Advertisement
2001ರಲ್ಲಿ ಸಾಕೇತ್‌ರಾಜನ್ ಮೂಲಕ ತಾಲೂಕಿನ ಬಸ್ರಿಬೇರು ಎಂಬಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಕ್ಸಲ್ ಚಟುವಟಿಕೆ ಕೊಲ್ಲೂರಿನಿಂದ ಕಾರ್ಕಳದ ಈದು ತನಕ ಸಾಗಿತ್ತು. 2005ರ ಜೂ. 23ರಂದು ದೇವರಬಾಳುವಿನಲ್ಲಿ ಎನ್‌ಕೌಂಟರ್ ಮೂಲಕ ಜಗತ್ತಿಗೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡ ನಕ್ಸಲ್ ಚಟುವಟಿಕೆ ತಾಲೂಕಿನಲ್ಲಿ ಹಾಗೆಯೇ ಮುಂದುವರಿದಿತ್ತು. ಮೂಲ ಸೌಕರ್ಯದಿಂದ ನಲುಗಿ ಹೋದ ದೇವರಾಬಾಳು ಪರಿಸರ ನಕ್ಸಲ್ ಹತ್ಯೆಯ ಅನಂತರ ಇಲ್ಲಿನ ಅಭಿ ವೃದ್ಧಿಗೆ ರಾಜಕಾರಣಿಗಳು ಸೇರಿದಂತೆ ಹತ್ತು ಹಲವರ ಭರವಸೆಗಳು ಕೇಳಿ ಬಂದರೂ ಯಾವುದೇ ಪ್ರಯೋಜನವಾಗದೇ ಹೋಯಿತು.
ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿ ಇರುವ ದೇವರಬಾಳು ವ್ಯಾಪ್ತಿಯ ಕಟ್ಟಿನಾಡಿ ಎಂಬ ಪ್ರದೇಶದ ಗಡಿ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ. ಕಳೆದ ವರ್ಷ ಈ ಗಡಿ ಸಮಸ್ಯೆಯ ಕುರಿತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಮ್ಮತಿಯ ಮೇರೆಗೆ ಸಮಸ್ಯೆ ಇತ್ಯರ್ಥ ಮಾಡಲು ಎರಡೂ ಜಿಲ್ಲೆಯವರು ಸೇರಿ ಒಟ್ಟಾಗಿ ಸರ್ವೆ ಕಾರ್ಯ ನಡೆಸಿ ಈ ಪ್ರದೇಶ ಯಾವ ಜಿಲ್ಲೆಗೆ ಸೇರುತ್ತದೆ ಎನ್ನುವ ಪ್ರಕ್ರಿಯೆಗೆ ಶಾಸಕರ ನೇತೃತ್ವದಲ್ಲಿ ಚಾಲನೆ ದೊರೆತರೂ ಕೂಡ ಪ್ರಸ್ತಾವನೆಯ ಕಡತಗಳಿಗೆ ಇಂದಿಗೂ ಕೊನೆ ಸಿಕ್ಕಿಲ್ಲ. ಇಲ್ಲಿನ ಜನರು ಹಕ್ಕುಪತ್ರ ಇಲ್ಲದೇ ಸರಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಅಭಿವೃದ್ಧಿಯಲ್ಲಿ ಹಿನ್ನಡೆ
ನಕ್ಸಲ್ ಎನ್‌ಕೌಂಟರ್ ಬಳಿಕ ದೇವರಬಾಳು ಪರಿಸರ ಅಭಿವೃದ್ಧಿ ಯಾಗುತ್ತದೆ ಎನ್ನುವ ಬಗ್ಗೆ ಆಶಾಭಾವನೆ ಇತ್ತು. ಆದರೆ ಕೆಲವೊಂದು ಕಾರಣಗಳಿಂದ ರಸ್ತೆ ಮೊದಲಾದ ಮೂಲ ಸೌಕರ್ಯಗಳು ಈ ಭಾಗಕ್ಕೆ ಒದಗಿ ಬರುವಲ್ಲಿ ತೊಡಕಾಗಿ ಕಂಡು ಬಂದಿದೆ. ಕಟ್ಟಿನಾಡಿ, ರಾಮನಹಕ್ಲು, ಬೊಮ್ಮನಹಳ್ಳ ಮೊದಲಾದ ಪ್ರದೇಶಗಳಲ್ಲಿ ಬಹುತೇಕ ಮರಾಠಿ ಹಾಗೂ ಹಸ್ಲ ಕುಟುಂಬಗಳು ವಾಸಿಸುತ್ತಿವೆ. 2005ರಿಂದ ನಕ್ಸಲ್ ಪ್ಯಾಕೇಜ್‌ನಡಿ ಅನುದಾನ ಹರಿದು ಬಂದಿದ್ದರೂ ಅದು ಲೆಕ್ಕಕ್ಕೇ ಬರಲಿಲ್ಲ. ಪ್ರಸ್ತುತ ನಕ್ಸಲ್ ಪ್ಯಾಕೇಜ್ ಇಲ್ಲದೇ ಇರುವುದರಿಂದ ಹಳ್ಳಿಹೊಳೆ ಗ್ರಾ.ಪಂ. ಈ ಭಾಗಕ್ಕೆ ಕೆಲವು ಮೂಲ ಸೌಕರ್ಯವನ್ನು ಒದಗಿಸುತ್ತಿದೆ. ಇಲ್ಲಿ ಸೇತುವೆ, ರಸ್ತೆಗಳಿಗೆ ಅನುದಾನ ಬಿಡುಗಡೆಯಾದರೂ ಸರಕಾರ ಮೀಸಲು ಅರಣ್ಯವನ್ನು ವನ್ಯಜೀವಿ ವಲಯವನ್ನಾಗಿ ಪರಿವರ್ತಿಸುವ ಚಿಂತನೆಯಲ್ಲಿರುವುದರಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ ಎನ್ನುವುದು ಗ್ರಾಮಸ್ಥರ ಅಳಲು. ಕೆಲವಡೆ ಗ್ರಾ.ಪಂ. ಹಾಗೂ ಶಾಸಕರ ನಿಧಿಯಿಂದ ಕೆಲವು ರಸ್ತೆ ಕಾಮಗಾರಿಗಳು ಇತ್ತಿಚಿನ ದಿನಗಳಲ್ಲಿ ನಡೆದಿವೆ.
Related Articles
Advertisement
ದೇವರಬಾಳು ಎನ್‌ಕೌಂಟರ್ ನಡೆದ ಮೂರು ವರ್ಷಕ್ಕೆ ಅಂದರೆ 2008ರ ಡಿ. 7ರಂದು ಸಂಜೆ ಹಳ್ಳಿಹೊಳೆಯ ಕೃಷಿಕ ಕೇಶವ ಯಡಿಯಾಳ ಅವರು ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಕೇಶವ ಯಡಿಯಾಳರ ಹತ್ಯೆಯ ಬಳಿಕ ಎಚ್ಚೆತ್ತ ಸರಕಾರ ನಕ್ಸಲರ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಿರುವುದಲ್ಲದೆ ಅಮಾಸೆಬೈಲು ಹಾಗೂ ಜಡ್ಡಿನಗದ್ದೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್ ಆರಂಭಿಸಿತು. ಅಮಾಸೆಬೈಲಿನಲ್ಲಿ ಪೊಲೀಸ್ ಠಾಣೆ ಆರಂಭಿಸಿತು. ಅಲ್ಲಿಂದ ಇಲ್ಲಿಯ ತನಕ ನಕ್ಸಲ್ ಚಟುವಟಿಕೆ ಅಲ್ಲೊಂದು ಇಲ್ಲೊಂದು ಕರಪತ್ರದ ಪ್ರಕರಣಕ್ಕೆ ಜೋತು ಬಿದ್ದಿತೇ ವಿನಾ ಬೇರೆ ಬೇರೆ ನಕ್ಸಲ್ ತಂಡಗಳು ಹೇಳ ಹೆಸರಿಲ್ಲದಂತೆ ಚದುರಿಹೋದವು. 2012ರ ಡಿಸೆಂಬರ್‌ನಲ್ಲಿ ಅಮಾಸೆಬೈಲು ಬೊಳ್ಮನೆ ಪ್ರದೇಶದಲ್ಲಿ ಹತ್ತು ಮಂದಿ ನಕ್ಸಲರು ಕಾಣಿಸಿಕೊಂಡಿರುವುದು ಬಿಟ್ಟರೆ ಬಹುತೇಕ ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಸ್ತಬ್ಧಗೊಂಡಿದೆ.
– ಉದಯ ಆಚಾರ್ ಸಾಸ್ತಾನ