Advertisement
ರಂಗುರಂಗಿನ ಬಣ್ಣಗಳಿಂದ ಆಕಾಶದೆತ್ತರಕ್ಕೆ ಚಿಮ್ಮುವ ನೀರು, ಅದಕ್ಕೆ ಸರಿಯಾಗಿ ಕೇಳಿಸುವ ಸಂಗೀತದ ಸ್ವರ, ಇದನ್ನು ನೋಡುತ್ತಿದ್ದರೆ ಎರಡು ಕಣ್ಣುಗಳು ಸಾಲದು. ಇದು ವಿಶ್ವದ ಅತೀ ಎತ್ತರದ ಕಾರಂಜಿಯ ದೃಶ್ಯ. ಯುಎಇ ದೇಶದ ದುಬೈ ತನ್ನ ಹಲವು ವಿಶಿಷ್ಟ ವಿನ್ಯಾಸ, ವಿಸ್ಮಯಗಳಿಗೆ ಹೆಸರುವಾಸಿ. ಇದರ ಹೃದಯ ಭಾಗದಲ್ಲಿರುವ ವಿಶ್ವದ ಅತೀ ಎತ್ತರದ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾ ಹಾಗೂ ಅದರ ಪಕ್ಕದಲ್ಲಿರುವ ವಿಶ್ವದ ಅತೀ ದೊಡ್ಡ ಶಾಪಿಂಗ್ ಮಾಲ್ ಎಂದು ಖ್ಯಾತಿ ಪಡೆದ ದುಬೈ ಮಾಲ್ ಇವರೆಡರ ಬುಡಕ್ಕೆ ತಾಗಿಕೊಂಡಿರುವುದೇ ಅತ್ಯುನ್ನತ ಆಕರ್ಷಣೆಯ “ದುಬೈ ಫೌಂಟೇನ್ ! ವಿಶ್ವದ ಅತೀ ದೊಡ್ಡ ಸಂಗೀತ ಕಾರಂಜಿ ಎಂದು ಕರೆಯಲ್ಪಡುವ ಈ ದುಬೈ ಕಾರಂಜಿಯು ( ದುಬೈ ಫೌಂಟೇನ್) ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.
Related Articles
Advertisement
ಈ ಕಾರಂಜಿಯು ವಿಶಿಷ್ಟ ವಿನ್ಯಾಸಗಳನ್ನು ಒಳಗೊಂಡಿದ್ದು, ಐದು ವಿಭಿನ್ನ ಗಾತ್ರದ ವಲಯಗಳು ಹಾಗೂ ಎರಡು ಆರ್ಕ್‌ಗಳನ್ನು ಹೊಂದಿದೆ. ಗಗನದೆತ್ತರಕ್ಕೆ ನೀರನ್ನು ಚಿಮ್ಮುವಂತೆ ಮಾಡಬಲ್ಲ ಶಕ್ತಿಯುತ ನೀರಿನ ನಳಿಕೆಗಳನ್ನು ಇದು ಹೊಂದಿದೆ.ನೀರಿನ ಕಾರಂಜಿಯು ಸುಮಾರು 6,600ಕ್ಕೂ ಹೆಚ್ಚು ಸೂಪರ್ ಲೈಟ್‌ಗಳು ಮತ್ತು 25 ಕಲರ್ ಪ್ರೊಜೆಕ್ಟ್ರ್‌ಗಳ ನೆರವಿನೊಂದಿಗೆ 1,000ದಷ್ಟು ವಿವಿಧ ರೀತಿಯ ದೃಶ್ಯ ವರ್ಣಪಟಲವನ್ನು ರಚಿಸುತ್ತದೆ. ಕಾರಂಜಿಗೆ ಇನ್ನಷ್ಟು ಮೆರುಗನ್ನು ನೀಡುವ ಸಂಗೀತವು ಶಾಸ್ತ್ರೀಯದಿಂದ ಹಿಡಿದು ಈಗಿನ ಅರೇಬಿಕ್ ಹಾಗೂ ವಿಶ್ವವಿಖ್ಯಾತ ಹೊಂದಿರುವ ಹಲವು ಹಾಡುಗಳನ್ನು ಹೊಂದಿದೆ. ಈ ಕಾರಂಜಿಗಳು ಕ್ಷಣಮಾತ್ರದಲ್ಲಿ ಗಾಳಿಯಲ್ಲಿ 22,000 ಗ್ಯಾಲನ್‌ಗಳಿಗಿಂತ ಅಂದರೆ 83 ಸಾವಿರ ಲೀಟರ್‌ನಗಿಂತ ಹೆಚ್ಚು ನೀರನ್ನು ಹೊರಸೂಸುತ್ತದೆ. ಈ ಕಾರಂಜಿಯನ್ನು ದಿನವೂ ಕಾಣಬಹುದು. ಪ್ರತೀ ದಿನ ಸಂಜೆ 6:30ರಿಂದ ರಾತ್ರಿ 11 ಗಂಟೆ ತನಕ ಪ್ರತೀ 30 ನಿಮಿಷಗಳಿಗೊಮ್ಮೆ ಕಾರಂಜಿಗಳು ಜೀವ ಪಡೆದುಕೊಳ್ಳುತ್ತದೆ.