ಹಿಮದ ಮೇಲೆ ಜಾರುತ್ತ ಸ್ಕೀಯಿಂಗ್ ಮಾಡುತ್ತಾರಲ್ಲ ಅದನ್ನು ನೋಡಿದರೆ ಸ್ಕೀಯಿಂಗ್ ಮಾಡುವುದು ಇಷ್ಟು ಸುಲಭವೇ ಎಂದೆನ್ನಿಸಿ ಬಿಡುತ್ತದೆ. ಹಿಮದ ಮೇಲೆ ಜಾರುತ್ತ ಹೋಗುವುದು ಅಷ್ಟೇ, ಅದರಲ್ಲೇನಿದೆ ಎಂದೂ ಸಹ ಅನ್ನಿಸುತ್ತದೆ.
Advertisement
ಆದರೆ ಕಾಲುಗಳಲ್ಲಿ ಮಣಭಾರದ ಸ್ಕೀಯಿಂಗ್ ಬೂಟುಗಳನ್ನು ಮೆಟ್ಟಿ ಕಾಲುಗಳಿಗಿಂತಲೂ ಉದ್ದವಾದ ಬೋರ್ಡನ್ನು ಕಟ್ಟಿಕೊಂಡು, ನಮ್ಮ ಕೈ ಚರ್ಮ ನಮ್ಮ ಅನುಭವಕ್ಕೇ ಬಾರದಷ್ಟು ದಪ್ಪನೆಯ ಕೈಗವಸುಗಳನ್ನು ಧರಿಸಿ, ಕೈಯ್ಯಲ್ಲಿ ಎರಡು ಕೋಲುಗಳನ್ನು ಹಿಡಿದುಕೊಂಡು ಹಿಮದ ಮೇಲೆ ನಿಂತಾಗ ಈ ಪೌರುಷ ಇರುವುದಿಲ್ಲ. ಯಾಕೆಂದರೆ ಮೊದಲನೆಯದಾಗಿ ಅಷ್ಟು ದೊಡ್ಡದಾದ ಮರದ ಹಲಗೆಯನ್ನು ಕಾಲಿಗೆ ಕಟ್ಟಿಕೊಂಡ ಮೇಲೆ ಸುಲಭವಾಗಿ ಹೆಜ್ಜೆ ಹಾಕಲು ಆಗುವುದಿಲ್ಲ.
Related Articles
Advertisement
ಹಿಮದಲ್ಲಿ ಆಡಬಹುದಾದ ಇನ್ನೊಂದು ಕ್ರೀಡೆಯೆಂದರೆ ಅದು ಸ್ಕೀಯಿಂಗ್. ಇದಕ್ಕೆ ತುಸು ಹೆಚ್ಚು ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿರಬೇಕು. ಒಂದೆರಡು ಸಲ ಅಭ್ಯಾಸವಾದ ಮೇಲೆ ನಿಧಾನವಾಗಿ ರೂಢಿಯಾಗುತ್ತ ಹೋಗುತ್ತದೆ. ಇಂತಹ ಹಿಮಾಚ್ಛಾದಿತ ತಾಣಗಳಲ್ಲಿರುವ ರೆಸಾರ್ಟ್‌ಗಳು ಈ ತರಹದ ಚಟುವಟಿಕೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಗಂಟೆಗೆ ಇಷ್ಟು ಎಂದು ದರವನ್ನು ನಿಗದಿಪಡಿಸಿ ಅದಕ್ಕೆ ಬೇಕಾದ ಸಲಕರಣೆಗಳನ್ನೆಲ್ಲ ಅವರೇ ಕೊಡುತ್ತಾರೆ. ಭಾರವಿರುವ ದೊಡ್ಡ ಬೂಟುಗಳನ್ನು ಧರಿಸಬೇಕು.
ಅದರ ಬಳಿಕ ಸ್ಕೀಗಳನ್ನು ಕಟ್ಟಿಕೊಳ್ಳಬೇಕು. ಸ್ಕೀ ಎಂದರೆ ಉದ್ದನೆಯ ತೆಳ್ಳನೆಯ ಮರದ ಹಲಗೆಗಳು! ಸ್ಕೀಯಿಂಗ್ ಕ್ರೀಡೆಗೆಂದೇ ರೂಪಿಸಿರುವ ಪರಿಕರಗಳು. ಇವುಗಳ ಸಹಾಯದಿಂದಲೇ ಹಿಮದ ಮೇಲೆ ಸರಾಗವಾಗಿ ಜಾರಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರ ಆಕಾರಕ್ಕೆ ತಕ್ಕಂತೆ ಇವುಗಳನ್ನು ಕೊಡಲಾಗುತ್ತದೆ. ಮಕ್ಕಳಿಗೆ ಸಣ್ಣ ಹಲಗೆಗಳಿದ್ದರೆ ದೈತ್ಯ ದೇಹ ಹೊಂದಿದವರಿಗೆ ಅವರ ದೇಹಕ್ಕೆ ತಕ್ಕದಾದ ಹಲಗೆಗಳಿರುತ್ತವೆ. ಈ ಹಲಗೆಗಳ ಮಧ್ಯದಲ್ಲಿ ಕಾಲುಗಳನ್ನು ಊರಲಿಕ್ಕೆಂದೇ ರೂಪಿಸಿದ ಜಾಗದಲ್ಲಿ ಪಾದಗಳನ್ನಿಟ್ಟು ಸರಿಯಾಗಿ ಲಾಕ್ ಮಾಡಿಕೊಳ್ಳಬೇಕು. ಹೀಗೆ ಸರಿಯಾಗಿ ಲಾಕ್ ಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದೇ ಇದ್ದಲ್ಲಿ ಬೋರ್ಡ್ ಬಿಚ್ಚಿಕೊಳ್ಳುವ, ಅದರಿಂದ ಅಪಘಾತ ಸಂಭವಿಸುವ ಅಥವಾ ಕಾಲು ಉಳುಕುವ ಸಂಭವವಿರುತ್ತದೆ. ಒಮ್ಮೆ ಲಾಕ್ ಮಾಡಿಕೊಂಡರೆ ಮುಗಿಯಿತು ಮತ್ತೆ ಅದನ್ನು ತೆಗೆಯುವವರೆಗೂ ಕಾಲುಗಳಿಗೆ ಅಂಟಿಕೊಂಡೇ ಇರುತ್ತದೆ.
ಮರದ ದಿಮ್ಮೆಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದರೇನೋ ಎಂಬಂತೆ ಎಲ್ಲರೂ ಕಾಲುಗಳನ್ನು ಎತ್ತಿ ಕಷ್ಟಪಟ್ಟು ಹೆಜ್ಜೆಗಳನ್ನು ಹಾಕುತ್ತಿರುತ್ತಾರೆ. ಮೈ ಮೇಲೆ ಮೂರ್ನಾಲ್ಕು ಪದರಿನ ಬಟ್ಟೆಗಳನ್ನು ಹಾಕಿ ಅದರ ಮೇಲೆ ದಪ್ಪನೆಯ ಜಾಕೆಟ್ ಹಾಕಿರಬೇಕು. ಯಾಕೆಂದರೆ ಕೊಲರಾಡೋನಂತಹ ಹಿಮಪರ್ವತಗಳ ತಾಣದಲ್ಲಿ ಅದರಲ್ಲೂ ಚಳಿಗಾಲದಲ್ಲಿ ತಾಪಮಾನ ಮೈನಸ್ ಡಿಗ್ರಿ ಸೆಲ್ಸಿಯಸ್‌ನಲ್ಲಿರುವುದರಿಂದ ಮೈಗಂಟುವ ಚಳಿಯಿಂದ ತಪ್ಪಿಸಿಕೊಳ್ಳಲು ಈ ಎಲ್ಲ ಮುಂಜಾಗ್ರತೆಗಳನ್ನು ಪಾಲಿಸಲೇಬೇಕು. ಕೈಗೆ ದಪ್ಪನೆಯ ಗ್ಲೋವ್ಸ್, ತಲೆಗೆ ಟೊಪ್ಪಿ, ಅದರ ಮೇಲೆ ಸುರಕ್ಷೆಗೆಂದು ಹಾಕಿಕೊಳ್ಳುವ ಹೆಲ್ಮೆಟ್! ಇಷ್ಟೆಲ್ಲ ಧರಿಸಿ ಸ್ಕೀಯಿಂಗ್ ಮಾಡಲು ಹೊರಟರೆ ಯಾವುದೋ ಯುದ್ಧಕ್ಕೆ ಹೊರಟು ನಿಂತಿರುವ ಸೈನಿಕರಂತೆ ಕಾಣಿಸುತ್ತಿರುತ್ತೇವೆ. ಎತ್ತರದ ಪರ್ವತದ ಮೇಲಿನಿಂದ ಜಾರಬೇಕೆಂದರೆ ಮೊದಲು ಆ ತುತ್ತ ತುದಿಯನ್ನು ತಲುಪಬೇಕಲ್ಲ! ಅದಕ್ಕೆಂದೇ ಇಂತಹ ಜಾಗಗಳಲ್ಲಿ ಚಲಸೋಪಾನ (ಎಸ್ಕಲೇಟರ್) ಗಳನ್ನು ನಿರ್ಮಿಸಿರುತ್ತಾರೆ. ಅವುಗಳ ಮೇಲೆ ಹತ್ತಿ ಅವುಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವವರೆಗೂ ತಾಳ್ಮೆಯಿಂದ ನಿಲ್ಲಬೇಕು. ಜತೆಗೆ ಗೊಂಡೊಲಾಗಳಿರುತ್ತವೆ. ಇಬ್ಬರು ಕೂರಬಹುದಾದಂತಹ ಈ ಗೊಂಡೊಲಾ ಕುರ್ಚಿಗಳು ಒಂದಾದ ಮೇಲೊಂದರಂತೆ ಬಂದು ಜನರನ್ನು ಕೂರಿಸಿಕೊಂಡು ವಿದ್ಯುತ್ ಸಂಪರ್ಕವಿರುವ ಕಬ್ಬಿಣದ ತಂತಿಗಳ ಸಹಾಯದಿಂದ ಮೇಲೆ ಸಾಗುತ್ತವೆ. ಹೀಗೆ ಸಾಗುವಾಗ ಸುತ್ತಲೂ ಆವೃತವಾಗಿರುವ ಹಿಮಾಚ್ಛಾದಿತ ಪರ್ವತಗಳನ್ನು ನೋಡುವುದೇ ಒಂದು ಹಬ್ಬ. ಮೇಲೆ ತಲುಪಿದ ಮೇಲೆ ಸ್ಕೀಯಿಂಗ್ ಎಂಬ ಸಾಹಸ ಆರಂಭ! ಆರಂಭಿಗರಿಗೆ ತರಬೇತಿ ಕೊಡಲು ಜನರಿರುತ್ತಾರೆ. ಹೇಗೆ ಜಾರಬೇಕು, ಒಂದು ವೇಳೆ ವೇಗ ಹೆಚ್ಚಾದರೆ ಹೇಗೆ ನಿಲ್ಲಿಸಬೇಕು, ಹಲಗೆಯ ಮೇಲೆ ನಿಲ್ಲುತ್ತ ಹೇಗೆ ಸಮತೋಲನ ಕಾಯ್ದುಕೊಳ್ಳಬೇಕು ಎಂದೆಲ್ಲ ತರಬೇತಿ ಕೊಡುತ್ತಾರೆ. ಆರಂಭಿಗರಿಗೆಂದೇ ಬಹಳ ಎತ್ತರವಲ್ಲದ ಜಾಗದಲ್ಲಿ ಅಭ್ಯಾಸ ಮಾಡಲು ಆಸ್ಪದವಿರುತ್ತದೆ. ಇಲ್ಲದೇ ಇದ್ದಲ್ಲಿ ಎತ್ತರದಿಂದ ವೇಗವಾಗಿ ಬರುವ ಅನುಭವಿ ಸಾಹಸಿಗರ ಮಧ್ಯದಲ್ಲಿ ಹೆಜ್ಜೆಹೆಜ್ಜೆಗೂ ಬೀಳುತ್ತ ಏಳುತ್ತ ಅವರ ದಾರಿಗೆ ಅಡ್ಡಬಂದು ಇನ್ನಿಲ್ಲದ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕದವರಿಗೆ ಈ ಸ್ಕೀಯಿಂಗ್ ಎಂಬುದು ಬಹಳವೇ ಸಾಮಾನ್ಯವಾಗಿರುವುದರಿಂದ ಈಗಷ್ಟೇ ನಡೆಯಲು ಕಲಿತಿರುವ ಮಗುವಿನಿಂದ ಹಿಡಿದು ವಯಸ್ಸಾದ ಅಜ್ಜ ಅಜ್ಜಿಯರು ಸಹ ಈ ಸಾಹಸಕ್ಕೆ ಸೈ ಎನ್ನುತ್ತಾರೆ. ಹೆಜ್ಜೆಗೊಮ್ಮೆ ಬೀಳುತ್ತ, ಬಿದ್ದಾಗ ಕಾಲಿನ ಹಲಗೆಗಳನ್ನು ಸರಿ ಮಾಡಿಕೊಳ್ಳಲು ಆಗದೇ ಏಳಲು ಕಷ್ಟ ಪಡುವ ನನ್ನಂತವರಿಗೆ ಅವರನ್ನು ನೋಡಿದರೆ ಸಂಕೋಚವಾಗುತ್ತದೆ. ಎತ್ತರದಿಂದ ಯಾವ ಅಡೆತಡೆಯೂ ಇಲ್ಲದೇ ವೇಗವಾಗಿ ಜಾರುತ್ತಿರುವಾಗ ಆ ಅನುಭವವನ್ನು ಹೇಗೆ ವರ್ಣಿಸುವುದು? ತಣ್ಣನೆಯ ಗಾಳಿ ಮುಖಕ್ಕೆ ಅಡರುತ್ತಿದ್ದರೆ ಗಾಳಿಯನ್ನು ಸೀಳಿಕೊಂಡು ಮುಂದೆ ನುಗ್ಗುತ್ತಿದ್ದೇನೆ ಎಂಬ ವಿಶಿಷ್ಟ ಅನುಭವ. ನನ್ನನ್ನು ತಡೆಯುವವರು ಯಾರೂ ಇಲ್ಲ ಎಂಬಂತೆ ಆತ್ಮವಿಶ್ವಾಸದಲ್ಲಿ ಜೀಕುತ್ತ ಮುಂದೆ ಸಾಗುತ್ತಿದ್ದರೆ ಈ ಆಟ ನಿಲ್ಲದೇ ಇರಲಿ ಎನ್ನಿಸುತ್ತದೆ. ಹೀಗೆ ಎತ್ತರದ ಪರ್ವತದಿಂದ ಸರಾಗವಾಗಿ ಜಾರುತ್ತ ಯಾರಾದರೂ ಅಡ್ಡ ಬಂದರೆ ಅವರಿಗೆ ಢಿಕ್ಕಿ ಹೊಡೆಯದಂತೆ ವೇಗವನ್ನು ಸಂಭಾಳಿಸುತ್ತ ತಾವೂ ಬೀಳದೇ ಇತರರನ್ನೂ ಬೀಳಿಸದೆ ಕೆಳಗೆ ಬರುವುದು ಪರಿಣಿತರೇ ಸರಿ. ಇದಕ್ಕಿಂತಲೂ ಹೆಚ್ಚಿನ ಪರಿಣಿತರಿರುತ್ತಾರೆ. ಅವರಿಗೆ ಈ ಕೃತಕವಾಗಿ ನಿರ್ಮಿಸಿದ ಹಿಮಪರ್ವತದ ಎತ್ತರ ಏನೇನೂ ಅಲ್ಲ! ನಿಜವಾದ ಹಿಮ ಬಿದ್ದಿರುವಂತಹ ಇನ್ನೂ ಎತ್ತರದ ಪರ್ವತಗಳ ಮಧ್ಯದಲ್ಲಿ ಗಿಡಮರಗಳ ಮಧ್ಯದಲ್ಲಿ ಲೀಲಾಜಾಲವಾಗಿ ಜಾರುವ ಅವರನ್ನು ಕಂಡರೆ ಹೃದಯ ಬಡಿತ ಹೆಚ್ಚಾಗುತ್ತದೆ. ಬಿಳಿಯ ಪರ್ವತದ ನಡುವೆ ಅಲ್ಲಲ್ಲಿ ಸಣ್ಣಗೆ ಇರುವೆಗಳಂತೆ ಕಾಣಿಸುವ ಅವರನ್ನು, ಅವರಾಡುವ ಮೋಜಿನ ಸ್ಕೀಯನ್ನು ನೋಡುತ್ತ ಕೂರುವುದು ಸಹ ಮನೋರಂಜನೆ ನನ್ನಂತವಳ ಪಾಲಿಗೆ. ಹೀಗೆ ಬೇಸಗೆಯಲ್ಲಿ ಕ್ಯಾಂಪಿಂಗ್, ಚಳಿಗಾಲದಲ್ಲಿ ಸ್ಕೀಯಿಂಗ್ ಎಂದೆಲ್ಲ ಕಾಲಕ್ಕೆ ತಕ್ಕಂತೆ ಮೋಜು ಮಸ್ತಿಗಳನ್ನು ಅನುಭವಿಸುತ್ತಾರೆ ಈ ಅಮೆರಿಕದವರು. *ಸಂಜೋತಾ ಪುರೋಹಿತ್