Advertisement

Desi Swara: ಪೂರ್ಣ ಎಂದರೆ ಅವು ಬಿಡಿ ಬಿಡಿ ವಿಷಯಗಳ ಸಂತೆ

02:58 PM Aug 03, 2024 | Team Udayavani |

ಒಂದು ಕಾರು ಎಂದುಕೊಳ್ಳಿ. ಅದು ಪೂರ್ಣವೇ ಆದರೂ ಪೂರ್ಣವಲ್ಲ ಬದಲಿಗೆ ಬಿಡಿ ಬಿಡಿಗಳ ಸಮೂಹ. ನಮ್ಮ ದೇಹವೂ ಪೂರ್ಣ ಎನಿಸಿದರೂ ಪೂರ್ಣವಲ್ಲ ಬದಲಿಗೆ ಹಲವಾರು ಅಂಗಗಳ ಸಮೂಹ. ಹೀಗೆಯೇ ಒಂದೊಂದೂ ವಿಷಯಗಳನ್ನು ಆಲೋಚಿಸಿದಾಗಲೂ ಪೂರ್ಣಗಳೆಲ್ಲ ಬಿಡಿಗಳ ಸಮೂಹ ಎಂದೇ ಅನ್ನಿಸುವುದು ಸಹಜ. ಒಂದು ಚಿಕ್ಕ ಉದಾಹರಣೆಯನ್ನೇ ತೆಗೆದುಕೊಂಡರೆ ಒಂದು ಚಿಂತನೆ. ಏನೋ ಒಂದು ಆಲೋಚಿಸಿದ ಕೂಡಲೇ ಓತಪ್ರೋತವಾಗಿ ಏನೇನೆಲ್ಲ ಆಲೋಚಿಸಲು ಆರಂಭಿಸುತ್ತೇವೆ ಅಲ್ಲವೇ? ಎಲ್ಲವೂ ಬಿಡಿ-ಬಿಡಿ ಆದರೂ ಈ ಎಲ್ಲ ಬಿಡಿಗಳೂ ಸೇರಿ ಒಂದು ಸಮೂಹಕ್ಕೆ ಸೇರುವುದೋ ಅಥವಾ ಒಂದು ಸಮೂಹದ ಚಿಂತನೆಗೆ ಸೇರಿದ್ದು. ಇರಲಿ ಬಿಡಿ, ಇಂದಿನ ಮಾತುಗಳು ಪೂರ್ಣದ ಬಗ್ಗೆಯೂ ಅಲ್ಲ, ಬಿಡಿ ಬಿಡಿ ಬಗ್ಗೆಯೂ ಅಲ್ಲ. ಹಲವಾರು ಬಿಡಿ ವಿಚಾರಗಳು, ಜತೆಗೆ ಹಲವಾರು ವಿಶೇಷ ಪ್ರಶ್ನೆಗಳೂ ಸಹ.

Advertisement

ಬಲು ಸರಳವಾಗಿಯೇ ಮುಂದುವರೆಸುವಾ. ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯಕ್ಕೆ ಎಷ್ಟು ಖರ್ಚಾಗುತ್ತದೆ, ಎಷ್ಟು ಹಣ ಮಾಡುತ್ತಾರೆ ಎಂಬುದೆಲ್ಲ ನಿಖರವಾಗಿ ನಿಮಗೆ ಗೊತ್ತಿಲ್ಲದೇ ಇದ್ದರೂ,ಅದು ನೂರಾರು ಅಥವಾ ಸಾವಿರಾರು ಕೋಟಿಯ ವ್ಯವಹಾರ ಅಂತ ಗೊತ್ತಿದ್ದರೆ ಸಾಕು. ಒಂದು ಕೋಟಿ ಎಂದರೆ ಎಷ್ಟು ನೋಟುಗಳು ಅಂತ ನನಗೂ ಒಂದು ಐಡಿಯಾ ಇಲ್ಲಾ ಏಕೆಂದರೆ ಅದರಲ್ಲಿ ಯಾವ ಡಿನಾಮಿನೇಷನ್‌ ನೋಟು ಎನ್ನುವುದರ ಮೇಲೆ ಅವಲಂಬಿತ.

ಒಂದು ಕೋಟಿಯ ಒಂದು ನೋಟು ಅಂದ್ರೆ ಒಂದೇ ನೋಟು, ಒಂದು ರೂಪಾಯಿ ನೋಟುಗಳೇ ಆದರೆ ಒಂದು ಕೋಟಿ ನೋಟುಗಳು ಅಂತ ಗೊತ್ತು. ಅದೆಲ್ಲ ಬಿಡಿ, ವಿಷಯ ಏನಪ್ಪಾ ಅಂದ್ರೆ, ವಿಶ್ವಕಪ್‌ ಪಂದ್ಯವು ಇನ್ನೆಷ್ಟೇ ಕೋಟಿ ವ್ಯವಹಾರದ ಆಟವೇ ಆದರೂ ಟಾಸ್‌ ಹಾಕುವಾಗ ಬಳಸುವುದು ಕಾಯಿನ್‌ಎಂಬುದನ್ನು ಮರೆಯಬಾರದು.

ಟಾಸ್‌ ಅನ್ನು ಅಂಪೈರ್‌ ಅಥವಾ ಮಧ್ಯವರ್ತಿ ಒಬ್ಬ ನಾಣ್ಯ ಚಿಮ್ಮುವ ಮೂಲಕ ನಡೆಯುತ್ತದೆ. ಟೀಮ್‌ ಕಪ್ತಾನ ಹೆಡ್ಸ್‌? ಟೈಲ್ಸ್‌ ? ಎಂದು ಹೇಳುತ್ತಾರೆ ಇತ್ಯಾದಿ ನಿಮಗೆ ಅರಿವಿರುವ ವಿಷಯ. ನಾವೂ ಮೊದಲಿಗೆ ನಾಣ್ಯ ಚಿಮ್ಮಿಯೇ ಅನಂತರ ಆಟವಾಡುತ್ತಿದ್ದೆವು. ಜೇಬಿನಲ್ಲಿ ಐದು ಪೈಸೆ ಇದ್ದರೆ ಅದೇ ಟಾಸ್‌ ನಾಣ್ಯ, ಹತ್ತು ಪೈಸೆ, ಎಂಟಾಣೆ, ಒಂದು ರೂಪಾಯಿ ನಾಣ್ಯದವರೆಗೂ ಟಾಸ್‌ ನಾಣ್ಯ ಬಳಸಿದ್ದೇವೆ. ವಿಶ್ವ ಕಪ್‌ನಲ್ಲಿ ಬಳಸುವ ನಾಣ್ಯ ಎಷ್ಟು ಪೈಸೆಯದ್ದು? ಗೊತ್ತಿದ್ದರೆ ಹೇಳಿ. ಮುಂದೆ ಸಾಗುವ.

Advertisement

ಈ ಹಿಂದೆ ಒಂದು ಪ್ರಶ್ನೆ ಕೇಳಿದ್ದೆ. ನಿಮಗೆ ನೀವೇ ನಮಸ್ಕಾರ ಮಾಡಿಕೊಂಡಿದ್ದೀರಾ ಅಂತ. ಮೊದಲಿಗೆ ನಿಮಗೆ horizontal ಮತ್ತು vertical ಅಂದ್ರೆ ಗೊತ್ತೇ? horizontal ಎಂದರೆ ಅಡ್ಡ, vertical ಎಂದರೆ ಲಂಬ. ಇವರೆಡರ ನಡುವೆ ಇರುವುದು “ಲೀನಿಂಗ್‌ ಟವರ್‌ಆಫ್‌ ಪೀಸಾ’. ಪೀಸಾದ ಈ ಗೋಪುರ ಕೊಂಚ ವಾಲಿದೆ. ಈ ಗೋಪುರ ಖ್ಯಾತಿ ಪಡೆದಿದ್ದೇ ವಾಲಿದ್ದರಿಂದ ಎನ್ನುತ್ತಾರೆ ಹಲವರು. ಆರು ನೂರಕ್ಕೂ ಹೆಚ್ಚು ವರುಷಗಳಾದರೂ ಖ್ಯಾತಿ ಉಳಿಸಿಕೊಂಡಿದೆ ಎಂದರೆ “ವಾಲಿದವನು ಬಾಳಿಯಾನು’ ಎನ್ನಬಹುದೇ? ವಾಲಿದ್ದಕ್ಕೆ ವಾಲಿ “ವಾಲಿ’ ಎನಿಸಿಕೊಂಡನೇ? ಅಲುಗಾಡುವ ವಾಲಿನಂತೆ ಇದ್ದವನಾಗಿದ್ದರಿಂದ ಅವನು “ವಾಲೀ’ ಎನಿಸಿಕೊಂಡನೇ? ಅಥವಾ ನೆಲಕ್ಕೆ ಉದುರುವ ಮುನ್ನ ಬರೀ ಹಾರಾಡಿಕೊಂಡಿದ್ದ ವಾಲಿಯಿಂದಾಗಿ ‘Volley’ ಹೆಸರು ಬಂತೇ ?

ಮಾತು ಎತ್ತೆತ್ತಲೋ ಹೋಯಿತೇ? ಇಲ್ಲಾ ಬಿಡಿ, ಇದು ಎಷ್ಟೇ ಆದರೂ ಬಿಡಿಬಿಡಿ ವಿಷಯ ತಾನೇ? ನೆಲಕ್ಕೆ ನೇರವಾಗಿ ನಿಂತು ಹಾಗೆಯೇ ಬೆನ್ನು ಬಾಗಿಸಿ (ನಿಧಾನವಾಗಿ) ನಿಮ್ಮದೇ ಕೈಗಳಿಂದ ನಿಮ್ಮದೇ ಪಾದಗಳನ್ನು ಮುಟ್ಟಿಸಿದರೆ ಅದೇ Self – ನಮಸ್ಕಾರ. ಕಾಲ್ಗಳು ನೆಲಕ್ಕೆ ಲಂಬವಾಗಿ ಇರಿಸಿಕೊಂಡು ನಿಮ್ಮದೇ ಪಾದಗಳಿಗೆ ನಮಸ್ಕರಿಸಿಕೊಂಡರೆ ಲಂಬ-ನಮಸ್ಕಾರ ಎನ್ನೋಣ. ಅದರಂತೆಯೇ ನೆಲೆದ ಮೇಲೆ ಕೂತು, ಕಾಲುಗಳನ್ನು ಚಾಚಿ, ಕೈಗಳನ್ನೂ ಚಾಚುತ್ತ ಬೆನ್ನು ಬಾಗಿಸಿ ಪಾದವನ್ನು ಅಥವಾ ಪಾದಗಳ ಬೆರಳುಗಳನ್ನು ತಾಕಿಸಿದರೆ ಅದು ಅಡ್ಡ ನಮಸ್ಕಾರ. ಅದೆಲ್ಲಾ ಸರಿ, ಆದರೆ ನಮಗೆ ನಾವೇ ಅಡ್ಡಬಿದ್ದರೆ ನಮಗೆ ನಾವು ಏನಂತ ಆಶೀರ್ವದಿಸಿಕೊಳ್ಳೋದು? ಪ್ರಶ್ನೆ ಚೆನ್ನಾಗಿದೆ,

ಆದರೆ ಕಾಲಿಗೆ ಬಿದ್ದವರನ್ನೆಲ್ಲ ಆಶೀರ್ವದಿಸಬೇಕು ಅಂತೇನಾದರೂ ಇದೆಯೇ? ಇದೆಂಥಾ ಬಿರಿಸು ನುಡಿ? ಕಾಲಿಗೆ ನಮಸ್ಕರಸಿದವರನ್ನು ಆಶೀರ್ವದಿಸದೇ ಇರಲಾದೀತೇ? ಮಕ್ಕಳು ಇಷ್ಟವಿಲ್ಲದ ಮದುವೆಯನ್ನು ಮಾಡಿಕೊಂಡು ಬಂದು ಹಿರಿಯರ ಕಾಲಿಗೆ ನಮಸ್ಕರಿಸಿದಾಗ, ಆ ಹಿರಿಯರು ಅದನ್ನು ಅವಮಾನ ಎಂದು ಸ್ವೀಕರಿಸಿ ಆಶೀರ್ವದಿಸದೇ ಬೆನ್ನ ಹಾಕಿ ಹೋಗುವುದನ್ನು ಸಿನೆಮಾ-ಧಾರಾವಾಹಿ-ನಾಟಕಗಳಲ್ಲಿ ಮತ್ತು ನಿಜ ಜೀವನದಲ್ಲೂ ನೋಡಿದ್ದೀವಿ ಅಲ್ಲವೇ? ಯಾರನ್ನೋ ಹಿಡಿದು ತಂದು ಅವರ ನಾಯಕನ ಪಾದದ ಬಳಿ ನೂಕಿದಾಗಲೂ ಅದು ಪಾದಕ್ಕೆ ಬಿದ್ದಂತೆ ಆದರೆ ನಮಸ್ಕಾರವಲ್ಲ. ತಲೆಯು ಪಾದದ ಬಳಿ ಇರುವುದೆಲ್ಲ ನಮಸ್ಕಾರವಲ್ಲ. ಶೋಲೆ ಚಿತ್ರದಲ್ಲಿ ಗಬ್ಬರ್‌ ಸಿಂಗ್‌ ಜಯ್‌ ಪಾದಕ್ಕೆ ಬೀಳುತ್ತಾನೆ, ಆದರೆ ಬಣ್ಣ ಎರಚಿ ಸಾಗುತ್ತಾನೆ.

ನಿಮ್ಮ ವಾದ-ಪ್ರತಿವಾದ?
ಇಷ್ಟಕ್ಕೂ ಈ ಸೆಲ್ಫ್ ನಮಸ್ಕಾರದ ವಿಷಯದಿಂದ ಅರಿತಿದ್ದು ಏನು? ಸೆಲ್ಫ್ ನಮಸ್ಕಾರ ಮಾಡಲು ಸಾಧ್ಯವಾಯಿತು ಎಂದರೆ ಹೊಟ್ಟೆ ಅಡ್ಡ ಬರುತ್ತಿಲ್ಲ ಎಂದ‌ರ್ಥ. ಬೆನ್ನಿನ ತೊಂದರೆ ಇಲ್ಲ ಅಂತ ಅರ್ಥ. ನಮ್ಮದೇ ಪಾದಗಳನ್ನು ಹತ್ತಿರದಿಂದ ನೋಡಿಕೊಳ್ಳುವ ಆನಂದ ಇದೆ ಎಂದು. ಹೀಗೆ ನಮಸ್ಕರಿಸುವಾಗ ಕನ್ನಡಕ ಹುಷಾರು ಅಷ್ಟೇ. ಪಾದಗಳನ್ನು ಹತ್ತಿರದಿಂದ ನೋಡಿಕೊಂಡಾಗ, ಉಗುರು ಬಣ್ಣ ಹಾಳಾಗಿದ್ದರೆ ಹಚ್ಚಿಕೊಳ್ಳುವ ಸಮಯ ಬಂದಿದೆ ಎಂದು, ಉಗುರು ಕೊಂಚ ಉದ್ದ ಬೆಳೆದಿದ್ದರೆ ಕಟಾವ್‌ ಮಾಡುವ ಸಮಯ ಬಂದಿದೆ ಎಂದು, ಪಾದಗಳಲ್ಲಿ ಊತ ಕಂಡಿದೆ ಅಂದರೆ ಕೊಂಚ ಎಚ್ಚರವಹಿಸಬೇಕು, ಬೆರಳುಗಳ ಮಧ್ಯೆ ನೀರು ಅಥವಾ ತೇವಾಂಶವಿದ್ದರೆ ಚೆನ್ನಾಗಿ ಒರೆಸಿಕೊಳ್ಳಬೇಕು, ಬೆಳ್ಳಿಕಾಲುಂಗುರು ತುಂಬಾ ಗಟ್ಟಿಯಾಗಿ ಕೂತಿದ್ದರೆ ಸಡಿಲ ಮಾಡಿಕೊಳ್ಳಬೇಕು, ಅಂತೆಯೇ ತುಂಬಾ ಸಡಿಲವಾಗಿದ್ದರೆ ಬಿಗಿಗೊಳಿಸಿಕೊಳ್ಳಬೇಕು ಎಂದೆಲ್ಲ ಅರ್ಥಗಳು. ಹೋಗಲಿ ಬಿಡಿ, ಯಾಕೆ ಇಷ್ಟೆಲ್ಲ ತೊಂದರೆ? ಯಾರಾದರೂ ಪಾದಕ್ಕೆ ನಮಸ್ಕರಿಸಿದರು ಅಂದರೆ, ನಾ ಹೇಳಿದ ವಿಷಯಗಳನ್ನು ಪ್ರಶ್ನೆಗಳಾಗಿ ಕೇಳಬಹುದು ಕೂಡ.

ಇನ್ನೊಂದು ವಿಷಯ ಮತ್ತೊಂದಿಷ್ಟು ಪ್ರಶ್ನೆಗಳನ್ನು ಕೇಳಿ ಮುಗಿಸುತ್ತೇನೆ ಆಯ್ತಾ? ನಿಮಗೆ ಸಮಕಾಲೀನ ಅಂದ್ರೆ ಗೊತ್ತಾ? ಒಂದೇ ಸಮಯದಲ್ಲಿ ಇರುವ ಎಂಬರ್ಥದಲ್ಲಿ ಬಳಸಲಾಗುತ್ತದೆ, ಅಲ್ಲವೇ? ಅಬ್ದುಲ್‌ ಕಲಾಂ ಎಂಬ ಅದ್ಭುತ ವ್ಯಕ್ತಿಯ ಸಮಕಾಲೀನರು ಎಂಬುದೇ ನಮ್ಮ ಸೌಭಾಗ್ಯ ಎನ್ನುವಂತೆ ಹೇಳುತ್ತೇವೆ. ಮಹಾನ್‌ ವ್ಯಕ್ತಿಗಳ ಹೆಸರುಗಳನ್ನು ಹೇಳುತ್ತಾ ಅವರ ಸಮಕಾಲೀನರು ಎಂಬುದನ್ನು ಒಂದೆರಡು ಪುಟಗಳಲ್ಲಿ ಮುಗಿಸಬಹುದು ಆದರೆ ಭಯಂಕರ ವ್ಯಕ್ತಿಗಳೂ ನಮ್ಮ ಸಮಕಾಲೀನರು ಎಂಬುದಕ್ಕೆ ಕಾದಂಬರಿಯೇ ಬರೆಯಬೇಕಾಗುತ್ತದೆ.

ಸಮಕಾಲೀನರು ಅಂದರೆ ಏನು? ನನ್ನ ಅರ್ಥದಲ್ಲಿ ಒಂದೇ ಸಮಯದಲ್ಲಿ ತಮ್ಮ ಕಾಲನ್ನು ನೆಲದ ಮೇಲೆ ಇರಿಸಿದವರು ಅಂತ. ಒಂದೇ ಸಮಯದಲ್ಲಿ ಅಂದ್ರೆ ಒಂದೇ ಕಾಲದಲ್ಲಿ ಅಂತಲೂ ಅರ್ಥ. ಸಮಕಾಲೀನರು ಎಂಬಂತೆ ಸಮತಲೆಯವರು ಎಂದೂ ಹೇಳಬಹುದೇ? ಇಲ್ಲ ಬಿಡಿ. ನಾಲ್ಕಡಿ ಇರುವವರೂ, ಆರಡಿ ಇರುವವರೂ ಸಮತಲೆಯವರು ಹೇಗಾಗುತ್ತಾರೆ? ಆ ಅಂದ್ರೆ ಟೋ ಅನ್ನೋದಕ್ಕೆ ಬಾರದವರು, ಶತಾವಧಾನಿ ಗಣೇಶರ ಕಾಲದಲ್ಲಿ ಇದ್ದರು ಎಂದರೆ ಸಮತಲೆಯವರು ಎನ್ನಲಾದೀತೆ?
ಆ ಅಂದ್ರೆ ಟೋ ಅನ್ನೋದಕ್ಕೆ ಬಾರದವರು ಎಂಬುದನ್ನು ನಮ್ಮ ಮನೆಯಲ್ಲಿ ಹೇಳ್ತಿದ್ರು. ಇದು ಸರಿಯಾದ ಪ್ರಯೋಗವೇ ಅಲ್ಲವೇ ಗೊತ್ತಿಲ್ಲ. ಆದರೆ ಕೊನೆಯದಾಗಿ ನಾ ಕೇಳೋದು ಆ ಅಂದ್ರೆ ಟೋ ಅನ್ನೋದು ಯಾಕೆ? ಆ ಅಂದ್ರೆ ಕ್ಷೀ ಎನ್ನಲೂ ಬಾರದವರು ಎನ್ನಬಾರದೇಕೆ?

* ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next