Advertisement

ಡೆಸ್ಕ್ ಚಿತ್ರಕಥಾ

06:00 AM Dec 25, 2018 | |

ಮೇಘಸಂದೇಶದ ಬಳಿಕ ಪ್ರೇಮಪತ್ರಗಳ ಕಾಲ ಸರಿದುಹೋಗಿ ವಾಟ್ಸಾéಪ್‌ ಅವತರಿಸಿದರೂ ಡೆಸ್ಕಿನ ಮೇಲೆ ಪ್ರೇಮನಿವೇದನೆ ಮಾಡುವ ಸಂಪ್ರದಾಯಕ್ಕೆ ಎಳ್ಳಿನಿತೂ ಧಕ್ಕೆಯಾಗಿಲ್ಲ. ಯಾವುದಾದರೂ ಡೆಸ್ಕಿನ ಮೇಲೆ ಪ್ರೇಮ ಪ್ರತೀಕವಾದ ಹೃದಯದ ಒಂದಾದರೂ ರೇಖಾಚಿತ್ರ ಇಲ್ಲದೇ ಹೋದರೆ ಅಂತಹ ಕಾಲೇಜನ್ನು ಕಾಲೇಜೆಂದು ಕರೆಯುವುದು ಹುಡುಗರಿಗೆ ಮಾಡುವ ಅವಮಾನವೆಂದೇ ಭಾವಿಸಬಹುದು…

Advertisement

ತನ್ನ ವಿದ್ಯಾರ್ಥಿಗಳನ್ನು ಕುರಿತು ಕಾಲೇಜು ಮೇಷ್ಟ್ರೊಬ್ಬ ಶತದಡ್ಡರು ನಾಲಾಯಕ್ಕುಗಳು ಎಂದು ಎಂದಾದರೂ ರೇಗಿದ್ದಾನೆ ಎಂದರೆ ಆತ ಆವರೆಗೆ ಇಡೀ ತರಗತಿಗೆ ಒಮ್ಮೆಯೂ ಪ್ರದಕ್ಷಿಣೆ ಬಂದಿಲ್ಲವೆಂದೇ ಅರ್ಥ. ಬಂದಿದ್ದರೆ ಆತನ ತರಗತಿಯಲ್ಲಿರುವ ಸಿನಿಮಾ ಹೀರೋಗಳು, ಅಮರ ಪ್ರೇಮಿಗಳು, ಮಹಾಕವಿಗಳು, ತಣ್ತೀಜ್ಞಾನಿಗಳ ಬಗ್ಗೆ ಅವನಿಗೆ ಜ್ಞಾನೋದಯವಾಗದೇ ಇರುತ್ತಿರಲಿಲ್ಲ.
“ರಾತ್ರಿಯಿಡೀ ಓದಿಯೂ ಏನೂ ಬರಿಯಕ್ಕೆ ಹೊಳೀತಿಲಿ. ದಯಮಾಡಿ ಪಾಸು ಮಾಡಿ ಸರಾ…’ ಎಂದು ಉತ್ತರ ಪತ್ರಿಕೆಯ ಕೊನೆಯಲ್ಲಿ ಸಾಷ್ಟಾಂಗ ಸಮಸ್ಕಾರ ಸಮೇತ ವಿನಂತಿ ಮಾಡಿಕೊಳ್ಳುವ ಉತ್ತರ ಭೂಪರೂ ಕ್ಲಾಸಿನಲ್ಲಿ ಕುಳಿತರೆಂದರೆ ಅವರ ಸುಪ್ತ ಪ್ರತಿಭೆ ತಾನಾಗೇ ಚಿಗುರಲು ಆರಂಭಿಸುತ್ತದೆ. ಅದರಿಂದ ಒಡಮೂಡುವ ಪ್ರಕಾರವೇ ಸಾರಸ್ವತ ಲೋಕದಲ್ಲಿ ತೀರಾ ವಿಶಿಷ್ಟವೆನಿಸುವ ಡೆಸ್ಕ್ ಸಾಹಿತ್ಯ. ತೀರಾ ಬೋರು ಹುಟ್ಟಿಸುವ ಮೇಷ್ಟ್ರುಗಳೇ ಇಂತಹ ಪ್ರತಿಭೆಗಳ ನಿಜವಾದ ಪ್ರೇರಣೆಯಾಗಿರುವುದರಿಂದ ಅವರನ್ನು ಸಾಹಿತ್ಯ ಪೋಷಕರು ಎಂದು ಎಲ್ಲ ರೀತಿಯಿಂದಲೂ ಒಪ್ಪಿಕೊಳ್ಳಬಹುದು.

ಡೆಸ್ಕ್ ಸಾಹಿತ್ಯಕ್ಕೆ ಹಲವು ಆಯಾಮಗಳಿದ್ದರೂ ಅದರಲ್ಲಿ ಪ್ರೇಮಸಾಹಿತ್ಯಕ್ಕೇ ಸಿಂಹಪಾಲು. ಅಲ್ಲದೇ, ಇಂಥ ಸಾಹಿತಿಗಳ ಪೈಕಿ ಹುಡುಗರದ್ದೇ ಬಹುಸಂಖ್ಯೆ ಎಂಬ ವೈಜ್ಞಾನಿಕ ಸತ್ಯವನ್ನು ಯಾವ ಸಂಶೋಧನೆಯೂ ಇಲ್ಲದೆ ದೃಢೀಕರಿಸಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದ ಎಲ್ಲದರಲ್ಲೂ ಹುಡುಗಿಯರದ್ದೇ ಮೇಲುಗೈ ಎಂದು ಪದೇಪದೇ ಮುಖಪುಟದಲ್ಲಿ ಬರೆಯುವ ಪತ್ರಿಕೆಗಳು ಡೆಸ್ಕ್ ಸಾಹಿತ್ಯ ನಿರ್ಮಾಣದಲ್ಲಿ ಹುಡುಗರದ್ದೇ ಮೇಲುಗೈ ಎಂಬುದನ್ನು ಬೇಷರತ್ತಾಗಿ ಪ್ರಕಟಿಸಬೇಕಾಗುತ್ತದೆ.

ಮೇಘಸಂದೇಶದ ಬಳಿಕ ಪ್ರೇಮಪತ್ರಗಳ ಕಾಲ ಸರಿದುಹೋಗಿ ವಾಟ್ಸಾéಪ್‌ ಅವತರಿಸಿದರೂ ಡೆಸ್ಕಿನ ಮೇಲೆ ಪ್ರೇಮನಿವೇದನೆ ಮಾಡುವ ಸಂಪ್ರದಾಯಕ್ಕೆ ಎಳ್ಳಿನಿತೂ ಧಕ್ಕೆಯಾಗಿಲ್ಲ. ಯಾವುದಾದರೂ ಡೆಸ್ಕಿನ ಮೇಲೆ ಪ್ರೇಮ ಪ್ರತೀಕವಾದ ಹೃದಯದ ಒಂದಾದರೂ ರೇಖಾಚಿತ್ರ ಇಲ್ಲದೇ ಹೋದರೆ ಅಂತಹ ಕಾಲೇಜನ್ನು ಕಾಲೇಜೆಂದು ಕರೆಯುವುದು ಹುಡುಗರಿಗೆ ಮಾಡುವ ಅವಮಾನವೆಂದೇ ಭಾವಿಸಬಹುದು.

ಡೆಸ್ಕಿನ ಮೇಲೆ ಈಗಾಗಲೇ ಇರುವ ಹೃದಯದ ಚಿತ್ರವನ್ನು ಇನ್ನಷ್ಟು ಬಲಪಡಿಸುವ ಹೊಣೆ ಮುಂದಿನ ವರ್ಷಗಳಲ್ಲಿ ಬರುವ ಕಿರಿಯ ತಲೆಮಾರಿನದ್ದು. ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ಜೂನಿಯರ್ ಮುಂದುವರಿಸುತ್ತಾರೆಂದು ಕನಿಷ್ಠ ಐದು ವರ್ಷ ಹಳೆಯದಾದ ಯಾವ ಡೆಸ್ಕಾಗಳನ್ನು ನೋಡಿದರೂ ಹೇಳಬಹುದು. ಡೆಸ್ಕಾ ಹಳೆಯದಾದಷ್ಟು ಸಾಹಿತ್ಯ ಹೆಚ್ಚು ಗಟ್ಟಿ.
“ಬುಲ್‌ಬುಲ್‌ ಮಾತಾಡಕಿಲ್ವ?’ ಎಂಬ ತನ್ನ ಬಹುಕಾಲದ ಬೇಡಿಕೆಯನ್ನು ಹುಡುಗಿ ಕೂರುವ ಡೆಸ್ಕಿನ ಮೇಲೆ ಸೂಚ್ಯವಾಗಿ ಬಹಿರಂಗಪಡಿಸಿ ನಾಪತ್ತೆಯಾಗುವ ಬಯಲುಸೀಮೆಯ ಹುಡುಗ, “ಎನ್‌’ ಐ ಮಿಸ್‌ ಯೂ ಎಂದೋ, ಐ ಲವ್‌ ಯೂ “ಕೆ’ ಎಂದೋ ಡೆಸ್ಕಿನ ಮೇಲೆ ಗೀಚಿ ಬರೆದದ್ದು ಹುಡುಗನೋ ಹುಡುಗಿಯೋ ಎಂಬ ರಹಸ್ಯವನ್ನು ಕಾಪಾಡಿಕೊಳ್ಳುವ ಅನಾಮಿಕ ಪ್ರೇಮಿ, ಈ ಕಣ್ಣಿರೋದು ನಿನ್ನನ್ನೇ ನೋಡಲು ಚಿನ್ನೂ ಎಂದೋ, ನೀನಿಲ್ಲದ ನಾನು ನೀರಿಲ್ಲದ ಮೀನು ಎಂದೋ ಒಂದೇ ಸಾಲಿನ ಕತೆಯನ್ನು ಬರೆದು ಅಡಗಿ ಕೂರುವ ಭಾವಜೀವಿ- ಎಲ್ಲರೂ ಈ ಸಾಹಿತ್ಯ ವಲಯದ ಆಧಾರ ಸ್ತಂಭಗಳು.

Advertisement

ಆ್ಯಕ್ಷನ್‌ ಪ್ರಿನ್ಸ್‌ಗೂ ಡಿಂಪಲ್‌ ಕ್ವೀನ್‌ಗೂ ಸಿಂಪಲ್ಲಾಗ್‌ ಲವ್‌ ಆಯ್ತು ಎಂದು ತನ್ನ ಪ್ರೇಮಕಥನವನ್ನೇ ಸಿನಿಮಾ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸುಪ್ತಪ್ರತಿಭೆ, ಆರ್‌ ಲವ್ಸ್‌ ಇ: ಗ್ರೇಟ್‌ ಲವರ್ಸ್‌ ಫಾರೆವರ್‌ ಎಂದು ತಾನು ನಿರ್ಮಿಸಲಿರುವ ಹೊಸ ಸಿನಿಮಾದ ಟೈಟಲನ್ನು ಪ್ರಕಟಿಸುವ ಭಾವೀ ನಿರ್ದೇಶಕ, ಕನ್ನಡ ಮೇಷ್ಟ್ರ ಪಾಠ ಕೇಳುತ್ತಲೇ ಪಕ್ಕದ ಬೆಂಚಿನ ಕನಸಿನ ಕನ್ಯೆಯನ್ನು ನೋಡಿ “ಓ ನನ್ನ ಚೇತನ’ ಎಂದು ಬರೆದು ಅದರ ಸುತ್ತಲೊಂದು ಹೃದಯದ ನಕಾಶೆಯನ್ನು ಕೊರೆವ ಕಳ್ಳಕವಿ- ಇವರೂ ಈ ಸಾಹಿತ್ಯಸಮಾಜದ ಸಕ್ರಿಯ ನಾಗರಿಕರು.

ಯಾವ ಸಿನಿಮಾ ಹೀರೋಗಳು ಹೆಚ್ಚು ಜನಪ್ರಿಯರು, ಪಡ್ಡೆಗಳ ಹೃದಯ ಗೆದ್ದಿರುವ ಚಿತ್ರಗಳು ಯಾವವೆಂದು ತಿಳಿಯಲೂ ಪ್ರತ್ಯೇಕ ಸಮೀಕ್ಷೆಗಳು ಬೇಕಿಲ್ಲ. ಡೆಸ್ಕಾಗಳ ಮೇಲೆ ಐದು ನಿಮಿಷ ಕಣ್ಣಾಡಿಸಿಕೊಂಡು ಬಂದರೆ ಧಾರಾಳವಾಯ್ತು. ಎಲ್ಲ ಬಗೆಯ ರಿಯಲ್‌ ಸ್ಟಾರುಗಳು, ಗೋಲ್ಡನ್‌ ಸ್ಟಾರ್‌ಗಳು, ರೆಬೆಲ್‌ ಸಾರ್‌ಗಳು, ಪವರ್‌ ಸ್ಟಾರ್‌ಗಳು ಸಾಲುಸಾಲಾಗಿ ಪವಡಿಸಿರುತ್ತಾರೆ. ಅದ್ಧೂರಿ, ಭರ್ಜರಿ, ಬಹದ್ದೂರ್‌, ಗಜಕೇಸರಿ, ಜಗ್ಗುದಾದ, ಕಿರಾತಕ, ರಾಮಾಚಾರಿ… ಎಂಬಿತ್ಯಾದಿ ಸಿನಿಮಾಗಳು ಥಿಯೇಟರುಗಳಲ್ಲಿ ಎಷ್ಟು ವಾರ ಓಡುತ್ತವೋ ಗೊತ್ತಿಲ್ಲ, ನಮ್ಮ ಹುಡುಗರ ಕೃಪೆಯಿಂದ ಡೆಸ್ಕಾಗಳ ಮೇಲೆ ಒಂದು ಶತಮಾನವಾದರೂ ಬಾಳಿ ಬದುಕುವುದು ಶತಃಸಿದ್ಧ.
ಭರ್ತಿ ಎರಡು ತಿಂಗಳ ಬಳಿಕ ಕ್ಲಾಸಿಗೆ ಹಾಜರಾಗಿ “ಪ್ರಶೂ ಈಸ್‌ ಬ್ಯಾಕ್‌’ ಎಂದು ಡೆಸ್ಕ್ ಮೇಲೆ ಹಾಜರಿ ಹಾಕಿ ಹೋಗಿ ಮತ್ತೆ ಎರಡು ತಿಂಗಳ ನಾಪತ್ತೆಯಾಗುವ ಉಡಾಳ, “ಕರುನಾಡ ಸಿಂಗಂ ರವಿ ಚನ್ನಣ್ಣನವರ್‌’ ಎಂದು ದೊಡ್ಡದಾಗಿ ಬರೆದು ಕುಸುರಿ ಕೆಲಸದಿಂದ ಸಿಂಗರಿಸುವ ಅಪ್ರತಿಮ ಅಭಿಮಾನಿ, “ಎವರಿಬಡಿ ಈಸ್‌ ಈಕ್ವಲ್‌ ಬಿಫೋರ್‌ ಲಾ’ ಎಂಬ ಮೇಷ್ಟ್ರ ಹೇಳಿಕೆಯನ್ನು ಕರಾರುವಾಕ್ಕಾಗಿ ಬರೆದು ಅದರ ಮುಂದೆ “ಸೋ, ಮುಂದಿನ ಬೆಂಚೂ ಹಿಂದಿನ ಬೆಂಚಿನ ನಡುವೆ ವ್ಯತ್ಯಾಸ ಇಲ್ಲ ತಿಳ್ಕಳಿ’ ಎಂದು ಷರಾ ನಮೂದಿಸುವ ಕೊನೇ ಬೆಂಚಿನ ಹುಡುಗ- ಇವರೆಲ್ಲ ತರಗತಿ ಬಹುಮುಖ ಪ್ರತಿಭೆಗಳಿಂದ ಕೂಡಿದೆಯೆಂಬುದಕ್ಕೆ ಪ್ರಮುಖ ಸಾಕ್ಷಿಗಳು.
ಇಷ್ಟೆಲ್ಲದರ ನಡುವೆ ಭಾರತೀಯ ಸಂವಿಧಾನದ ಪ್ರಮುಖ ಲಕ್ಷಣಗಳು, ಪ್ರಧಾನಮಂತ್ರಿಯ ಅಧಿಕಾರ ಮತ್ತು ಕರ್ತವ್ಯಗಳು, ಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣಗಳು, ಸಣ್ಣ ಕೈಗಾರಿಕೆಗಳ ಸಮಸ್ಯೆಗಳು, ಕುಮಾರವ್ಯಾಸನ ಕಾವ್ಯಸೌಂದರ್ಯ ಮತ್ತಿತರ ಘನಗಂಭೀರ ಟಿಪ್ಪಣಿಗಳೂ ಡೆಸ್ಕಾಗಳ ಮೇಲೆ ಕಾಣಸಿಗುವುದುಂಟು. ಇವೆಲ್ಲ ತರಗತಿಲ್ಲಾಗಲೀ, ಮನೆಯಲ್ಲಾಗಲೀ ಎಂದೂ ಒಂದು ಪುಟ ನೋಟ್ಸ್‌ ಬರೆಯದ ಮಹಾನ್‌ ಸೋಮಾರಿಗಳ ಶ್ರದ್ಧೆಯ ಫ‌ಲ ಎಂದು ಮೇಲ್ನೋಟಕ್ಕೇ ಹೇಳಬಹುದು. ಪರೀಕ್ಷೆಯಲ್ಲಿ ಪಾಸಾಗುವುದೇ ಈ ಸಾಹಿತ್ಯ ಪ್ರಕಾರದ ಏಕೈಕ ಉದ್ದೇಶ.

ಈ ಬಹುಮುಖ ಪ್ರತಿಭೆಗಳ ನಡುನ ತಣ್ತೀಜ್ಞಾನಿಗಳ ಬಗ್ಗೆ ಹೇಳದೆ ಹೋದರೆ ಲೇಖನವೇ ಅಪೂರ್ಣವಲ್ಲವೇ? “ಒಳ್ಳೆಯವರು ನೆನಪು ನೀಡುತ್ತಾರೆ. ಕೆಟ್ಟವರು ಅನುಭವ ನೀಡುತ್ತಾರೆ. ದುಷ್ಟರು ಪಾಠ ಕಲಿಸುತ್ತಾರೆ. ಅತ್ಯುತ್ತಮರು ಸವಿ ನೆನಪು ನೀಡುತ್ತಾರೆ. ಆದ್ದರಿಂದ ಯಾರನ್ನೂ ದೂಷಿಸುವುದು ಸರಿಯಲ್ಲ. ಎಲ್ಲರಿಂದಲೂ ಒಂದು ರೀತಿಯ ಅನುಕೂಲವಿರುತ್ತದೆ…’ – ಎಂಬೊಂದು ಮಾತು ಬರೆದ ಪುಣ್ಯಾತ್ಮ ಕೊನೆಗೆ ತನ್ನ ಹೆಸರು ಬರೆಯಲು ಮನಸ್ಸಾಗದೆ “ಗೌತಮ ಬುದ್ಧ’ ಎಂದು ಬರೆದಿದ್ದ. ಅವನಿಗೆ ಡೆಸ್ಕಿನ ಮೇಲೆ ಜ್ಞಾನೋದಯವಾದದ್ದಿರಬೇಕು.

– ಸಿಬಂತಿ ಪದ್ಮನಾಭ ಕೆ.ವಿ. 

Advertisement

Udayavani is now on Telegram. Click here to join our channel and stay updated with the latest news.

Next