Advertisement

Desi Swara: ಮಲೇಶಿಯಾ ಕನ್ನಡ ಸಂಘ-ಮಲೇಷ್ಯಾದಲ್ಲಿ ಕರ್ನಾಟಕ ಸಂಭ್ರಮ: ಕನ್ನಡ ಡಿಂಡಿಮ

05:16 PM Dec 02, 2023 | Team Udayavani |

ಮಲೇಷ್ಯಾ:ಕೊಲಾಲಂಪುರ್‌ ನಗರದ ರಾಬ್ಸನ್‌ ಕಾಂಡಿಮಿನಿಯಂ ಸಭಾಂಗಣದಲ್ಲಿ ಮಲೇಷ್ಯಾ ಕನ್ನಡ ಸಂಘದ ವತಿಯಿಂದ ಕರ್ನಾಟಕ ಸಂಭ್ರಮ – 50 ಅನ್ನು ಆಚರಿಸಲಾಯಿತು.

Advertisement

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಮಲೇಷ್ಯಾ ಕನ್ನಡ ಸಂಘ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ 50ರ ಸಂಭ್ರಮಾಚರಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಗದಗಿನ ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನಮ್‌ ಇದರ ಅಧ್ಯಕ್ಷರಾದ ಬ್ರಹ್ಮಚಾರಿ ಅ ದ್ವೈತ ಚೈತನ್ಯ (ಪುನೀತ್‌ ಮಹಾರಾಜ್‌) ಇವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕಳೆದ ಎರಡು ದಶಕಗಳಿಂದ ಮಲೇಷ್ಯಾ ಕನ್ನಡ ಸಂಘ ತನ್ನದೇ ಆದಂತಹ ರೀತಿಯಲ್ಲಿ ಕನ್ನಡದ ಅಸ್ಮಿತೆಯನ್ನು ಹೊರದೇಶದಲ್ಲಿ ಉಳಿಸುವ, ಬೆಳೆಸುವ ಕೈಂಕರ್ಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಕುಮಾರವ್ಯಾಸನಿಂದ ಕುವೆಂಪುವರೆಗೂ ಹಲವಾರು ಕವಿಗಳು ನಿರಂತರವಾಗಿ ಕನ್ನಡಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು ಆಧುನಿಕ ದಿನಮಾನಗಳಲ್ಲಿ ವಿಶೇಷವಾಗಿ ಅನಿವಾಸಿ ಭಾರತೀಯರು ಮಾತೃ ಭಾಷೆಯ ಮೂಲಕ ಭಾವವನ್ನು ಉನ್ನತ ಮಟ್ಟಕ್ಕೆ ಏರಿಸಿಕೊಳ್ಳುವ ಆವಶ್ಯಕತೆ ಇದೆ.

ಇದಕ್ಕೆ ಕನ್ನಡದ ಕವಿಗಳ ವಿಶೇಷವಾಗಿ ಡಿ.ವಿ.ಗುಂಡಪ್ಪನವರ ಕಗ್ಗಗಳು ಹೇಗೆ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಬಲ್ಲದು ಎಂದು ವಿವರಿಸಿ ಪ್ರಶ್ನೋತ್ತರವನ್ನು ಪ್ರಾರಂಭ ಮಾಡಿದರು. ಪ್ರತಿಯೊಂದು ಪ್ರಶ್ನೆಗಳಿಗೂ ಡಿ.ವಿ.ಜಿ ಯವರ ಕಗ್ಗ ಹಾಗೂ ರಾಮಕೃಷ್ಣ ವಿವೇಕಾನಂದರ ವೇದಾಂತ ಸಾಹಿತ್ಯದೊಂದಿಗೆ ಉತ್ತರವನ್ನು ನೀಡುತ್ತಾ ನೆರೆದಿದ್ದವರ ಮನಸೂರೆಗೊಂಡರು.

ಪ್ರಸ್ತುತ ದಿನಮಾನಗಳಲ್ಲಿ ವಿದೇಶಗಳಲ್ಲಿ ನಮ್ಮ ಮಕ್ಕಳು ನಮ್ಮ ಸಂಸ್ಕೃಯನ್ನು ಮರೆತಿರುವಂತೆ ಕಂಡರೂ ಈ ರೀತಿಯ ಚಟುವಟಿಕೆಗಳಿಂದ ಅವರಲ್ಲಿ ಮತ್ತೂಮ್ಮೆ ಸಂಸ್ಕೃತಿ, ಸಾಹಿತ್ಯ ಅಭಿರುಚಿ ಹಾಗೂ ಭಾರತೀಯ ಮೌಲ್ಯಗಳನ್ನು ಬೆಳೆಸಿದಂತೆ ಆಗುತ್ತದೆ ಎಂದು ಕಿವಿಮಾತು ಹೇಳಿದರು.

Advertisement

ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಏಳಿಗೆಗಾಗಿ ಶ್ರಮಿಸಿರುವ ಎಲ್ಲ ಸಾಹಿತಿಗಳ, ಹೋರಾಟಗಾರರ, ಜನನಾಯಕರ, ಕವಿ ಶ್ರೇಷ್ಠರ ಮತ್ತು ಕರ್ನಾಟಕ ರಾಜ್ಯದ ಎಲ್ಲ ಕನ್ನಡ ಶಿಕ್ಷಕರ ತ್ಯಾಗ ಮತ್ತು ಸೇವೆಯ ಪ್ರತಿಫಲವಾಗಿ ಇಂದು ಕರ್ನಾಟಕ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎಂದರು.

“ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು’
ಎಂಬ ರಾಷ್ಟ್ರಕವಿ ಕುವೆಂಪು ಅವರ ಹೃದಯ ದನಿಯಂತೆ ದೂರದ ಮಲೇಷ್ಯಾದಲ್ಲಿ ತಮ್ಮ ತನವನ್ನು ಮರೆಯದೆ, ತಮ್ಮ ಮಾತೃಭಾಷೆಯನ್ನು ಮರೆಯದೆ, ಕನ್ನಡದ ಹಿರಿಮೆ ಗರಿಮೆಗಳನ್ನು ಮಲೇಷ್ಯಾ ಪ್ರಜೆಗಳು ಕೂಡ ಮೆಚ್ಚುವ ರೀತಿಯಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿರುವ ಸಂಘದ ಎಲ್ಲ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ಕಾರ್ಯಕ್ರಮದ ಆಯೋಜಕರಿಗೆ ಅಭಿನಂದಿಸಿದರು.

ಮಲೇಷ್ಯಾ ಕನ್ನಡ ಸಂಘದಿಂದ ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯ ನಾಮಕರಣದ ಸುವರ್ಣ ಸಂಭ್ರಮದ ಶುಭಾಶಯಗಳನ್ನು ತಿಳಿಸಲಾಯಿತು. ಅನಂತರದಲ್ಲಿ ಪೂಜ್ಯ ಮಹಾರಾಜರಿಗೆ ಕನ್ನಡ ಸಂಘದ ವತಿಯಿಂದ ಸದಸ್ಯರಾದ ಪ್ರಶಾಂತ್‌ ನಾಯಕ್‌ ಅವರು ಸಮ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮಲೇಷ್ಯಾ ಕನ್ನಡ ಸಂಘದ ಸದಸ್ಯರಾದ ವಿನಯ್‌ ನಾಗರಾಜ್‌ ಇವರು ಪೂಜ್ಯರನ್ನು ಹಾಗೂ ಎಲ್ಲ ಆಹ್ವಾನಿತರನ್ನು ಸ್ವಾಗತಿಸಿದರು. ಮಲೇಷ್ಯಾ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್‌ಡಿ ವ್ಯಾಸಂಗ ಮಾಡುತ್ತಿರುವ ಯುವ ಸಾಧಕರಾದ ಕಿರಣ್‌ ಕುಮಾರ್‌ ರೋಣದ್‌ ಇವರು ಪೂಜ್ಯರ ಪರಿಚಯವನ್ನು ಮಾಡಿದರು.

ವಿನಯ್‌ ವಂದಿಸಿದರು. ವಿವೇಕ್‌ ಸತೀಶ್‌, ಆನಂದ್‌ ಹೊಮ್ಮರಡಿ, ಕಿರಣ್‌ ನೀಲುಗಲ್ಲ, ಸಂತೋಷ್‌ ಕುಮಾರ್‌, ವಿನಯ್‌ ಕಶ್ಯಪ್‌, ಪ್ರಶಾಂತ್‌ ರಾವ್‌, ದೇಶ, ವಿರಾಜ, ಬದ್ರೆಗೌಡ, ಮಂಜುಳಾ, ಚೈತ್ರ, ದಿವ್ಯ, ಮೀತಾ, ಸುಪ್ರಭ, ಪುಷ್ಕರಣಿ, ವಿದ್ಯಾ ಹಲವು ಪ್ರಮುಖ ಸದಸ್ಯರು ಮತ್ತು ಗದಗ ನವರಾದ ಶಿವಕುಮಾರ ಶಿವನಗುತ್ತಿ ಇವರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next