ಎಲ್ಲಿಯ ಚಿಲಿ ದೇಶ, ಎಲ್ಲಿಯ ಭಾರತದ, ಕರ್ನಾಟಕದ ಹೊನ್ನಾವರ. ಎರಡೂ ಊರುಗಳು ಸಾಗರದ ತೀರದಲ್ಲೇ ಇರುವವು. ಸ್ನೇಹ, ಬಾಂಧವ್ಯ ಬೆಸೆಯಲು ಯಾವುದೇ ಅಡ್ಡಿ, ಮಿತಿಗಳಿಲ್ಲ. ಅದು ಹೇಗಾದರೂ, ಎಲ್ಲಿಯಾದರೂ ಮಿಳಿತಗೊಳ್ಳುತ್ತದೆ. ಸ್ವದೇಶದಿಂದ ಪರದೇಶಕ್ಕೆ ಹೋಗಿ ಅಲ್ಲಿ ನೆಲೆಸಿದಾಗ ವಿವಿಧ ದೇಶಗಳಿಂದ ಬಂದು ಅಲ್ಲಿ ನೆಲೆಯಾಗಿರುವ ವ್ಯಕ್ತಿ, ಮನಸ್ಸುಗಳೊಂದಿಗೆ ಬೆರೆಯಲೇ ಬೇಕಾಗುತ್ತದೆ. ಇದು ಬದುಕಿನ ಅನಿವಾರ್ಯವೂ ಹೌದು. ಹೀಗೆ ಪರಿಚಿತವಾದ ಜೀವಗಳು ನಮ್ಮ ನಮ್ಮ ಬದುಕಿನಲ್ಲಿ ಕೆಲವೊಮ್ಮೆ ಸುಧೀರ್ಘ ಅವಧಿಯವರೆಗೂ, ಇನ್ನೂ ಕೆಲವೊಮ್ಮೆ ಮಿಂಚಿನಂತೆ ಹೀಗೆ ಬಂದು, ಹಾಗೇ ತಿಳಿಯದೇ ಹೋಗಿಬಿಡುತ್ತಾರೆ. ಆದರೆ ಈ ಅಲ್ಪಾವಧಿಯಲ್ಲಿ ಇವರು ಬೀರುವ ಪ್ರಭಾವ ಎಂದಿಗೂ ಅಮರ. ಆ ಮನಸ್ಸುಗಳು ನಮ್ಮಿಂದ ದೂರವಾದರೂ ಅವರೊಂದಿಗಿನ ನೆನಪುಗಳು ಸದಾ ಹಸುರಾಗಿರುತ್ತವೆ. ಹೀಗೆ ಚಿಲಿ ಹಾಗೂ ಹೊನ್ನಾವರದ ಮನಸ್ಸುಗಳು ಬೆಸೆದ ಮಾತಿನ ನಂಟಿನ ಕುರಿತು ಇಲ್ಲಿದೆ…
ಅಂದು ಜೋರಾಗಿ ಹಿಮಪಾತವಾಗುತ್ತಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಹಿಮವೋ ಹಿಮ. ನೆರೆಹೊರೆಯವರೆಲ್ಲ ಹಿಮ ಬದಿಗೊತ್ತುವ ಕಾರ್ಯದಲ್ಲಿ ನಿರತರಾಗಿದ್ದರು. ಕಾಲ್ದಾರಿ ಇಲ್ಲೇ ಎಲ್ಲೋ ಹಿಮದಡಿಯಲ್ಲಿರಬಹುದು ಎಂದು ಊಹಿಸುತ್ತ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿ¨ªೆ. ನಮ್ಮ ಮನೆಗೆ ಹೊಂದಿಕೊಂಡೆ ಇರುವ ನೆರೆಮನೆಯ ಅಂಗಳದಲ್ಲಿ ಹಿರಿಯ ಮಹಿಳೆಯೊಬ್ಬಳು ತನ್ನ ಕಾರಿನಿಂದ ಸಾಮಾನುಗಳನ್ನು ಇಳಿಸುತ್ತಿದ್ದಳು. ಹೊಸದಾಗಿ ಬಾಡಿಗೆಗೆ ಬಂದಿರಬೇಕೆಂದುಕೊಂಡೆ. ಸ್ಥಳೀಯ ಸೌಜನ್ಯದಂತೆ, “ಗುಡ್ ಮಾರ್ನಿಂಗ್’, ನಿಮಗೆ ಸಹಾಯ ಬೇಕೆ ?’ ಎಂದು ಕೇಳಿದೆ. ಆಕೆ ಕಣ್ಣರಳಿಸಿ, ಬೇಡವೆಂದು ಧನ್ಯವಾದ ತಿಳಿಸಿದಳು. ಮರುಗುಟ್ಟುವ ಚಳಿಯಲ್ಲಿ ಹೆಚ್ಚು ಹೊತ್ತು ನಿಲ್ಲದೇ, ಮನೆಯತ್ತ ದೌಡಾಯಿಸುತ್ತ, ಅಪರಿಚಿತಳಾದರೂ “ಬನ್ನಿ, ಬಿಸಿ ಬಿಸಿ ಕಾಫಿ ಕುಡಿಯೋಣ’ ಎಂದು ಆಹ್ವಾನಿಸಿದೆ. ಆಕೆ ಕೂಡ “ಈ ಚಳಿಯಲ್ಲಿ ಬಿಸಿ ಕಾಫಿ ಸಿಕ್ಕರೆ ಅದೇ ಸ್ವರ್ಗ, ಈ ಸಾಮಾನುಗಳನ್ನೆಲ್ಲ ಒಳಗಿಟ್ಟು ಖಂಡಿತ ಬರುತ್ತೇನೆ’, ಎಂದಳು.
ಅಂದು ನನ್ನ ಪತಿಯೂ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಅವರ ಬಳಿ “ಕಾಫಿಗೆ ಒಬ್ಬ ಅತಿಥಿ ಬರುತ್ತಿ¨ªಾರೆ ‘ ಎಂದು ಕುತೂಹಲ ಕೆರಳಿಸಿದೆ. ಆಕೆ ಬಂದಳು. ತಾನು ಮಾರಿಯಾ ಎಂದು ಪರಿಚಯಿಸಿಕೊಂಡಳು. ನನ್ನ ಹೆಸರು ಉಚ್ಚರಿಸಲು ಕಷ್ಟ ಪಟ್ಟ ಆಕೆ, “ನಿನ್ನನ್ನು ಗೆಳತಿ ಎಂದು ಕರೆಯಲೇ’ ಎಂದು ಕೇಳಿದಳು. ನಕ್ಕು ತಲೆಯÇÉಾಡಿಸಿದೆ. ಮಾತಿಗೆ ಶುರು ಹಚ್ಚಿಕೊಳ್ಳುವ ಮೊದಲು, ನಾವು ಭಾರತೀಯರು, ನಿನಗೆ ಭಾರತೀಯ ಕಾಫಿ ಕುಡಿದು ಗೊತ್ತಿದೆಯೇ ಅಥವಾ ಕೆನೆಡಿಯನ್ ಕಾಫಿ ಬೇಕೋ ಕೇಳಿದೆ. ಭಾರತೀಯ ಕಾಫಿಗೆ ಅಸ್ತು ಎಂದಳು. ಗೋಡೆಯ ಮೇಲೆ ತೂಗು ಹಾಕಿದ್ದ ಜಗತ್ತಿನ ಭೂಪಟದಲ್ಲಿ ಫೆಸಿಫಿಕ್ ಸಾಗರ ತೀರದ ತನ್ನ ಊರನ್ನು ತೋರಿಸುತ್ತ ತಾನು ದಕ್ಷಿಣ ಅಮೆರಿಕದ ಚಿಲಿ ದೇಶದವಳು. ಭಾರತದಲ್ಲಿ ನಿನ್ನ ಊರು ಎಲ್ಲಿ ಎಂದು ಕೇಳಿದಳು. ಅರಬಿ ಸಮುದ್ರ ತೀರದ ಹೊನ್ನಾವರವನ್ನು ತೋರಿಸುತ್ತ ನಾನೂ ಕೂಡ ಕರಾವಳಿಯವಳು ಎಂದೆ. ಧಾರಾಕಾರವಾಗಿ ಬೀಳುತ್ತಿದ್ದ ಹಿಮವನ್ನು ಕಿಟಕಿಯಿಂದ ನೋಡುತ್ತ, ಬಿಸಿ ಬಿಸಿ ಕಾಫಿ ಹೀರುತ್ತ ನಾವು ಮೂವರು ಅಂದು ಗಂಟೆಗಟ್ಟಲೆ ಹರಟಿದೆವು. ಅದೇ ಮುಂದೆ ಸುಂದರ ಗೆಳೆತನವೊಂದಕ್ಕೆ ನಾಂದಿ ಹಾಡಿತು.
ಮಾರಿಯಾ ವಯಸ್ಸಿನಲ್ಲಿ ನನಗಿಂತ ಮೂವತ್ತು ವರ್ಷ ಹಿರಿಯಳು. ಮಗುವಿನಂತಹ ಮನಸ್ಸು. ಎಪ್ಪತ್ತರ ಇಳಿ ವಯಸ್ಸಿನಲ್ಲೂ ಪಾದರಸದಂತೆ ಓಡಾಡುತ್ತ ಸ್ವಾವಲಂಬಿ ಜೀವನ ನಡೆಸುವವಳು. ನಾಲ್ಕು ಗಂಡು ಮಕ್ಕಳು ಮದುವೆಯಾಗಿ ತಮ್ಮ ಕಾಲ ಮೇಲೆ ನಿಂತಿದ್ದರೂ ಅವರ ಸಹಾಯ ಕೇಳದ ಮಹಿಳೆ ಮಾರಿಯಾ. ಹಲವು ದಶಕಗಳ ಹಿಂದೆ ಚಿಲಿ ದೇಶದಲ್ಲಿ ದಂಗೆಯುಂಟಾದಾಗ ಮಾರಿಯಾ ಕುಟುಂಬ ಅಮೆರಿಕಕ್ಕೆ ವಲಸೆ ಹೋದರಂತೆ. ಅಲ್ಲಿ ಕೆಲವು ಕಾಲವಿದ್ದು ಮುಂದೆ ಇಂಗ್ಲೆಂಡಿಗೆ ತೆರಳಿದ್ದರಂತೆ. ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದು, ಮದುವೆಯಾಗಿ ಮಾರಿಯಾ ಪತಿಯೊಡನೆ ಪಯಣಿಸಿದ್ದು ಕೆನಡಾಕ್ಕೆ. ಶಿಕ್ಷಕಿ, ಶುಶ್ರೂಷಕಿ, ಪರಿಚಾರಕಿ ಹೀಗೆ ಹಲವು ಸ್ತರಗಳಲ್ಲಿ ದುಡಿದು ಈಗ ನಿವೃತ್ತ ಜೀವನ ನಡೆಸುತ್ತಿದ್ದಾಳೆ.
ಅಮೆರಿಕದ ಪ್ರಜೆಯೂ ಆಗಿರುವುದರಿಂದ ಆರು ತಿಂಗಳು ಫ್ಲೋರಿಡಾದಲ್ಲಿ, ಉಳಿದ ಆರು ತಿಂಗಳು ಕೆನಡಾದಲ್ಲೂ ಕಳೆಯುತ್ತಾಳೆ. ಹೀಗೆ ಆಕೆ ಇಲ್ಲಿ ಬಂದಾಗೆಲ್ಲ ನಮ್ಮ ಮೆನೆಗೆ ಬರುತ್ತಾಳೆ. ಆಕೆಗೆ ನಾನು ಮಾಡುವ ಕಾಫಿ ಇಷ್ಟ. ಭಾರತದ ಕುರಿತು ಅದೆಷ್ಟೋ ವಿಷಯ ಕೇಳಿ ತಿಳಿದುಕೊಳ್ಳುತ್ತಾಳೆ. ದಕ್ಷಿಣ ಅಮೆರಿಕದ ಬಗೆಗಿನ ಆಕೆಗಿರುವ ಅಗಾಧ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದರೆ ಕೇಳುವ ಕಿವಿಯಾಗುತ್ತೇನೆ ನಾನು. ಚಿಲಿಯ ಸ್ಥಳೀಯ ಭಾಷೆ, ಸ್ಪಾನಿಷ್, ಫ್ರೆಂಚ್, ಇಂಗ್ಲಿಷ್ ಹೀಗೆ ಹಲವು ಭಾಷಾ ಪ್ರವೀಣೆ ಮಾರಿಯಾ. ಗೆಳತಿ ಎಂದು ಪ್ರೀತಿಯಿಂದ ಕರೆದು, ತಟ್ಟನೆ ಯಾವದೋ ಭಾಷೆಯಲ್ಲಿ ಏನೋ ಹೇಳಿ ನನ್ನನ್ನು ಗೊಂದಲಕ್ಕೀಡು ಮಾಡಿ ಮಗುವಿನಂತೆ ನಕ್ಕು ನಗಿಸುತ್ತಾಳೆ. ಚಿಲಿಯ ಹಲವು ಖಾದ್ಯಗಳನ್ನು ನನಗೆ ಪರಿಚಯಿಸಿ¨ªಾಳೆ.ಬಾಲ್ಯದಲ್ಲಿ ತನ್ನ ಅಜ್ಜಿಯಿಂದ ಕೇಳಿದ ಹಲವು ಕಥೆಗಳನ್ನು ನನ್ನ ಮಕ್ಕಳಿಗೆ ಕುಳ್ಳರಿಸಿ ಹೇಳಿದ್ದಿದೆ. ಹಲವು ದೇಶಗಳ ಇತಿಹಾಸ, ಸಂಸ್ಕೃತಿ, ಜನಾಂಗದ ಕುರಿತು ಗಂಟೆಗಟ್ಟಲೆ ಮಾತನಾಡಬಲ್ಲಳು. ಚಳಿಯ ನಾಡು ಕೆನಡಾದಲ್ಲಿ ಯಾವ ಗಿಡವನ್ನು ಹೇಗೆ ಬೆಳೆಸಿ ಪೋಷಿಸಬೇಕು, ಸ್ಥಳೀಯ ಮನೆ -ಮದ್ದುಗಳ ತಯಾರಿಕೆ, ಆಕ್ಷೇಪಣೆಯಿಲ್ಲದ ಜೀವನ ಹೇಗೆ ನಡೆಸಬೇಕು, ಚಿಕ್ಕ ವಿಷಯಗಳಲ್ಲೂ ಸಂತೋಷವನ್ನು ಹುಡುಕುವುದು ಹೇಗೆ ಮಾರಿಯಾ ಎಲ್ಲಕ್ಕೂ ಉತ್ತರವಿದ್ದಂತೆ. ಆಕೆ ಎದುರಿಗೆ ಇದ್ದರೆ ಹಬ್ಬವಿದ್ದಂತೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಅಮೆರಿಕದಿಂದ ಅದೆಷ್ಟೋ ಸುದ್ದಿ ಹೊತ್ತು ಬಂದಿದ್ದಳು. ಮಕ್ಕಳ ಬಟ್ಟೆಯ ಸಣ್ಣ ಪುಟ್ಟ ರಿಪೇರಿಗೆಂದು ಚಿಕ್ಕ ಹೊಲಿಗೆ ಯಂತ್ರವನ್ನು ಕೊಂಡಿದ್ದೆ. ಹೊಲಿಗೆಯ ಕುರಿತು ಏನೂ ಅರಿಯದ ನನಗೆ, ತಾನು ನಿನಗೆ ಹೊಲಿಗೆ ಕಲಿಸುತ್ತೇನೆ ಎಂದು ಹುಮ್ಮಸ್ಸಿನಿಂದ ಹೇಳಿಕೊಟ್ಟಿದ್ದಳು. ಅದೆನೋ ಒಂದು ದಿನ ಕಾಫಿ ಕುಡಿಯುತ್ತಿರುವಾಗ, ಗೆಳತಿ, ನಿನಗೆ ಒಂದು ವಿಷಯ ತಿಳಿಸಬೇಕಿದೆ. ತಾನು ಮನೆ ಬದಲಾಯಿಸುತ್ತಿದ್ದೇನೆ ಎಂದಳು. ನನಗೆ ಮಾತೇ ಹೊರಡಲಿಲ್ಲ. ನಗರದಿಂದ ಸ್ವಲ್ಪ ದೂರದÇÉೊಂದು ಬಾಡಿಗೆ ಮನೆ ಹುಡುಕಿದ್ದೇನೆ. ಇಲ್ಲಿ ತನ್ನಂತ ಪಿಂಚಣಿದಾರರು ಬದುಕುವುದು ಕಷ್ಟ, ಎಲ್ಲವೂ ದುಬಾರಿಯಾಗುತ್ತಿದೆ – ಆಕೆ ಹೇಳುತ್ತಲೇ ಇದ್ದಳು, ಕಿವುಡಳಂತಾಗಿ ಏನನ್ನೋ ನಾನು ಕಳೆದುಕ್ಕೊಳ್ಳುತ್ತಿದ್ದಂತೆ ಭಾಸವಾಯಿತು. ಜೀವನವನ್ನು ಬಂದಂತೆ ಸ್ವೀಕರಿಸಬೇಕು, ದೂಷಿಸಬಾರದು ಎಂದು ಆಕೆಯೇ ಹೇಳಿಕೊಟ್ಟಂತೆ ನನಗೂ ಹಳ್ಳಿಯ ಜೀವನ ಇಷ್ಟ ನಿನ್ನ ಆಯ್ಕೆ ಸಮಂಜಸ ಮಾರಿಯಾ ಎಂದೆ.
ಮರುದಿನ ಮಾರಿಯಾ ಮತ್ತೆ ಬಂದಳು. ನನ್ನ ಕಿರಿಯ ಮಗಳನ್ನು ಕರೆದು ಕೈಕಸೂತಿಯ ಸುಂದರ ಫೋಟೋ ಒಂದನ್ನು ಅಕೆಯ ಕೈಯಲ್ಲಿತ್ತು, “ಇದು ನನ್ನ ಚಿಕ್ಕಮ್ಮ ಒರೆಲಿಯಾ’ ಕೈಯಾರೆ ಮಾಡಿದ ಕಸೂತಿ, ಆಕೆ ಚಿಕ್ಕವಳಿ¨ªಾಗ ಆಟವಾಡುವಾಗ ಬಲಗೈ ತುಂಡಾಗಿತ್ತು. ವೈದ್ಯರು ಶುಶ್ರೂಷೆ ನಡೆಸಿ, ಬಲಗೈಗೆ ಸಂಪೂರ್ಣ ವಿಶ್ರಾಂತಿ ಬೇಕು, ಎಡಗೈಯನ್ನು ಕೆಲಸಕ್ಕೆ ಬಳಸಿಕೋ ಎಂದಾಗ ಆಕೆ ಮಾಡಿದ ಕಸೂತಿ ಇದು. ಚಿಲಿ ದೇಶ ಬಿಟ್ಟು ಬರುವಾಗ ಆಕೆ ನನಗೆ ಕೊಟ್ಟಿದ್ದಳು. ನಾನೀಗ ನಿನಗೆ ಕೊಡುತ್ತಿದ್ದೇನೆ. ನೀನು ಇದನ್ನು ಜೋಪಾನವಾಗಿಡು,’ ಎಂದು ಬೆನ್ನು ತಟ್ಟಿದಳು.
ಅಷ್ಟೇ ಕೆಲವು ದಿನಗಳಲ್ಲಿ ಮತ್ತೆ ಸಾಮಾನು ಕಟ್ಟಿ ಹೊರಟೇ ಬಿಟ್ಟಳು ಮಾರಿಯಾ.
ವಿದೇಶದಲ್ಲೂ ನಮ್ಮ ದೇಶದ, ನಮ್ಮೂರಿನ, ನಮ್ಮ ಭಾಷೆಯ ಗೆಳೆಯರನ್ನೇ ಹುಡುಕುವ ನಾವು, ನಮ್ಮ ನಡುವೆಯೆ ಇರುವ ಮಾರಿಯಾಳಂತಹ ಜಗತ್ತನ್ನೇ ಪ್ರೀತಿಸುವ ಅದೆಷ್ಟೋ ವ್ಯಕ್ತಿಗಳನ್ನು ಗುರುತಿಸಲಾರೆವೇನೊ !!!
*ಸಹನಾ ಹರೇಕೃಷ್ಣ, ಟೊರಂಟೋ