Advertisement

Desi Swara: ಮ್ಯೂನಿಕ್‌ ನಲ್ಲಿ ಭಾರತೀಯ ನೃತ್ಯಗಳ ಅನಾವರಣ

12:41 PM May 29, 2024 | Team Udayavani |

ಮ್ಯೂನಿಕ್‌: ಜರ್ಮನಿಯ ಮುನಿಚ್‌ನಲ್ಲಿ ಮೇ 4ರಂದು ನಾಟ್ಯ ಫೆಸ್ಟ್‌ 2024 ವಿಶೇಷವಾಗಿ ಭಾರತೀಯ ಶಾಸ್ತ್ರೀಯ ನೃತ್ಯ ಕಲೆಗಳ ಪ್ರದರ್ಶನ ಸಂಭ್ರಮದಿಂದ, ಯಶಸ್ವಿಯಾಗಿ ನಡೆಯಿತು. ಇದನ್ನು ಮ್ಯೂನಿಕ್‌ನ ನಿತ್ಯಾ ಆರ್ಟ್ಸ್ ಸೆಂಟರ್‌ ವತಿಯಿಂದ Consulate General Of India, Munich ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

Advertisement

ವಿಶ್ವ ವಿಖ್ಯಾತ ಭರತನಾಟ್ಯ ಕಲಾವಿದೆ, ವಸುಂಧರಾ ಶೈಲಿಯ ಪ್ರವರ್ತಕಿ, ಡಾ| ವಸುಂಧರಾ ದೊರೆಸ್ವಾಮಿ ಅವರು ಮೂರನೇ ವರ್ಷದ ನಾಟ್ಯ ಫೆಸ್ಟ್‌ ಕಾರ್ಯಕ್ರಮದಲ್ಲಿ ಗಂಗಾ ಏಕವ್ಯಕ್ತಿ ರೂಪಕ ಪ್ರದರ್ಶಿಸಿದರು. ಅವರ ಅಪಾರವಾದ ಅನುಭವ ಹಾಗೂ ನೃತ್ಯದ ಪರಿಣಿತಿ, ಬಿಡುವಿಲ್ಲದೆ 70 ನಿಮಿಷಗಳು ವೇದಿಕೆಯ ಮೇಲೆ ಪ್ರಸ್ತುತಪಡಿಸಿದ ಕಲೆ, ಶೇ. 80ಕ್ಕಿಂತ ಹೆಚ್ಚು ಇದ್ದ ವಿದೇಶೀ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.ಪ್ರೇಕ್ಷಕರ ಚಪ್ಪಾಳೆಯ ಸುರಿಮಳೆ ಭಾರತದ ಶ್ರೇಷ್ಠ ನೃತ್ಯಕಲೆ ಯೂರೋಪ್‌ನಲ್ಲಿ ಜನಮನ್ನಣೆ ಗಳಿಸುತ್ತಿದೆ ಎಂಬ ಅನಿಸಿಕೆಗೆ ಅವಕಾಶ ಕಲ್ಪಿಸಿದೆ.

ಕಳೆದ ಮೂರು ವರ್ಷಗಳಿಂದ ನಿತ್ಯಾ ಆರ್ಟ್ಸ್ ಸೆಂಟರ್‌ ಮ್ಯೂನಿಕ್‌ ನಗರದಲ್ಲಿ ಅತ್ಯುತ್ತಮ ಮಟ್ಟದ ಭಾರತನಾಟ್ಯವಷ್ಟೇ ಅಲ್ಲದೇ ಅತ್ಯಂತ ವೈವಿಧ್ಯಮಯವಾದ ಇತರ ಭಾರತೀಯ ಶಾಸ್ತ್ರೀಯ ನೃತ್ಯಪ್ರಕಾರಗಳನ್ನು ಇಲ್ಲಿನ ಸಂಸ್ಕೃತಿಗೆ ಮುಖಾಮುಖೀಯಾಗಿಸುವ ವಿಶಿಷ್ಟ ಸಾಹಸವನ್ನು ಮಾಡುತ್ತಿದೆ. ಇಂದು ಜರ್ಮನಿಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಕಲಿತ ಅನೇಕ ಭಾರತೀಯ ಮತ್ತು ವಿದೇಶಿ ನೃತ್ಯಗಾರರಿದ್ದಾರೆ. ಹಾಗೆಯೇ ಇವುಗಳ ಬಗ್ಗೆ ತೀವ್ರ ಆಸಕ್ತಿ ಹಾಗೂ ಕುತೂಹಲ ಹೊಂದಿರುವ ಸಾಕಷ್ಟು ಜನರಿದ್ದಾರೆ. ಉತ್ತಮವಾದ ವೇದಿಕೆ ಹಾಗೂ ಗುಣಮಟ್ಟದ ಕಾರ್ಯಕ್ರಮಗಳು ಶಾಸ್ತ್ರೀಯ ಕಲೆಗಳಿಗೆ ತೀರಾ ಅಪರೂಪ. ಹೀಗಾಗಿ ನಾಟ್ಯ ಫೆಸ್ಟ್‌ ಮೂಲಕ ಭಾರತದ ಶ್ರೇಷ್ಠ ಕಲಾವಿದರ ಪ್ರದರ್ಶನದೊಂದಿಗೆ ಮ್ಯೂನಿಕ್‌ನಲ್ಲಿ ನೆಲೆಸಿರುವ ನೃತ್ಯ ಕಲಾವಿದರಿಗೂ ಒಂದು ವೇದಿಕೆ ಸೃಷ್ಟಿಸಬೇಕು.

ಒಂದು ಅತ್ಯುತ್ತಮವಾದ ಕಾರ್ಯಕ್ರಮದ ಮೂಲಕ ನಮ್ಮ ನೃತ್ಯ ಪರಂಪರೆಗಳನ್ನು ಇಲ್ಲಿನ ಜನರಿಗೆ ಪ್ರಸ್ತುತಪಡಿಸಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದು ನಿತ್ಯಾ ಆಟ್ಸ್‌ ಸೆಂಟರ್‌ ಸಂಸ್ಥಾಪಕಿ ಶುಭದಾ ಸುಬ್ರಹ್ಮಣ್ಯಮ್‌ ಹೇಳಿದರು.
ನಾಟ್ಯಫೆಸ್ಟ್‌ 2024ರ ಕಾರ್ಯಕ್ರಮವನ್ನು ಕಾನ್ಸುಲೇಟ್‌ ಜನರಲ್‌ ಆಫ್ ಇಂಡಿಯಾದ ಎಚ್‌ಒಸಿ ಆಗಿರುವ ರಾಜೀವ್‌ ಚಿತ್ಕಾರಾ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ನಿತ್ಯಾ ಆರ್ಟ್ಸ್ ಸೆಂಟರ್‌ನ ಸಂಸ್ಥಾಪಕಿ ಶುಭದಾ ಸುಬ್ರಹ್ಮಣ್ಯಮ್‌ ಅವರು ಮೇಳ ಪ್ರಾಪ್ತಿ ಹಾಗೂ ಮಹಿಷಾಸುರ ಮರ್ಧಿನಿ ಸ್ತೋತ್ರವನ್ನು ಭರತನಾಟ್ಯ ಶೈಲಿಯ ವಸುಂಧರಾ ಬಾನಿಯಲ್ಲಿ ಪ್ರಸ್ತುತ ಪಡಿಸಿದರು. ಮಹಿಷಾಸುರ ವಧೆಯ ಕಥೆ ಪ್ರಸ್ತುತಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಇಲ್ಲಿನ ಯೂರೋಪಿಯನ್ನರು ನಡೆಸುತ್ತಿರುವ ರೇವತಿ ಅಕಾಡೆಮಿ ಆಫ್ ಡ್ಯಾನ್ಸ್‌ ವತಿಯಿಂದ ವತಿಯಿಂದ ಮೋಹಿನಿಯಾಟ್ಟಂ, ಭವಾನಿ ಡ್ಯಾನ್ಸ್‌ ಗ್ರೂಪ್‌ ವತಿಯಿಂದ ಒಡಿಸ್ಸಿ ಹಾಗೂ ಧನ್ಯಾ ಸ್ಕೂಲ್‌ ಆಫ್ ಡ್ಯಾನ್ಸ್‌ ವತಿಯಿಂದ ಕಥಕ್‌ ಶೈಲಿಯ ನೃತ್ಯಬಂಧಗಳನ್ನು ಪ್ರದರ್ಶಿಸಲಾಯಿತು. ಇಡೀ ಸಮಾರಂಭಕ್ಕೆ ಹೊಸ ವಿಶಿಷ್ಟ ಆಯಾಮವನ್ನು ನೀಡಿದ ವಿಭಿನ್ನ ಭಾರತೀಯ ನೃತ್ಯಪ್ರಕಾರಗಳ ಪ್ರದರ್ಶನವನ್ನು ಪ್ರೇಕ್ಷಕರು ಉತ್ಸಾಹದಿಂದ ಸ್ವಾಗತಿಸಿದರು.

Advertisement

ಮೂರು ಗಂಟೆಗಳ ಭಾರತೀಯ ಶಾಸ್ತ್ರೀಯ ನೃತ್ಯಗಳ ಕಾರ್ಯಕ್ರಮ 300ಕ್ಕೂ ಹೆಚ್ಚು ಪ್ರೇಕ್ಷಕರನ್ನು ಪೂರ್ಣ ಕಾಲ ಹಿಡಿದಿಟ್ಟುಕೊಂಡಿದ್ದು ಬಹಳ ಹೆಮ್ಮೆಯ ವಿಚಾರ ಹಾಗೆಯೇ ಯಾವುದೇ ಅಡಚಣೆಗಳಿಲ್ಲದೆ ನಿಗದಿಪಡಿಸಿದ ಕಾರ್ಯಕ್ರಮಕ್ಕೆ ನಿಷ್ಠವಾಗಿ ಸಾಗಿದ್ದರಿಂದ ಒಳ್ಳೆಯ ಅನುಭವ ಉಂಟುಮಾಡಿತು.
ವರದಿ: ರವಿ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next