Advertisement

ಗಿಡಗಳೇ ನಿರ್ಧರಿಸುತ್ತವೆ ನೀರಿನ ಪ್ರಮಾಣ

12:29 PM Feb 25, 2017 | Team Udayavani |

ಬೆಂಗಳೂರು: ಒಂದು ತೆಂಗು ಅಥವಾ ಅಡಿಕೆ ಗಿಡಕ್ಕೆ ಎಷ್ಟು ಪ್ರಮಾಣ ಹಾಗೂ ಎಷ್ಟು ಹೊತ್ತು ನೀರು ಹರಿಸಬೇಕು? ರೈತರಿಗೆ ಇನ್ಮುಂದೆ ಈ ಚಿಂತೆ ಬೇಡ. ಯಾಕೆಂದರೆ, ಗಿಡಕ್ಕೆ ಬೇಕಾದಷ್ಟು ನೀರನ್ನು ಸ್ವತಃ ಗಿಡಗಳೇ ಹೀರಿಕೊಳ್ಳುವ ವ್ಯವಸ್ಥೆ ಬಂದಿದೆ. ಇದಕ್ಕಾಗಿ ರೈತರು ಮಾಡಬೇಕಾದ್ದಿಷ್ಟೇ, ಸೂಕ್ಷ್ಮ ನೀರಾವರಿಗೆ ಬಳಸುವ ಪೈಪ್‌ಗ್ಳನ್ನು ನೇರವಾಗಿ ಗಿಡಗಳ ಕಾಂಡಗಳಿಗೆ ಜೋಡಣೆ ಮಾಡಿದರೆ ಸಾಕು.

Advertisement

ಹೌದು, ಅಂಗಾಂಶ ನೀರಾವರಿ (ಟಿಶ್ಯು ಇರಿಗೇಷನ್‌) ಪದ್ಧತಿಯಲ್ಲಿ ಗಿಡಗಳಿಗೆ ರೈತರು ನೀರು ಹರಿಸಬೇಕಿಲ್ಲ. ಟ್ಯಾಂಕ್‌ ಮತ್ತು ಗಿಡಕ್ಕೆ ಪೈಪ್‌ ಜೋಡಣೆ ಮಾಡಿದರೆ, ತನಗೆ ಬೇಕಾದಷ್ಟು ನೀರನ್ನು ಗಿಡಗಳೇ ನಿರ್ಧರಿಸುತ್ತವೆ. ಈ ಪದ್ಧತಿಯನ್ನು ಪ್ರಾಯೋಗಿಕವಾಗಿ ತೆಂಗು, ಅಡಿಕೆ ಮತ್ತು ತಾಳೆ ಗಿಡಗಳಿಗೆ ಅಳವಡಿಸಲಾಗಿದ್ದು, ಪೂರಕ ಫ‌ಲಿತಾಂಶ ಬಂದಿದೆ.  ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ.ಎಸ್‌. ಭಾಸ್ಕರ್‌ ಈ ಅಂಗಾಂಗ ನೀರಾವರಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದಾರೆ.

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಹಮ್ಮಿಕೊಂಡ 13ನೇ “ಕೃಷಿ ವಿಜ್ಞಾನ ಸಮ್ಮೇಳನ-2017’ರಲ್ಲಿ “ಸ್ಮಾರ್ಟ್‌ ಕೃಷಿಯಲ್ಲಿನ ದಕ್ಷತೆ ವೃದ್ಧಿಸಲು ಅಳವಡಿಸಿಕೊಳ್ಳಬಹುದಾದ ಕಾರ್ಯನೀತಿ’ ಕುರಿತು ಮಾತನಾಡಿದ ಅವರು, ಪ್ರಸ್ತುತ ಚಾಲ್ತಿಯಲ್ಲಿರುವ ಹನಿ ನೀರಾವರಿ ಮತ್ತು ಸೂಕ್ಷ್ಮ ನೀರಾವರಿ ಪದ್ಧತಿಯಲ್ಲೂ ನೀರು ಪೋಲಾಗುತ್ತದೆ. ಆದರೆ, ಅಂಗಾಂಶ ನೀರಾವರಿ ವ್ಯವಸ್ಥೆಯಲ್ಲಿ ಹನಿ ನೀರು ಕೂಡ ವ್ಯರ್ಥ ಆಗುವುದಿಲ್ಲ. ಇದು ಬಯೋಲಾಜಿಕಲ್‌ ಸೆನ್ಸಾರ್‌ ಆಧಾರಿತ ನೀರಾವರಿ ಪದ್ಧತಿಯಾಗಿದೆ ಎಂದು ಹೇಳಿದರು. 

ರಂಧ್ರ ಕೊರೆದು ಪೈಪ್‌ ಅಳವಡಿಕೆ: ಅಂಗಾಂಶ ನೀರಾವರಿ ಪದ್ಧತಿ ಅನ್ವೇಷಣೆಯಲ್ಲಿ ಡಾ.ಭಾಸ್ಕರ್‌ ಅವರೊಂದಿಗೆ ಕೆಲಸ ಮಾಡಿದ ಮತ್ತೋರ್ವ ವಿಜ್ಞಾನಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಮುಕುಂದ್‌ ಜೋಶಿ ಮಾತನಾಡಿ, ಈ ಪದ್ಧತಿಯಲ್ಲಿ ಮೊದಲು ಟ್ಯಾಂಕ್‌ನಿಂದ ಪ್ರಮುಖ ಪೈಪ್‌ ಅನ್ನು ಜಮೀನುಗಳಲ್ಲಿ ಹಾಯಿಸಬೇಕು. ನಂತರ ಅದಕ್ಕೆ ಅಲ್ಲಲ್ಲಿ ಅತಿ ಸಣ್ಣ ಗಾತ್ರದ ಪೈಪ್‌ಗ್ಳನ್ನು ಅಳವಡಿಸಿ, ಗಿಡಗಳ ಕಾಂಡಗಳಿಗೆ ನೇರವಾಗಿ ಜೋಡಿಸಬೇಕು. ಇದಕ್ಕಾಗಿ ಗಿಡದಲ್ಲಿ 2 ಇಂಚು ರಂಧ್ರ ಕೊರೆಯಬೇಕಾಗುತ್ತದೆ. ಪೈಪ್‌ ಅನ್ನು ಕಾಂಡಕ್ಕೆ ಜೋಡಣೆ ಮಾಡಿದ ನಂತರ ಹೊರಗಡೆಯಿಂದ ಸೀಲ್‌ ಮಾಡಬೇಕು ಎಂದು ವಿವರಿಸಿದರು.  

ಈ ಪದ್ಧತಿಯಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದರೆ, ಗಿಡಗಳು ನೀರು ಕಡಿಮೆ ಹೀರಿಕೊಳ್ಳುತ್ತವೆ. ತೇವಾಂಶ ಕಡಿಮೆಯಾದರೆ, ನೀರು ಹೆಚ್ಚು ಹೀರಿಕೊಳ್ಳುತ್ತವೆ. ಟ್ಯಾಂಕ್‌ನಲ್ಲಿ ನೀರು ಖಾಲಿಯಾದಾಗೆಲ್ಲಾ ಭರ್ತಿ ಮಾಡುತ್ತಾ ಹೋದರೆ ಸಾಕು. ಇದೇ ಬಯೋಲಾಜಿಕಲ್‌ ಸೆನ್ಸಾರ್‌ ಆಧಾರಿತ ನೀರಾವರಿ ಪದ್ಧತಿ ಎಂದೂ ತಿಳಿಸಿದರು. 
ವಿಜ್ಞಾನಿಗಳಾದ ಡಾ.ಎಂ.ಎಲ್‌. ಜಾಟ್‌, ಡಾ.ಸಿ.ಎನ್‌. ರವಿಶಂಕರ್‌, ಡಾ.ಅನಿಲ್‌ಕುಮಾರ್‌ ಸಿಂಗ್‌ ಮಾತನಾಡಿದರು. 

Advertisement

ಶೇ.80 ರಷ್ಟು ನೀರು ಸಂರಕ್ಷಣೆ
ಈ ಪದ್ಧತಿಯಿಂದ  ಶೇ.80ರಷ್ಟು ನೀರನ್ನು ಸಂರಕ್ಷಿಸಬಹುದು. ಇಳುವರಿ ಶೇ.15ರಷ್ಟು ಹೆಚ್ಚು ಬರಲಿದೆ. ಅಡಿಕೆ ಉದುರುವ ಪ್ರಮಾಣ ಶೇ. 50ರಷ್ಟು ತಗ್ಗಲಿದೆ. ದೇಶದಲ್ಲಿ ಮೊದಲ ಬಾರಿಗೆ ಈ ಪದ್ಧತಿ ಅನ್ವೇಷಿಸಲಾಗಿದೆ. ಇದನ್ನು ಇತರೆ ಬೆಳೆಗಳಿಗೂ ಅಳವ ಡಿಸಬಹುದೇ ಎಂಬುದರ ಅಧ್ಯಯನ ನಡೆಯಬೇಕಿದೆ ಎಂದು ಮುಕುಂದ್‌ ಜೋಶಿ ಮಾಹಿತಿ ನೀಡಿದರು.

ಹವಾಮಾನ ಬದಲಾವಣೆ ಭವಿಷ್ಯದ ದೊಡ್ಡ ಸವಾಲು: ಸದಾನಂದಗೌಡ
ಬೆಂಗಳೂರು:
ಹವಾಮಾನ ಬದಲಾ ವಣೆ ಭವಿಷ್ಯದ ದೊಡ್ಡ ಸವಾಲು. ಇಂತಹ ನೈಸರ್ಗಿಕ ಪ್ರಕ್ರಿಯೆಗಳಿಗೆ ವಿಜ್ಞಾನಿಗಳೇ ಪರಿಹಾರ ನೀಡಬೇಕೆಂದು ಕೇಂದ್ರ ಸಾಂಖೀÂಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. 

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಶುಕ್ರವಾರ 13ನೇ ಕೃಷಿ ವಿಜ್ಞಾನ ಸಮ್ಮೇಳನದ ಸಮಾರೋಪ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದ್ರದಮಟ್ಟ ಏರಿಕೆ, ಆಹಾರ ಉತ್ಪಾದನೆ ಕುಸಿತ, ಜೀವವೈ ವಿಧ್ಯತೆಯಲ್ಲಿ ಏರುಪೇರು ಸೇರಿ ಹವಾ ಮಾನ ಬದಲಾವಣೆ ಹಲವು ಸಮಸ್ಯೆ ಗಳನ್ನು ತಂದೊಡ್ಡುತ್ತಿದೆ. ಭವಿಷ್ಯದಲ್ಲಿ ಈ ಸಮಸ್ಯೆಗಳು ಕಂಟಕವಾಗಿ ಪರಿಣ ಮಿಸಲಿವೆ. ಇವುಗಳಿಗೆ ವಿಜ್ಞಾನಿಗಳೇ ಪರಿಹಾರ ನೀಡಬೇಕು. ಸರ್ಕಾರ ಅದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಿದೆ ಎಂದು ಹೇಳಿದರು. 

ಜನಸಂಖ್ಯೆ ಮತ್ತು ಆದಾಯ ಇದೇ ರೀತಿ ಹೆಚ್ಚಳವಾದರೆ, 2050ರ ವೇಳೆಗೆ ಆಹಾರದ ಬೇಡಿಕೆ ಈಗಿರುವುದಕ್ಕಿಂತ ಶೇ. 50 ಏರಿಕೆ ಆಗಲಿದೆ. ಹಾಗಿದ್ದರೆ, ಮುಂದಿನ 23 ವರ್ಷಗಳಲ್ಲಿ ಆಹಾರ ಉತ್ಪಾದನೆ ಒಂದೂವರೆಪಟ್ಟು ಹೆಚ್ಚಿಸುವುದು ಹೇಗೆ ಎನ್ನುವುದರ ಬಗ್ಗೆ ಸಂಶೋಧನೆ ನಡೆಸುವ ಜವಾಬ್ದಾರಿಯೂ ವಿಜ್ಞಾನಿಗಳ ಮೇಲಿದೆ ಎಂದರು. 

ಶಾಸಕ ಎಸ್‌.ಆರ್‌. ವಿಶ್ವನಾಥ್‌ ಮಾತನಾಡಿ, “ನಾವೆಲ್ಲರೂ ಸೇರಿ ಕೆರೆಗಳನ್ನು ನುಂಗಿ ನೀರು ಕುಡಿದಿದ್ದೇವೆ. ಅಭಿವೃದ್ಧಿ ಭರದಲ್ಲಿ ಗಿಡ-ಮರಗಳ ಸಂಖ್ಯೆ ಕಡಿಮೆಯಾಗಿದೆ. ಕೆರೆಗಳನ್ನು ಉಳಿಸುವ ಪ್ರಯತ್ನ ಮಾಡಲಿಲ್ಲ. ಇದು ಈಗ ಹವಾಮಾನ ಬದಲಾವಣೆ ರೂಪದಲ್ಲಿ ನಮ್ಮ ವ್ಯವಸ್ಥೆ ಮೇಲೆಯೇ ಪರಿಣಾಮ ಬೀರುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.  ಶಾಸಕ ವೈ.ಎ. ನಾರಾಯಣಸ್ವಾಮಿ, ಡಾ.ಎಸ್‌. ಅಯ್ಯಪ್ಪನ್‌, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌. ಶಿವಣ್ಣ, ಕುಲಸಚಿವ ಡಾ.ಎಂ.ಬಿ. ರಾಜೇಗೌಡ ಇದ್ದರು. 

ಶಿಫಾರಸುಗಳು
* ಹವಾಮಾನ ಬದಲಾವಣೆಗೆ ಗುರಿಯಾಗುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಸಮೀಕ್ಷೆ ನಡೆಸಿ, ಅವರು ಅನುಭವಿಸುತ್ತಿರುವ ತೊಂದರೆಗಳನ್ನು ತಗ್ಗಿಸಲು ಸೂಕ್ತ ನೀತಿ ರೂಪಿಸಬೇಕು.  
* ರಾಷ್ಟ್ರೀಯಮಟ್ಟದಲ್ಲಿ ಸ್ಪಷ್ಟವಾದ ನೀರು ಸಂರಕ್ಷಣಾ ನೀತಿ ತರಬೇಕು.
* ರಾಷ್ಟ್ರೀಯ ಜಾನುವಾರುಗಳ ಅಭಿವೃದ್ಧಿ ಕಾರ್ಯಕ್ರಮ ರೂಪಿಸಬೇಕು. 
* ಹವಾಮಾನ ಚೇತರಿಸಿಕೊಳ್ಳಲು ಪೂರಕವಾಗುವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ರೈತರು, ವಿಜ್ಞಾನಿಗಳು, ಸರ್ಕಾರೇತರ ಸಂಘ-ಸಂಸ್ಥೆಗಳಲ್ಲಿ ಸಾಮರ್ಥ್ಯ ವೃದ್ಧಿಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next