ಗಿನ್ನೆಸ್ ದಾಖಲೆಗಳ ನಗರಿ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ವಿಶ್ವವಾಣಿಜ್ಯ ನಗರ ದುಬೈ ಫೌಂಟೇನ್ ಜಗತ್ತಿನ ಅತೀ ಎತ್ತರದ ಸಂಗೀತ ಕಾರಂಜಿ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ದುಬೈಯ ಹೃದಯ ಭಾಗದಲ್ಲಿ ಪ್ರತಿಷ್ಠಿತ ದುಬೈ ಮಾಲ್‌ನ ಬಳಿ ವಿಶ್ವದ ಅತೀ ಎತ್ತರದ ವಾಸ್ತು ಶಿಲ್ಪ ಕಟ್ಟಡ ಬುರ್ಜ್ ಖಲಿಫಾ ಎದುರು ಬದಿಯ ತಳಭಾಗದಲ್ಲಿ 2009ರಲ್ಲಿ ಇದನ್ನು ನಿರ್ಮಿಸಲಾಗಿದೆ.
ಮಾನವ ನಿರ್ಮಿತ ಕೃತಕ ಸರೋವರದಲ್ಲಿ ಪ್ರತಿನಿತ್ಯ ರಾತ್ರಿ ಆರು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ಪ್ರತೀ ಮೂವತ್ತು ನಿಮಿಷದ ಅಂತರದಲ್ಲಿ ಬೆಂಕಿ, ನೀರು, ಸಂಗೀತ ಬೆಳಕಿನ ಆಕರ್ಷಕ ಚಮತ್ಕಾರಿಕಾ ಕಾರಂಜಿ ಪ್ರದರ್ಶನ ನಡೆಯುತ್ತದೆ.
ಎಂಟುನೂರು ಮಿಲಿಯನ್ ದಿರಾಂಸ್‌ನಲ್ಲಿ ನಿರ್ಮಾಣವಾಗಿರುವ ಮೂವತ್ತು ಎಕ್ರೆ ಸರೋವರದಲ್ಲಿ ಜನಮನ ಸೆಳೆಯುತ್ತಿರುವ ಸುಂದರ ಕಾರಂಜಿಯ ಜಲದ ಅಡಿಯಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನ ಹಾಗೂ ಪರಿಕರಗಳ ಬಗ್ಗೆ ನೋಡುವುದಾದರೆ ಫೌಂಟೇನ್‌ನಲ್ಲಿ ಶೂಟರ್‌ಗಳು, ಓರ್ಸ್‌ಮನ್‌ಗಳು ಮತ್ತು ವಾಟರ್ ರೋಬೋಟ್‌ಗಳು, ಅಧಿಕ ಒತ್ತಡದ ವಾಟರ್ ಜೆಟ್‌ಗಳನ್ನು ಅಳವಡಿಸಲಾಗಿದೆ.
ಶೂಟರ್‌ಗಳು ನೀರನ್ನು ಮೇಲಕ್ಕೆ ಶೂಟ್ ಮಾಡುವಾಗ ವಾಟರ್ ರೋಬೋಟ್‌ಗಳು ನೀರನ್ನು ನೃತ್ಯ ಮಾಡುವಂತೆ ಮಾಡುತ್ತದೆ. ಸೂಪರ್ ಶೂಟರ್‌ಗಳು ಗಾಳಿಯಲ್ಲಿ ಮೇಲ್ಮುಖವಾಗಿ ಎಪ್ಪತು ಮೀಟರ್ (ಇನ್ನೂರ ನಲ್ವತ್ತು ಅಡಿ) ಎತ್ತರಕ್ಕೆ ನೀರು ಚಿಮ್ಮುತ್ತದೆ. ಎಕ್ಸ್‌ಟ್ರೀಮ್ ಶೂಟರ್‌ಗಳು ಗಾಳಿಯಲ್ಲಿ ನೂರೈವತ್ತೆರಡು ಮೀಟರ್ (ಐನೂರು ಅಡಿಗಳು)ಎತ್ತರಕ್ಕೆ ನೀರನ್ನು ಚಿಮ್ಮಿಸಿ ಜತೆಯಲ್ಲಿ ಬೂಮ್ ಶಬ್ಧವನ್ನು ಸೃಷ್ಟಿಸುತ್ತದೆ. ಕಾರಂಜಿಯಲ್ಲಿ ಇಪ್ಪತ್ತೆರಡು ಸಾವಿರ ಗ್ಯಾಲನ್ (ಎಂಬತ್ತಮೂರು ಸಾವಿರ ಲೀಟರ್) ನೀರು ಮೇಲಕ್ಕೆ ಚಿಮ್ಮುವ ಸಾಮರ್ಥ್ಯವನ್ನು ಹೊಂದಿದೆ. ಆರು ಸಾವಿರದ ಆರುನೂರಕ್ಕಿಂತಲೂ ಹೆಚ್ಚು ಲೈಟ್‌ಗಳು ಮತ್ತು ಇಪ್ಪತೈದು ಕಲರ್ ಪ್ರೊಜೆಕ್ಟರ್‌ಗಳು ವರ್ಣರಂಜಿತ ಸೊಬಗನ್ನು ಸೃಷ್ಟಿಸುತ್ತದೆ.
ಸಂಗೀತ ಕಾರಂಜಿಯಲ್ಲಿ ಹೊರ ಹೊಮ್ಮುವ ಬೆಳಕಿನ ಕಿರಣಗಳ ಪ್ರಕಾಶವನ್ನು ಇಪ್ಪತು ಮೈಲುಗಳಷ್ಟು ದೂರದಿಂದ ವೀಕ್ಷಿಸ ಬಹುದಾಗಿದೆ. ಕಾರಂಜಿಯ ಪ್ರದರ್ಶನಕ್ಕೆ ಅರೆಬಿಕ್ ಶಾಸ್ತ್ರೀಯ ಸಂಗೀತ, ವಿಶ್ವ ಸಂಗೀತ ಶ್ರೇಣಿಯ ಪಾಪ್, ಒಪೆರಾ ಸಂಗೀತವನ್ನು ಅಳವಡಿಸಿಕೊಳ್ಳಲಾಗುತ್ತದೆ. ಭವ್ಯ ವಾಸ್ತುಶಿಲ್ಪ ಬುರ್ಜ್ ಖಲಿಫಾದ ಎದುರುಬದಿಯ ಕಾರಂಜಿಯ ಸುತ್ತಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವೀಕ್ಷಕರು ವೀಕ್ಷಿಸಲು ವಿಶಾಲವಾದ ಸ್ಥಳವಕಾಶವಿದೆ. ಪ್ರದರ್ಶನ ವೀಕ್ಷಿಸಲು ಉಚಿತ ಅವಕಾಶ ಕಲ್ಪಿಸಲಾಗಿದೆ.
ತುಂಬಾ ಹತ್ತಿರದಿಂದ ನೋಡಬಹುದಾದರೆ ಫ್ಲೋಟಿಂಗ್ ಫ್ಲ್ಯಾಟ್ ಫಾರಂ, ಫೌಂಟೇನ್ ಬೋರ್ಡ್ ವಾಕ್ ಸಹ ಅಳವಡಿಸಲಾಗಿದೆ ಹಾಗೂ ಲೇಕ್ ರೈಡ್‌ಗಾಗಿ ಆಬ್ರಾ, ಸಾಂಪ್ರದಾಯಿಕ ದೋಣಿಯಾನ ಸಹ ನಿಗದಿತ ದರ ಪಾವತಿಸಿ ಪ್ರಯಾಣಿಸುತ್ತಾ ಫೌಂಟೇನ್ ಶೋ ವೀಕ್ಷಿಸಬಹುದಾಗಿದೆ. ಹಲವಾರು ಅದ್ಭುತಗಳನ್ನು ಸೃಷ್ಟಿಸಿ ವಿಶ್ವದ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುವ ಅರಬ್ ಸಂಯುಕ್ತ ಸಂಸ್ಥಾನದ ಅರಬ್ಬರ ಸೌಂದರ್ಯ ಪ್ರಜ್ಞೆಗೆ ದುಬೈ ಫೌಂಟೇನ್ ಸಾಕ್ಷಿಯಾಗಿದೆ.
*ಬಿ. ಕೆ. ಗಣೇಶ್ ರೈ ದುಬೈ