Advertisement

ಕಳೆನಾಶಕ ರಾಸಾಯನಿಕ ಗೊಬ್ಬರ ಸಿಂಪಡಣೆ ಜೋಡಿ ಯಂತ್ರ

03:55 PM Sep 23, 2017 | |

ಕೋಟ : ಇಂದು ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣ ಅನಿವಾರ್ಯವಾಗಿದೆ.  ಹೀಗಾಗಿ ರೈತ ಹೊಸ-ಹೊಸ ಯಂತ್ರಗಳನ್ನು ಅಳವಡಿಸಿಕೊಳ್ಳುವ ಕುರಿತು ಆಸಕ್ತಿ ತೋರುತ್ತಿದ್ದಾನೆ. ಅದೇ ರೀತಿ ಕೋಟ ಗಿಳಿಯಾರಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ತಂಡವೊಂದು ಭತ್ತದ ಬೆಳೆಯಲ್ಲಿ  ಕಳೆನಾಶಗೊಳಿಸುವುದು ಹಾಗೂ ರಾಸಾಯನಿಕ ಗೊಬ್ಬರ ಸಿಂಪಡಣೆ ಎರಡು ಕೆಲಸವನ್ನು ಒಟ್ಟಾಗಿ ಮಾಡುವ ಜೋಡಿ ಯಂತ್ರವೊಂದನ್ನು  ಸಂಶೋಧಿಸಿ ಯಶಸ್ವಿಯಾಗಿದೆ.  ಮುಂದಿನ ದಿನಗಳಲ್ಲಿ ಈ ಸಾಧನ ಕೃಷಿಕರಿಗೆ ಹೆಚ್ಚು ಅನುಕೂಲವಾಗಬಹುದು.

Advertisement

ಯಾವುದು ಈ ಯಂತ್ರ
ಗಿಳಿಯಾರಿನ ಕೃಷಿ ಕುಟುಂಬದ, ಇಂಜಿನಿಯರಿಂಗ್‌ ಪದವೀಧ‌ರರಾದ ಹರೀಶ ಶೆಟ್ಟಿ ಗಿಳಿಯಾರು, ದೀಕ್ಷಿತ್‌ ಉಪಾಧ್ಯ, ದಿವಾಕರ, ಅರುಣ್‌ ಶೆಟ್ಟಿ ಎನ್ನುವ ಯುವಕರು ಕಳೆದ ವರ್ಷ ಮೂಡುಬಿದರೆ ಎಂ.ಐ.ಟಿ.ಇ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಅಂತಿಮ ವರ್ಷದ ಪಠ್ಯ ಚಟುವಟಿಕೆಗಾಗಿ ಈ  ಸಾಧನವನ್ನು ಆವಿಷ್ಕರಿಸಿದ್ದು. ಅನಂತರ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ.  ಈ ಯಂತ್ರ ಮೇಲ್ನೋಟಕ್ಕೆ ಹಳೆಯ ವೀಡರ್‌ನಂತೆ ಕಂಡು ಬರುತ್ತದೆ ಹಾಗೂ ವೀಡರ್‌ ಮಾದರಿಯಲ್ಲೇ ಉಪಯೋಗಿಸಬಹುದಾಗಿದೆ. ಆದರೆ ಬೇರೆ-ಬೇರೆ ಸಲಕರಣೆಗಳನ್ನು ಉಪಯೋಗಿಸಿ ರಾಸಾಯನಿಕ ಸಿಂಪಡಣೆಗೆ ಬಾಕ್ಸ್‌ವೊಂದನ್ನು ಅಳವಡಿಸಲಾಗಿದೆ. ಕಳೆ ತೆಗೆಯುವ ಸಂದರ್ಭ ಇದರಲ್ಲಿ ರಾಸಾಯನಿಕವನ್ನು ಸಂಗ್ರಹಿಸಿದಾಗ ವೀಡರ್‌ ಚಾಲನೆಗೊಂಡಂತೆ ಚೈನ್‌ ಹಾಗೂ ಬಾಕ್ಸ್‌ನೊಳಗಿನ ವೀಲ್‌ ಚಾಲನೆಗೊಂಡು  ಪೈಪ್‌ ಮೂಲಕ ರಾಸಾಯನಿಕ ಗೊಬ್ಬರವು ಬೆಳೆಗೆ ಸಿಂಪಡಿಸಲ್ಪಡುತ್ತದೆ.  ಹೀಗಾಗಿ ಒಂದೇ ಸಮಯದಲ್ಲಿ  ಕಳೆ ನಾಶಗೊಳಿಸುವುದು ಹಾಗೂ ರಾಸಾಯನಿಕ ಸಿಂಪಡಿಸುವ ಕೆಲಸವಾಗುತ್ತದೆ.

ಹೊಸ ರೀತಿಯಲ್ಲಿ 
ಮಾರ್ಪಾಡು ಮಾಡಬಹುದು

ಪ್ರಾಯೋಗಿಕ ಸ್ಥಿತಿಯಲ್ಲಿರುವ ಈ ಯಂತ್ರದಲ್ಲಿ  ಒಂದಷ್ಟು ಬದಲಾವಣೆ ಮಾಡಿದಲ್ಲಿ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಮುಖವಾಗಿ ಇದೀಗ ಕಬ್ಬಿಣದ ಸಲಕರಣೆಗಳನ್ನು ಬಳಸಿ ಇದನ್ನು ತಯಾರಿಸಿದ್ದು, ಮುಂದೆ  ಫೈಬರ್‌ನಿಂದ ತಯಾರಿಸಿದರೆ ಯಂತ್ರದ ತೂಕ ಕಡಿಮೆಯಾಗಲಿದೆ ಹಾಗೂ ಲಘು ಮೋಟರ್‌ ಅಳವಡಿಸಲು ಅವಕಾಶವಿದ್ದು ಹೀಗೆ ಮಾಡಿದಲ್ಲಿ  ಕಾರ್ಯ ದಕ್ಷತೆ, ವೇಗ ಹೆಚ್ಚಲಿದೆ.

ಮಾರುಕಟ್ಟೆಗೆ 
ಪರಿಚಯಿಸಿದರೆ ಉತ್ತಮ

ಈ ಯಂತ್ರ ಮಾರುಕಟ್ಟೆ ಮೂಲಕ  ಕೃಷಿಕರ ಕೈ ಸೇರಿದಲ್ಲಿ ಬಹಳಷ್ಟು ಅನುಕೂಲವಿದೆ. ಆದ್ದರಿಂದ  ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು, ಕೃಷಿ ಸಂಶೋಧಕರು, ಕೃಷಿ ಯಂತ್ರಕ್ಕೆ ಸಂಬಂಧಿಸಿದ  ಕಂಪೆನಿಗಳು ಗಮನ ಹರಿಸಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ 7259723940 ಸಂಪರ್ಕಿಸಬಹುದು.

ಕೃಷಿ ಕ್ಷೇತ್ರದ ಕುರಿತು ನಮಗೆ ಅತೀವವಾದ ಆಸಕ್ತಿ.  ನಾವು ನಾಲ್ಕು ಮಂದಿ ಗೆಳೆಯರು ಇಂಜಿನಿಯರಿಂಗ್‌ ಪದವಿ ಅಭ್ಯಾಸ ಮಾಡುತ್ತಿದ್ದಾಗ ಪಠ್ಯ ಚಟುವಟಿಕೆಗಾಗಿ ಯಂತ್ರವೊಂದನ್ನು ಆವಿಷ್ಕರಿಸಬೇಕಾದ ಸಂದರ್ಭ ಬಂತು. ಆಗ ಗುರುಗಳಾದ ವಿನಯ್‌ ಸರ್‌ ಅವರ ನೆರವು ಪಡೆದು ಈ ರಾಸಾಯನಿಕ ಸಿಂಪಡಣೆ-ಕಳೆ ನಾಶಕ ಜೋಡಿ ಯಂತ್ರವನ್ನು ತಯಾರಿಸಿದೆವು. ಈಗ ನಮ್ಮ ಗದ್ದೆಯಲ್ಲಿ ಉಪಯೋಗಿಸಿ ಯಶಸ್ವಿಯಾಗಿದ್ದೇವೆ. ಇದನ್ನು ಇನ್ನಷ್ಟು ಮಾರ್ಪಾಡು ಮಾಡಿದಲ್ಲಿ  ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಬಹುದು. ಮಾರುಕಟ್ಟೆಗೆ ಪರಿಚಯಿಸಿದಲ್ಲಿ ರೈತರಿಗೂ ಅನುಕೂಲವಾಗಲಿದೆ.
ಹರೀಶ್‌ ಶೆಟ್ಟಿ ಗಿಳಿಯಾರು, ಯಂತ್ರದ ಸಂಶೋಧಕ

Advertisement

ಹೆಚ್ಚು ಲಾಭ
ಈ ಸಾಧನದ ಮೂಲಕ ಎರಡು ಕೆಲಸ ಒಟ್ಟಾಗಿ ನಡೆಯುವುದರಿಂದ ಸಮಯದ ಉಳಿತಾಯವಾಗುತ್ತದೆ ಹಾಗೂ ಶ್ರಮ ಕೂಡ ಕಡಿಮೆ ಮತ್ತು ಪೈಪ್‌ ಮೂಲಕ ಹರಿಯುವ ರಾಸಾಯನಿಕ ಗೊಬ್ಬರ ಬೆಳೆಯ ಬುಡ ಭಾಗಕ್ಕೆ ಸಿಂಪಡಣೆಗೊಳ್ಳುವುದರಿಂದ ಹೆಚ್ಚು ಅನುಕೂಲವಾಗುತ್ತದೆ.

ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next