ತಿ.ನರಸೀಪುರ: ಯಾವುದೇ ವಿಷಯವಾದರೂ ಬೇರೆ ಬೇರೆ ದೃಷ್ಟಿಕೋನದಿಂದ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಮಹಾರಾಣಿ ಕಾಲೇಜಿನ ಭೂಗೋಳ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಎನ್.ಹೇಮಚಂದ್ರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ಪಿಆರ್‌ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ಪದ್ಮ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳಿ: ಆಡಳಿತ ಸೇವೆಗಳ ಸಂದರ್ಶನದಲ್ಲಿ ಹಲವಾರು ಸಣ್ಣ ಸಣ್ಣ ಪ್ರಶ್ನೆಗಳನ್ನು ಕೇಳುತ್ತಾರೆ. ಒಂದೇ ದೃಷ್ಟಿಕೋನದಿಂದ ಆಲೋಚಿಸಿದರೆ ಯಶಸ್ಸು ಸಿಗುವುದಿಲ್ಲ. ಬೇರೆ ಬೇರೆ ಹೊರ ನೋಟಗಳಿಂದ ಆಲೋಚಿಸಿದಾಗ ಒಂದೇ ಪ್ರಶ್ನೆಗೆ ಅನೇಕ ಉತ್ತರಗಳು ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಲೋಚಿಸುವ ಮನೋಭಾವ ಇರಲಿ ಎಂದರು.
ಗುರುಗಳ ಮಾರ್ಗದರ್ಶನ ಪಡೆಯಿರಿ: ಅನೇಕ ವೇಳೆ ಜ್ಞಾನಕ್ಕೆ ಹೆಚ್ಚು ಮಾನ್ಯತೆ ನೀಡುತ್ತೇವೆ. ಪ್ರಜ್ಞೆ ಮರೆಯುತ್ತೇವೆ. ನಮಗೆ ಪ್ರಜ್ಞೆ ಕೂಡ ಬಹಳ ಅಗತ್ಯ. ಸಾಮಾನ್ಯ ಜ್ಞಾನಕ್ಕಿಂತ ಸಾಮಾನ್ಯ ಪ್ರಜ್ಞೆ ಮುಖ್ಯ. ತಂದೆ-ತಾಯಿ ಹಾಗೂ ಗುರುಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಒಳಿತನ್ನು ಬಯಸುವ ಗುರುಗಳ ಮಾರ್ಗದರ್ಶನ ಪಡೆಯಿರಿ. ಶ್ರಮದ ಕಲಿಕೆಯಿಂದ ಯಶಸ್ಸಿನ ಮಾರ್ಗದಲ್ಲಿ ನಡೆಯುವಂತೆ ಕರೆ ನೀಡಿದರು.
ಓದಿ, ಕಲಿಯಿರಿ: ಸ್ಟಾಪ್ ಸ್ಟಡಿಂಗ್, ಸ್ಟ್ರಾಟ್ ಲರ್ನಿಂಗ್ ಎಂಬ ವಿಧಾನ ಅಳವಡಿಕೊಳ್ಳಿ, ಎಲ್ಲರೂ ಓದುತ್ತಾರೆ ಪರೀಕ್ಷೆ ಬರೆಯುತ್ತಾರೆ ಒಂದಷ್ಟು ಅಂಕ ಗಳಿಸುತ್ತಾರೆ. ಸ್ವಲ್ಪ ದಿನಗಳ ನಂತರ ಅದನ್ನೇ ಕೇಳಿದರೆ ಅಥವಾ ಬರೆಯುವಂತೆ ಹೇಳಿದರೆ ಹೆಚ್ಚು ಅಂಕ ಗಳಿಸಲು ಸಾಧ್ಯವಿಲ್ಲ. ಕಾರಣ ಅವರು ಬರೀ ಓದುತ್ತಾರೆ ಆದರೆ ಕಲಿತಿರುವುದಿಲ್ಲ. ಕಲಿತರೆ ಅದು ನಮ್ಮ ಮೆದುಳಿನಲ್ಲಿ ಶಾಶ್ವತವಾಗಿ ಉಳಿದಿರುತ್ತದೆ. ಎಂದಿಗೂ ಮರೆಯುವುದಿಲ್ಲ ಎಂದು ಅನೇಕ ಘಟನೆಗಳನ್ನು ವಿವರಿಸಿ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳೇ ಇಂದಿನ ಯುವ ಶಕ್ತಿ: ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸ್ವಾಮಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದು ಅಂತಃಶಕ್ತಿ ಇದೆ. ಆ ಶಕ್ತಿಯನ್ನು ನಾವು ಗುರುತಿಸಿಕೊಂಡು ನಡೆದಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳೇ ಇಂದಿನ ಯುವ ಶಕ್ತಿ. ನಿಮ್ಮೊಳಗಿರುವ ಅನಗತ್ಯ ಅಂಶಗಳನ್ನು ಹೊರ ತೆಗೆಯುತ್ತಾ ಹೋದಂತೆ ನಿಮ್ಮಲ್ಲಿರುವ ನೈಜ ಶಕ್ತಿ ರೂಪ ಬೆಳಕಿಗೆ ಬಂದು ನೀವು ಸಾಧಕರಾಗಿ ಹೊರ ಹೊಮ್ಮುತ್ತೀರಿ.
ಮೊಬೈಲ್, ಟೀವಿಯ ಅನಗತ್ಯ ಬಳಕೆ ನಿಲ್ಲಿಸಿ ಜ್ಞಾನ, ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಾಧಕರಾಗಿ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ.ಆರ್. ಪ್ರಭಾಕರ್ ಶುಭ ಕೋರಿ ಮಾತನಾಡಿದರು. ಕಾರ್ಯದರ್ಶಿ ಹಾಗೂ ಡೀನ್ ಡಾ.ಕೆ.ಎಸ್.ಸಮರಸಿಂಹ ಮಾತನಾಡಿ, ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಮಕ್ಕಳ ಸಾಧನ ಉತ್ತಮವಾಗಿದ್ದು, ಹೆಚ್ಚಿನ ಗಮನಹರಿಸಿ ಮತ್ತಷ್ಟು ಸಾಧಿಸುವಂತೆ ಕರೆ ನೀಡಿದರು.
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೊ›.ಎ. ಪದ್ಮನಾಭ್, ಪಿಆರ್‌ಎಂ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್. ಸಿದ್ದೇಶ್, ಬಿಎಚ್‌ಎಸ್ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಸಿ.ಪ್ರಸನ್ನಕುಮಾರ್ ಸೇರಿದಂತೆ ಕಾಲೇಜಿನ ಪ್ರೌಢಶಾಲಾ ಶಿಕ್ಷಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಇತರರು ಇದ್ದರು.