Advertisement
ವಿದ್ಯಾನಗರವಿದದ್ದು ಬೆಂಗಳೂರಿನಿಂದ ಸುಮಾರು 50 ಮೈಲಿ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ. ಈಗಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ. ಪೂರ್ವಕ್ಕೆ ಒಂದು ಮೈಲಿ ಹೋದರೆ ಒಂದು ರೀತಿ ಏಕಾಂಗಿಯಂತೆ ಕಾಣುತಿದ್ದ ಪುಟ್ಟ ಊರು. ಸುತ್ತಲೂ ತಂತಿಬೇಲಿಯ ಸುಭದ್ರ ಕಾವಲು ಮರಗಿಡಗಳ ಹಸುರಿನ ಮಧ್ಯೆ ತಲೆ ಎತ್ತಿನಿಂತ ಕಟ್ಟಡಗಳು.
Related Articles
Advertisement
ನನ್ನ ತಂದೆ ಉಪಾಧ್ಯಾರಾಗಿದ್ದರಿಂದ 1960ನೇ ಇಸವಿಯಲ್ಲಿ ಅವರಿಗೆ ವಿದ್ಯಾನಗರಕ್ಕೆ ವರ್ಗವಾಗಿ ನಾವೆಲ್ಲ ಅಲ್ಲಿಗೆ ಹೋದೆವು. ಅಲ್ಲಿನ ಪರಿಸರ ತುಂಬಾ ಭಿನ್ನವಾಗಿತ್ತು. ವಾಹನಗಳ ಓಡಾಟವಿರಲಿಲ್ಲ. ಆ ಸಂಸ್ಥೆಗೆ ಸಂಬಂಧ ಪಟ್ಟವರಲ್ಲದೆ ಅನ್ಯರಾರೂ ಅಲ್ಲಿಗೆ ಬರುತ್ತಿರಲಿಲ್ಲ, ಹಾಗಾಗಿ ವಾಯುಮಾಲಿನ್ಯ, ಶಬ್ದ ಮಾಲಿನ್ಯವಿರಲಿಲ್ಲ. ಸುತ್ತಲೂ ಬೇಕಾದಷ್ಟು ಹಳ್ಳಿಗಳಿದ್ದರು ಯಾವುದೂ ನಮಗೆ ಕಾಣಿಸುತ್ತಿರಲಿಲ್ಲ. ನಮ್ಮ ಬೇಲಿಯಾಚೆ ಸುತ್ತಲೂ ಹೊಲ, ತೋಟಗಳಿದ್ದವು. ಹತ್ತಿರದಲ್ಲಿ ಒಂದು ಬೆಟ್ಟವಿತ್ತು. ಧಾರಾಳವಾಗಿ ಗಾಳಿ, ಬೆಳಕು ಸಿಗುತಿತ್ತು. ಎಲ್ಲರ ಮನೆಯ ಮುಂದೆ ಹೂವಿನ, ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದರು. ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದ ಊರು ಎಂದು ಹೇಳಬಹುದು.
ಶಿಕ್ಷಕ, ಶಿಕ್ಷಕಿಯರು ಒಂದು ವರ್ಷದ ತರಬೇತಿಗಾಗಿ ಅಲ್ಲಿ ಬರುತ್ತಿದ್ದರು. ಅವರಾರಿಗೂ ಸಂಸಾರವನ್ನು ಕರೆತರುವ ಅನುಮತಿಯಿರಲಿಲ್ಲ. ನಮ್ಮ ಶಾಲೆ ತುಂಬಾ ಆಕರ್ಷಣೀಯವಾಗಿತ್ತು. ಅಲ್ಲಿ ಚಿಕ್ಕ ಮಕ್ಕಳಿಗಾಗಿ ನರ್ಸರಿ ಶಾಲೆಯೂ ಇತ್ತು. ಅಲ್ಲಿಯ ಚಟುವಟಿಕೆಗಳು ಶುಭ್ರತೆಗೆ ಆದ್ಯತೆ. ಶಿಸ್ತು, ಶಾಂತಿ ಸಮಯ ಪಾಲನೆ ಇಂದಿಗೂ ಮರೆಯುವಂತಿಲ್ಲ.ಸುತ್ತಮುತ್ತಲು ಸಾಕಷ್ಟು ಗ್ರಾಮಗಳಿದ್ದರು ಎಲ್ಲಿಯೂ ಶಾಲೆಗಳಿರಲಿಲ್ಲ. ಅಲ್ಲಿಯ ಮಕ್ಕಳೆಲ್ಲ ನಮ್ಮ ಶಾಲೆಗೇ ಬರುತ್ತಿದ್ದರು. ಆದರೂ ಒಂದೊಂದು ತರಗತಿಯಲ್ಲಿ ಕೇವಲ ಇಪ್ಪತ್ತೈದರಿಂದ ಮೂವತ್ತು ಮಕ್ಕಳಿರುತ್ತಿದ್ದರು. ವಿಶಾಲವಾದ ತರಗತಿಯ ಕೊಠಡಿಗಳು. ಯಾರಿಗೂ ಕೂಡಲು ಯಾವ ಆಸನಗಳು ಇರಲಿಲ್ಲ. ಎಲ್ಲ ವಿದ್ಯಾರ್ಥಿಗಳು ಮನೆಯಿಂದ ಪುಟ್ಟ ಪುಟ್ಟ ಚಾಪೆಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಪ್ರಾರಂಭದಲ್ಲಿ ಸ್ಲೇಟು ಬಳಪದಲ್ಲಿ ಅಭ್ಯಾಸ ಮಾಡುತ್ತಿದ್ದೆವು.
ದಿನಚರಿ ಪ್ರಾರಂಭವಾಗುತ್ತಿದ್ದುದ್ದೇ ದೇವರ ಪ್ರಾರ್ಥನೆಯಿಂದ. ವಿಶಾಲವಾದ ಪ್ರಾರ್ಥನಾ ಮಂದಿರವಿತ್ತು, ಎತ್ತರವಾದ ವೇದಿಕೆಯ ಮೇಲೆ ಎಲ್ಲ ತರಗತಿಯ ಉಪಾಧ್ಯಾಯರು, ಮುಖ್ಯೋಪಾಧ್ಯರು ಕುಳಿತುಕೊಳ್ಳುತ್ತಿದ್ದರು. ಮಕ್ಕಳೆಲ್ಲ ಅವರವರ ತರಗತಿಯ ಸಾಲಿನಲ್ಲಿ ಅವರವರ ಚಾಪೆ ಹಾಸಿಕೊಂಡು ಒಬ್ಬರ ಹಿಂದೆ ಒಬ್ಬರಂತೆ ಸಾಲಾಗಿ ಕುಳಿತುಕೊಳ್ಳುತ್ತಿದ್ದೆವು. ಎಲ್ಲರಿಗೂ ಆದೇಶಿಸಲು ಆಯ್ಕೆಯಾದ ಪ್ರಾರ್ಥನಾ ಮಂತ್ರಿ ಮತ್ತು ಉಪಮಂತ್ರಿ ವಿದ್ಯಾರ್ಥಿಗಳ ಎದುರಲ್ಲಿ ಮಧ್ಯದಲ್ಲಿ ಕುಳಿತುಕೊಳ್ಳುತ್ತಿದ್ದರು. ಗಣೇಶ, ಶಾರದಾ ಸ್ತುತಿಯೊಂದಿಗೆ ಪ್ರಾರಂಭಿಸಿ ಕೊನೆಯಲ್ಲಿ ಎರಡು ನಿಮಿಷ ಕಾಲ ಮೌನ ಪ್ರಾರ್ಥನೆ ಮಾಡಬೇಕಿತ್ತು. ಇದ್ದನೆಲ್ಲ ಪ್ರಾರ್ಥನಾ ಮಂತ್ರಿ ಆದೇಶಿಸಿದರೆ, ಅಂದಿನ ವಾರ್ತೆಗಳ ಮುಖ್ಯಾಂಶಗಳು, ಸುಭಾಷಿತ ಎಲ್ಲವನ್ನು ಆ ದಿನ ಚುನಾಯಿಸಲ್ಪಟ್ಟ ವಿದ್ಯಾರ್ಥಿ ಓದಬೇಕಾಗಿತ್ತು. ಪ್ರತಿಯೊಬ್ಬರೂ ಸರದಿಯ ಪ್ರಕಾರ ತಯಾರಾಗಬೇಕಿತ್ತು. ಒಂದೊಂದೇ ತರಗತಿಯವರು ಹೊರಟಾಗ ಇನ್ನೊಂದು ತರಗತಿಯ ಮಕ್ಕಳು ನಿಲ್ಲಬೇಕಾಗಿತ್ತು. ಸದ್ದುಗದ್ದಲ ಮಾಡದೆ ಶಿಸ್ತು ಪಾಲಿಸುತ್ತಿದ್ದೆವು.
ಶಾಲಾ ಮಕ್ಕಳ ಪ್ರಯೋಗಕ್ಕಾಗಿ ಒಂದು ತೋಟವಿತ್ತು. ಒಂದೊಂದು ತರಗತಿಗೆ ಜಾಗಗಳನ್ನು ಗೊತ್ತು ಪಡಿಸಿದಿದ್ದರು. ಸಹಪಾಠಿಗಳಾದ ರೈತರ ಮಕ್ಕಳು ನಮಗೆ ಮಾರ್ಗದರ್ಶನ ಮಾಡಿ ವಿವಿಧ ಬಗೆಯ ಫಸಲನ್ನು ಬೆಳೆಯುತ್ತಿದ್ದೆವು. ಕಬ್ಬಿಣದ ಕೆಲಸ ಮಾಡುವ ಕಮ್ಮಾರರ ಬಳಿ ವ್ಯವಸಾಯಕ್ಕೆ ಬಳಸುವ ಸಾಧನಗಳನ್ನು ತೋರಿಸಿ ತಯಾರಿಸುವ ಬಗೆಯನ್ನು ವಿವರಿಸುತ್ತಿದ್ದರು. ಮಣ್ಣಿನಲ್ಲಿ ಗಣೇಶ, ಹಣತೆಗಳು, ಮಡಕೆಗಳು, ಹೂವಿನ ಕುಂಡಗಳನ್ನು ಮಾಡುವುದನ್ನು ಕಲಿಸುತ್ತಿದ್ದರು. ಗಣೇಶನ ಹಬ್ಬದಲ್ಲಿ ಮಕ್ಕಳೇ ಮಾಡಿದ ಮಣ್ಣಿನ ಗಣೇಶನನ್ನು ಮಂಟಪ ನಿರ್ಮಿಸಿ, ಅಲಂಕರಿಸಿ, ರಂಗೋಲಿ ಹಾಕಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪೂಜಿಸಿ ಸಂಭ್ರಮಿಸುತ್ತಿದ್ದೆವು. ಕೈಮಗ್ಗದಲ್ಲಿ ಬಟ್ಟೆ ನೇಯಲು ಹತ್ತಿಯನ್ನು ಹೇಗೆ ಸಂಸ್ಕರಿಸಬೇಕು ಎಂಬುದನ್ನು ಹಂತ ಹಂತವಾಗಿ ಹೇಳಿ ಕೊಡುತ್ತಿದ್ದರು. ಹತ್ತಿಯನ್ನು ಶುಚಿಗೊಳಿಸಿ ಹಂಜಿಯ ಮಣೆಯಲ್ಲಿ ಹಂಜಿ ಮಾಡಿ ತಕ್ಕಲಿ ಮತ್ತು ಚರಕಗಳಲ್ಲಿ ಹೇಗೆ ದಾರ ತೆಗೆಯ ಬೇಕೆಂಬುದು ಎಲ್ಲ ಮಕ್ಕಳಿಗೂ ತಿಳಿದಿತ್ತು. ನಮ್ಮ ಮನೆಯಲ್ಲಿ ಚರಕ, ತಕಲಿ ಎರಡೂ ಇತ್ತು. ಗಾಂಧಿಜಯಂತಿಯ ಸಂದರ್ಭದಲ್ಲಿ ದಾರ ತೆಗೆಯುವ ಸ್ಪರ್ಧೆಯನ್ನು ಏರ್ಪಡಿಸಿಸುತ್ತಿದ್ದರು. ಬಹುಮಾನ ಪಡೆಯಲು ಎಲ್ಲರೂ ಸಿದ್ಧವಾಗಿರುತ್ತಿದ್ದೆವು. ಮತ್ತೂಂದು ವಿಶೇಷವೆಂದರೆ ಅಲ್ಲಿಗೆ ಆಗಮಿಸುತ್ತಿದ್ದ ಹಿರಿಯ ವ್ಯಕ್ತಿಗಳಿಗೆ ಹೂವಿನ ಹಾರದ ಬದಲು ಹತ್ತಿಯ ಲಡಿಗಳನ್ನು ಹಾಕುತ್ತಿದ್ದರು. ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲ ತರಗತಿಯ ಮಕ್ಕಳು ಧ್ವಜಸ್ತಂಭದ ಸುತ್ತಲು ವೃತ್ತಾಕಾರವಾಗಿ ನಿಂತು ದೇಶ ಭಕ್ತಿಗೀತೆಗಳನ್ನು ಹಾರಾಡುತ್ತಿದ್ದ ಧ್ವಜಕ್ಕೆ ವಂದಿಸುತ್ತಾ ಒಕ್ಕೊರಲಿನಿಂದ ಹಾಡುತ್ತಿದ್ದ ದೃಶ್ಯ ಮರೆಯುವಂತಿಲ್ಲ. ಗಣರಾಜ್ಯೋತ್ಸವಕ್ಕೆ ಅಂತರ ಶಾಲಾ ಸ್ಪರ್ಧೆಗಳಿಗೆ ಸುತ್ತಲಿನ ಗ್ರಾಮೀಣ ಶಾಲೆಯ ಮಕ್ಕಳು ನಮ್ಮ ಶಾಲೆಗೇ ಬರುತ್ತಿದ್ದರು. ಕ್ರೀಡೆಗಳು, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಮೂರನೇಯ ದಿನ ಬಹುಮಾನ ವಿತರಣೆ ಮತ್ತು ಅನೇಕ ಮುಖ್ಯ ಅತಿಥಿಗಳು ಹೊಸ ವಿಚಾರದ ಬಗ್ಗೆ ಭಾಷಣಗಳನ್ನು ಮಾಡುತ್ತಿದ್ದರು. ಆಗೆಲ್ಲ ಮೂರುದಿನ ಶಾಲೆಯಲ್ಲಿ ಹಬ್ಬದ ವಾತಾವರಣವಿರುತ್ತಿತ್ತು. ಏಳನೆಯ ತರಗತಿ ಮುಗಿಸಿದಾಗ ಮಡಿಲು ತುಂಬಾ ಬಹುಮಾನಗಳನ್ನು ತುಂಬಿಸಿಕೊಂಡು ತರಗತಿಗೆ ಮೊದಲನೆಯವಳಾಗಿ ಉತ್ತೀರ್ಣಳಾಗಿ ಹೊರಬಂದಿದ್ದೆ, ಎಷ್ಟೇ ವರುಷಗಳು ಕಳೆದಿದ್ದರೂ , ಎಲ್ಲೇ ಇದ್ದರು, ಬಾಲ್ಯದ ಮಧುರ ನೆನಪುಗಳು ಮಾಸಿಲ್ಲ.
*ಸಾವಿತ್ರಿ ರಾವ್, ಕ್ಲೀವ್‌ಲ್ಯಾಂಡ್