Advertisement

ಹೊಸ ಶಿಕ್ಷಣ ನೀತಿ ರೂಪಿಸಿ ಸಮಸ್ಯೆ ಪರಿಹರಿಸುವೆ

10:07 PM Sep 14, 2019 | Team Udayavani |

ಕೊಳ್ಳೇಗಾಲ: ಶಿಕ್ಷಕರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರದಲ್ಲಿಯೇ ನೂತನ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಶನಿವಾರ ಹೇಳಿದರು. ಪಟ್ಟಣದ ಸರ್ಕಾರಿ ನ್ಯಾಷನಲ್‌ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಪಂ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೊಳ್ಳೇಗಾಲ ಆಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.

Advertisement

ಶೀಘ್ರ ನೂತನ ಶಿಕ್ಷಣ ನೀತಿ ಜಾರಿಗೆ: ಶಿಕ್ಷಣ ಸಚಿವರಾಗಿ ಕೇವಲ 19 ದಿನ ಮಾತ್ರ ಕಳೆದಿವೆ. ಈಗಾಗಲೇ ಶಿಕ್ಷಕರ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಆಲಿಸಿದ್ದೇನೆ. ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಲು ಶೀಘ್ರದಲ್ಲಿಯೇ ನೂತನ ಶಿಕ್ಷಣ ನೀತಿ ಜಾರಿಗೆ ತಂದು ಸಂಪೂರ್ಣ ಬಗೆಹರಿಸಲಾಗುವುದು. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಎನ್‌.ಮಹೇಶ್‌, ಹಲವಾರು ಶಿಕ್ಷಣ ನೀತಿಗಳನ್ನು ಅತಿ ವೇಗದಲ್ಲಿ ರೂಪಿಸಿದ್ದಾರೆ.

ಅದೇ ವೇಗದಲ್ಲಿ ತೆರಳಲು ನನಗೆ ಕಾಲಾವಕಾಶಬೇಕಾಗಿದ್ದು, ಶಿಕ್ಷಕರು ಗೊಂದಲವಿಲ್ಲದೆ ಕೆಲಸ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಶಾಸಕ ಎನ್‌.ಮಹೇಶ್‌ ಮತ್ತು ಹನೂರು ಶಾಸಕ ಆರ್‌.ನರೇಂದ್ರ ಹಲವಾರು ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅವುಗಳನ್ನು ಬಗೆಹರಿಸಿ ಮತ್ತು ವಿವಿಧ ಅಭಿವೃದ್ಧಿಗೆ ಅನುದಾನ ಕೇಳಿದ್ದು, ಕೂಡಲೇ ಮಂಜೂರು ಮಾಡಿಕೊಡುವ ಭರವಸೆ ನೀಡಿದರು.

ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಅಡಗಿದ್ದು, ಪ್ರತಿಭಾಕಾರಂಜಿಯ ಮೂಲಕ ಹೊರತರಲು ವಿಶೇಷ ಕಾರ್ಯಕ್ರಮವಾಗಿದೆ. ಶಿಕ್ಷಕರು ಪ್ರತಿಭೆಯನ್ನು ಮತ್ತಷ್ಟು ಹೊರ ತರುವ ಪ್ರಯತ್ನ ಮಾಡಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಿದರು. ವಿದ್ಯಾರ್ಥಿಗಳನ್ನು ಹೆಚ್ಚು ಪ್ರೋತ್ಸಾಹಿಸುವುದರಿಂದ ವಿದ್ಯಾರ್ಥಿಗಳ ಪ್ರತಿಭೆ ಮತ್ತಷ್ಟು ವೃದ್ಧಿಯಾಗಲಿದ್ದು, ವಿದ್ಯಾರ್ಥಿಗಳನ್ನು ಸಂಪೂರ್ಣ ಬೆಂಬಲಿಸಿ, ಪ್ರತಿಭೆ ಗುರುತಿಸಿ ಬೆಳೆಸುವ ಗುರಿ ಶಿಕ್ಷಕರ ಮೇಲೆ ಇದೆ. ಶಿಕ್ಷಕರು ಮನಸ್ಸು ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಇದೆ ಎಂದರು.

ನೂತನ ಶಾಲೆ ಕಟ್ಟಡಕ್ಕಾಗಿ ಅನದಾನಕ್ಕೆ ಮನವಿ: ಶಾಸಕ ಎನ್‌.ಮಹೇಶ್‌ ಮಾತನಾಡಿ, ಪಟ್ಟಣದ ಎಂಜಿಎಸ್‌ವಿ ಪ್ರೌಢಶಾಲೆಗೆ ನೂರು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಕಟ್ಟಡವನ್ನು ಪುನರ್‌ ನವೀಕರಣ ಮಾಡಲು 2 ಕೋಟಿ ಅನುದಾನ ನೀಡಬೇಕು. ಶಾಲೆಯ ಸುಮಾರು 5 ಎಕರೆ ಜಮೀನಿನಲ್ಲಿ ಇದ್ದು, ಜಮೀನನ್ನು ಮುಡಿಗುಂಡದವರು ದಾನವಾಗಿ ನೀಡಿರುವ ಸ್ಥಳವಾಗಿದೆ. ಇದರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

Advertisement

ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಟಗರುಪುರ ಗ್ರಾಮದಲ್ಲಿ ಪ್ರೌಢಶಾಲೆ, ಕೆಸ್ತೂರು ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು, ಸಂತೇಮರಹಳ್ಳಿಯ ಹೊಂಗನೂರಿನಲ್ಲಿ ಪ್ರೌಢಶಾಲೆ, ತೆರೆಯಲು ಅನುಮತಿ ನೀಡಬೇಕೆಂದು ಮನವಿ ಮಾಡಿದ ಶಾಸಕರು ಬಿಇಒಗಳ ಕಚೇರಿ ನೂತನ ಕಟ್ಟಡ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಬೇಕೆಂದರು.

ಆದರ್ಶ ಶಾಲೆಯ ವಿದ್ಯಾರ್ಥಿಗಳು ಫ‌ಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯುತ್ತಿದ್ದಾರೆ. ಶಾಲೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಶಾಲೆಗೆ ಸುತ್ತುಗೋಡೆ ನಿರ್ಮಾಣ ಮಾಡಲು ಮತ್ತು ಲ್ಯಾಬ್‌, ಲೈಬ್ರರಿ ನಿರ್ಮಾಣಕ್ಕೆ 1.30 ಕೋಟಿ ರೂ. ಅನುದಾನ ನೀಡಬೇಕು ಮತ್ತು ಶಿಕ್ಷಕರ ಕುಂದುಕೊರತೆಯ ನಿವಾರಣೆಗೆ ಮುಂದಾಗಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಹನೂರು ಶಾಸಕ ಆರ್‌.ನರೇಂದ್ರ ಮಾತನಾಡಿ, ಕೊಳ್ಳೇಗಾಲ ಮತ್ತು ಹನೂರಿನ ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆ ಇಲ್ಲ. ಪ್ರತಿಭಾ ಕಾರಂಜಿಯಿಂದಾಗಿ ಮಕ್ಕಳ ಪ್ರತಿಭೆ ಮತ್ತಷ್ಟು ಅನಾವರಣಗೊಳ್ಳುತ್ತಿದೆ ಎಂದು ಪ್ರತಿಭಾ ಕಾರಂಜಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷೆ ಶಿವಮ್ಮ, ಜಿಪಂ ಸದಸ್ಯರಾದ ನಾಗರಾಜು, ಇರ್ಷಾದ್‌ ಬಾನು, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ಅರುಣ್‌ಕುಮಾರ್‌, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಮಂಜುನಾಥ್‌, ಡಿವೈಎಸ್ಪಿ ನವೀನ್‌ಕುಮಾರ್‌, ಬಿಇಒಗಳಾದ ಚಂದ್ರಪಾಟೀಲ್‌, ಮಲ್ಲಿಕಾರ್ಜುನ, ಬಿಆರ್‌ಸಿ ಮಂಜುಳ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ನಗರಸಭಾ ಸದಸ್ಯರಾದ ಪ್ರಕಾಶ್‌, ಜಯಮೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next