ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ವಿರುದ್ಧ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿ ಇರ್ಫಾನ್ ಪಾಷಾ ಸೇರಿ ಇತರ ಐವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ಕುರಿತು ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ ಆಲಿಸಿದ ನ್ಯಾ. ಮೈಕಲ್ ಡಿ. ಕುನ್ಹಾ ಅವರು, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದರು. ಬೆಂಗಳೂರು ನಗರದ ಶಿವಾಜಿನಗರ ಬಳಿ 2016ರ ಅಕ್ಟೋಬರ್‌ನಲ್ಲಿ ಆರೆಸ್ಸೆಸ್ ಪಥ ಸಂಚಲನ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ರುದ್ರೇಶ್ ಅವರನ್ನು ಕೊಲೆ ಮಾಡಲಾಗಿತ್ತು.
ಆರೋಪಿಗಳ ಅರ್ಜಿಗೆ ಆಕ್ಷೇಪಿಸಿ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು, “ಆರೋಪಿಗಳು ಒಂದು ಸಂಘಟನೆಯ ಸದಸ್ಯರು. ವ್ಯವಸ್ಥಿತವಾಗಿ ಪಿತೂರಿ ಮಾಡಿ ರುದ್ರೇಶ್‌ರನ್ನು ಕೊಂದಿರು ಬಗ್ಗೆ ವಿಚಾರಣೆ ವೇಳೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಮೊಬೈಲ್ ಕೆರೆಗಳ ದಾಖಲೆ ಪರಿಶೀಲಿಸಿದಾಗ, ಹೊರರಾಜ್ಯದಲ್ಲಿ ಪಿತೂರಿ ಸಂಚು ನಡೆದಿರುವುದು ಹಾಗೂ ನಿರ್ದಿಷ್ಟ ಸಮುದಾಯದ ವಿರುದ್ಧ ಭಯೋತ್ಪಾದನಾ ಕೃತ್ಯ ನಡೆಸಲು ಉದ್ದೇಶಿಸಲಾಗಿತ್ತು ಎಂಬುದೂ ಸ್ಪಷ್ಟವಾಗುತ್ತದೆ,”ಎಂದರು.
ಅಲ್ಲದೆ, ಮೊದಲನೆ ಆರೋಪಿಗೆ ಅಂತಾರಾಜ್ಯ ಸಂಘಟನೆಗಳೊಂದಿಗೆ ಸಂಪರ್ಕವಿದೆ. ಇದು ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆ ಮೇಲೆ ದುಷ್ಪರಿಣಾಮ ಬೀರುವಂತಿದೆ. ತನಿಖಾ ದಾಖಲೆಗಳು ತೃಪ್ತಿಯಾದ ಕಾರಣ ಅಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯಡಿ ತನಿಖೆ ನಡೆಸಲು ಅನುಮತಿ ನೀಡಿದೆ. ಹೀಗಾಗಿ, ಆರೋಪಿಗಳ ವಿರುದ್ಧದ ಎನ್‌ಐಎ ತನಿಖೆ ರದ್ದುಪಡಿಸಬಾರದು ಎಂದು ಮನವಿ ಮಾಡಿದರು.
ಕೇಂದ್ರ ಗೃಹ ಸಚಿವಾಲಯ ಮತ್ತು ಎನ್‌ಐಎ ಪರ ವಕೀಲರು, “ಪ್ರಕರಣದ ಗಂಭೀರತೆ ಪರಿಗಣಿಸಿ ಆರೋಪಿಗಳ ಅರ್ಜಿ ವಜಾಗೊಳಿಸಬೇಕು,” ಎಂದು ಕೋರಿದರು.