ಉತ್ತರ ಟೆಕ್ಸಾಸ್:ಇಲ್ಲಿನ ಮಲ್ಲಿಗೆ ಕನ್ನಡ ಸಂಘವು ಎ. 20ರಂದು ಯುಗಾದಿಯ ಪ್ರಯುಕ್ತ “ಯುಗಾದಿ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾಂಪ್ರದಾಯಿಕ ಆಹಾರ, ವೇಷ ಭೂಷಣ ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮನರಂಜನೆ ನೀಡಿದವು.
DFW ಯಕ್ಷಗಾನ ಹವ್ಯಾಸಿಗಳು ಸುಧನ್ವಾರ್ಜುನ ಎಂಬ ಮಹಾಭಾರತದ ಯಕ್ಷಗಾನವನ್ನು ಪ್ರದರ್ಶಿಸಿದರು. ಈ ಪ್ರಸಂಗದಲ್ಲಿ ಅರ್ಜುನನಾಗಿ ನಾಗರಾಜ್ ಉಪಾಧ್ಯ, ಸುಧನ್ವನಾಗಿ ಗಗನ ಬದ್ರಿನಾಥ್, ಪ್ರಭಾವತಿಯಾಗಿ ಪ್ರತೀಕ್ಷಾ ರಾವ್ ಮತ್ತು ಕೃಷ್ಣನಾಗಿ ಸುಬ್ರಹ್ಮಣ್ಯ ಶಾನಭಾಗ್ ಪಾತ್ರ ನಿರ್ವಹಿಸಿದರು.
ಅನಘ ಪ್ರಸಾದ್ ಗಣಪತಿ ಸ್ತುತಿಯನ್ನು ನಾಟ್ಯ ರೂಪದಲ್ಲಿ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಹರಿಪ್ರಸಾದ್ ಕುಂಭಾಶಿ ಮತ್ತು ಅಭಿರಾಮ್ ಉಪಾಧ್ಯ ಸಹಾಯ ಮಾಡಿದರು. ರೂಪಾ ಉಪಾಧ್ಯ ಮತ್ತು ಚಂದ್ರಿಕಾ ಪಡುಬಿದ್ರಿ ಮೇಕ್‌ಅಪ್ ಮಾಡಿದರು. ಪ್ರಶಾಂತ್ ಹೊಳ್ಳ ಅವರು ಯಕ್ಷಗಾನ ವೇಷ ಭೂಷಣಕ್ಕೆ ಸಹಕರಿಸಿದರು.
ಭಾರತದ ನಮ್ಮ ಈ ಯಕ್ಷಗಾನ ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕೆಂಬ ಏಕೈಕ ಉದ್ದೇಶ ಹೊಂದಿರುವ ನಮ್ಮ ಈ ಡಿಎಫ್ ಡಬ್ಲ್ಯು ಯಕ್ಷಗಾನ ಹವ್ಯಾಸಿ ತಂಡವು ಅಮೆರಿಕದ ಡಲ್ಲಾಸ್ ನಗರದಲ್ಲಿ ಕಳೆದ 5 ವರ್ಷಗಳಿಂದ ಹತ್ತು ಹಲವಾರು ಕಡೆ 15ಕ್ಕೂ ಹೆಚ್ಚು ಯಕ್ಷಗಾನ ಕಾರ್ಯಕ್ರಮಗಳನ್ನು ಬಹು ಯಶಸ್ವಿಯಾಗಿ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರವಾಗಿದೆ.
ಡಿಎಫ್ ಡಬ್ಲ್ಯು ಯಕ್ಷಗಾನ ಹವ್ಯಾಸಿಯ ಯೂಟ್ಯೂಬ್ ಚಾನೆಲ್‌ನಲ್ಲಿ (https://www.youtube.com/c/DFWYakshaganaHavyasis) ತಮ್ಮ ಕೆಲವು ಪ್ರಸಂಗಗಳನ್ನು ವೀಕ್ಷಿಸಬಹುದಾಗಿದೆ.