ನಾನು ನಾನಾಗಿದ್ದೆ. ಎಷ್ಟೊಂದು ಬಣ್ಣ ನನಗೆ ಅದೆಷ್ಟು ಚಿತ್ತಾರ. ಆ ಬೆಡಗಿನ ಅಂಚಿನ ಜತೆ ನಲಿದಾಡುವ ಸೆರಗು, ಆ ಸೊಬಗೇ ಸೊಬಗು, ನನಗಾವ ಹಿಂಜರಿಕೆ ಇಲ್ಲ. ಮೆಲ್ಲಗೆ ಕೇಳಿ ನನ್ನನ್ನು, ನಾನು ಹತ್ತಿಯಲ್ಲಿ ಎದ್ದು ಬರುವೆ, ದಾರದಲ್ಲಿ ಹೊರಳುವೆ, ಕಾಮನ ಬಿಲ್ಲಿನ 7 ಬಣ್ಣಗಳ ಜತೆಗೆ ಇನ್ನೂ ಹತ್ತಾರು ಬಣ್ಣಗಳಲ್ಲಿ ಮೀಯುವೆ. ಅದೇನೋ ನಂಟು ನನಗೂ ಆ ರೇಷ್ಮೆ ಹುಳುವಿಗೂ. ಪಾಪ ನನಗೆ ಎಲ್ಲ ಉಣಬಡಿಸಿ ಅದು ಸಾಯುವುದು. ಅದರ ಸಾವಿಗೆ ನನ್ನ ಸುಂದರ ಎಳೆಗಳೆ ಶ್ರದ್ಧಾಂಜಲಿ. ಅದು ‘ನೀನು ಎಲ್ಲ ಕಡೆ ಸಾಗಿ ಹೋಗು, ನಿನ್ನ ಸೌಂದರ್ಯಕ್ಕೇ ಎಲ್ಲರ ಮನ ಬೀಗಲಿ’ ಎಂದು ನನ್ನನ್ನು ಹರಿಸಿದೆ ಕೂಡ. ದಾರವಾದ ನಾನು ಲಡಿಗಳಲ್ಲಿ ಬೆಚ್ಚಗೆ ಕುಳಿತಾಗ ಚಿಂತಿಸುವೆ, ಇಲ್ಲಿಂದ ನನ್ನ ಬಂಧನದ ಬಿಡುಗಡೆ ಯಾವಾಗ ಎಂದು?
ಅಂತೂ ಬಂದೇ ಬಿಟ್ಟಿತ್ತು ಆ ದಿನ. ನನ್ನೊಡೆಯ ನನ್ನ ಬಿಡುಗಡೆ ಮಾಡಿಸಿದ. ಲಡಿ ಇಂದ ನನ್ನ ಎಳೆದು ಮಗ್ಗದಲಿ ನುಗ್ಗಿಸಿದ. ನಾನು ಸ್ವಲ್ಪ ನೋವಾದರೂ ತಡೆದುಕೊಂಡೆ. ನನ್ನದೂ ತಾಯಿ ಹೃದಯವಲ್ಲವೇ? ಈ ಹೆರಿಗೆಯ ನೋವು ತಡೆಯಲೇ ಬೇಕು. ಮತ್ತೆ ಮತ್ತೆ ನನ್ನ ಎಳೆದು ಹಿಂಡಿದ. ಯಾರದೋ ಕಲ್ಪನೆಯಂತೇ ನನ್ನ ಹೊಟ್ಟೆಗೆಲ್ಲ ಚಿತ್ತಾರ ಬಳಿದ, ಹಾ! ಎಂದೇ ಒಮ್ಮೆ ನಾನು. ಮಗುವಿನ ಜನನ ನೆನೆದು ಸುಮ್ಮನಾದೆ.
ಆದರೂ ನನ್ನ ಒಡೆಯನಿಗೆ ನನ್ನ ಕೂಗು ಕೇಳಿಸಲೇ ಇಲ್ಲ. ಅವನ ಕಾಯ ಕಲ್ಪದಲ್ಲಿ ನನ್ನ ಹೆರಿಗೆಯ ಚಿಂತೆ ಇತ್ತು. ಮಗುವನ್ನು ಹೊರ ತೆಗೆಯುವ ತವಕ ಇತ್ತು. ಒಂದು ದಿನ, ಎರಡು ದಿನ, ಒಂದು ವಾರ ನೋವಿನಲ್ಲೇ ದಿನ ದೂಡಿದೆ. ಬಹುಶಃ ನನ್ನ ನೋವು ಸಹಕರಿಸಿತೇನೋ, ಮಗ್ಗದ ಹಾಸಿಗೆ ಇಂದ ಮೆಲ್ಲನೆದ್ದು ನನ್ನ ಒಡೆಯನ ಕೈ ಇಂದ ಜಾರಿ ಬಣ್ಣಗಳ ನೀರಿನಲ್ಲಿ ಮೈ ತೊಳೆದುಕೊಂಡೆ. ಸ್ವಲ್ಪ ಹಗುರವೆನಿಸಿತು, ಸಮಾಧಾನವೂ ಆಯಿತು. ಮತ್ತೆ ನನ್ನನ್ನು ಅಲ್ಲಿಂದ ಎತ್ತಿ ಬಿಸಿಲಿನಲ್ಲಿ ಬಿಟ್ಟ. ಇನ್ನೂ ಯಾವಾಗ ಈ ನೋವಿನಿಂದ ಪೂರ್ಣ ಮುಕ್ತಿ ಎನಿಸಿತು. ಸೂರ್ಯನು ನನಗೆ ಸಾಂತ್ವನ ಹೇಳಿದ, ಗಾಳಿಯು ಹಿತವಾಗಿ ನನ್ನ ಮೈ ಸವರಿತು, ಮಳೆಯು ನಿನಗೆ ಹೆರಿಗೆಯಾಗಲೀ ಅನಂತರ ಬರುವೆ ಎಂದು ಸಹಕರಿಸಿತು.
ಸ್ವಲ್ಪ ಸಮಯದ ಬಳಿಕ ನನ್ನ ಒಡೆಯ ಬಂದ. ಬಂದವನೇ ನನ್ನ ಎತ್ತಿ ಬಲವಾಗಿ ಝಾಡಿಸಿದ…ಹಾ! ಎಂದು ಕಿರುಚಿದ ನಾನು ತಣಗಾದೆ, ನನ್ನ ಮಗುವಿನ ಜನನವಾಗಿತ್ತು -ಅಬ್ಟಾ! ಎಷ್ಟು ಮುದ್ದಾಗಿದೆ. ನನ್ನ ಒಡೆಯನ ಮುಖದಲ್ಲಿ ಮಂದಹಾಸ ಮೂಡಿತ್ತು. ಆ ಕ್ಷಣದಲ್ಲಿ ಎಲ್ಲವೂ ಸುಂದರವೆನಿಸಿತು. ಮಗುವು ನಿನ್ನೊಡನೆ ಬೆರೆತಿದೆ ಇನ್ನೂ ಮುಂದೆ ನೀವು ಇಬ್ಬರೂ ಒಂದೇ, ನಾನು ಇಡುವ ಎಡೆಯಲ್ಲಿ ಒಟ್ಟಾಗಿ ಇರಿ, ಮುಂದೆ ಒಂದು ದಿನ ನಿಮಗೆ ಹೊಸ ಪರಿಚಯವಾಗುತ್ತೆ ಎನ್ನುತ್ತಾ ನನ್ನನ್ನು ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟು ಹರಸಿದ. ನನಗೂ ಸಾಕಾಗಿತ್ತು, ನಾನು ಮಗು ಇಬ್ಬರೂ ಒಂದೇ ದೇಹ ಎರಡು ಮನಸ್ಸು ಎಂಬಂತೆ ಬೆರೆತು ಹೋದೆವು.
ಆಯಾಸದಿಂದ ಮಲಗಿದ್ದೆ. ಯಾರೋ ಬಾಗಿಲು ತಟ್ಟಿದ ಶಬ್ದ. ಒಳಗೆ ಬಂದವರೊಡನೆ ನನ್ನ ಒಡೆಯ ಅದೇನೋ ಮಾತಾಡಿದ, ಕೈ ತುಂಬಾ ಹಣ ತೆಗೆದಕೊಂಡು ನನ್ನನ್ನು ಅವನ ಕೈಗಿಟ್ಟ.ನೋವು ಸಂಕಟದಿಂದ ನನ್ನ ಒಡೆಯನನ್ನು ನೋಡಿದೆ. ಆಶ್ಚರ್ಯವಾಯ್ತ! ಒಡೆಯನ ಕಣ್ಣಲ್ಲಿ ನೀರಿಲ್ಲ, ಮುಖದಲ್ಲಿ ಬೇಸರವಿಲ್ಲ ಜತೆಗೆ ಮುಖದ ತುಂಬಾ ನಗೆ. ಹೋಗಲಿ ನನಗೂ ಎಂಥಾ ಸಮಯದಲ್ಲೂ ನಗುವುದನ್ನು ಕಲಿಸು ಎಂದು ಮನದಲ್ಲೇ ಆ ದೇವರನ್ನು ಬೇಡಿಕೊಂಡೆ. ಹೊಸ ಒಡೆಯನ ಜತೆ ಏನೂ ಗಲಾಟೆ ಮಾಡದೆ ಕುಳಿತೆ. ಅವನೂ ನನ್ನನ್ನು ಮೈ ತಡವಿ ಪ್ರೀತಿಸಿದ. ಬಹಳ ದೂರ ಕರೆದಕೊಂಡು ಹೋದ. ಹೊಸ ಊರು, ಹೊಸ ಜಾಗ ಏನು ಮಾಡಲಿ? ಆದರೆ ನನಗೊಂದು ಸುಂದರ ಸ್ಥಳ ಕೊಟ್ಟ ಇಲ್ಲೇ ಇರು, ಇದು ನಿನ್ನ ನೆಲೆ ಅಂದ. ಅಲ್ಲೇ ಖುಷಿ ಇಂದ ಕುಳಿತೆ. ಆರಾಮವಾಗಿದೆ.
ಒಂದೆರಡು ದಿನ ಕಳೆಯುವಷ್ಟರಲ್ಲಿ ಯಾರದೋ ಹೆಣ್ಣಿನ ಮಧುರ ಧ್ವನಿ ಕೇಳಿಸಿತು. ಒಳ್ಳೆ ಸಂಗೀತ ಕೇಳಿದ ಹಾಗಾಯ್ತು. ಒಳಗೆ ಬಂದ ಹೆಣ್ಣು ನನ್ನ ಒಡೆಯನ ಬಳಿ ಅದೇನೋ ಚರ್ಚಿಸಿದಳು. ನನ್ನ ಒಡೆಯ ನನ್ನನ್ನು ಹೊರಗೆ ಬಾ ಎಂದು ಕರೆದ. ಬಂದೆ ನನ್ನ ನೋಡಿ ಆ ಹೆಣ್ಣು ನನ್ನನ್ನು ಎತ್ತಿಕೊಂಡು ಮೈ ಪೂರಾ ಸವರಿದಳು. ನನಗೆ ಖುಷಿಯೋ ಖುಷಿ. ನನ್ನ ಒಡೆಯ ನನ್ನನ್ನು ಮೆಲ್ಲಗೆ ಒಂದು ಕೈ ಚೀಲದಲ್ಲಿ ಹಾಕಿ ಅವಳ ಬಳಿ ಚೆನ್ನಾಗಿ ಇರು ಎನ್ನುತ್ತಾ ಆ ಹೆಣ್ಣಿನ ಕೈಗೆ ನನ್ನನು ಒಪ್ಪಿಸಿದ. ಇಲ್ಲೂ ನನ್ನ ಒಡೆಯನ ಕಣ್ಣಲ್ಲಿ ನೀರಿಲ್ಲ ಮುಖದಲ್ಲಿ ಬೇಸರವಿಲ್ಲ. ಮುಖದ ತುಂಬಾ ನಗೆ! ನನಗೂ ಸಮಾಧಾನವಾಯಿತು.
ಹೊಸ ಒಡತಿಯೊಡನೆ ಹೊರಟೆ. ಅದೇನೋ ಆ ಹೆಣ್ಣಿನ ಕೈಲಿ ಏನು ಪವಾಡವೊ! ನಾನು ಅವಳೊಟ್ಟಿಗೆ ಖುಷಿ ಪಟ್ಟೆ. ಸ್ವಲ್ಪ ಸಮಯದ ಬಳಿಕ ನಾನು ಮತ್ತೂಂದು ಮನೆ ಸೇರಿದೆ. ನನ್ನ ಒಡತಿ ನನ್ನನ್ನು ಒಂದು ಸುಂದರ ಕಪಾಟಿನಲ್ಲಿ ಇಟ್ಟು ಖುಷಿಯಾಗಿ ಇರು ಎಂದಳು. ಇಂಥಾ ಸುಂದರ ಮನೆ ನನಗಾಗಿಯೇ ಎಂದು ಹೆಮ್ಮೆ ಎನಿಸಿತು. ಬಹಳ ಆಯಾಸವಾಗಿದ್ದ ಮೈಗೆ ನಿದ್ದೆಯ ಆವಶ್ಯಕತೆ ಇತ್ತು. ಮಲಗಿದೆ ನಿದ್ದೆ ಬಂದ್ದಿದ್ದೇ ತಿಳಿಯಲಿಲ್ಲ.
ತುಂಬಾ ನಿದ್ದೆ ಬಂದಿದ್ದ ನನಗೆ ಬೆಚ್ಚಿ ಎಚ್ಚರವಾಯಿತು. ಎಷ್ಟು ದಿನ ಮಲಗಿದ್ದೆನೋ ತಿಳಿಯದು. ಕಣ್ಣು ಬಿಟ್ಟು ನೋಡುತ್ತೇನೆ ನನ್ನ ಒಡತಿ ಪ್ರೀತಿ ಇಂದ ನನ್ನನ್ನು ಅಪ್ಪಿದ್ದಳು. ಅವಳ ಕಣ್ಣಲ್ಲಿ ಹರ್ಷವಿತ್ತು. ನಾನು ಪೂರ್ತಿ ಎಚ್ಚರಾದೆ. ನನ್ನ ಮನ ಅರಳಿತು. ನನ್ನನ್ನು ತಿದ್ದಿ ತೀಡಿ ನನಗೆ ಹೊಸ ರೂಪ ಕೊಡುತ್ತಾ ತನ್ನ ಮೈ ತುಂಬಾ ನನ್ನನ್ನು ಆಲಂಗಿಸಿಕೊಂಡಳು.
ಆಹಾ! ನನ್ನ ಬಣ್ಣದ ಹೊಳಪು ಇಮ್ಮಡಿಸಿತು. ಕಾಲ ಬಳಿ ಬಂದು ನಿಂತ ನನ್ನ ಅಂಚು ಬೀಗುತ್ತಿತ್ತು. ನನ್ನ ಮೈತುಂಬ ಇದ್ದ ಚಿತ್ತಾರವೆಲ್ಲ ಎದ್ದು ಕುಣಿಯುತ್ತಿತ್ತು. ನನ್ನ ಒಡತಿಯ ಮೈ ತುಂಬಾ ಆವರಿಸಿಕೊಂಡೆ. ನಾನು ನನ್ನ ಸೆರಗಿನ ಸೊಬಗನ್ನು ಅಗಲಿಸಿದೆ. ಕಾಲಲ್ಲಿ ಚಪ್ಪಲಿ ಮೆಟ್ಟಿನನ್ನೊಡನೆ ಹೊರಗೆ ನಡೆದಳು. ಗಾಳಿಯು ನನಗೆ ಸಹಕರಿಸಿ ನನ್ನ ಸೆರಗು ಹಾರಾಟತೊಡಗಿತ್ತು. . ಅದರ ಅಂದಕ್ಕೆ ಎಲ್ಲರೂ ಒಮ್ಮೆ ತಿರುಗಿ ನೋಡುತ್ತಿದ್ದರು. ಅಲ್ಲಿಂದ ತುಂಬಾ ಗದ್ದಲವಿದ್ದ ಸ್ಥಳಕ್ಕೆ ಹೊರಟಳು.ಒಳ ಹೋಗುತ್ತಿರುವಂತೆ ಹೆಂಗಳೆಯರ ಗುಂಪು ನನ್ನ ಒಡತಿಯನ್ನು ಸುತ್ತುವರಿಯುತ್ತ ಆಶ್ಚರ್ಯದಿಂದ ನೋಡಿತು.
ಅವರಾಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಗುಂಯ್ ಗುಡುವ ಹಾಗಿದೆ. ” ಹೇ ಜಲಜ ಎಷ್ಟು ಚಂದ ಇದೆ ನಿನ್ನ ಸೀರೆ.’ ಮತ್ತೊಬ್ಬಳು “ಎಲ್ಲಿ ತೆಗೆದುಕೊಂಡೆ. ‘ ಇನ್ನೊಬ್ಬಳು “ಕಲರ್ ನೋಡೇ ಎಷ್ಟು ಸುಂದರವಾಗಿದೆ’, “ಮಗದೊಬ್ಬಳು ಚಿತ್ತಾರ ನೋಡ್ರಿ ಎಷ್ಟು ಸೊಗಸು’, ಇನ್ನೊಬ್ಬಳು “ಸೆರಗಿನ ಬ್ಯೂಟಿನೆ ಬ್ಯೂಟಿ. ಇರಲಿ ಯಾವ ಸಿಲ್ಕೇ ? ಕಾಟನ್ ಮಿಕ್ಸ್ ಇದೆಯಾ?’ ಎಲ್ಲರೂ ಒಟ್ಟಾಗಿ ಜಲಜ ನಮ್ಮನ್ನು ಕರೆದುಕೊಂಡು ಹೋಗೆ ಅಲ್ಲಿಗೆ ನಾವು ತೆಗೆದು ಕೊಳ್ಳುತ್ತೇವೆ. ಅಂಚಂತು ಏನು ಕಾಂಬಿನೇಷನ್! ಸ್ವಲ್ಪ ಕೂಡ ಸುಕ್ಕಾಗಿಲ್ಲ ಕಣೆ. ನಿನ್ನಿಂದ ಸೀರೆಗೆ ಸೌಂದರ್ಯವೋ, ಇಲ್ಲ ಸೀರೆಯಿಂದ ನಿನ್ನ ಸೌಂದರ್ಯವೋ ತಿಳಿಯದು ‘ ಎಂದೂ ಹೊಗಳಿದ್ದೇ ಹೊಗಳಿದ್ದು. “ಆಯ್ತು ಆಯ್ತು ಕರೆದುಕೊಂಡು ಹೋಗುತ್ತೇನೆ, ಆದರೆ ಈ ಥರ ಸೀರೆ ಅಲ್ಲಿ ಇನ್ನೊಂದು ಇಲ್ಲದಿದ್ದರೆ ನನ್ನ ಬಯ್ಯಬೇಡಿ’ ಎಂದಿದ್ದಕ್ಕೆ ” ಇಲ್ಲದಿದ್ದರೆ ನೀನು ಒಂದು ಸಲ ಈ ಸೀರೆ ಉಟ್ಟು ಆಗಿದೆಯಲ್ಲ, ಇದನ್ನೇ ನನಗೆ ಕೊಟ್ಟು ಬಿಡು’ ಎಂದರು. ಅಯ್ಯೋ! ಎಂದುಕೊಂಡೆ ನಾನು.
ಅಷ್ಟರಲ್ಲಿ ನನ್ನ ಒಡತಿ ಇಲ್ಲಾಮ್ಮ ನಾನು ತುಂಬಾ ಇಷ್ಟ ಪಟ್ಟು ಪ್ರೀತಿ ಇಂದ ತೆಗೆದು ಕೊಂಡಿದಿನಿ, ಯಾರಿಗೂ ಕೊಡೋದಿಲ್ಲ ಇದು ನನ್ನ ಅಚ್ಚು ಮೆಚ್ಚು ಎಂದಾಗ. ಅಬ್ಟಾ ಎಲ್ಲಿ ಕಳಿಸಿ ಬಿಡುವಳ್ಳೋ ಎಂದು ಹೆದರಿದ್ದ ನನಗೆ ಸಮಾಧಾನವಾಯಿತು. ಉಸಿರು ಬಂದಂತೆ ಆಗಿ, ಬಿಗಿ ಹಿಡಿದು ಇದ್ದ ಉಸಿರನ್ನು ಜೋರಾಗಿ ಬಿಡುತ್ತಾ ನನ್ನ ಸೆರಗನ್ನು ವೈಯ್ನಾರದಿಂದ ಬೀಸಿದೆ. ಅಂಚು ಚಿಮ್ಮಿಸಿ ಖುಷಿ ಪಟ್ಟೆ. ಆಗಲೇ ಮತ್ತೊಬ್ಬಳು ನೋಡ್ರಿ, ತನಗೊಬ್ಬಳಿಗೇ ಇಂಥ ಸೀರೆ ಎಂದು ಬೀಗುತ್ತ ಇದ್ದಾಳೆ, ವೈಯ್ನಾರದಿಂದ ನಲಿಯುತ್ತ ಇದ್ದಾಳೆ ಎಂದು ಹೊಟ್ಟೆ ಉರಿ ಪಟ್ಟು ಕೊಂಡಳು. ಏನಾದರಾಗಲಿ ನಾನು ನನ್ನ ಒಡತಿಯ ಜತೆಗೆ ಇರುತ್ತೇನೆ, ಆಗಾಗ ಬಂದ ಇವರೆಲ್ಲರ ಹೊಟ್ಟೆ ಉರಿಸುತ್ತೇನೆ ಅಂದು ಕೊಂಡೆ. ನನ್ನನ್ನು ಹೀಗೆ ಹೊರ ಕರೆದುಕೊಂಡು ಬಂದು ಎಲ್ಲರೂ ಮೆಚ್ಚುವಂತೆ ಮಾಡಿದ ನನ್ನ ಒಡತಿಗೆ ಸೆರಗಿನಿಂದ ಮುತ್ತಿಟ್ಟೆ. ನನ್ನ ಜೀವನ ಸಾರ್ಥಕವೆನಿಸಿತು. ಮನೆಗೆ ಬಂದ ನಾನು ನನ್ನ ಒಡತಿಯ ಮೈ ಇಂದ ಜಾರಿ ಮತ್ತೆ ಕಪಾಟಿನಲ್ಲಿ ಕುಳಿತೆ. ಆಯಾಸದಿಂದ ಮೆರೆದಿದ್ದ ನನಗೆ ಒಳ್ಳೆಯ ನಿದ್ದೆ ಬಂತು. ಕನಸಿನ ನನ್ನ ವೈಭೋಗದ ಜೀವನ ಮತ್ತೆ ಕಂಡು ಪುಳಕಿತಗೊಂಡೆ. ಎಲ್ಲರೂ ಶಹಭಾಶ್ ಕೊಟ್ಟಿದ್ದು ನನಗೆರಡು ಕೊಂಬು ಬಂದಂತೆ ಆಗಿತ್ತು.
ಈಗ ಹೇಳಿ ನನ್ನ ಕಥೆ ನಿಮಗೆ ಇಷ್ಟ ವಾಯಿತಲ್ಲವೆ? ಒಮ್ಮೆ ನನ್ನ ಒಡತಿಯ ಮನೆಗೆ ಬನ್ನಿ ನಿಮಗೆಲ್ಲ ಆದರದ ಸ್ವಾಗತ. ಅದೇನೋ ಹೆಣ್ಣು ಮಕ್ಕಳು ಅಂದರೆ ನನಗೆ ತುಂಬಾ ಇಷ್ಟ . ಆದರೂ ಕೆಲವರನ್ನು ಆರಿಸಿಕೊಳ್ಳುತ್ತೇನೆ. ಅವರೊಡನೆ ಬೆರೆತು ನಡೆಸುವ ಜೀವನ ನನಗೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಮತ್ತೆ ಸಿಗೋಣ.
*ಶ್ರೀರಂಗಮಣಿ. ಬಿ.ಎಸ್., ಕೆನಡಾ