Advertisement

ಉಡುಪಿ ಶ್ರೀಕೃಷ್ಣ ಮಠ : ದೇಸೀತನವನ್ನು ಜನಪ್ರಿಯಗೊಳಿಸುವುದು ಪ್ರಮುಖ ಉದ್ದೇಶ

02:51 PM Sep 27, 2020 | Suhan S |

ಉಡುಪಿ ಶ್ರೀಕೃಷ್ಣ ಮಠವೀಗ ದೇಸೀ ಕಂಪಿನಲ್ಲಿ ಕಂಗೊಳಿಸುತ್ತಿದೆ. ಈ ಕಂಪು ಬರೀ ಒಂದು ಬದಲಾವಣೆಯಲ್ಲ ; ಸ್ವಾವಲಂಬನೆಯ ಕಂಪು. ಇಡೀ ದೇಶವೇ ಸ್ವಾವಲಂಬನೆಯ ಚಿಂತನೆಗೆ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಮಠವು ಅದೇ ಮಾರ್ಗವನ್ನು ಆಯ್ದುಕೊಂಡಿರುವುದು ವಿಶೇಷ. ಕೋವಿಡ್‌-19ರ ಕಾರಣದಿಂದ ಆರು ತಿಂಗಳ ಬಳಿಕ ಮಠವು ಸೆ. 28ರಿಂದ ಭಕ್ತರಿಗೆ ತೆರೆದುಕೊಳ್ಳುತ್ತಿದೆ. ಮಠದಲ್ಲಿ ಅನ್ವಯಿಸಿರುವ ದೇಸಿ ಕ್ರಮಗಳನ್ನು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು “ಉದಯವಾಣಿ’ ಯೊಂದಿಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ.

Advertisement

ಪಾರಂಪರಿಕ ಮತ್ತು ದೇಸೀ ಸ್ಪರ್ಶದ ಹಿಂದಿರುವ ತಮ್ಮ ಉದ್ದೇಶ? :  ಉಡುಪಿಯ ಕೊಡುಗೆ ದೇಶ ವ್ಯಾಪ್ತಿಯಲ್ಲಿದೆ. ಒಂದೊಂದು ಜಾಗದಲ್ಲಿ ಒಂದೊಂದು ಆವಿಷ್ಕಾರಗಳಾಗಿವೆ. ಅದು ಅಲ್ಲಲ್ಲಿನ ತಂತ್ರಜ್ಞಾನಕ್ಕೆ ಸೂಕ್ತವಾಗಿ ಬೆಳೆದುಬಂದಿದೆ. ಉದಾಹರಣೆಗೆ ಉಡುಪಿಯ ಮಠಗಳ ವಾಸ್ತು, ದಾರುಶಿಲ್ಪಗಳ ಕೆತ್ತನೆಗಳು. ಮೂರ್‍ನಾಲ್ಕು ಅಡಿ ಅಗಲದ ಹಲಗೆಗಳು ಇತ್ಯಾದಿ. ಇಲ್ಲಿಗೆ ಸಾರ್ವಜನಿಕರು ಏಕೆ ಬರುತ್ತಾರೆ? ಇಲ್ಲಿನ ವಿಶೇಷವೇನು? ಇಲ್ಲಿನ ಉಪಯೋಗವೇನು? ಆರೋಗ್ಯಕ್ಕೆ ಇದು ಹೇಗೆ ಸಹಕಾರಿ ಎಂಬುದನ್ನು ತಿಳಿಯುವುದಕ್ಕಲ್ಲವೆ? ಇವುಗಳನ್ನು ಉಳಿಸುವುದರೊಂದಿಗೆ ಸ್ಥಳೀಯರಲ್ಲಿ ಅರಿವು ಮೂಡಿಸಬೇಕು. ಹಳೆಯ ಸಾಮಗ್ರಿಗಳನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ ಸೂಕ್ತ ವಿಧಾನದಿಂದ ಸಂರಕ್ಷಿಸಲು ಸಾಧ್ಯ. ಆ ಆಲೋಚನೆಯೇ ನೈಸರ್ಗಿಕ ನೆಲೆಗೆ ಕಾರಣವಾದದ್ದು.

ನೈಸರ್ಗಿಕ ಬಣ್ಣದಿಂದಾಗುವ ಪ್ರಯೋಜನ? :  ದಾಸವಾಳದ ಎಲೆ, ಮಣ್ಣು, ಗೋಪಿ, ಆಕಳು ಸೆಗಣಿಯನ್ನು ಬಳಸಿ ತಯಾರಿಸಬಹುದು. ಕೈ, ಮೈಗೆ ಬಣ್ಣ ಅಂಟಿಕೊಳ್ಳದಂತೆ ಅಂಟು ಉಪಯೋಗಿಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಇದು ಸಾಧ್ಯ. ಜತೆಗೆ ದೊಡ್ಡ ದೊಡ್ಡ ಕಂಪೆನಿಗಳಿಗೆ ಅವಲಂಬಿತರಾಗುವುದು ತಪ್ಪುತ್ತದೆ. ಒಬ್ಬ ಪೇಂಟರ್‌ ಸ್ವತಃ ಬಣ್ಣ ತಯಾರಿಸಿ ಕೆಲಸ ಮಾಡುವಾಗ ಆತನಿಗೆ ಸಿಗುವ ಖುಷಿಯೇ ಬೇರೆ. ಸರಳ ಮಾರ್ಗದಲ್ಲಿಯೂ ಸ್ವಾವಲಂಬಿಗಳಾಗುವುದು ಸಾಧ್ಯ

ಕೈಮಗ್ಗದ ಉಡುಪಿ ಸೀರೆ, ಉಡುಪಿ ಶಾಲುಗಳ ಬಳಕೆಗೆ ಪ್ರತಿಕ್ರಿಯೆ? :  ಮತ್ತು ಸ್ವಾವಲಂಬನೆಯ ಪ್ರತೀಕ. ಹತ್ತಿ ಆರೋಗ್ಯಕ್ಕೆ ಉತ್ತಮ. ಕೊರೊನಾ ಕಾರಣದಿಂದ ಉತ್ಪಾದನೆ ಕಡಿಮೆಯಾಗಿ, ಈಗ ಉಡುಪಿ ಸೀರೆ ಬೇಕಾದಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ. ಇವುಗಳ ಉಪಯೋಗ ಜನರಿಗೆ ತಿಳಿದರೆ ಸಹಜವಾಗಿ ಬೇಡಿಕೆ ಬರುತ್ತದೆ, ಉತ್ಪಾದಕರಿಗೂ ಸಹಕಾರಿಯಾಗುತ್ತದೆ

ಬಾಳೆ ಮುಹೂರ್ತದಲ್ಲಿಯೇ ಬಾಳೆ ಬೆಳೆ ಬೆಳೆಸುವ ತಮ್ಮ ಪ್ರಯತ್ನ ಯಶ ಕಂಡಿದೆಯೆ? : ಬಾಳೆ ಎಲೆ ಕೃಷಿಕರಿಂದ ಈಗಲೂ ಬಾಳೆ ಎಲೆ ಬರುತ್ತಿದೆ. ಅದು ಮುಂದುವರಿಯಲಿ ಎಂದು ಹಾರೈಸುತ್ತೇವೆ. ಅವರಿಗೆ ಹೊರಗಿನ ಮಾರುಕಟ್ಟೆ ಬೇಡಿಕೆಯೂ ಇದೆ

Advertisement

ದೇಸೀತನಕ್ಕೂ ಶ್ರೀಕೃಷ್ಣನಿಗೂ ಇರುವ ಸಂಬಂಧ? : ಶ್ರೀಕೃಷ್ಣನ ಬದುಕಿನಲ್ಲಿರುವುದು ದೇಸೀತನ. ಕಾಡಿನ ಮೇಲೆ, ಗಿಡಮರಗಳ ಮೇಲೆ ಆತನಿಗೆ ಪ್ರೀತಿ ಇತ್ತು. ನಾವೇ ಕಷ್ಟಪಟ್ಟು ಸಂಪಾದಿಸುವುದಕ್ಕೆ ನಮ್ಮ ಪ್ರಾಚೀನರು ಆದ್ಯತೆ ನೀಡಿದರು. ಈಗಿನ ನಿಜ ಜೀವನದಿಂದ ಹಿಡಿದು ಮೋಕ್ಷದವರೆಗೆ ನಾವೇ ಪ್ರಯತ್ನ ಮಾಡಬೇಕು. ಈಗ ಯಾರಿಗೋ ದುಡ್ಡು ಕೊಟ್ಟು ಗುತ್ತಿಗೆ ವಹಿಸಿಕೊಡುವ ಕ್ರಮವಿದೆ. ಮೋಕ್ಷಕ್ಕೆ ನಾವೇ ಜ್ಞಾನ ಸಂಪಾದಿಸಬೇಕು, ಅದೇ ಮಾರ್ಗದಲ್ಲಿ ಜೀವನವನ್ನು ಸಾಗಿಸಬೇಕು.

ದರ್ಶನದ ಹೊಸ ಮಾರ್ಗದಲ್ಲಿ ಯಾವ್ಯಾವ ಪ್ರಯೋಜನಗಳ ಆಶಯವಿದೆ? : ಯಾತ್ರಾರ್ಥಿಗಳಿಗೆ ರಾಜಾಂಗಣ ಬಳಿಯಿಂದ ಭೋಜನಶಾಲೆ ಮಹಡಿ ಮಾರ್ಗವಾಗಿ ಕೃಷ್ಣ ಮಠದ ಗರ್ಭಗುಡಿ ಕೆಳಗೆ ಇಳಿದು ದರ್ಶನ ಪಡೆಯುವ ಮಾರ್ಗವನ್ನು ಪರಿ ಚಯಿಸುತ್ತಿದ್ದೇವೆ. ಇಲ್ಲಿ ಉಡುಪಿ ಮತ್ತು ಕೃಷ್ಣಮಠದ ಬಗ್ಗೆ ಮಾಹಿತಿ ನೀಡಲಾಗುವುದು. ಕೃಷ್ಣ, ಮುಖ್ಯಪ್ರಾಣರಿಗೆ ಪ್ರದಕ್ಷಿಣೆ ಪಥವೂ ಆಗಿದೆ. ಸಾಮಾಜಿಕ ಅಂತರ ಕಾಪಾಡಲು ಸಾಧ್ಯ. ಹಿಂದೆ ಮಧ್ವಸರೋವರದ ಬದಿ ಸರತಿ ಸಾಲಿನಲ್ಲಿ ನಿಲ್ಲುವಾಗ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯರು ಪಾಸ್‌ ಮಾಡಿಸಿಕೊಂಡರೆ ರಥಬೀದಿಯ ಮುಖ್ಯ ದ್ವಾರದ ಬಳಿಯಿಂದ ದರ್ಶನ ಮಾಡಿ ಹೋಗಬಹುದು.

ಈಗ ಆರಂಭಿಕ ಹಂತದಲ್ಲಿ ಮಠವನ್ನು ಭಕ್ತರಿಗೆ ಮುಕ್ತಗೊಳಿಸಿದ್ದೀರಿ? ಮುಂದಿನ ಹಂತ… :  ಭಕ್ತರಿಗೆ ಶ್ರೀಕೃಷ್ಣ ದರ್ಶನ ಮಾಡಬೇಕೆಂಬ ಆಸಕ್ತಿ ಇದೆ. ಅವರ ಅನುಕೂಲಕ್ಕಾಗಿ ತೆರೆಯುತ್ತಿದ್ದೇವೆಯೇ ವಿನಾ ನಮ್ಮ ಅಂತರಾಳದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆಯಲು ಮನಸ್ಸಿಲ್ಲ. ಏಕೆಂದರೆ ಉಡುಪಿಯ ಆಸ್ಪತ್ರೆಗಳಲ್ಲಿ ಬೆಡ್‌, ವೆಂಟಿಲೇಟರ್‌ಗಳು ಸಾಕಾಗುತ್ತಿಲ್ಲ. ಸೌಲಭ್ಯ ಕಡಿಮೆ, ಜನರು ಜಾಸ್ತಿ ಇದ್ದಾರೆ. ಯುವಕನೊಬ್ಬನಿಗೆ ರೋಗ ಬಂದರೆ ಏನೂ ಆಗದೆ ಇರಬಹುದು, ಆದರೆ ಆತನಿಂದ ಮನೆಯಲ್ಲಿರುವ ವೃದ್ಧರು, ರೋಗಿಗಳಿಗೆ ಕಷ್ಟವಾಗುತ್ತದೆ. ಆದ್ದರಿಂದ ಎಲ್ಲರೂ ಜ್ವರ, ಶೀತ ಬಂದರೆ ಪರೀಕ್ಷೆ ಮಾಡಿಕೊಳ್ಳಬೇಕು. ನಾವು ಮೊದಲು ಆನ್‌ಲೈನ್‌ ದರ್ಶನಕ್ಕೆ ಪ್ರಾಮುಖ್ಯ ನೀಡಿರಲಿಲ್ಲ. ಪ್ರತ್ಯಕ್ಷವಾಗಿ ಬಂದು ದರ್ಶನ ಮಾಡುವುದು ಭಕ್ತಿಯ ಸಂಕೇತ. ಈಗ ಅನಿವಾರ್ಯವಾಗಿ ಲೈವ್‌ ದರ್ಶನಕ್ಕೆ ಅವಕಾಶ ಕೊಟ್ಟೆವು. ಮನೆಯಲ್ಲೇ ಇದ್ದು ಶ್ರೀಕೃಷ್ಣನನ್ನು ಪ್ರಾರ್ಥಿಸಬಹುದು, ಮುಂದೆ ಪರಿಸ್ಥಿತಿ ನೋಡಿ ದರ್ಶನ ಸಮಯವೇ ಮೊದಲಾದ ವಿಸ್ತರಣೆ ಮಾಡುತ್ತೇವೆ.

 

ಸಾವಯವ ಕೃಷಿ ಪ್ರೋತ್ಸಾಹದ ಪ್ರಯತ್ನದ ಕುರಿತು… 

ಸಾವಯವ ವಿಧಾನದಿಂದ ಬೆಳೆಸಿದ ಗಂಧಸಾಲೆ ಅಕ್ಕಿಯನ್ನು (ಸುಮಾರು 800-900 ಕೆ.ಜಿ.) ತರಿಸಿಕೊಂಡಿದ್ದೆವು. ನೈವೇದ್ಯಕ್ಕೆ ಸಾವಯವ ಅಕ್ಕಿಯನ್ನು ಬಳಸಿದ್ದೇವೆ. ನಾವು ಮಾಡುವ ಕೆಲಸ ನೋಡಿ ಅದಕ್ಕೆ ಪ್ರಚಾರ ಸಿಗುತ್ತದೆ. ಈಗ ಜನರೂ ಪಾಲಿಶ್‌ ಮಾಡದ ಅಕ್ಕಿಯನ್ನು ಬಳಸಲು ಆರಂಭಿಸಿದ್ದಾರೆ. ಒಬ್ಬರಿಗೊಬ್ಬ ಸಹಾಯ ಮಾಡುವ ಸಹಕಾರಿ ತಣ್ತೀದಲ್ಲಿ ಕೃಷಿ ನಡೆಸುವುದು ಶುರುವಾಗಿದೆ. ಖಾಲಿ ಜಾಗದಲ್ಲಿ ಕೃಷಿ ಮಾಡುವ ಕಾರ್ಕಳ ತಾಲೂಕು ಸಾಣೂರಿನ ಅಬೂಬಕ್ಕರ್‌ ಅವರು ಬೀಜ ಬಿತ್ತನೆ ಮಾಡುವಾಗ ಹೋಗಿದ್ದೆವು, ಖರೀದಿಯನ್ನೂ ಮಾಡಿದ್ದೆವು.ಚಾರ ಗ್ರಾಮದ ಯುವಕರು ಆಸಕ್ತಿ ತೋರಿದ್ದರು. ಇವೆಲ್ಲ ದೇಸೀ ಕ್ರಮದ ವಿಧಾನಗಳೇ.

 

 

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next