ದೇವದುರ್ಗ: ಪಟ್ಟಣದ ಕೆಇಬಿ ಮುಖ್ಯ ರಸ್ತೆ ಪಕ್ಕದಲ್ಲಿರುವ ಮನೆಯ ಮಹಿಳೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ತಾಲೂಕು ಆಡಳಿತ ಗುರುವಾರ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಿದೆ.
ಸೋಂಕಿತ ಮಹಿಳೆಯ ಕುಟುಂಬ ಸದಸ್ಯರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಹೋಂ ಕ್ವಾರಂಟೈನ್ ನಲ್ಲಿರಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ. ಮನೆ ಅಕ್ಕಪಕ್ಕದ ಅಂಗಡಿಗಳನ್ನು ಮುಚ್ಚಲಾಗಿದೆ. ಇನ್ನು ಆಶೋಕ ವಾರ್ಡ್‌ಗೆ ಇತ್ತೀಚೆಗೆ ಮುಂಬಯಿನಿಂದ ಆಗಮಿಸಿದ 8 ಜನರಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 10 ವರ್ಷದ ಮಗು, 80 ವರ್ಷ ವೃದ್ಧೆ ಸಹ ಸೇರಿದ್ದಾರೆ. ಇಬ್ಬರ ವರದಿ ನೆಗೆಟಿವ್ ಬಂದಿದ್ದು, ಮತ್ತೊಮ್ಮೆ ಪರೀಕ್ಷೆಗೆ ಕಳಿಸಲಾಗಿದೆ. ಇನ್ನುಳಿದ ಇಬ್ಬರ ವರದಿ ಬರಬೇಕಾಗಿದೆ. ಮುಂಬಯಿ ನಂಜು ಇದೀಗ ವಾರ್ಡ್‌ನಲ್ಲಿ ಆತಂಕ ಮೂಡಿಸಿದೆ.
ಸೀಲ್ ಕಡ್ಡಾಯ: ಪಟ್ಟಣ ಸೇರಿ ತಾಲೂಕಿನಾದ್ಯಂತ ಖಾಸಗಿ ಆಸ್ಪತ್ರೆಗೆ ಕೆಮ್ಮು, ಜ್ವರ, ಉಸಿರಾಟ, ನೆಗಡಿ ಸೇರಿ ಚಿಕಿತ್ಸೆಗೆಂದು ಬರುವವರ ಕೈಗೆ ಸೀಲ್ ಹಾಕುವಂತೆ ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ಆರೋಗ್ಯ ಇಲಾಖೆ ಪ್ರತಿಯೊಂದು ಖಾಸಗಿ ಆಸ್ಪತ್ರೆಗೆ ಸೀಲ್ ಒದಗಿಸಲಾಗಿದೆ. ಕೋವಿಡ್ ಲಕ್ಷಣ ಕಂಡುಬಂದವರಿಗೆ ಸೀಲ್ ಹಾಕಿ ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಗೆ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ಮನೆಯವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ. ಹೋಂ ಕ್ವಾರಂಟೈನ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೀಲ್ ನೀಡಲಾಗಿದೆ. ಕೆಮ್ಮು, ಜ್ವರ, ಉಸಿರಾಟ ಸೇರಿ ಇತರೆ ಸಮಸ್ಯೆ ಎಂದು ಬರುವವರಿಗೆ ಕೈಗೆ ಸೀಲ್ ಹಾಕಲು ಸೂಚಿಸಲಾಗಿದೆ.
ಡಾ| ಬನದೇಶ,
ತಾಲೂಕು ಆರೋಗ್ಯಾಧಿಕಾರಿ