Advertisement

ಕಣ ಕಣವೂ ಕನಕ

12:35 AM Jan 19, 2019 | |

ಕಾಗಿನೆಲೆ ಸುತ್ತಮುತ್ತಲ್ಲೆಲ್ಲಾ ಕನಕದಾಸರ ಹೆಜ್ಜೆ ಗುರುತು ಇದೆ. ಅದನ್ನು ಹುಡುಕುತ್ತಾ ಹೋದರೆ ಒಂದು ಪ್ರವಾಸವೇ ಆದೀತು.  ತಲ್ಲಣಿಸಿದಿರು ಕಂಡ್ಯ, ತಾಳು ಮನವೇ ಎಂಬ ಕನಕರ ಮಾತಿನಂತೆ ಪ್ರವಾಸಿಗರು ಇಲ್ಲಿಗೆ ಬಂದರೆ ಜಗದ ಜಂಜಡ ಮರೆತು ಖುಷಿಯಿಂದ ಹೊರಡುವುದಂತೂ ಖರೆ.

Advertisement

 ಕನಕದಾಸರು ಎಲ್ಲೆಲ್ಲಿ ನಡೆದಾಡಿದರು ಅಂತ ಹುಡುಕ ಹೊರಟರೆ ಕಾಗಿನೆಲೆ, ಅದರ ಸುತ್ತಮುತ್ತಲಿರುವ ಕುಮ್ಮೂರು, ಇಂಗಳಗೊಂದಿ, ಕಾಸಂಬಿ, ದಾಸನಕೊಪ್ಪ, ಬಾಡ ಇವೆಲ್ಲ ಕಾಣಸಿಗುತ್ತದೆ. ಅಲ್ಲಿ ಕನಕರ ಹೆಜ್ಜೆ ಗುರುತುಗಳೂ ಇವೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಅಸ್ವಿತ್ವಕ್ಕೆ ಬಂದ ನಂತರ ಈ ನೆಲೆಯ ಬೆಲೆ ಇನ್ನೂ ಹೆಚ್ಚಿದೆ. ಸ್ವರೂಪವೂ ಬದಲಾಗಿದೆ.  

ಕಾಗಿನೆಲೆಯ ಸಿರಿಯಾದಿಕೇಶವ ಎಂದು ಕನಕರು ತಮ್ಮ ಕೃತಿಗಳಲ್ಲಿ ಆದಿಕೇಶವನನ್ನು ಸ್ತುತಿಸಿದ್ದಾರೆ. ಮೊದಲು ಈ ಆದಿಕೇಶವ ಮೂರ್ತಿಯು ಕನಕದಾಸರ ಹುಟ್ಟೂರು ಬಾಡದಲ್ಲಿತ್ತು. ಎಲ್ಲಿ ಕನಕದಾಸರ ಪೂರ್ವಿಕರ ಅರಮನೆಯ ಅವಶೇಷಗಳು ಸಿಕ್ಕಿವೆಯೋ, ಅದರ ಹಿಂದೆಯೇ ಒಂದು ಪುರಾತನ ದೇವಸ್ಥಾನದ ಕುರುಹುಗಳೂ ದೊರೆತಿವೆ.  ಆ ಅವಶೇಷಗಳು ಈ ಆದಿಕೇಶವ ದೇವರಿಗೆ ಸೇರಿದ್ದಾಗಿದೆಯಂತೆ.  

ಕನಕದಾಸರು ತಮ್ಮ ತಂದೆಯಿಂದ ಬಂದಿದ್ದ ಢಣಾಯಕ ಪದವಿಯನ್ನು ತ್ಯಜಿಸಿ, ಶ್ರೀಹರಿಯ ಕರೆಗೆ ಓಗೊಟ್ಟು ದಾಸರಾಗಲು ನಿರ್ಧರಿಸಿದರು. ಆಗ ಬಾಡವನ್ನು ತೊರೆಯಬೇಕಾಗಿ ಬಂದಾಗ, ತಮ್ಮ ಆರಾಧ್ಯದೈವವಾದ ಆದಿಕೇಶವನ ಶಿಲಾಮೂರ್ತಿಯನ್ನು ಆ ದೇವಸ್ಥಾನದಿಂದ ಕಿತ್ತು, ಹೊತ್ತುತಂದು ಕಾಗಿನೆಲೆಗೆ ವಲಸೆ ಬಂದರು. ಅವರಿಗೆ ಪ್ರಿಯವಾದ ಶ್ರೀಲಕ್ಷಿ$¾à ಮತ್ತು ನರಸಿಂಹದೇವರಗುಡಿಯ ಪಕ್ಕದಲ್ಲಿ ಆದಿಕೇಶವನಿಗೆ ಗುಡಿ ಕಟ್ಟಿಸಿ ಆ ಮೂರ್ತಿಯನ್ನು ಆ ಗುಡಿಯಲ್ಲಿ ಪ್ರತಿಷ್ಠಾಪಿಸಿದರು. ತಮ್ಮ ಉಳಿದ ಜೀವಮಾನವನ್ನು ಆದಿಕೇಶವನ ಸೇವೆಯಲ್ಲಿಯೇ ಕಳೆದರು. 

Advertisement

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದ ಮೇಲೆ ಆ ಸ್ಥಳದಲ್ಲಿಯೇ  ಆದಿಕೇಶವ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆಯನ್ನು ನೆನಪಿಸುತ್ತದೆ.   ಕಣ್ಮನಗಳಿಗೆ ಮುದನೀಡುವ ಹೃದಯಂಗಮವಾದ ಕೆತ್ತನೆಗಳಿಂದ ಕೂಡಿದೆ.

ಈ ದೇವಸ್ಥಾನದ ಮಗ್ಗುಲಲ್ಲಿಯೇ ಕಾಂತೇಶ, ಭಾÅಂತೇಶ ಮತ್ತು ಶಾಂತೇಶ ಎಂದೂ ಸುಪ್ರಸಿದ್ಧನಾದ ಆಂಜನೇಯನ ಮೂರು ಮೂರ್ತಿಗಳೂ ಇವೆ. ಒಂದೇ ದಿನದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿರುವ ಈ ದೇವರನ್ನು ನೋಡಿಬರಲು ಸಾಧ್ಯವಿಲ್ಲದವರಿಗೆ ಈ ಗುಡಿಯಲ್ಲೇ ಎಲ್ಲರೂ ಲಭ್ಯರಾಗುತ್ತಾರೆ. 

ನರಸಿಂಹನ ದೇವಾಲಯದಲ್ಲಿ ಕನಕದಾಸರ ಒಂದು ಶಿಲಾಪ್ರತಿಮೆಯೂ ಇದೆ. ಅಷ್ಟೇ ಅಲ್ಲ, ಕನಕದಾಸರು ಬಳಸುತ್ತಿದ್ದರೆಂಬ ದಂತಕಥೆಯನ್ನುಳ್ಳ ಶಂಖ, ಭಿಕ್ಷೆಗೆ ಬಳಸುತ್ತಿದ್ದ ಮರದ ತಟ್ಟೆಯೂ ಆ ದೇವಸ್ಥಾನದಲ್ಲಿ ಇದೆ.  

ಕನಕದಾಸರು ಸುಮಾರು 98 ವರ್ಷಗಳವರೆಗೆ ಬದುಕಿದ್ದು ಕ್ರಿಸ್ತಶಕ 1593ರಲ್ಲಿ ಕಾಗಿನೆಲೆಯಲ್ಲಿ ತಮ್ಮ ದೇಹತ್ಯಾಗ ಮಾಡಿದರು. ಅವರ ದೇಹವನ್ನು ಕಾಗಿನೆಲೆಯ ದೊಡ್ಡಕೆರೆಯ ( ಈಗಿನ ಕನಕಕೆರೆ) ಪಕ್ಕದಲ್ಲಿ ಹೂಳಿದರು. ಮೊದಲು  ಕನಕದಾಸರ ದೇಹವನ್ನು ಮಣ್ಣುಮಾಡಿದ ಜಾಗದ ಮೇಲೆ ಒಂದು ವೃಂದಾವನವನ್ನು ಕಟ್ಟಿದ್ದರು.
ನಂತರ ಸಮಾಧಿಯನ್ನು ಪ್ರಾಧಿಕಾರ ನವೀಕರಿಸಿತು. 

ಉದ್ಯಾನವನ
ಇಲ್ಲಿ ಸುಮಾರು 138 ಎಕರೆ ವಿಸ್ತೀರ್ಣದ ಮನೋಹರ ಉದ್ಯಾನವನವಿದೆ. ಇದರ ಪಕ್ಕದಲ್ಲಿಯೇ ದೊಡ್ಡಕೆರೆ ಇದೆ. ಇದನ್ನು ಕನಕಕೆರೆ ಎಂದು ಪ್ರೀತಿಯಿಂದ ಜನರು ಕರೆದಿದ್ದಾರೆ. ಆ ಕೆರೆಯ ವಿಸ್ತೀರ್ಣ 238 ಎಕರೆ. ಇಲ್ಲಿಗೆ ಚಳಿಗಾಲದಲ್ಲಿ ಅನೇಕ ಪಕ್ಷಿಗಳು ವಲಸೆ ಬರುತ್ತವೆ.  ಔಷಧೀಯ ಸಸ್ಯಗಳ ಉದ್ಯಾನವನದಿಂದ ಸ್ವಲ್ಪ ದೂರ ಹೆಜ್ಜೆ ಹಾಕಿದರೆ ಸಂಗೀತಕ್ಕೆ ನರ್ತಿಸುವ ಕಾರಂಜಿ ಮುದನೀಡುತ್ತದೆ.  ಜೊತೆಗೆ ಎರಡು ಕೃತಕ ಜಲಪಾತಗಳೂ ಇವೆ. 

ಉದ್ಯಾನವನದಲ್ಲಿ 58 ಪ್ರಭೇದದ ಸಾವಿರಾರು ಚಿಟ್ಟೆಗಳು ಇಲ್ಲಿವೆ.  ಕನಕ ಗ್ರಾಮದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರವಿದೆ. ಅದರ ಪಕ್ಕದಲ್ಲೇ ವಿಹಂಗಮ ಕೆರೆ. 

ಕನಕದಾಸರ ಹುಟ್ಟು, ವಿದ್ಯಾರ್ಥಿಜೀವನ, ಚಿನ್ನದ ಕೊಪ್ಪರಿಗೆಯು ಅವರಿಗೆ ಸಿಕ್ಕಿ ಅವರು ಕನಕನಾಯಕನಾಗಿದ್ದು, ಕನಕನಾಯಕರು ಗಾಯಗೊಂಡು ಯುದ್ಧರಂಗದಲ್ಲಿ ಮೃತ್ಯುಮುಖರಾಗಿ ಬಿದ್ದರು. ಆಗ ದಾಸನಾಗುವಂತೆ ಅವರಿಗೆ ಕರೆ ಕೇಳಿಬಂದದ್ದು, ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯವನ್ನು ಅವರು ಬೋಧನೆ ಮಾಡಿದ್ದು, ಉಡುಪಿಯಲ್ಲಿ ಶೀಕೃಷ್ಣನು ಕನಕರ ಕರೆಗೆ ತಿರುಗಿನಿಂತದ್ದು…  ಹೀಗೆ ಅವರ ಜೀವನದ ವಿವಿಧ ಘಟನೆಗಳನ್ನು ಪ್ರತಿಬಿಂಬಿಸುವ ವರ್ಣರಂಜಿತವಾದ ಆಳೆತ್ತರದ 46 ಪ್ರತಿಮೆಗಳಿವೆ. 

ಯಾತ್ರಿಕರು ಸಾವಧಾನವಾಗಿ ಕೂರಲು, ಸಾವಕಾಶವಾಗಿ ಆಯಾಸ ಪರಿಹರಿಸಿಕೊಳ್ಳಲು ಉದ್ಯಾನವನದಲ್ಲಿ ಅಲ್ಲಲ್ಲಿ ಬೆಂಚುಗಳ ವ್ಯವಸ್ಥೆ ಮಾಡಲಾಗಿದೆ.  ಅನೇಕ ಹುಲ್ಲಿನ ಮೇಲ್ಛಾವಣಿಯ ಕುಟೀರಗಳಿವೆ. ಒಂದು ಕಡೆ ಒಂದು ಸಣ್ಣ ಮಂಟಪವನ್ನು ಕಟ್ಟಿ ವಿಶ್ರಾಂತಿ ತೆಗೆದುಕೊಳ್ಳಲು ಯಾತ್ರಿಕರಿಗೆ ಅನುವು ಮಾಡಿಕೊಡಲಾಗಿದೆ.  
 
ಕನಕದಾಸರ ಹೆಸರಿನಲ್ಲಿ ಒಂದು ಅದ್ಭುತವಾದ ಬೃಹತ್‌ ಕಲಾಭವನವನ್ನು ಕಾಗಿನೆಲೆಯ ಮುಖ್ಯ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಒಂದೇ ಸಲಕ್ಕೆ 3000 ಪ್ರೇಕ್ಷಕರು ಕೂರಬಹುದು.  ಈ ಕಲಾಭವನದ ರಂಗಸ್ಥಳವೂ ಬಹು ವಿಶಾಲವಾಗಿದೆ.  ಕಲಾ ಭವನದ ಪಕ್ಕದ ಕನಕ ಭೋಜನಾಲಯವೂ ಇದೆ. ಕಾಗಿನೆಲೆಗೆ ಬಂದರೆ ನೋಡಲೇಬೇಕಾದ ಇನ್ನೊಂದು ಸ್ಥಳ ಗ್ರಂಥಾಲಯ. ಇಲ್ಲಿ ಸಾವಿರಾರು ಅಮೂಲ್ಯ ಪುಸ್ತಕಗಳಿವೆ. ಸಂಶೋಧಕರಿಗೆ ಇದು ಸ್ವರ್ಗ ಅಂತಲೇ ಹೇಳಬೇಕು.
 
ಇಲ್ಲಿರುವ ಕನಕ ಗುರುಪೀಠವು ಉಚಿತ ಊಟ, ಶಿಕ್ಷಣ ದಾಸೋಹ ಮಾಡುತ್ತಿದೆ.  ಯಾವ ಮಟ್ಟಕ್ಕೆ ಎಂದರೆ, ಕೆ.ಎ.ಎಸ್‌, ಐ.ಎ.ಎಸ್‌ಗಳಿಗೂ ಕೋಚಿಂಗ್‌ ಕೇಂದ್ರಗಳನ್ನು ತೆರೆದಿದೆ. 

ತಲ್ಲಣಿಸಿದಿರು ಕಂಡ್ಯ, ತಾಳು ಮನವೇ ಎಂಬ ಕನಕರ ಮಾತಿನಂತೆ ಪ್ರವಾಸಿಗರು ಇಲ್ಲಿಗೆ ಬಂದರೆ ಜಗದ ಜಂಜಡ ಮರೆತು ಖುಷಿಯಿಂದ ಹೊರಡುವುದಂತೂ ಖರೆ.

ಶಶಿಧರಸ್ವಾಮಿ ಆರ್‌. ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next