ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಮೊದಲ ವಿಧಾನ ಮಂಡಲ
ಅಧಿವೇಶನವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಅಧಿವೇಶನ, ಸಾಲ ಮನ್ನಾ ಸೇರಿ ಹಲವು ವಿಚಾರಗಳ ಬಗ್ಗೆ ಮುಖ್ಯ ಮಂತ್ರಿಗಳು ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಆದರೆ, ದೇವೇಗೌಡರೊಂದಿಗಿನ ಭೇಟಿ ವೇಳೆ ಕುಮಾರಸ್ವಾಮಿ ಅವರು, ಸಮ್ಮಿಶ್ರ ಸರ್ಕಾರ ಮುನ್ನಡೆಸುವ ಇಕ್ಕಟ್ಟಿನ ನಡುವೆಯೂ ಹಣಕಾಸು ಹೊಂದಾಣಿಕೆ ಮಾಡಿಕೊಂಡು ಕಾರ್ಯಕ್ರಮಗಳನ್ನು ಪ್ರಕಟಿಸಿದರೂ ಸಾಲ ಮನ್ನಾ ಮತ್ತು ಅನ್ನಭಾಗ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೇಲಿಂದ ಮೇಲೆ ಪತ್ರ ಬರೆದಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.