Advertisement

Desi Swara: ಹುಲಿಕಲ್ಲಿನ ಸಾಲುಮರದ ತಿಮ್ಮಕ್ಕನಿಗೆ ಹ್ಯಾಲಿಫಾಕ್ಸ್‌ನಲ್ಲಿ ಗೌರವ!

02:56 PM Dec 09, 2023 | Team Udayavani |

ಎತ್ತಣ ಹುಲಿಕಲ್ಲು! ಎತ್ತಣ ಕುಂದಾಪುರ! ಎತ್ತಣ ಇಂಗ್ಲೆಂಡಿನ ಹ್ಯಾಲಿಫಾಕ್ಸ್‌? ಇದೇನು ಸಂಬಂಧ? ಇತ್ತೀಚೆಗೆ ಗ್ಲೋಬಲ್‌ ವಾರ್ಮಿಂಗ್‌ನಿಂದ ಭೂಮಿಗೆ ಬಿಸಿಯೇರಿದಂತೆ ಪರಿಸರದ ಬಗ್ಗೆ ಕಾಳಜಿ ವಿಶ್ವದಾದ್ಯಂತ ಹರಡಿದೆ. ಅಂತೆಯೇ ಎರಡು ವಾರದ ಕೆಳಗೆ ತಮ್ಮ ದೀಪಾವಳಿಯ ಆಚರಣೆಯ ಸಂದರ್ಭದಲ್ಲಿ ಅನ್ನಪೂರ್ಣ ಇಂಡಿಯನ್‌ ಡಾನ್ಸ್‌ ಸಂಸ್ಥೆ Lights of Hope ಎನ್ನುವ ನೃತ್ಯ, ಭಾಷಣ ಮತ್ತು ಸಂಗೀತಯುಕ್ತ ಕಾರ್ಯಕ್ರಮವನ್ನು ಡೀನ್ಸ್‌ ಕ್ಲಫ್ ಕಟ್ಟಡದ ಕ್ರಾಸ್ಲಿ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದರು. ಅದರಲ್ಲಿ “ತಮಸೋಮಾ ಜ್ಯೋತಿರ್ಗಮಯ’ ಅಂತ ದೀಪ ಬೆಳಗಿದ ಅನಂತರದ ಪ್ರಸ್ತುತಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಒತ್ತಿ ಹೇಳುವ ಪ್ರದರ್ಶನಗಳನ್ನು ಆಯ್ದುಕೊಂಡಿದ್ದರು. ಸಾಲುಮರದ ತಿಮ್ಮಕ್ಕನ ಜೀವನ ಚರಿತ್ರೆಯನ್ನು ಅತ್ಯಂತ ಮನದಟ್ಟವಾಗುವಂತೆ ಶಾಂತಾರಾವ್‌ ಅವರು ಪ್ರಸ್ತುತ ಪಡಿಸಿದರು. ಅದಕ್ಕೆ ಆ ನಗರದ ಮೇಯರ್‌ ಆಶ್ಲಿ ಎವನ್ಸ್‌ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

Advertisement

ಎಲ್ಲಿದೆ ಹ್ಯಾಲಿಫಾಕ್ಸ್‌ ?
ಹಿಂದೊಮ್ಮೆ ಇಂಗ್ಲೆಂಡಿನ ಉತ್ತರ ಭಾಗದ ಯಾರ್ಕ್‌ ಶೈರಿನಲ್ಲಿಯ ಅನೇಕ ಉಣ್ಣೆ ಮತ್ತು ಕಾಟನ್‌ ಮಿಲ್ಲುಗಳಿಗೆ ಪ್ರಸಿದ್ಧವಾದ ಊರುಗಳಲ್ಲಿ ಇದೂ ಒಂದಾಗಿತ್ತು. “ಅರ್ಬನ್‌ ರಿ ಜನರೇಷನ್‌’ ಯೋಜನೆಯಲ್ಲಿ ಅರ್ಧ ಮೈಲುದ್ದದ ಒಂದು ಕಾರ್ಪೆಟ್‌ ಕಾರ್ಖಾನೆಗಳ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಿ ಈಗ ಡೀನ್ಸ್‌ಕ್ಲಫ್ ಎನ್ನುವ ಹೊಸ ರೂಪ ಧರಿಸಿದೆ.

ಇಲ್ಲಿಯೇ ಕುಂದಾಪುರ ಮೂಲದ ಶಾಂತಾರಾವ್‌ ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಈ ನಾಡಿನಲ್ಲಿ ಭರತನಾಟ್ಯ ಮತ್ತು ಭಾರತೀಯ ಸಂಸ್ಕೃತಿಯ ಪ್ರಸರಣಕ್ಕೇ ತಮ್ಮನ್ನು ಮುಡುಪಾಗಿಟ್ಟು ಕೊಂಡು ಸ್ಥಾಪಿಸಿದ “ಅನ್ನಪೂರ್ಣ ಇಂಡಿಯನ್‌ ಡಾನ್ಸ್‌’ ಸಂಸ್ಥೆಯ ಆಫೀಸ್‌ ಮತ್ತು ಅದರ ಪಕ್ಕದಲ್ಲೇ ಚಿತ್ರ ಮತ್ತು ನೃತ್ಯ ಪ್ರದರ್ಶನಕ್ಕೆ ಅನುಕೂಲವಾಗುವ ಕ್ರಾಸ್ಲಿ ಗ್ಯಾಲರಿ ಇರುವುದು. ನ. 11ರಂದು ಮೇಯರ್‌ ಆಶ್ಲಿ, ದಾಲ್ಸ್‌ ಮೂವ್‌ಮೆಂಟ್‌ ಸೈಕೋಥೆರಪಿ ಪಟು ರಿಚರ್ಡ್‌ ಕೋಟೆನ್‌ ಮುಂತಾದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು “ಲೈಟ್ಸ್‌ ಆಫ್ ಹೋಪ್‌’ ಪ್ರಾರಂಭವಾಯಿತು.

ಮೊದಲು ಅಜ್ಞಾನದ ಅಂಧಕಾರವನ್ನು ಹಿಮ್ಮೆಟ್ಟಿಸುವ ಸಂಕೇತವಾದ ದೀಪಾವಳಿಯ ದೀಪಗಳ ಮಹತ್ವ ಮತ್ತು ಔಚಿತ್ಯವನ್ನು ತಿಳಿಸಿ ಉಪನಿಷತ್ತಿನ ಮಂತ್ರವನ್ನು ಚಿಕ್ಕ ನೃತ್ಯರೂಪಕದಲ್ಲಿ ಪ್ರದರ್ಶಿಸಲಾಯಿತು.

Advertisement

ತನ್ನ ಕೈಯ ಕೊಡದಲ್ಲಿ ನೀರು ಹೊತ್ತು ತಂದು ಹಸುರು ಸಿರಿಯ ಸಾಲುಮರಗಳನ್ನು ಬೆಳೆಸಿದ, ಹುಲಕಲ್ಲ ಹೆಸರನ್ನು ಜಗತ್ತಿಗೆಲ್ಲ ತಿಳಿಸಿಕೊಟ್ಟ ತಿಮ್ಮಕ್ಕನಿಗೆ ಇಲ್ಲಿಗೆ ಪಯಣ ಬೆಳೆಸಲು ಸಾಧ್ಯವಾಗಿದ್ದರೆ ರೆಡ್‌ ಕಾರ್ಪೇಟ್‌ ಸ್ವಾಗತವನ್ನು ಮಾಡಲು ಸಿದ್ಧವಾಗುತ್ತಿದ್ದರು ನಮ್ಮ ಶಾಂತಾರಾವ್‌ ಅವರು! ಆಕೆಯ ಕಥೆಯನ್ನು ಅತ್ಯಂತ ಕಳಕಳಿಯಿಂದ ವರ್ಣಿಸುವಾಗ ಅತೀವ ಭಾವುಕರಾಗಿ ಬಿಟ್ಟರು. ಗೋಡೆಯ ಮೇಲೆ ಆಕೆ ಸಲುಹಿದ ಹಸುರು ಸಾಲುಮರಗಳ ಮುಂದೆ ಹಸುರು ಸೀರೆ ಉಟ್ಟ ಆಕೆಯ ಫೋಟೋದ ಹಿನ್ನೆಲೆಯಲ್ಲಿ ಆಕೆಯ ಬಾಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ನಿಲ್ಲಿಸಿದಾಗ ಸಭೆಯಲ್ಲಿ ಜೋರಾದ ಕರತಾಡನ. ಅನಕ್ಷರಸ್ಥೆಯಾದರೂ ಸುಮಾರು 400 ಆಲದ ಮರಗಳನ್ನು ನೆಟ್ಟು ಪೋಷಿಸಿ “ಸಾಲುಮರದ ತಿಮ್ಮಕ್ಕ’ ಎಂದೇ ಗುರುತಿಸಲ್ಪಡುವ ಆಕೆ ಭೂಮಿಯ ಭವಿಷ್ಯಕ್ಕೆ ಆಶಾದೀಪವಾದ ಅವರನ್ನು ಸ್ಮರಿಸಿಯೇ ಈ ಕಾರ್ಯಕ್ರಮಕ್ಕೆ Lights of Hope ಅಂತ ನಾಮಕರಣ ಮಾಡಿರಬೇಕು ಅನಿಸಿತು.

“ರಾಗಿಯನ್ನುಂಡು ಸ್ವಚ್ಛ, ಸ್ವಸ್ಥಜೀವಿಯಾಗಿ ಹಳ್ಳಿಯಲ್ಲಿ ಬೆಳೆದ ಆ ಸರಳಜೀವಿ ಶತಾಯುಷಿ ನನಗೆ ನನ್ನ ತಾಯಿ ಮತ್ತು ಅಜ್ಜಿಯನ್ನು ನೆನಪಿಸುತ್ತಾರೆ. ಇದು ಆಕೆಗೊಂದು ಶ್ರದ್ಧಾಂಜಲಿ,’ ಎಂದರು ಶಾಂತಾ. ಅವರು ಕಥೆ ಹೇಳುತ್ತಿದ್ದಂತೆ ಕಥಕ್‌ ನರ್ತಕಿ ಜೈಮಿನಿ ಸಹಾಯ್‌ ಕೈಯಲ್ಲಿ ಕೊಡ ಹಿಡಿದು ಚಿಕ್ಕ ರೂಪಕವನ್ನು ಪ್ರದರ್ಶಿಸಿದರು.

ಅದರ ಅನಂತರ ಅವರು ಬೇರೊಂದು ವಿಧದ ಪೂರ್ಣ ಕಥಕ್‌ ತೆರಾನಾದ ಅಮೋಘ ಪ್ರದರ್ಶನ ನೀಡಿದರು. ಅದಕ್ಕೆ ಲೈವ್‌ ಸಂಗೀತದ ಸಾಥ್‌ ಕೊಟ್ಟವರು ಪ್ರೀತಿ ಕೌರ್‌ ಮತ್ತು ತಬಲಾದಲ್ಲಿ ಉಪನೀತಸಿಂಗ್‌ ದಡಿಯಾಲ್‌, ಪರಿಸರ ಮಾಲಿನ್ಯ ಮತ್ತು ಸಾಂಖ್ಯ ವೇದಾಂತದ ವ್ಯಷ್ಟಿ-ಸಮಷ್ಟಿ ತತ್ವವನ್ನು ತಿಳಿಸುವ ಶ್ರೀಕೃಷ್ಣನ ಕಾಳಿಯ ಮರ್ದನದ ಕಥೆಯನ್ನು ನೆರೆದ ಸಭಿಕರಿಗೆ ಮನಮುಟ್ಟುವಂತೆ ತಿಳಿಯಾದ ಇಂಗ್ಲಿಷ್‌ ಭಾಷೆಯಲ್ಲಿ ಧ್ವನಿಯ ಏರಿಳಿತಗಳಿಂದ ನಾಟಕೀಯವಾಗಿ ಕಥನ ಶೈಲಿಯಲ್ಲಿ ಪ್ರಸ್ತುತ ಪಡಿಸಿದವರು ಆಹ್ವಾನಿತ ಅತಿಥಿಯಾದ ರಿಚರ್ಡ್‌ ಕೋಟೆನ್‌.

ಆತ ಡಾನ್ಸ್‌ ಮೂವ್‌ಮೆಂಟ್‌ ಸೈಕೋಥೆರಪಿಸ್ಟ್‌ ಅಂತ ಸ್ಥಳೀಯ ಆಸ್ಪತ್ರೆಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅದು ಮುಗಿದಂತೆ ಲಿವರ್ಪೂಲಿನಲ್ಲಿ ವಾಸಿಸುತ್ತಿರುವ ಡಾ| ಸುಪ್ರೀತಾ ಐತಾಳ್‌ ಅವರು ಅದೇ ಥೀಮ್‌ನ ಅದ್ಭುತ ಕಾಲಿಯಾ ಮರ್ದನವನ್ನು ರೂಪಿಸುವ ಭರತ ನಾಟ್ಯಮ್‌ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು. ತಿಳಿಯಾದ ಯಮುನೆಯ ನೀರನ್ನು ವಿಷದಿಂದ ಕಲುಷಿತಗೊಳಿಸಿ ಪ್ರಾಣಹಾನಿ ಮಾಡುತ್ತಿದ್ದ ಕಾಳಿಂಗ ಸರ್ಪದ ವಿಷ ಇಂದಿನ ಯುಗದಲ್ಲಿ ಯಾಂತ್ರೀಕರಣ ಪ್ರಗತಿಯ ಹೆಸರಲ್ಲಿ ಕೆಲವೆಡೆ ಕುಡಿಯಲಾರದಂತಾಗಿರುವ ನೀರಿನ ರೂಪಕವಾಗಿದೆ ಅನ್ನುವ ಸಂದೇಶ ಬೀರಿದಂತಾಯಿತು.

ಮುಕ್ತಾಯಕ್ಕೆ ಮೊದಲು ಶಾಂತಾರಾವ್‌ ಅವರು ಮೊದಲನೆಯ ಮಹಾಯುದ್ಧದ ಶತಾಬ್ಧಿ ವರ್ಷವನ್ನು ಆಚರಿಸುವಾಗ ಈ ದೇಶದ ವಿವಿಧ ಸ್ಥಳಗಳಲ್ಲಿಯ ಸಭಾಗ್ರಹಗಳಲ್ಲಿ ಕೊಂಡೊಯ್ದು ಪ್ರದರ್ಶಿಸಿದ ತಮ್ಮ Soldiers of the Empire ಎನ್ನುವ ನೃತ್ಯ ರೂಪಕವನ್ನೇ ನೆನಪಿಸುವ ಆಗಿನ ಸಮಗ್ರ ಭಾರತ ಮಹಾಯುದ್ಧದಲ್ಲಿ ಬ್ರಿಟಿಷ್ ಸರಕಾರದ ಸೈನ್ಯಕ್ಕೆ ಸೇರಿದ 1 ಮಿಲಿಯನ್‌ ಯೋಧರ ಸೇವೆಯನ್ನು ಸ್ಮರಿಸಿದರು. ಯುದ್ಧದಲ್ಲಿ ಅನೇಕರು ಹುತಾತ್ಮರಾದರು. ಅವರ‌ಲ್ಲೊಬ್ಬ ಸಾಂಕೇತಿಕ ಹುತಾತ್ಮ ಯೋಧನ ಚಿತ್ರವನ್ನು ಪ್ರದರ್ಶಿಸಿದರು. ಅದು ಸಹ ಇತ್ತೀಚಿನ ಜಗತ್ತಿನ ನಾಜೂಕಿನ ಪರಿಸ್ಥಿತಿಗೆ ಎಚ್ಚರಿಕೆ ಗಂಟೆಯಾಗಿ ಕಂಡಿತು. ಅಮೇಲೆ ಪರಿಸರಪ್ರೇಮಿಯಾದ ಅವರು ಎಲ್ಲರಿಗೂ ತಾವು ಶಿಸ್ತಿನಿಂತ ಬಟ್ಟೆಯಲ್ಲಿ ಕಟ್ಟಿ ತಂದ ಒಂದೊಂದು ಡಾಫೋಡಿಲ್‌ ಗಡ್ಡೆಯನ್ನು ಹಂಚಿದರು. ಬರೀ ಹಬ್ಬವನ್ನಷ್ಟೇ ಆಚರಿಸದೆ ಒಂದೆರಡು ವೈಚಾರಿಕ ಸಂದೇಶಗಳನ್ನೂ ಬಿತ್ತರಿಸಿದ್ದು ಸಮಯೋಚಿತವಾಗಿತ್ತು. ಯುವಪೀಳಿಗೆಯಿಂದ ಕರ್ನಾಟಕ ಸಂಗೀತದ ವೀಣಾವಾದನ ರಂಜಿಸಿತು.

*ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next