ಬೆಂಗಳೂರು: ಹೊಸವರ್ಷದ ಆರಂಭದಲ್ಲೇ ಸೈಬರ್ ಕಳ್ಳರ ಕೈಚಳಕ ತೋರಿಸಲು ಶುರು ಮಾಡಿದ್ದು, ಇಬ್ಬರು ನಿವೃತ್ತ ಉದ್ಯೋಗಿಗಳಿಗೆ 2.47 ಕೋಟಿ ರೂ. ವಂಚಿಸಿದ್ದಾರೆ.
ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 2 ಪ್ರತ್ಯೇಕ ಪ್ರಕರಣದಲ್ಲಿ ಮಲ್ಲೇಶ್ವರದ ಅಭಯ್ ಕುಮಾರ್ ದೇಶ್ ಮುಖ್ (68) ಹಾಗೂ ತುಮಕೂರು ರಸ್ತೆಯ ಚಿಕ್ಕಬಿದಿರಕಲ್ಲು ನಿವಾಸಿ ಬನ್ಸಿ ಪಿ.ಡಿಂಗ್ರೆಜಾ (63) ವಂಚನೆಗೊಳಗಾದವರು.
ಅಭಯ್ ಕುಮಾರ್ ದೇಶ್ಮುಖ್ 2024ರ ಡಿ.3ರಂದು ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಟ್ರೇಡಿಂಗ್ ಹಾಗೂ ಐಪಿಒ ಟ್ರೇಡಿಂಗ್ ಹೂಡಿಕೆ ಕುರಿತ ಜಾಹಿರಾತು ವೀಕ್ಷಿಸಿದ್ದರು. ಈ ಜಾಹೀರಾತನ್ನು ಅಂತರ್ಜಾಲದಲ್ಲಿ ತೆರೆದು ನೋಡಿದಾಗ ಯಾರೋ ಅಪರಿಚಿತರು ವಾಟ್ಸ್ಆ್ಯಪ್ ಗ್ರೂಪ್ವೊಂದಕ್ಕೆ ಜಾಯಿನ್ ಮಾಡಿದ್ದರು. ಆ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಬ್ಲಾಕ್ ಟ್ರೇಡಿಂಗ್ ಕುರಿತ ವಿವರ ನೀಡಲಾಗುತ್ತಿತ್ತು.
ರಾಶಿ ಅರೋರಾ ಎಂಬ ಮಹಿಳೆಯು ಆಸಕ್ತರು ತಮ್ಮನ್ನು ಸಂಪರ್ಕಿಸುವಂತೆ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸಂದೇಶ ಕಳಿಸಿದ್ದರು. ಅದರಂತೆ ಅಭಯ್ ಕುಮಾರ್ ದೇಶ್ಮುಖ್ ತಮಗೆ ಹಣ ಹೂಡಿಕೆ ಮಾಡಲು ಆಸಕ್ತಿ ಇರುವುದಾಗಿ ತಿಳಿಸಿದ್ದರು. ಕೂಡಲೇ ಲಿಂಕ್ ವೊಂದನ್ನು ಕಳಿಸಿದ ಮಹಿಳೆಯು ಇದಕ್ಕೆ ಜಾಯಿನ್ ಆಗುವಂತೆ ಸೂಚಿಸಿದ್ದರು. ನಂತರ ವಿವಿಧ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಹೇಳಿದ್ದರು.
ಅದರಂತೆ ಅಭಯ್ ದೇಶ್ಮುಖ್ ಹಂತವಾಗಿ 1.69 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಸಿಬಿಐ ಅಧಿಕಾರಿ ಸೋಗಲ್ಲಿ 68 ಲಕ್ಷ ರೂ. ವಂಚನೆ: ಮತ್ತೂಂದು ಪ್ರಕರಣದಲ್ಲಿ ಬನ್ಸಿ ಪಿ.ಡಿಂಗ್ರೆಜಾ ಅವರಿಗೆ 2024ರ ಡಿ.10ರಿಂದ ವಾಟ್ಸ್ಆ್ಯಪ್ ಕರೆ ಮಾಡಿದ ಅಪರಿಚಿತರು ತಮ್ಮನ್ನು ಸಿಬಿಐ ಅಧಿಕಾರಿಗಳೆಂದು ನಂಬಿಸಿದ್ದರು. 7 ಕೋಟಿ ರೂ. ಹಣಕಾಸಿನ ವಂಚನೆ ನಡೆದಿದ್ದು, ಇದರಲ್ಲಿ ನಿಮ್ಮ ಕೆವೈಸಿಯೂ ಭಾಗಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ನಿಮ್ಮ ಹೆಸರಿನಲ್ಲಿ ಅರೆಸ್ಟ್ ವಾರೆಂಟ್ ಇಶ್ಯೂ ಆಗಿದೆ. ಹೀಗಾಗಿ ನಿಮ್ಮ ಹಣಕಾಸಿನ ಬಗ್ಗೆ ಪರಿಶೀಲಿಸಬೇಕು ಎಂದು ನಂಬಿಸಿದ್ದರು.
ಇದರಿಂದ ಆತಂಕಗೊಂಡ ಬನ್ಸಿ ಪಿ.ಡಿಂಗ್ರೆಜಾ ಸೈಬರ್ ಕಳ್ಳರು ಹೇಳಿದಂತೆ ಹಂತ-ಹಂತವಾಗಿ 78 ಲಕ್ಷ ರೂ. ಗಳನ್ನು ವಿವಿಧ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಬಳಿಕ ಅಪರಿಚಿತರು ಸಂಪರ್ಕಕ್ಕೆ ಸಿಗದೇ ಇದ್ದಾಗ ಈ ಬಗ್ಗೆ ಅನುಮಾನ ಬಂದು ಬನ್ಸಿ ಪಿ.ಡಿಂಗ್ರೆಜಾ ಪರಿಶೀಲಿಸಿದ್ದರು.
ಆ ವೇಳೆ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.