ಸೇಡಂ: ತಾಲೂಕಿನಲ್ಲಿರುವ 50ಕ್ಕೂ ಹೆಚ್ಚು ತಾಂಡಾಗಳ ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. ಬೊಂದೆಂಪಲ್ಲಿಯ ಇಂದಿರಾನಗರ ತಾಂಡಾದಲ್ಲಿ ಗ್ರಾಮ ವಿಕಾಸ ಯೋಜನೆ ಅಡಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿರುವ ಎಲ್ಲ ತಾಂಡಾಗಳಿಗೆ ನೀರು, ವಿದ್ಯುತ್, ರಸ್ತೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಗ್ರಾಮ ವಿಕಾಸ ಯೋಜನೆ ಅಡಿ ಬೊಂದೆಂಪಲ್ಲಿ ವ್ಯಾಪ್ತಿಯಲ್ಲಿ ಬರುವ ಫಸಲಾದಿ ತಾಂಡಾ, ಗೋಪ್ಯಾನಾಯಕ ತಾಂಡಾ, ಕಾರಬಾರಿ ತಾಂಡಾ, ಬಾಲ್ಯನಾಯಕ ತಾಂಡಾ, ವೆಂಕಟಾಪುರ ತಾಂಡಾಗಳಿಗೆ ಆಟದ ಮೈದಾನ, ರಂಗ ಮಂದಿರ ನಿರ್ಮಾಣ, ಸೌರ ಬೆಳಕು ದೀಪಗಳ ಅಳವಡಿಕೆ, ದೇವಾಲಯಗಳ ಕಟ್ಟೆ ನಿರ್ಮಾಣ ಕಾಮಗಾರಿಗಳಿಗಾಗಿ 75 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ತಾಂಡಾ ಜನರು ಶ್ರಮ ಜೀವಿಗಳಾಗಿದ್ದು, ಗಂಗಾ ಕಲ್ಯಾಣ ಸೇರಿದಂತೆ ಸರ್ಕಾರದಿಂದ ಸಿಗುವ ಎಲ್ಲ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದರು. ಹೈ.ಕ. ಭಾಗದ ಅಭಿವೃದ್ಧಿಗಾಗಿ 371 (ಜೆ) ನೇ ಕಲಂ ಅನುಷ್ಠಾನಗೊಳಿಸಿದ್ದು, ಕೋಲಕುಂದಾ ಗ್ರಾಮದ ತಾಂಡಾದ ನಿವಾಸಿಗೆ 371 (ಜೆ) ಕಲಂ ಅಡಿಯಲ್ಲಿ ಎಂಬಿಬಿಎಸ್ ಸೀಟು ಲಭ್ಯವಾಗಿದೆ. ಹೀಗಾಗಿ ಪಾಲಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಪಂಚಾಯತ ಸದಸ್ಯ ದಾಮೋದರರೆಡ್ಡಿಪಾಟೀಲ ಸಿಲಾರಕೋಟ, ಗ್ರಾಪಂ ಅಧ್ಯಕ್ಷ ಕವಿತಾಬಾಯಿ ನಂದಕುಮಾರ, ಉಪಾಧ್ಯಕ್ಷ ಗೋವರ್ಧನರೆಡ್ಡಿ ಲಿಂಗಂಪಲ್ಲಿ, ತಾಪಂ ಉಪಾಧ್ಯಕ್ಷೆ ರೇಣುಕಾ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶರೆಡ್ಡಿಪಾಟೀಲ ರಂಜೋಳ, ಸೈಯ್ಯದ ನಾಜೀಮೋದ್ದೀನ, ಜಯಪಾಲರೆಡ್ಡಿ ಮೋತಕಪಲ್ಲಿ, ಸದಾಶಿವರೆಡ್ಡಿ ಗೋಪಾನಪಲ್ಲಿ, ರಾಜಶೇಖರ ಪುರಾಣಿಕ, ಕರಭೂಪಾಲ ಕಾನಾಗಡ್ಡಾ, ಸಿದ್ಸಯ್ಯಸ್ವಾಮಿ ನಾಡೇಪಲ್ಲಿ,
ವಿ.ವಿ. ಕಲಬುರ್ಗಿ, ಎಇಇ ಪಲ್ಲಾ ಲಕ್ಷಿಕಾಂತರೆಡ್ಡಿ, ಎಇ ವಿಜಯದಶರಥ ಸಂಗನ, ಖುನ್ಯಾನಾಯಕ, ಹಣ್ಮಂತರೆಡ್ಡಿ, ಗೌರಿಬಾಯಿ, ಬಾಬಾ ಲಿಂಗಂಪಲ್ಲಿ, ಸಿಡಿಪಿಒ ಅಶೋಕರಾಜನ, ಹೇಮ್ಲಾನಾಯಕ, ಸತ್ಯನಾರಾಯಣರೆಡ್ಡಿ ಜಿಲ್ಲೇಡಪಲ್ಲಿ, ವೆಂಕಟರಾವ ಖೇವಜಿ, ಚಂದ್ರಪ್ಪ ಮಡಗು, ಮುರುಳೀದರರೆಡ್ಡಿ ಕೊಂತನಪಲ್ಲಿ, ನ್ಯಾಯವಾದಿ ಚಂದ್ರಪ್ಪ ಯಾದವ, ಭೀಮರೆಡ್ಡಿ ದೇವಡಿ ಸಿಲಾರಕೋಟ, ನವೀನ ರಾಜೋಳ್ಳ, ಇಸ್ಮಾಯಿಲ್ ಇದ್ದರು.
ಮನವಿ: ಲಿಂಗಂಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ಶಾಲೆ ಪ್ರಾರಂಭಿಸುವಂತೆ ಹಣ್ಮಂತರೆಡ್ಡಿ ಬೊಂದೆಂಪಲ್ಲಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.