Advertisement
ಇಂದಿಗೂ ಯಾರ್ಕ್ ಅತ್ಯಂತ ಆಕರ್ಷಕ ಸಿಟಿಯಾಗಿ ಉಳಿದಿದೆ. ಅದರಲ್ಲಿಯೂ ಹದಿಮೂರನೆಯ ಶತಮಾನದ ಬೃಹತ್ ಕೆಥಿಡ್ರಲ್ (ಮಿನ್ಸ್ ಟರ್ ಎಂದು ಇಲ್ಲಿ ಕರೆಯುತ್ತಾರೆ), ಅದೇ ಸಮಯದಲ್ಲಿ ಊರ ಸುತ್ತ ಕಟ್ಟಿದ ಎರಡು ಮೈಲುದ್ದದ ಸುತ್ತುವರಿ ಗೋಡೆ, ಊರ ಮಧ್ಯದಲ್ಲಿಯ ಚಿಕ್ಕ ಚಿಕ್ಕ ವೈವಿಧ್ಯಮಯ ಅಂಗಡಿಗಳುಳ್ಳ ಶಾಂಬಲ್ಸ್ (Shambles) ಎನ್ನುವ ಓಣಿ, ಈ ನಗರವನ್ನು ಪೂರ್ವ ಪಶ್ಚಿಮವಾಗಿ ವಿಭಜಿಸಿ ಬಳುಕುವ ಊಸ್ ನದಿ, ಇವೆಲ್ಲ ಕಾಲ್ನಡಿಗೆಯಲ್ಲೇ ನೋಡಿ ಕಣ್ಣು ತುಂಬಿಸಿಕೊಳ್ಳುವ ಪ್ರೇಕ್ಷಣೀಯ ಟೂರಿಸ್ಟ್ ತಾಣಗಳು.
ಕ್ರಿ.ಶ. ನಾಲ್ಕನೆಯ ಶತಮಾನದ ವರೆಗೆ ಯಾರ್ಕ್ ರೋಮನ್ನರ ಪ್ರಾಂತದ ರಾಜಧಾನಿಯಾಗಿ ಮತ್ತು ತದನಂತರ ವೈಕಿಂಗ್ ರಾಜ್ಯದ ಪ್ರಾದೇಶಿಕ ಪ್ರಮುಖ ನಗರವಾಗಿ ಎರಡೂವರೆ ಶತಮಾನಗಳ ಕಾಲ ಉಳಿಯಿತು. ಈ ನಗರದ ಪೂರ್ವ ಇತಿಹಾಸ ಕ್ರಿ. ಶ. 71ರಿಂದ ಆರಂಭ. ಆಗ ರೋಮನ್ ಸಾಮ್ರಾಜ್ಯ ಉತ್ತರ ದಿಕ್ಕಿನಲ್ಲಿ ಇಲ್ಲಿಯವರೆಗೆ ಕೈಚಾಚಿತ್ತು. ಲಂಡನ್‌ನಿಂದ ಉತ್ತರದಲ್ಲಿಯ ತಮ್ಮ ಠಾಣೆ ಲಿಂಕನ್‌ನಿಂದ 5000 ರೋಮನ್ ಯೋಧರು ಉತ್ತರಕ್ಕೆ ಹೊರಟು ಮುಂದೆ ಅರ್ಮಿನ್ ಸ್ಟ್ರೀಟ್ ಅಂತ ಹೆಸರು ಬಂದ ದಾರಿಯಲ್ಲಿ ದಂಡೆತ್ತಿ ನಡೆದು ಎಬೋರಾಕಂ ಎನ್ನುವ ಈ ನಗರವನ್ನು ಸ್ಥಾಪಿಸಿದರು.
Related Articles
Advertisement
ಅತನೇ ಕ್ರಿಶ್ಚಿಯನ್ ಮತವನ್ನು ಸ್ವೀಕರಿಸಿದ ಮೊದಲ ರೋಮನ್ ಅರಸ. ಮುಂದೆ ನೂರು ವರ್ಷಗಳ ಅನಂತರ ಅವನತಿಯಾಗಿ ಆಂಗ್ಲೋ ಸಾಕ್ಸನ್ನರು ಈ ನಗರವನ್ನು ಆಳಿದರು. ಆ ಕಾಲದಲ್ಲಿ ಧರಿಸುತ್ತಿದ್ದ ಹೆಲ್ಮೆಟ್ ರೀತಿಯ ವಸ್ತುವನ್ನು ಇಂದಿಗೂ ಇಲ್ಲಿನ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ. ಇಲ್ಲಿ ರೋಮನ್ ಅಂಕಿಗಳು ಇಂದಿಗೂ ಗಡಿಯಾರದ ಮೇಲೆ ಮತ್ತು ರೋಮನ್ ಮೂಲದ ಪದಗಳು ಆಂಗ್ಲ ಮತ್ತು ಇತರ ಭಾಷೆಗಳಲ್ಲಿ ಉಪಯೋಗಿಸಲ್ಪಡುತ್ತವೆ. ನೀರಿನ ಸರಬರಾಜು ಮತ್ತು ಗಟಾರಗಳ ವ್ಯವಸ್ಥೆ ಸಹ ಅವರ ಬಳುವಳಿಯೇ. ಈ ಊರಿನಲ್ಲಿ ಮತ್ತು ದೇಶದ ನಾನಾ ಕಡೆ ಬಿಸಿನೀರಿನಿಂದ ಕಾಯಿಸುತ್ತಿದ್ದ ಹೈಪೋಕಾಸ್ಟ್ ರೋಮನ್ ಸ್ನಾನದ ಮನೆ (ಬಾಥ್) ಗಳಿದ್ದವು. ಅದಕ್ಕೇ ಇಂಗ್ಲೆಂಡಿನ ಬಾಥ್ ನಗರಕ್ಕೇ ಆ ಹೆಸರನ್ನೇ ನೀಡಲಾಗಿದೆ. ಆದರೂ ರೋಮನ್ನರು ನಮಗೆ ಕೊಟ್ಟದ್ದಾದರೂ ಏನು? ಅಂತ ಕೇಳುವವರಿದ್ದಾ ರೆ. (ಉದಾ: ಮಾಂಟಿ ಪೈಥನ್). ಪ್ರತೀ ವರ್ಷ ಜುಲೈ ತಿಂಗಳಲ್ಲಿ ಎಬೋರಾಕಂ ರೋಮನ್ ಉತ್ಸವ ಇಲ್ಲಿ ನಡೆಯುತ್ತದೆ.
ಅವರು ತಮ್ಮ ಎರಡೂವರೆ ಶತಮಾನದ ಆಳ್ವಿಕೆಯಲ್ಲಿ ತಮ್ಮ ಜೀವನದ ಕುರುಹುಗಳನ್ನು ಇಲ್ಲಿಯ ಭಾಷೆಯಲ್ಲಷ್ಟೇ ಅಲ್ಲ ಯೋವಿಕ್ ಸೆಂಟರ್ ಎನ್ನುವ ಭೂಗತ ಪಳೆಯುಳಿಕೆಗಳಲ್ಲಿ ಸಹ ಬಿಟ್ಟುಹೋಗಿದ್ದಾರೆ. ಅದನ್ನು ಕಳೆದ ತಿಂಗಳಷ್ಟೇ ನಾವು ಸಹ ನೋಡಿದೆವು. ಅದೊಂದು ಅದ್ಭುತ ಅನುಭವ. ಯಾರ್ಕ್ ನಗರದ ಮಧ್ಯದಲ್ಲಿಯ ಕಾಪರ್ಗೇಟ್ ಎನ್ನುವ ಜಾಗದಲ್ಲಿ ಒಂಬತ್ತು ಮೀಟರ್ ನೆಲದ ಕೆಳಗೆ ಯಾರ್ಕ್ ಅರ್ಕಿಯಾಲಜಿ ಟ್ರಸ್ಟ್ ಸಂಸ್ಥೆ ಉತ್ಖನನ ಮಾಡಿ ಕಂಡು ಹಿಡಿದ 1,000 ವರ್ಷಗಳ ಹಿಂದಿನ ಮರದ ಮನೆಗಳ ಪಳೆಯುಳಿಕೆಗಳು, ಬಟ್ಟೆ, ಪಾದರಕ್ಷೆಗಳ ಅವಶೇಷಗಳು, ಬೀಜ, ಪರಾಗ ಮಕರಂದಗಳು, ಹುಳ ಹುಪ್ಪಡಿಗಳ ತುಣುಕುಗಳು, ಮಾನವನ ಕರುಳಿನಲ್ಲಿದ್ದ ಪರಜೀವಿಗಳು – ಇವುಗಳ ಸಹಾಯದಿಂದ ಆಗಿನ ಜನರ ವಸತಿಗೃಹ, ಊಟ, ಉಡುಗೆ, ಜೀವನಕ್ರಮ ಇವೆಲ್ಲವನ್ನು ಪುನರ್‌ನಿರ್ಮಾಣ ಮಾಡಿದ್ದಾರೆ. ಕಾರ್ಬನ್ ಡೇಟಿಂಗ್ ವೈಜ್ಞಾನಿಕ ತಂತ್ರದಿಂದ ಅವರು ತಿಂದಿರಬಹುದಾದ ಆಹಾರ ಎಲ್ಲಿಂದ ಬಂತು ಎನ್ನುವದನ್ನು ಸಹ ಕಂಡು ಹಿಡಿಯಲು ಸಾಧ್ಯವಾಗಿದೆ. ತಲೆಯ ಮೇಲಿನ ಕಂಬಿಗಳಿಂದ ತೂಗು ಬಿಟ್ಟ ನಾಲ್ವರು ಕೂರಬಹುದಾದ ಚಲಿಸುವ ಬಂಡಿಯಲ್ಲಿ ನನ್ನೊಂದಿಗೆ ಭಾರತದಿಂದ ಬಂದ ಅತಿಥಿ, ಮಿತ್ರರೊಂದಿಗೆ ಪ್ರಯಾಣಿಸಿದಾಗ ನೆಲದ ಮೇಲೆ ಪುನರ್ರ ಚಿಸಿದ ವಾಸಸ್ಥಾನದಲ್ಲಿ ಮೀನುಗಾರರು, ಕಮ್ಮಾರ, ಬಡಿಗರು ಮುಂತಾದ ಕಸುಬುದಾರ ಬದುಕಿನ ನಿಕಟ ಪರಿಚಯವಾಗುತ್ತಿತ್ತು. ಆ ಅದ್ವಿತೀಯ ಪ್ರಾತ್ಯಕ್ಷಿಕೆಯನ್ನು ದೃಶ್ಯ, ಶ್ರವಣ ಮತ್ತು ಘ್ರಾಣ ಮಾಧ್ಯಮದ ಮೂಲಕ ತಿಳಿದುಕೊಂಡಾಗ ಟೈಮ್ ಮಶಿನ್‌ನಲ್ಲಿ ಭೂತಕಾಲಕ್ಕೆ ಪ್ರವಾಸ ಮಾಡಿದಂತೆ ಭಾಸವಾಯಿತೆಂದು ಉದ್ಗಾರ ತೆಗೆದೆವು! ಈ ಊರಿಗೆ ಬಂದವರು ಇಲ್ಲಿಗೆ ಭೇಟಿ ಕೊಡದೆ ತಿರುಗಿ ಹೋಗಬಾರದು. ಇದಕ್ಕೆ ಪೂರಕವಾಗಿ ಪ್ರತೀ ಫೆಬ್ರವರಿ ತಿಂಗಳಿನಲ್ಲಿ ಅತೀ ದೊಡ್ಡ ವೈಕಿಂಗ್ ಫೆಸ್ಟಿವಲ್ ಸಹ ನಡೆಯುತ್ತದೆ.
ನಾವು ಯೋವಿಕ್ ಸೆಂಟರ್‌ನಿಂದ ಅಲ್ಲಿನ ಅನತಿ ದೂರದಲ್ಲೇ ಎಲ್ಲರನ್ನು ಮತ್ತೆ ಮತ್ತೆ ಮರಳು ಮಾಡುವ, ಹ್ಯಾರಿ ಪಾಟರ್ ಲೋಕಕ್ಕೆ ಒಯ್ಯುವ ಚಿಕ್ಕ ಓಣಿ ಕಣ್ಣಿಗೆ ಬಿತ್ತು. ಅದು ಅತ್ಯಂತ ಇಕ್ಕಟ್ಟಾಗಿದ್ದು ಪಾದಚಾರಿಗಳಿಗಷ್ಟೇ ಇಲ್ಲಿ ಪ್ರವೇಶವಿದೆ. ಇದರ ಹೆಸರು ಬಂದಿದ್ದು ಇಲ್ಲಿದ್ದ ಹೊರಬೈಲಿನ ಕಸಾಯಿ ಖಾನೆಯ ಪರ್ಯಾಯ ಪದದಿಂದ (slaughter house) ಎಂಬುವುದು ಪಂಡಿತರ ವಾದ. ಒಂದು ಕಾಲಕ್ಕೆ ಇಲ್ಲಿ ಮಾಂಸವನ್ನು ಮಾರುವ ಅಂಗಡಿಗಳೆ ಇದ್ದಿರಬೇಕೆಂದು ಊಹೆ. ಈಗ ಇಕ್ಕೆಲಗಳಲ್ಲಿ ಸುಂದರವಾದ ಎರಡಂತಸ್ತಿನ ಪುಟ್ಟಪುಟ್ಟ ಮರದ ಕಟ್ಟಡಗಳೆಲ್ಲ ಈಗ ಅಂಗಡಿಗಳಾಗಿವೆ. ಮೇಲಿನ ಅಂತಸ್ತು ಇನ್ನೇನು ಎದುರಿನ ಮನೆಗೆ ಹ್ಯಾಂಡ್ ಶೇಕ್ ಮಾಡುತ್ತಾವೇನೋ ಅನ್ನುವಷ್ಟು ಹತ್ತಿರಕ್ಕಿವೆ. ಕೆಳಗೆ ಗುಂಡಾದ ಹಾಸುಗಲ್ಲುಗಳು (ಕಾಬಲ್ ಸ್ಟೋನ್ಸ್). ಒಂದು ಅಂಗಡಿಯ ಹೆಸರೇನೋ “ಅನಾಮಿಕ’ ವಿರಬಹುದು (The Shop That Must Not Be Named) ಎಂದು ಇತ್ತು. ಆದರೆ ಅದರ ತುಂಬ ಕಿಕ್ಕಿರಿದ ಹ್ಯಾರಿ ಪಾಟರ್ ಅನುಯಾಯಿಗಳು.