ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರಕ್ಕೆ ಶುಕ್ರವಾರ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಭೇಟಿ ನೀಡಿ ದೇವರ ದರ್ಶನ ಪಡೆದರು.
ನಂತರ ಘಾಟಿ ಕ್ಷೇತ್ರಕ್ಕೆ ಸಮೀಪದ ಬಂಡೆಪಾಳ್ಯದಲ್ಲಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಾಲಯದ ಆವರಣದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಮಂಡಿನೋವಿನ ಸಮಸ್ಯೆ ನಿವಾರಣೆಗಾಗಿ ಶನೇಶ್ವರಸ್ವಾಮಿಗೆ ತೈಲಾಭಿಷೇಕ, ಚಂಡಿಕಾ ಹೋಮ ನೆರವೇರಿಸಿದರು.
ದೇವಾಲಯಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾಹಿತಿ ನೀಡಿದ ಅವರು, ಕೆಲ ದಿನಗಳಿಂದ ಮಂಡಿ ನೋವು ಕಾಣಿಸಿಕೊಂಡಿದ್ದು ಆಯುರ್ವೇದ ವೈದ್ಯರು ಶನೇಶ್ವರನಿಗೆ ತೈಲಾಭಿಷೇಕ ಮಾಡುವಂತೆ ಸಲಹೆ ನೀಡಿದ್ದರು. ಹೀಗಾಗಿ ಘಾಟಿ ಬಳಿ ನೆಲೆಸಿರುವ ಶನೇಶ್ವರ ದೇವಾಲಯಕ್ಕೆ ದಂಪತಿ ಸಮೇತ ತೈಲಾಭಿಷೇಕ ಹಾಗೂ ಚಂಡಿಕಾ ಹೋಮ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಶರವಣ, ಶಾಸಕ ಪಿಳ್ಳಮುನಿಶಾಮಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಅಪ್ಪಯ್ಯಣ್ಣ, ಕಿಮ್ಸ್ ಅಧ್ಯಕ್ಷ ಬಿ. ಮುನೇಗೌಡ, ಮಾಜಿ ಸದಸ್ಯ ಎ. ನರಸಿಂಹಯ್ಯ ಮತ್ತಿತರರು ಹಾಜರಿದ್ದರು.
ಈಶ್ವರಪ್ಪ ಅವರು ಜೆಡಿಎಸ್‌ಗೆ ಸೇರುವ ಬಗ್ಗೆ ಕೇಳಿ ಬಂದಿರುವ ಮಾತುಗಳು ಸುಳ್ಳು. ಇಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿಗೆ ಹೋದಾಗಲೂ ಸಹ ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರು ಪಕ್ಷ ಸಂಘಟನೆ ಮಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿನ ಅಂತರಿಕ ಜಗಳದ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ನಮಗೆ ಯಾರಿಂದಲೂ ಪಕ್ಷಕ್ಕೆ ಬರುವುದಾಗಲಿ, ನಾವು ಯಾರನ್ನು ಬನ್ನಿ ಅಂತಲು ಒತ್ತಾಯ ಮಾಡಿಲ್ಲ.
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ