Advertisement

ಪ್ರಕೃತಿಗೆ ಪ್ರಿಯವಲ್ಲದ ವಿಕಾಸದಿಂದ ವಿನಾಶ: ಗೋವಿಂದಾಚಾರ್ಯ

10:35 AM Dec 19, 2021 | Team Udayavani |

ಕಲಬುರಗಿ: ಜಗತ್ತಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಪ್ರಕೃತಿಗೆ ಮಾರಕವಾದ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಪ್ರಕೃತಿಗೆ ಪ್ರಿಯವಲ್ಲದ ವಿಕಾಸ ವಿನಾಶಕ್ಕೆ ದಾರಿ ಮಾಡಿಕೊಡಲಿದೆ. ಪ್ರಕೃತಿಗೆ ವಿರುದ್ಧ ನಡೆದುಕೊಂಡರೆ ಅಪಾಯ ತಪ್ಪಿದ್ದಲ್ಲ ಎಂದು ಭಾರತ ವಿಕಾಸ ಸಂಗಮ ಸಂಸ್ಥಾಪಕ ಚಿಂತಕ ಕೆ.ಎನ್‌. ಗೋವಿಂದಾಚಾರ್ಯ ಎಚ್ಚರಿಸಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ವಿದ್ಯಾ ಸಂಸ್ಥೆ ಮತ್ತು ಭಾರತ ವಿಕಾಸ ಸಂಗಮ ಸಹಯೋಗದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ “ಸೃಜನ ಶಕ್ತಿ ಸಂಗಮ-8′ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ 500 ವರ್ಷಗಳಲ್ಲಿ ಕಂಡ ಪ್ರಗತಿ ಇತ್ತೀಚೆಯ ಕೇವಲ 50 ವರ್ಷಗಳಲ್ಲೇ ಕಂಡಿರಬಹುದು. 300 ವರ್ಷ ಕಾಲ ನಡೆದ ಪ್ರಗತಿ ವೇಗ ಈಗಿನ 30 ವರ್ಷಗಳಲ್ಲಿ ಆಗಿರಬಹುದು. ಆದರೆ, ಇದ್ಯಾವುದು ಸಕಾರಾತ್ಮಕ ಪ್ರಗತಿಯಲ್ಲ. ಬದಲಿಗೆ ಅಸಮತೋಲನ ಬೆಳವಣಿಗೆಯಾಗಿದ್ದು, ಮಾನವನ ಅಭಿವೃದ್ಧಿಗೆ ಪ್ರಕೃತಿ ಬಲಿಕೊಡುವುದು ಸರಿಯಲ್ಲ ಎಂದರು.

ಅಭಿವೃದ್ಧಿಗಾಗಿ ಭೂಮಿ ಹಾಳು ಮಾಡಿದರೆ ಅದು ವಿನಾಶ, ಭೂಮಿ ಅಭಿವೃದ್ಧಿಗಾಗಿ ನಾವು ಕಷ್ಟ ಪಟ್ಟರೆ ಅದೇ ವಿಕಾಸ ಎಂದರು. ಪ್ರಕೃತಿಗೆ ವಿರುದ್ಧವಾಗಿ ಜೀವಿಸುವ ಮತ್ತು ತನ್ನ ಸ್ವಾರ್ಥಕ್ಕಾಗಿ ಭೂಮಿ, ಪರಿಸರ ಹಾಳುವ ಮಾಡುವ ಏಕೈಕ ಜೀವಿ ಮನುಷ್ಯ. ಭೂಮಿ ಮೇಲೆ ನಿರಂತರವಾಗಿ ದಬ್ಟಾಳಿಕೆ ಮಾಡಿಕೊಂಡು ಬರುತ್ತಿರುತ್ತೇವೆ. ಭೂಮಿ ತಾಯಿ ಹಲವು ಸಲ ವಿಕೋಪಗಳ ಮೂಲಕ ಸುಧಾರಿಸಿಕೊಳ್ಳುವಂತೆ ಎಚ್ಚರಿಕೆ ನೀಡುತ್ತಿದ್ದರೂ, ಮನುಷ್ಯ ಎಚ್ಚೆತ್ತುಕೊಳ್ಳುವ ಮನಸು ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಆಧುನಿಕ ಯುಗದಲ್ಲಿ ಡಾಟಾ ಸೆಕ್ಯೂರಿಟಿಗೆ ಮಹತ್ವ ನೀಡುತ್ತಿದ್ದೇವೆ. ಇದಕ್ಕೆ ನೀಡುವಷ್ಟು ಮಹತ್ವ ಮನುಷ್ಯನ ಹಿತರಕ್ಷಣೆಗೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬೀದರ್‌ನ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಬಡವರಾಗಿದ್ದರೆ ಉಣ್ಣಲು, ಉಡಲು ಮಾತ್ರ ಕಷ್ಟ. ಆದರೆ, ಶ್ರೀಮಂತರಾಗಿದ್ದರೂ ಉಣ್ಣಲು ಆಗದ, ಉಡಲು ಆಗದ ಸ್ಥಿತಿ ತಲುಪುವುದೇ ನಿಜವಾದ ದರಿದ್ರತನ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಡಾ| ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಉದ್ಘಾಟಿಸಿದರು. ಸೇಡಂ ಕೊತ್ತಲಬಸವೇಶ್ವರ ಸಂಸ್ಥಾನದ ಪೂಜ್ಯ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಪ್ರಾಸ್ತಾವಿಕ ಮಾತನಾಡಿದರು. ಪೂಣಾದ ವನರಿ ಫೌಂಡೇಷನ್‌ ಅಧ್ಯಕ್ಷ ರವೀಂದ್ರ ಧಾರಿಯಾ, ಹೈದರಾಬಾದನ ಶಿಕ್ಷಣ ತಜ್ಞ ಮಾಧವ ರೆಡ್ಡಿ ವಿಶೇಷ ಉಪನ್ಯಾಸ ನೀಡಿದರು.

ಸಂಗಮದ ಸಂಯೋಜಕ ಮಾಧವರೆಡ್ಡಿ, ಸಂಘಟನಾ ಕಾರ್ಯದರ್ಶಿ ಸುರೇಶಚಂದ್ರ ಅಗ್ನಿ ಹೋತ್ರಿ, ದಕ್ಷಿಣ ಭಾರತ ಸಹ ಸಂಚಾಲಕ ಕೆ.ಜಿ.ಮುರುಳಿಧರನ್‌ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next