Advertisement

Desi Swara:ಶ್ರೀಮಂತ ದೇಶ ಕಲಿಸಿತ್ತು ಬದುಕಿನ ಪಾಠ-ಸ್ಕ್ಯಾಂಡಿನೇವಿಯಾದ ಅಪರೂಪದ ಅನುಭವ

10:20 AM Apr 29, 2023 | Team Udayavani |

ಬದುಕಲು ನಮಗೇನು ಬೇಕು ಎಂಬ ಪ್ರಶ್ನೆ ಹಲವು ಬಾರಿ ಕಾಡುತ್ತದೆ. ಕೇವಲ ಹಣ, ಆಸ್ತಿ ಇದ್ದರಷ್ಟೇ ಸಾಕೇ..? ಖಂಡಿತಾ ಸಾಧ್ಯವಿಲ್ಲ. ಎಲ್ಲರೂ ಅರಸುವುದು ಕೊಂಚ ನೆಮ್ಮದಿಯನ್ನು. ಅದನ್ನು ನಾವು ಹೊರಗಿನಿಂದ ದುಡ್ಡು ಕೊಟ್ಟು ಖರೀದಿ ಮಾಡಲಾಗದು. ನಾವು ಅದನ್ನು ನಮ್ಮೊಳಗೆ ಸೃಷ್ಟಿಸಿಕೊಳ್ಳಬೇಕಿದೆ.

Advertisement

ಹೊರದೇಶಗಳಲ್ಲಿ ಸುತ್ತಾಡುವಾಗ ಅನುಭವಕ್ಕೆ ಸಿಗುವ ಹಲವಾರು ವಿಚಾರಗಳಿವೆ. ಅದರಲ್ಲಿ ಕೆಲವು ನಮ್ಮ ಮನಸ್ಸಿಗೆ ಹತ್ತಿರವಾಗಿ ಬಿಡುತ್ತವೆ. ಎಲ್ಲೋ ಏನೋ ಕಳೆದುಕೊಂಡಿದ್ದು ಮರಳಿ ಸಿಕ್ಕಷ್ಟು ಖುಷಿ ಕೊಡುತ್ತವೆ. ಒಂದು ರೀತಿಯಲ್ಲಿ ಸಂತೋಷವೆಂದರೆ ಇದೇ ಇರಬೇಕು ಎನ್ನುವಷ್ಟರ ಮಟ್ಟಿಗೆ ನಾವು ಕಳೆದುಹೋಗುತ್ತೇವೆ. ಅಂತಹ ಒಂದು ವಿಶಿಷ್ಟ ಅನುಭೂತಿಯನ್ನು ಕಟ್ಟಿಕೊಟ್ಟಿದ್ದು ಸ್ಕ್ಯಾಂಡಿನೇವಿಯಾ.

ಇಂಗ್ಲೆಂಡ್‌ನ‌ಲ್ಲಿ ನಾವು ಈಸ್ಟರ್‌ ರಜೆಗಾಗಿ ಕಾತುರದಿಂದ ಕಾಯುತ್ತಿರುತ್ತೇವೆ. ಯಾಕೆಂದರೆ ಹೊಸ ವರ್ಷ ಪ್ರಾರಂಭವಾದ ಬಳಿಕ ಸಿಗುವ ಇದು (ಶನಿವಾರ, ರವಿವಾರ) ಸೇರಿ ಮೊದಲ ನಾಲ್ಕು ದಿನಗಳ ಸುದೀರ್ಘ‌ ರಜೆಯಾಗಿರುತ್ತದೆ. ಶಾಲಾ ಮಕ್ಕಳಿಗೂ ರಜೆ ಇರುವುದರಿಂದ ಮನೆಯಲ್ಲಿ ಒಂದು ರೀತಿಯ ಸಂಭ್ರಮದ ವಾತಾವರಣವೇ ಸೃಷ್ಟಿಯಾಗಿರುತ್ತದೆ.

ಕೆಲವರು ಈ ರಜೆಯಲ್ಲಿ ಮನೆಯಲ್ಲೇ ಇದ್ದು ವಿಶ್ರಮಿಸಲು ಬಯಸಿದರೆ, ಬಹಳಷ್ಟು ಕುಟುಂಬಗಳು ಸುತ್ತಮುತ್ತಲಿನ ಪ್ರವಾಸಿ
ತಾಣಗಳಿಗೆ ವಿಹಾರ ಹೋಗ ಬಯಸುತ್ತಾರೆ. ಹೀಗೆ ಹೋಗಬಯಸುವರಿಗೆ ಯೂರೋಪ್‌ ನಲ್ಲಿ ಬಹಳಷ್ಟು ಆಯ್ಕೆಗಳಿವೆ. ಒಂದೆರಡು ಗಂಟೆಗಳ ಪ್ರಯಾಣದಲ್ಲಿ ಜರ್ಮನಿ, ಸ್ವಿಟ್ಜರ್‌ ಲ್ಯಾಂಡ್‌, ಫ್ರಾನ್ಸ್‌, ಇಟಲಿಯಂತ ದೇಶಗಳಿಗೆ ಹೋಗಿ ಬರಬಹುದು. ಸುಂದರ ಪ್ರದೇಶಗಳಲ್ಲಿ ಮೂರು- ನಾಲ್ಕು ದಿನಗಳನ್ನು ಆರಾಮವಾಗಿ ಕಳೆಯಬಹುದು. ಮಕ್ಕಳಿಗೂ ಸೂಕ್ತವಾಗುವಂತ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸಬಹುದು.

Advertisement

ಇದೇ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ನಡೆಯುವ ಆಸಕ್ತಿದಾಯಕ ಚಟುವಟಿಕೆಯೆಂದರೆ ಅದು ಈಸ್ಟರ್‌ ಮೊಟ್ಟೆಯ ಹುಡುಕಾಟ (ಈಸ್ಟರ್‌ ಎಗ್‌ ಹಂಟ್‌). ಈ ಚಟುವಟಿಕೆಯನ್ನು ಪೋಷಕರು ಹಾಗೂ ಸ್ಥಳೀಯ ಸಮುದಾಯದವರು ಉದ್ಯಾನವನ ಅಥವಾ ಶಾಲೆಗಳಲ್ಲಿ ಆಯೋಜಿಸುತ್ತಾರೆ. ನಿಜವಾದ ಮೊಟ್ಟೆಗಳನ್ನು ಗಟ್ಟಿಯಾಗಿ ಬೇಯಿಸಿ ಅದಕ್ಕೆ ಬೇರೆ ಬೇರೆ ಬಣ್ಣಗಳನ್ನು ಬಳಿದು ಹಲವು ಜಾಗಗಳಲ್ಲಿ ಮುಚ್ಚಿಡುತ್ತಾರೆ.

ಕೆಲವೊಮ್ಮೆ ಈ ಮೊಟ್ಟೆಗಳು ಕೃತಕವಾಗಿದ್ದು ಚಾಕೋಲೇಟ್‌ ಗಳನ್ನೂ ಒಳಗೊಂಡಿರುತ್ತವೆ. ಮಕ್ಕಳಿಗೆ ನಕ್ಷೆಯನ್ನು ಕೊಟ್ಟು, ಹಲವು ಸುಳಿವುಗಳನ್ನು ನೀಡುತ್ತಾರೆ. ಅವರು ಈ ಮೊಟ್ಟೆಗಳನ್ನು ಹುಡುಕಬೇಕು. ಒಂದು ರೀತಿಯಲ್ಲಿ ಇದು ಮಕ್ಕಳ ಬುದ್ಧಿಯನ್ನು ಪರೀಕ್ಷೆ ನಡೆಸುವ ಚಟುವಟಿಕೆ. ಹೆಚ್ಚು ಖುಷಿ ಕೊಡುವ ಈ ಕಾರ್ಯಕ್ರಮದಲ್ಲಿ ಹೆಚ್ಚು ಮೊಟ್ಟೆಗಳನ್ನು ಹುಡುಕಿದ ಮಕ್ಕಳಿಗೆ ಬಹುಮಾನಗಳೂ ಸಿಗುತ್ತವೆ.

ಪ್ರತಿ ವರ್ಷದಂತೆ ನಾನು ಮತ್ತು ಶ್ರೀಮತಿ ಈ ವರ್ಷವೂ ಈಸ್ಟರ್‌ ರಜೆ ಸಿಕ್ಕಾಗ ಸುತ್ತಾಟ ಬಯಸಿ ಹೊರಟೆವು. ಈ ಬಾರಿ ಆಯ್ಕೆ ಮಾಡಿದ್ದು ಉತ್ತರ ಯೂರೋಪ್‌ನಲ್ಲಿರುವ ಸ್ಕ್ಯಾಂಡಿನೇವಿಯಾ ಪ್ರದೇಶ. ನಾಲ್ಕು ದಿನಗಳಲ್ಲಿ ಸ್ಕ್ಯಾಂಡಿನೇವಿಯಾದ ಮೂರು ದೇಶಗಳಾದ ಡೆನ್ಮಾರ್ಕ್‌, ನಾರ್ವೆ ಹಾಗೂ ಸ್ವೀಡನ್‌ಗಳ ರಾಜಧಾನಿಗಳಿಗೆ ಭೇಟಿ ನೀಡಿ ಅಲ್ಲಿನ ಸುತ್ತಮುತ್ತಲಿರುವ ಹಲವು ಜಾಗಗಳನ್ನು ನೋಡಿ ಖುಷಿಪಟ್ಟೆವು. ಹಸುರು ಬೆಟ್ಟಗಳ ನಡುವೆ ಹರಿಯುವ ಜಲಪಾತ, ಸುಂದರ ನಗರಗಳು, ಆಕರ್ಷಕ ಹಳ್ಳಿಗಳು ಈ ದೇಶಗಳ ಪ್ರಮುಖ ಆಕರ್ಷಣೆ.

ಸ್ಕ್ಯಾಂಡಿನೇವಿಯಾ ಪ್ರಕೃತಿಯ ಮಡಿಲಲ್ಲಿರುವ ವಿಹಂಗಮ ಪ್ರದೇಶ. ಇಲ್ಲಿನ ಎಲ್ಲ ದೇಶಗಳೂ ನೋಡಲು ಬೆರಗುಗೊಳಿಸುವ ಭೂದೃಶ್ಯಗಳನ್ನು ಹೊಂದಿದೆ. ಉತ್ತರ ಯುರೋಪಿನ ಅತ್ಯಂತ ಸುಂದರವಾದ ಕಡಲತೀರಗಳು ಹೊಂದಿರುವ ಸ್ಕ್ಯಾಂಡಿನೇವಿಯಾದ ರಾಜಧಾನಿ ಕೋಪನ್‌ ಹ್ಯಾಗನ್‌ ಭವ್ಯವಾದ ಅರಮನೆಗಳಿಗೆ ಹೆಸರು ವಾಸಿಯಾಗಿದೆ. ಆಳವಾದ ಕಣಿವೆಗಳು,
ಕಡಿದಾದ ಪರ್ವತಗಳು ಮತ್ತು ಮರದ ಚರ್ಚುಗಳಿಗೆ ಹೆಸರುವಾಸಿಯಾಗಿದೆ. ಕೃಷಿ ಮತ್ತು ಮೀನುಗಾರಿಕೆಯಲ್ಲಿ ಅತ್ಯಂತ ಶ್ರೀಮಂತ ಮತ್ತು ಆಸಕ್ತಿದಾಯಕ ಸಂಸ್ಕೃತಿಯನ್ನು ಹೊಂದಿರುವ ಇಲ್ಲಿನ ಜನಸಂಖ್ಯೆ ಅತ್ಯಂತ ಕಡಿಮೆ. ಎಲ್ಲಿಯೂ ಕಿಕ್ಕಿರಿದ ಜನಸಂದಣಿ ಕಾಣಸಿಗುವುದಿಲ್ಲ. ರಜೆಯಲ್ಲಿ ಇಲ್ಲಿ ಓಡಾಡುವಾಗ ಸಾಕಷ್ಟು ಸುಂದರ ಹಾಗೂ ಆಸಕ್ತಿದಾಯಕ ಸ್ಥಳಗಳು ನೋಡಲು ಸಿಕ್ಕಿತು. ಅದರಲ್ಲಿ ಅಪರೂಪ ಹಾಗೂ ಮುಖ್ಯವಾದವುಗಳನ್ನು ಇಲ್ಲಿ ಸ್ಮರಿಸಬಯಸುತ್ತೇನೆ.

ವಿಜೀಲ್ಯಾಂಡ್‌ ಮೂಸೆಯಂ ನಾರ್ವೆಯ ರಾಜಧಾನಿಯಾದ ಒಸ್ಲೋನ ಪ್ರಾರ್ಜ್ಞೆ ಪಾರ್ಕ್‌ನಲ್ಲಿದೆ. ವಿಗೆಲ್ಯಾಂಡ್‌ ಶಿಲ್ಪಕಲಾ ಉದ್ಯಾನವು 1924 ಮತ್ತು 1943ರ ನಡುವೆ ಗುಸ್ಟಾವ್‌ ವಿಗೆಲ್ಯಾಂಡ್‌ ನಿರ್ಮಿಸಿದ ಶಿಲ್ಪಗಳ ಶಾಶ್ವತ ಸಂಗ್ರಹವಾಗಿದೆ. ಈ ಉದ್ಯಾನವು ಸುಮಾರು 43 ಹೆಕ್ಟೇರ್‌ಗಳಷ್ಟಿದೆ ಮತ್ತು ಶಿಲ್ಪಕಲಾ ಉದ್ಯಾನವು ಒಬ್ಬ ಕಲಾವಿದನಿಂದ ಮಾಡಲ್ಪಟ್ಟ ವಿಶ್ವದ ಅತೀ ದೊಡ್ಡ ಶಿಲ್ಪಕಲಾ ಉದ್ಯಾನವನವಾಗಿದೆ. ವಿಜೀಲ್ಯಾಂಡ್‌ ಒಬ್ಬ ವಿಶಿಷ್ಟ ಮತ್ತು ವಿಭಿನ್ನ ಶಿಲ್ಪಿ ಎಂದು ಹೇಳಬಹುದು. ಅವನು ಏಕಶಿಲಾ (ಮೊನೋಲಿತ್‌) ಶಿಲ್ಪಗಳನ್ನು ರಚಿಸಿವುದರಲ್ಲಿ ಪರಿಣಿತನಾಗಿದ್ದನು.

ಉದ್ಯಾನದ ಮಧ್ಯದಲ್ಲಿ ಒಂದು 46 ಅಡಿಯ ಎತ್ತರದ ಏಕಶಿಲೆಯ ಸ್ತಂಭವನ್ನು ಮೂವರು ಮೇಸ್ತ್ರಿಗಳ ಸಹಾಯದಿಂದ ಹದಿನಾಲ್ಕು ವರ್ಷದ ಅವಧಿಯಲ್ಲಿ ಕೆತ್ತಿದ್ದಾನೆ. ಈ ಕಂಬದಲ್ಲಿ ಆಕಾಶದ ಕಡೆಗೆ ನಿಧಾನವಾಗಿ ಏರುವ 121 ಮಾನವ ಆಕೃತಿಗಳಿಂದ ಕೂಡಿದೆ. ಏಕಶಿಲೆಯ ಸುತ್ತಲೂ 36 ಗುಂಪುಗಳ ಆಕೃತಿಗಳಿವೆ. ಇದು “ಜೀವನದ ವೃತ್ತ’ ವಿಷಯವನ್ನು ಪ್ರತಿನಿಧಿಸುತ್ತದೆ. ಇವನು ತನಗೆ ಜೀವನದ ಬಗ್ಗೆ ಇದ್ದ ಅನಿಸಿಕೆಗಳನ್ನು ಪ್ರತಿಬಿಂಬಿಸಲು ಹೀಗೇ ನಾನಾ ಕೃತಿಗಳನ್ನು ಈ ಉದ್ಯಾನದಲ್ಲಿ ರಚಿಸಿದ್ದಾನೆ. ಒಸ್ಲೋಗೆ ಹೋದಾಗ ಇದು ಒಂದು ನೋಡಲೇಬೇಕಾದ ಆಕರ್ಷಣೆ.

ಓಸ್ಲೋ ಹಾಗೂ ಸ್ಟೋಕ್ಹೊಲ್ಮ್‌ ನಗರಗಳ ಇನ್ನೊಂದು ವಿಶಿಷ್ಟತೆ ಎಂದರೆ ನಾವೆಲ್ಲ ಕೇಳಿರುವ ಪ್ರತಿಷ್ಠಿತ ನೋಬೆಲ್‌
ಪಾರಿತೋಷಕಗಳನ್ನು ಇಲ್ಲಿಯೇ ಇತ್ಯರ್ಥ ಮಾಡುವುದು ಹಾಗೂ ವಿತರಣೆ ಮಾಡುವುದು. ಜಗತ್ತಿನಲ್ಲಿ ಅತ್ಯಂತ ಉತ್ಕೃಷ್ಟ ಆವಿಷ್ಕಾರಗಳಿಗೆ ಸಮ್ಮಾನ ಸಿಗುತ್ತದೆ. ಈ ಸಮ್ಮಾನದ ಪಾತ್ರಧಾರಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಮೆಡಿಸಿನ್‌ ಅಥವಾ ಶರೀರಶಾಸ್ತ್ರ, ಪ್ರಗತಿಪರ ಹಾಗೂ ಮಾನವಕುಲಕ್ಕೆ ಪರಿಣಾಮವಾಗುವಂಥ ಕೆಲಸ ಮಾಡಿರುತ್ತಾರೆ. ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶ್ಯಸ್ತ್ರೀಕರಣ, ಶಾಂತಿ ಮಾತುಕತೆ ಹೀಗೆ ಮಾನವಕುಲದ ಶಾಂತಿಗಾಗಿ ಶ್ರಮಿಸಿದ ಮಹನೀಯರಿಗೆ ನೋಬೆಲ್‌ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇತ್ತೀಚೆಗೆ ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೂ ಈ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

ಡೈನಾಮೈಟ್‌ ಅನ್ನು ಕಂಡುಹಿಡಿದ ಆಲ್ಪ್ರೆಡ್ ನೋಬೆಲ್‌ ಏಕೆ ನೋಬೆಲ್‌ ಪಾರಿತೋಷಕಗಳನ್ನು ಕೊಡಲು ತೀರ್ಮಾನಿಸಿದ‌ ಎಂಬುದಕ್ಕೆ ನಾನಾ ಸಿದ್ಧಾಂತಗಳಿವೆ. ಸರ್‌ ಸಿ.ವಿ. ರಾಮನ್‌, ರವೀಂದ್ರನಾಥ ಟ್ಯಾಗೋರ್‌, ಮದರ್‌ ಥೆರೆಸಾ ಇವರು ಭಾರತದಿಂದ ನೋಬೆಲ್‌ ಪಾರಿತೋಷಕ ಪಡೆದವರ ಪಟ್ಟಿಯಲ್ಲಿ ಇದ್ದಾರೆ. ಒಟ್ಟಿನಲ್ಲಿ ಈ ಶ್ರೀಮಂತ ದೇಶಗಳ ಜಾಗಗಳನ್ನು ನೋಡುವುದು ಹಾಗೂ ಅಲ್ಲಿಯ ಜೀವನಶೈಲಿಯನ್ನು ಅನುಭವಿಸುವುದು ಎಲ್ಲ ಒಂದು ಕಲಿಕೆಯೇ ಸರಿ. ದೈನಂದಿನ ಬದುಕಿನಲ್ಲಿ ಅವರು ಆಧುನಿಕತೆ ಬಳಸಿಕೊಂಡು ಜೀವನವನ್ನು ಸರಳವಾಗಿಸಿಕೊಂಡಿರುವುದು ಶ್ಲಾಘನೀಯ. ಒಟ್ಟಿನಲ್ಲಿ ಉತ್ತರ ಯೂರೋಪಿನ ಈ ದೇಶಗಳು ಬದುಕಿಗೆ ಬೇಕಾಗುವ ಪಾಠವನ್ನು ಕಲಿಸುತ್ತದೆ ಎಂದೇ ಹೇಳಬಹುದು.

ಒಂದು ದಿನ ಸ್ಟೋಕ್ಹೊಲ್ಮ್‌ ನಲ್ಲಿ ಸಂಚರಿಸುವ ಅವಕಾಶ ಸಿಕ್ಕಿತು. ಹಲವು ಗಂಟೆಗಳ ಕಾಲ ವಿಶೇಷವಾದ ದೋಣಿಯಲ್ಲಿ ಪ್ರಯಾಣ. ವಿಶ್ವವಿದ್ಯಾನಿಲಯದಲ್ಲಿ ಚರಿತ್ರೆಯನ್ನು ಕಲಿಸುವ ಪ್ರಾಧ್ಯಾಪಕಿಯೊಬ್ಬರು ಸ್ವೀಡನ್‌ ದೇಶದ ಚರಿತ್ರೆ ಹಾಗೂ ಸುತ್ತಲಿನ ದೃಶ್ಯಗಳ ಬಗ್ಗೆ ಬಹಳ ಮನೋಜ್ಞವಾಗಿ ವ್ಯಾಖ್ಯಾನ ಮಾಡುತ್ತಿದ್ದರು. ಸ್ವೀಡನ್‌ ಸೇರಿದಂತೆ ಸುಮಾರು 30,000 ದ್ವೀಪಗಳಿವೆ. ದೋಣಿಯಲ್ಲಿ ಸಂಚರಿಸುತ್ತಿದ್ದಾಗಲೇ ಎಷ್ಟೋ ದ್ವೀಪಗಳು ಕಾಣ ಸಿಕ್ಕಿತು. ಈ ಪ್ರದೇಶಗಳಲ್ಲಿ ಹೆಚ್ಚು ಚಳಿ ಇರುತ್ತದೆ. ಚಳಿಗಾಲದಲ್ಲಿ ಸೂರ್ಯನನ್ನು ಕಾಣುವುದೇ ದುರ್ಲಭ. ಹೀಗಾಗಿ ಹೆಚ್ಚಿನ ಜನರು ಖಿನ್ನತೆಗೀಡಾಗುತ್ತಾರೆ. ಇದನ್ನು ನಿವಾರಿಸಲು,
ಬೇಸಗೆ ಕಾಲ ಬಂತೆಂದರೆ ಈ ದ್ವೀಪಗಳಲ್ಲಿ ದಿನಗಟ್ಟಲೆ ಕಳೆದು ಸಂಭ್ರಮಿಸುತ್ತಾರೆ. ವಿಧವಿಧವಾದ ಜಲಕ್ರೀಡೆಗಳನ್ನು ಆಡಿ ಕಾಲ ಕಳೆಯುತ್ತಾರೆ. ಇಲ್ಲಿನ ಜನರು ದೋಣಿಯನ್ನು ಹೊಂದಿರುವುದು ಸಾಮಾನ್ಯ. ಯಾಕೆಂದರೆ ದೇಶದ ಬಹು ಭಾಗಗಳು ನೀರಿನಿಂದ
ಆವೃತವಾಗಿರುತ್ತದೆ. ಹೀಗಾಗಿ ಇಲ್ಲಿನವರಿಗೆ ನೀರಿನಲ್ಲಿ ಕಾಲ ಕಳೆಯುವುದು ಅಚ್ಚರಿಯೇನಲ್ಲ.

*ಮಂಜುನಾಥ್‌ ತುರುವೆಕೆರೆ,
ಮಿಲ್ಟನ್‌ಕೇನ್ಸ್‌

Advertisement

Udayavani is now on Telegram. Click here to join our channel and stay updated with the latest news.

Next