ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಲಭ್ಯವಾಗಿರುವ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಅಂತಿಮಗೊಳಿಸುವ ಜವಾಬ್ದಾರಿಯನ್ನು ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರಿಗೆ ನೀಡಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಸಚಿವ ಎಚ್.ಡಿ.ರೇವಣ್ಣ ಅವರು ಈಗಾಗಲೇ ದೇವೇಗೌಡರ ಜತೆ ಎರಡು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಈ ಮಧ್ಯೆ ಆಕಾಂಕ್ಷಿಗಳು ಕೂಡ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ನಾರಾಯಣರಾವ್, ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಹಿಂದುಳಿದ ವರ್ಗಗಳ ಮುಖಂಡ ಅಮರನಾಥ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ದೇವೇಗೌಡರಿಗೆ ನೀಡಲಾಗಿದೆ. ಕೊನೇ ಕ್ಷಣದಲ್ಲಿ ಈ ಪಟ್ಟಿಯಲ್ಲಿಲ್ಲದ ಅಭ್ಯರ್ಥಿ ಅಂತಿಮಗೊಂಡರೂ ಅಚ್ಚರಿ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್, ಬಿಜೆಪಿಯ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ ಅವರಿಂದ ತೆರವಾದ ಮೂರು ಸ್ಥಾನಗಳಿಗೆ ಅ. 3ರಂದು ಚುನಾವಣೆ ನಡೆಯಲಿದೆ. ಎರಡು ಸ್ಥಾನಗಳ ಅವಧಿ 2020ರವರೆಗೆ ಇದ್ದು, ಇನ್ನೊಂದು ಸ್ಥಾನದ ಅವಧಿ 2022ರವರೆಗೆ ಇದೆ. ಈ ಪೈಕಿ 2020ಕ್ಕೆ ಅವಧಿ ಮುಕ್ತಾಯಗೊಳ್ಳುವ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು 2022ಕ್ಕೆ ಅವಧಿ ಮುಗಿಯುವ ಕ್ಷೇತ್ರವನ್ನು ಇಟ್ಟುಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಜೆಡಿಎಸ್ ಕಾರ್ಯಾಧಕ್ಷರಾಗಿರುವ ನಾರಾಯಣರಾವ್ ಅವರು ಇದುವರೆಗೆ ಅಧಿಕಾರ ಅನುಭವಿಸಿಲ್ಲ. ಹಿರಿಯರೂ ಆಗಿರುವುದರಿಂದ ಅವರನ್ನು ನೇಮಕ ಮಾಡಬೇಕು ಎಂಬ ಒತ್ತಾಯ ಒಂದೆಡೆಯಿಂದ ಕೇಳಿಬಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಿಂದ ರಾಮಚಂದ್ರ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ ಆರ್.ಪ್ರಕಾಶ್ ಅವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ.
ಇನ್ನೊಂದೆಡೆ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುವ ಸಲುವಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕೋನರೆಡ್ಡಿ ಹೆಸರು ಕೇಳಿಬರುತ್ತಿದ್ದರೆ, ಪಕ್ಷದ ವಕ್ತಾರರಾಗಿರುವ ರಮೇಶ್ ಬಾಬು ಬಗ್ಗೆ ದೇವೇಗೌಡರಿಗೆ ಒಲವಿದೆ. ಹಿಂದುಳಿದ ವರ್ಗಗಳ ಮುಖಂಡ ಅಮರನಾಥ್ ಬಗ್ಗೆಯೂ ಆ ಸಮುದಾಯದ ಮುಖಂಡರು ಲಾಬಿ ನಡೆಸುತ್ತಿದ್ದಾರೆ.
ಈ ಮಧ್ಯೆ ದೇವೇಗೌಡರ ಬಳಿ ಇನ್ನೂ ಇಬ್ಬರ ಹೆಸರು ಇದ್ದು, ಅದನ್ನು ಅವರು ಬಹಿರಂಗಪಡಿಸಿಲ್ಲ. ಹೀಗಾಗಿ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿಯನ್ನು ದೇವೇಗೌಡರಿಗೆ ವಹಿಸಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಶನಿವಾರ (ಸೆ.22) ಅಂತಿಮ ದಿನವಾಗಿದ್ದು, ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಮೂಲಗಳು ಹೇಳಿವೆ.