ಸವಣೂರು: ಮನೆಯಂಗಳವೇ ಗದ್ದೆಯಾಗಿದೆ. ಅಂಗಳದಲ್ಲಿ ಉಳುಮೆ ಯಂತ್ರ ಬಳಸದೆ ತಾವೇ ಸ್ವತಃ ಹಾರೆಯ ಮೂಲಕ ಮಣ್ಣನ್ನು ಕೊಚ್ಚಿ, ಬೀಜ ಬಿತ್ತಿ, ಅಂಗಳದಲ್ಲೇ ಭತ್ತ ಬೆಳೆದಿದ್ದಾರೆ. ಸವಣೂರು ನಿವಾಸಿ ದೇವಪ್ಪ ಗೌಡ ಅವರು ಆಸಕ್ತಿ ಹಾಗೂ ಉತ್ಸಾಹವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಈಗ ಎಲ್ಲಿ ನೋಡಿದರೂ ಗದ್ದೆಗಳು ಮಾಯವಾಗುತ್ತಿವೆ. ವಾಣಿಜ್ಯ ಬೆಳೆಯ ತೋಟಗಳು ಆ ಜಾಗಗಳನ್ನು ಆಕ್ರಮಿಸಿಕೊಳ್ಳುತ್ತಿವೆ. ಆಹಾರ ಬೆಳೆಯಾದ ಭತ್ತ ಬೆಳೆಯುವ ಉತ್ಸಾಹವೂ ಕ್ಷೀಣಿಸಿದೆ. ಇರುವ ಹಲವು ಗದ್ದೆಗಳನ್ನು ಹಡೀಲು ಬಿಡಲಾಗಿದೆ. ಖಾಲಿ ಗದ್ದೆಗಳನ್ನು ನೋಡುವಾಗ, ಇಷ್ಟು ಜಾಗವಿದ್ದರೂ ಭತ್ತ ಬೆಳೆಯುತ್ತಿಲ್ಲ ಎಂದು ನೊಂದುಕೊಂಡ ದೇವಪ್ಪ ಗೌಡರು, ತಾವೇಕೆ ಭತ್ತ ಬೆಳೆಯಬಾರದು ಎಂದು ಯೋಚಿಸಿದರು. ಆದರೆ, ಭತ್ತ ಬೆಳೆಯಲು ಸೂಕ್ತ ಜಾಗವಿಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಕೊನೆಗೆ ಅವರಿಗೆ ಕಂಡಿದ್ದು, ಮನೆಯ ಎದುರಿನ ಪುಟ್ಟ ಅಂಗಳ!
ಬೇರೆ ಕಡೆ ಗದ್ದೆ ಹುಡುಕುವ ಬದಲು ತಮ್ಮ ಮನೆಯ ಅಂಗಳದಲ್ಲೇ ಭತ್ತ ಬೆಳೆದರೆ ಹೇಗೆ ಎಂಬ ಯೋಚನೆ ಮೂಡಿತು. ಅದಕ್ಕೆ ಅಣಿಯಾಗಿ, ಅಂಗಳವನ್ನು ಹಾರೆಯಿಂದ ಸ್ವತಃ ಕೊಚ್ಚಿ, ಗದ್ದೆಯನ್ನಾಗಿ ಪರಿವರ್ತಿಸಿದರು. ಹಟ್ಟಿಗೊಬ್ಬರ ಹಾಕಿ, ಮಣ್ಣು ಹದ ಮಾಡಿ, ಭತ್ತದ ಬೀಜಗಳನ್ನು ತಂದು ಬಿತ್ತನೆ ಮಾಡಿದರು.
ಅವರ ಕನಸು ಚಿಗುರಿದ್ದು, ಇಡೀ ಅಂಗಳವೇ ಈಗ ಹಸುರಾಗಿ ಪರಿವರ್ತನೆಯಾಗಿದೆ. ತಾವೇ ಕೈಯಾರ ಬಿತ್ತಿದ ಬೀಜಗಳು ಮೊಳೆತು, ಭತ್ತದ ಪೈರು ಬೆಳೆದು ಈಗ ತೆನೆಗಳೂ ಮೂಡಿದ್ದನ್ನು ಕಂಡು ಅವರು ಸಂತೋಷಪಡುತ್ತಿದ್ದಾರೆ. ಈ ಪರಿಸರದ ಹಲವರು ತಮ್ಮ ಮನೆ ತುಂಬಿಸಿಕೊಳ್ಳಲು ಇವರ ಅಂಗಳದಿಂದಲೇ ತೆನೆಗಳನ್ನು ಒಯ್ದಿದ್ದಾರೆ. ಈ ಮೂಲಕ ಅವರು ಇತರರಿಗೂ ಮಾದರಿಯಾಗಿದ್ದಾರೆ. ಕದಿರು ತುಂಬುವ ನೆಪದಲ್ಲಿ ತಾವು ಬೆಳೆದ ಪೈರು ಹಲವು ಮನೆಗಳನ್ನು ಸೇರಿದ ಸಂತಸ ಇದೆ ಎಂದು ದೇವಪ್ಪ ಗೌಡ ಹೇಳುತ್ತಾರೆ.
ಪ್ರವೀಣ್ ಚೆನ್ನಾವರ