ಪ್ರಿಯಾಂಕ ಅಭಿನಯದ “ದೇವಕಿ’ ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. “ದೇವಕಿ’ ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿದೆ. ಹಾಗಾಗಿ, ಅಲ್ಲಿನ ಸ್ಥಳೀಯ ಬೆಂಗಾಲಿ ಭಾಷೆಗೂ ಪ್ರಮುಖ ಆದ್ಯತೆ ನೀಡಿರುವುದು ವಿಶೇಷ. ಹೌದು, ಚಿತ್ರದಲ್ಲಿ ಬೆಂಗಾಲಿ, ಇಂಗ್ಲೀಷ್, ಹಿಂದಿ ಭಾಷೆಯನ್ನೂ ಕೇಳಬಹುದು.
ಅಂತಹ ಹೊಸ ಪ್ರಯತ್ನ ಈ ಚಿತ್ರದಲ್ಲಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ನೈಜ ಅನುಭವ ಕಟ್ಟಿಕೊಡುವ ಉದ್ದೇಶದಿಂದಲೇ, ಬೆಂಗಾಲಿ ಭಾಷೆಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಅಂದಹಾಗೆ, ಚಿತ್ರದಲ್ಲಿ ಸುಮಾರು 300 ಕ್ಕೂ ಹೆಚ್ಚು ಜೂನಿಯರ್ ಕೆಲಸ ಮಾಡಿದ್ದಾರೆ. ಅದರಲ್ಲೂ ಶೇ.40 ರಷ್ಟು ಮಂದಿ ಬೆಂಗಾಲಿ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿರುವುದು ಹೈಲೈಟ್. ಇತ್ತೀಚೆಗೆ ಚಿತ್ರದಲ್ಲಿ ಕಾಣಸಿಗುವ ಬೆಂಗಾಲಿ ಪಾತ್ರಗಳಿಗೆ ಬೆಂಗಾಲಿ ಭಾಷೆಯಲ್ಲೇ ಡಬ್ಬಿಂಗ್ ಮಾಡಿಸಿರುವುದು ವಿಶೇಷ.
ನಿರ್ದೇಶಕ ಲೋಹಿತ್ ಅವರು, ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಕೊಲ್ಕತ್ತಾದಿಂದ ಸುಮಾರು 10 ಮಂದಿ ಬೆಂಗಾಲಿ ಕಲಾವಿದರನ್ನು ಕರೆಯಿಸಿ, ಕೆಲ ಪಾತ್ರಗಳಿಗೆ ಡಬ್ ಮಾಡಿಸಿದ್ದಾರೆ. ಶೇ.20 ರಷ್ಟು ಭಾಗ ಬೆಂಗಾಲಿ ಡೈಲಾಗ್‌ಗಳೇ ಇಲ್ಲಿರುವುದರಿಂದ, ನೈಜತೆ ತುಂಬಿರಬೇಕು ಎಂಬ ಕಾರಣಕ್ಕೆ ಬೆಂಗಾಲಿ ಸಂಭಾಷಣೆಗೆ ಡಬ್ಬಿಂಗ್ ಮಾಡಿಸಲಾಗಿದೆ ಎಂದು ವಿವರ ಕೊಡುವ ನಿರ್ದೇಶಕ ಲೋಹಿತ್, ಬೆಂಗಾಲಿ ಚಿತ್ರಗಳ ಬರಹಗಾರ ಗೋವಿಂದ್ ಫಿಲ್ ಎಂಬುವವರು ಬರೆದಿರುವ ಸಂಭಾಷಣೆಗೆ, ಬೆಂಗಾಲಿ ಕಲಾವಿದರು ಡಬ್ಬಿಂಗ್ ಮಾಡಿದ್ದಾರೆ.
ಇನ್ನು “ದೇವಕಿ’ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಪ್ರಿಯಾಂಕ ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ನಟಿಸಿದ್ದಾರೆ. ಇಡೀ ಚಿತ್ರ ಪ್ರಿಯಾಂಕ ಅವರ ತವರೂರಾದ ಕೊಲ್ಕತ್ತಾದಲ್ಲೇ 32 ದಿನಗಳ ಕಾಲ ಚಿತ್ರೀಕರಣವಾಗಿದೆ. ಇದು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದೆ. ಅದರಲ್ಲೂ ನಾರ್ತ್ ಕೊಲ್ಕತ್ತಾದಲ್ಲಿ ಬಹುತೇಕ ಚಿತ್ರೀಕರಣ ಮಾಡಿರುವುದು ಈ ಚಿತ್ರದ ಮತ್ತೂಂದು ವಿಶೇಷ. ಸೌತ್ ಪಾರ್ಕ್ ಸಿಮೆಟ್ರಿಯಲ್ಲಿ ಚಿತ್ರೀಕರಿಸಿರುವುದು ಹೆಚ್ಚುಗಾರಿಕೆ. ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರು ಎನ್‌ಜಿಓ ಪಾತ್ರ ನಿರ್ವಹಿಸುತ್ತಿದ್ದು, ಕೆಲ ಸ್ಟುಡೆಂಟ್ಸ್‌ಗೆ ಪಾಠ ಹೇಳಿಕೊಡುವ ಮೇಡಮ್ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಾಯಕಿಯದ್ದು ಸಾಕಷ್ಟು ಸಮಸ್ಯೆ ಎದುರಿಸುವ ಪಾತ್ರವಾಗಿದ್ದು, ರಾತ್ರಿ ವೇಳೆ ಹೆಚ್ಚು ಶೂಟಿಂಗ್ ನಡೆಸಲಾಗಿದೆ. ತನ್ನ ಮಗಳನ್ನು ಕಳೆದುಕೊಂಡ ತಾಯಿ ಹೇಗೆಲ್ಲಾ ಅವಳನ್ನು ಹುಡುಕಾಡುತ್ತಾಳೆ ಎಂಬುದು ಕಥೆ. ಉಳಿದಂತೆ ಚಿತ್ರದಲ್ಲಿ ಕಿಶೋರ್ ಇಲ್ಲಿ ಕೊಲ್ಕತ್ತಾ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವೇಣು ಛಾಯಾಗ್ರಹಣವಿದೆ. ನೊಬಿನ್ ಪಾಲ್ ಸಂಗೀತವಿದೆ. ರವಿಚಂದ್ರ ಅವರ ಸಂಕಲನವಿದೆ. ರವಿವರ್ಮ ಸಾಹಸ ಮಾಡಿದ್ದಾರೆ. ಚಿತ್ರವನ್ನು ರವೀಶ್ ಮತ್ತು ಅಕ್ಷಯ್ ನಿರ್ಮಾಣ ಮಾಡಿದ್ದಾರೆ. ಗುರುಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದೆ.