ದೇವದುರ್ಗ: ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿ ಈಗಾಗಲೇ ತಿಂಗಳು ಗತಿಸಿದೆ. ಕೃಷ್ಣಾನದಿ ತೀರದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ. ನೊಂದ ರೈತರು ಪಹಣಿ, ಬ್ಯಾಂಕ್ ಪಾಸ್, ಭಾವಚಿತ್ರ ಸೇರಿ ಇತರೆ ದಾಖಲೆಗಳನ್ನು ತಾಲೂಕು ಆಡಳಿತಕ್ಕೆ ನೀಡಿದ್ದಾರೆ.
ಆದರೆ ಇಲ್ಲಿವರೆಗೆ ಹಣ ಜಮಾ ಆಗದ ಹಿನ್ನೆಲೆಯಲ್ಲಿ ನೂರಾರು ರೈತರು ನಿತ್ಯ ಕಚೇರಿ ಮತ್ತು ಬ್ಯಾಂಕ್‌ಗೆ ಅಲೆಯುತ್ತಿದ್ದಾರೆ. ತಾಲೂಕಿನಲ್ಲಿ 10, 820 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ. ಆನ್‌ಲೈನ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾ ಮಾಡುವುದಾಗಿ ಹೇಳಿದ್ದ ಅಧಿಕಾರಿಗಳ ಭರವಸೆ ಇನ್ನೂ ಈಡೇರಿಲ್ಲ.
ರಾಜ್ಯ ಸರಕಾರದಿಂದ ಬೆಳೆ ಪರಿಹಾರ ಬಂದಿಲ್ಲ ಎಂದು ರೈತರನ್ನು ವಾಪಸ್ ಕಳುಹಿಸಲಾಗುತ್ತಿದೆ. ಪರಿಹಾರ ಹಣಕ್ಕಾಗಿ ಗ್ರಾಮೀಣ ಪ್ರದೇಶದ ರೈತರು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ನೆರೆ ಹಾವಳಿಯಿಂದ ಕೃಷ್ಣಾನದಿ ಉಕ್ಕಿ ಹರಿದ ಪರಿಣಾಮ ಫಲವತ್ತಾದ ಭೂಮಿ ಕೊಚ್ಚಿ ಹೋಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಆಗಸ್ಟ್ ಕಳೆದು ಅಕ್ಟೋಬರ್ ಆರಂಭವಾಗಿದ್ದರೂ ರೈತರಿಗೆ ಇಲ್ಲಿವರೆಗೆ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರಕಾರದಿಂದ ಹಣ ಬಂದ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಅಧಿಕಾರಿಗಳ ಭರವಸೆ ಹುಸಿಯಾಗಿದೆ ಎಂದು ರೈತರಾದ ದೇವಪ್ಪ, ಗುರುನಾಥ ಆರೋಪಿಸಿದ್ದಾರೆ.