಿಂಗಡಿಸಿ, ಚಿಕಿತ್ಸೆ ಶೀಘ್ರವಾಗಿ ದೊರೆಯುವ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆಗಳಿಂದ ಸೂಚನಾ ಪತ್ರ: ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ ಪಡೆಯಲು ಜಿಲ್ಲಾ ಆಸ್ಪತ್ರೆಗಳಿಂದ ಸೂಚನಾ ಪತ್ರ ಪಡೆಯುವುದು ಕಡ್ಡಾಯವಿರುತ್ತದೆ. ಆರೋಗ್ಯ ಕಾರ್ಡುಗಳು ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗಬೇಕೆಂಬುದು ಇದರ ಉದ್ದೇಶ. ಆದರೆ ತುರ್ತು ಚಿಕಿತ್ಸಾ ಸಂದರ್ಭದಲ್ಲಿ, ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಆರೋಗ್ಯ ಕಾರ್ಡು ವಿತರಣೆ: ಜಿಲ್ಲೆಯಲ್ಲಿ ಸಾಧಿಸಿದ ಪ್ರಗತಿ ಬಗ್ಗೆ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ 1,65,000 ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗಿದೆ. ಯೋಜನೆಯಡಿ ಜಿಲ್ಲೆಯ ಒಟ್ಟು 9912 ಫ‌ಲಾನುಭವಿಗಳು ಚಿಕಿತ್ಸೆ ಪಡೆದಿದ್ದು, 18.40ಕೋಟಿ ರೂ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗದಮಣಿ, ತಾಪಂ ಉಪಾಧ್ಯಕ್ಷ‌ ಜಿ.ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌. ನಾರಾಯಣರಾವ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next