Advertisement

Desi Swara: ಸೋಮಾರಿ ರೈತ ಹಾಗೂ ಬುದ್ಧಿವಂತ ಪತ್ನಿ

03:24 PM Nov 11, 2023 | Team Udayavani |

ಒಂದು ಊರಿನಲ್ಲಿ ಮೀನಾನಾಥ್‌ ಎಂಬ ಒಬ್ಬ ರೈತನಿದ್ದ. ಆತ ತುಂಬಾನೇ ಸೋಮಾರಿಯಾಗಿದ್ದ. ಅವನು ದಿನದಲ್ಲಿ ಎರಡೇ ಕೆಲಸ ಮಾಡುತ್ತಿದ್ದ. ಒಂದು ಹೊಟ್ಟೆ ತುಂಬಾ ತಿನ್ನುವುದು ಹಾಗೂ ಇನ್ನೊಂದು ಕಣ್ಣು ತುಂಬಾ ನಿದ್ದೆ ಮಾಡುವುದು. ಅದನ್ನೇ ರೂಢಿಸಿಕೊಂಡು ಬಂದಿದ್ದ. ಅವನ ಪತ್ನಿ ಹೆಸರು ವಸಂತಿ. ಅವಳು ತುಂಬಾ ಶ್ರಮಜೀವಿಯಾಗಿದ್ದಳು. ಅವಳು ಕಷ್ಟ ಪಟ್ಟು ದುಡಿಯುತ್ತಿರುವುದರಿಂದ ದಿನಾಲೂ ಊಟ, ತಿಂಡಿ ಸಮಯಕ್ಕೆ ಸರಿಯಾಗಿ ಸಿಗುತ್ತಿತ್ತು. ಒಂದು ದಿನ ಬೆಳಗ್ಗಿನ ತಿಂಡಿ ತಯಾರಿಸಿ, ಪತಿಯ ಬಳಿ ತಂದಳು ವಸಂತಿ.

Advertisement

ಮುಂಜಾನೆ ಹತ್ತು ಗಂಟೆಯಾದರೂ, ಗೊರಕೆ ಹೊಡೆಯುತ್ತಿದ್ದ ಆತನ ಬಳಿ ಬಂದು, ಈ ಮನುಷ್ಯ ಎಷ್ಟು ನಿದ್ದೆ ಮಾಡುತ್ತಾರೆ ?. ತಿಂಡಿ ತೆಗೆದುಕೊಂಡು ಬಂದಿದ್ದೇನೆ ತಿಂಡಿ ತಿನ್ನಿ ಎಂದು ಇವಳು ಎನ್ನುತ್ತಲೇ, ತಟ್ಟನೆ ಎಚ್ಚರಗೊಂಡ ಆತ ತಿಂಡಿ ತಂದಿದ್ದೀಯಾ? ಬೇಗ ತಾ ತುಂಬಾ ಹಸಿವೆ ಆಗ್ತಾ ಇದೆ, ಕೊಡು ಕೊಡು ಎಂದು ಅವಳ ಹತ್ತಿರ ಬಳಿ ಕೈ ಬೀಸಿದ. ನಿಮ್ಮ ಇಷ್ಟದ ಪೂರಿ, ಕ್ಯಾರೆಟ್‌ ಹಲ್ವಾ ಮಾಡಿದ್ದೇನೆ, ಬೇಗ ತಿಂದು ಹೊಲಕ್ಕೆ ಹೋಗಿ ಕೆಲಸ ಮಾಡಿ ಎಂದಳು ವಸಂತಿ. ಹಾ…ಹಾ! ಮೊದಲು ತಿಂಡಿ ತಿನ್ನುತ್ತೇನೆ ಆಮೇಲೆ ಅದೇನೆಂದು ನೋಡುತ್ತೇನೆ. ತುಂಬಾ ಹಸಿವೆ ಆಗುತ್ತಾ. ಇದೆ ಕೊಡು ಬೇಗ ಎಂದು, ಹೊಟ್ಟೆಬೀರಿ ತಿಂದು ಅಲ್ಲೇ ಮಂಚದ ಮೇಲೆ ಒರಗುತ್ತಾನೆ ಮೀನಾನಾಥ್‌. ಅರೇ ಅರೆ…! ಮತ್ತೆ ಮಲಗಿದ್ದಾ†… ಹೋಗಿ ಹೊಲಕ್ಕೆ, ಹೊಲದ ಕೆಲಸ ತುಂಬಾ ಬಾಕಿ ಇದೆ. ನೀವು ಹೀಗೆ ಮಲಗಿಕೊಂಡೆ ಇದ್ದರೇ ಮನೆ ಹೇಗೆ ನಡೆಯುತ್ತದೆ? ಎಂಬ ಪತ್ನಿ ವಸಂತಿಯ ಮಾತು ಆತನಿಗೆ ಕೇಳುತ್ತಿದ್ದರೂ, ಆತ ನಾಟಕೀಯವಾಗಿ ಮಲಗಿಕೊಂಡೇ ಕೇಳಿಸಿಕೊಳ್ಳುತ್ತಿದ್ದ. ಆತ ಎದ್ದೇಳುವ ಗೌಜಿಗೆ ಹೋಗಲೇ ಇಲ್ಲ. ವಸಂತಿಯ ಏಳಿಸುವ ಪ್ರಯತ್ನವೆಲ್ಲ ವಿಫ‌ಲಗೊಂಡ ಬಳಿಕ ಆಕೆ ನಿರಾಶೆಯಿಂದ ಹೊಲಕ್ಕೆ ತೆರಳುತ್ತಾಳೆ.

ನಿತ್ಯ ಜೀವನ ನಡೆಸಲು ವಸಂತಿ ಬಹಳ ಶ್ರಮ ಹಾಕಿ ಕೆಲಸ ಮಾಡುತ್ತಿದ್ದಳು. ನಾನೊಬ್ಬಳೇ, ಒಬ್ಬಂಟಿಯಾಗಿ ಹೇಗೆ ಈ ಹೊಲ, ಮನೆಯನ್ನು ನಡೆಸಿಕೊಂಡು ಹೋಗಲಿ? ಎಲ್ಲಿಯವರೆಗೆ ತಾಕತ್ತು ಇರುತ್ತದೋ ಅಲ್ಲಿಯವರೆಗೆ ನಿಭಾಯಿಸುತ್ತೇನೆ. ಈ ಆಲಸಿ ಸೋಮಾರಿ ಪತಿಯನ್ನು ನೀನೇ ಕಾಪಾಡು ದೇವರೇ! ಎಂದು ಮನದಲ್ಲೇ ಅಂದುಕೊಳ್ಳುತ್ತಾ, ತನ್ನ ಕೆಲಸದಲ್ಲಿ ತಲ್ಲೀನಳಾಗುತ್ತಾಳೆ ವಸಂತಿ.

ಸಂಜೆ ಸಮಯ ಹೊಲದ ಕೆಲಸ ಮುಗಿಸಿ ಮನೆ ಕಡೆ ಹೆಜ್ಜೆ ಹಾಕುತ್ತಾಳೆ. ಆಗ ಆಕೆಯ ಎದುರಿಗೆ ಒಬ್ಬ ಸನ್ಯಾಸಿ ಎದುರುಗೊಳ್ಳುತ್ತಾನೆ. ಅಮ್ಮಾ, ನನಗೆ ತುಂಬಾ ಹಸಿವೆ ಆಗುತ್ತಿದೆ ಏನಾದರೂ ತಿನ್ನಲಿಕ್ಕೆ ಕೊಡು ಅಮ್ಮಾ ಎಂದು ಆ ಸನ್ಯಾಸಿ ಅಂಗಲಾಚುತ್ತಿದ್ದಂತೆ, ” ಸ್ವಾಮೀ, ಈಗ ನನ್ನ ಬಳಿ ಏನು ಇಲ್ಲ. ನೀವು ನನ್ನ ಜತೆ ನನ್ನ ಮನೆಗೆ ಬಂದರೆ ನಾನು ಏನಾದರೂ ತಿನ್ನಲು ಕೊಡಬಲ್ಲೆ’ ಎನ್ನುತ್ತಾಳೆ. ” ಸರಿ ತಾಯಿ, ನಡಿ ಹೋಗೋಣ ನಿನ್ನ ಜತೆ ನಿಮ್ಮ ಮನೆಗೆ ಬರುತ್ತೇನೆ.

Advertisement

ಹಾಗೆ ನಿನ್ನ ಕೈಯಾರೆ ಮಾಡಿದ ಊಟವನ್ನು ನಾನು ಉಣ್ಣುತ್ತೇನೆ. ಇದರಿಂದ ನಿನಗೆ ಯಾವುದೇ ತೊಂದರೆ ಏನು ಇಲ್ಲ ಅಲ್ಲವೇ’ ಎಂದು ಆ ಸನ್ಯಾಸಿ ಕೇಳುತ್ತಿದ್ದಂತೆ, “ಏನು ಹೇಳುತ್ತಿದ್ದೀರಿ ಸ್ವಾಮೀ ? ನಿಮ್ಮ ಪಾದಸ್ವರ್ಶ ನಮ್ಮ ಮನೆಗೆ ಲಭಿಸುತ್ತದೆಯೆಂದರೆ ನಾನು ಧನ್ಯಳು. ನನ್ನ ಮನೆ ಪಾವನವಾಗುತ್ತದೆ, ಅದೂ ಅಲ್ಲದೇ ನೀವು ನಾನು ತಯಾರಿಸಿದ ಊಟವನ್ನು ಸೇವಿಸುತ್ತೀರಿ ಅಂದರೆ ಇದಕ್ಕಿಂತ ಭಾಗ್ಯ ಇನ್ನೇನಿದೆ ?ಬನ್ನಿ ಸ್ವಾಮೀ ಬನ್ನಿ ಹೋಗೋಣ’ ಎಂದು ವಸಂತಿ ಸನ್ಯಾಸಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ.

ಮನೆಯಲ್ಲಿ ಹೊಟ್ಟೆ ತುಂಬ ಊಟವನ್ನು ಬಡಿಸುತ್ತಾಳೆ ಹಾಗೂ ಆ ಸನ್ಯಾಸಿಯ ಸೇವೆ ಮಾಡುತ್ತಾಳೆ. ಊಟ ಮಾಡಿದ ಸನ್ಯಾಸಿ “ಆಹಾ ! ಎಂಥಾ ಅದ್ಭುತವಾದ ಭೋಜನ. ನನ್ನ ಜೀವಮಾನದಲ್ಲಿ ಈ ರೀತಿಯ ಊಟವನ್ನು ಸವಿದಿಲ್ಲ, ನಾನು ಸಂತುಷ್ಟಗೊಂಡಿದ್ದೇನೆ. ಇದನ್ನು ಮೆಚ್ಚಿದ ಕಾರಣಕ್ಕಾಗಿ ನನಗೆ ನಿಮ್ಮಿರ್ವರಿಗೆ ವರದಾನ ಮಾಡಬೇಕು ಎಂದು ಮನಸ್ಸು ಹೇಳುತ್ತಿದೆ. ಕೇಳು ಮಗಳೇ, ನಿನಗೆ ಏನು ವರ ಬೇಕು?’ ಎಂದು ಆ ಸನ್ಯಾಸಿ ಕೇಳುತ್ತಿದಂತೆ, “ನೀವು ನಾನು ತಯಾರಿಸಿದ ಊಟವನ್ನು ಸವಿದಿದ್ದೀರಿ, ಇದಕ್ಕಿಂತ ದೊಡ್ಡ ಭಾಗ್ಯ ಬೇರೆ ಇಲ್ಲ. ನನಗೇನೂ ಬೇಕಿಲ್ಲ. ನಿಮ್ಮ ಪ್ರಶಂಸೆ, ಪುರಸ್ಕಾರವೇ ನನಗೆ ಸಿಗಬಲ್ಲ ಬಹುದೊಡ್ಡ ವರವಾಗಿದೆ’ ಎಂದು ಹೇಳುತ್ತಾಳೆ.

ಆಗ ಸನ್ಯಾಸಿ ಮೀನಾನಾಥ್‌ ಬಳಿ “ನಿನಗೇನು ವರ ಬೇಕು ಕೇಳು’ ಎನ್ನುತ್ತಾನೆ. ಸ್ವಾಮೀ, ನನ್ನ ಕೆಲಸ ಕಾರ್ಯವನ್ನು ಮಾಡುವ ಒಬ್ಬ ಒಳ್ಳೆಯ ಕೆಲಸದಾಳನ್ನು ದಯಪಾಲಿಸಿ ಸಾಕು’ ಎಂದು ಕೇಳುತ್ತಾನೆ, ಇದಕ್ಕೆ ಸನ್ಯಾಸಿ ನಗುತ್ತಾ “ಇಷ್ಟೇನಾ, ಸರಿ ಸರಿ. ನಾನು ನಿನಗೆ ಒಳ್ಳೆಯ ಕೆಲಸದಾಳನ್ನು ಸೃಷ್ಟಿ ಮಾಡುತ್ತೇನೆ. ಆದರೆ ಒಂದೇ ಒಂದು ಷರತ್ತು. ಆ ಕೆಲಸದಾಳಿಗೆ ನೀನು ದಿನದ 24 ಗಂಟೆಯೂ ಕೆಲಸವನ್ನು ಕೊಡಬೇಕು ಎಲ್ಲಿಯಾದರೂ ಆತನಿಗೆ ಕೆಲಸ ಸಿಕ್ಕಿಲ್ಲ ಎಂದಾದರೆ ಆತ ನಿನ್ನನ್ನೇ ತಿಂದು ಮುಗಿಸುತ್ತಾನೆ.

ಈ ಷರತ್ತಿಗೆ ಒಪ್ಪಿಗೆ ಇದ್ದರೇ ಈಗಲೇ ನಾನು ವರವನ್ನು ನೀಡುತ್ತೇನೆ’ ಎಂದು ಸನ್ಯಾಸಿ ಹೇಳುತ್ತಲೇ, “ಸರಿ ಸರಿ…ನಮ್ಮ ಮನೆಯಲ್ಲಿ ನಿರ್ವಹಿಸಲು ಅಸಾಧ್ಯವಾದಷ್ಟು ಕೆಲಸ ಕಾರ್ಯಗಳಿವೆ. ಆತನಿಗೆ ಒಂದು ಕ್ಷಣವೂ ಬಿಡುವು ಕೊಡದೇ ಕೆಲಸವನ್ನು ಕರುಣಿಸುತ್ತೇನೆ’ ಎನ್ನುತ್ತಾನೆ ಮೀನಾನಾಥ್‌. “ಒಳ್ಳೆಯದಾಗಲಿ ನಾನು ಹೊರಡುತ್ತೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ಒಬ್ಬ ರಾಕ್ಷಸ ಇಲ್ಲಿಗೆ ಬರುತ್ತಾನೆ ಆತನೇ ನಿನ್ನ ಕೆಲಸದಾಳು’ ಎಂದು ಸನ್ಯಾಸಿ ಕಣ್ಮರೆಯಾಗುತ್ತಾನೆ.

ಸನ್ಯಾಸಿ ಮಾಯವಾಗುತ್ತಿದ್ದಂತೆ, ಅಲ್ಲಿಗೆ ಒಂದು ಭಯಂಕರ ರೂಪದ ರಾಕ್ಷಸ ಬಂದು ನಿಲ್ಲುತ್ತಾನೆ. ಅರೆ…!! ಇದು ಯಾರು ಎಂದು ಅವರಿಬ್ಬರೂ ಮುಖ ಮುಖ ನೋಡುತ್ತಿರುವ ಸಂದರ್ಭ “ನಾನೇ ನಿಮ್ಮ ಅಪ್ಪಣೆಯನ್ನು ಪಾಲನೆ ಮಾಡಲು ಬಂದಿರುವ ಕೆಲಸದಾಳು. ನನಗೆ ಕೆಲಸ ಕೊಡಿ ಬೇಗ’ ಎಂದು ಆ ರಾಕ್ಷಸ ಹೇಳುತ್ತಾನೆ. ” ಹೋ..! ಹೌದೇನೂ, ಮೊದಲು ಮನೆಯ ಸುತ್ತಮುತ್ತ ಸ್ವಚ್ಛ ಮಾಡು’ ಎಂದು ಮೀನಾನಾಥ್‌ ಹೇಳುತ್ತಲೇ, “ಮುಂದಿನ ಕೆಲಸವನ್ನು ಯೋಚಿಸಿ ನಿರ್ಧರಿಸಿಕೊಳ್ಳಿ, ತತ್‌ಕ್ಷಣವೇ ಬರುತ್ತೇನೆ’ ಎಂಬ ಆ ರಾಕ್ಷಸನ ಮಾತು ಕೇಳಿ, “ಹೇ..ನಡಿ ನಡಿ, ಆ ಕೆಲಸವನ್ನು ಮೊದಲು ಮಾಡಿ ಮುಗಿಸು.ಇದನ್ನು ಪೂರ್ಣಗೊಳಿಸಲು ನಿನಗೆ ಒಂದು ದಿನ ಬೇಕಾಗಬಹುದು,

ನನ್ನಲ್ಲಿ ನಿನಗೆ ಕೊಡಲು ಸಾಕಷ್ಟು ಕೆಲಸ ಇದೆ’ ಎಂದು ಗೊಣಗುತ್ತಾ ಮೀನನಾಥ್‌, ತುಂಬಾ ನಿದ್ದೆ ಬರುತ್ತಿದೆ, ಆತ ಆಗಮಿಸುವುದರ ಮೊದಲು ಸ್ವಲ್ಪ ನಿದ್ದೆ ಮಾಡುತ್ತೇನೆ ಎಂದು ಮಂಚದ ಮೇಲೆ ಮಲಗಲು ಸಿದ್ಧತೆಯಲ್ಲಿರುವಾಗ ರಾಕ್ಷಸ ಪ್ರತ್ಯಕ್ಷಗೊಳ್ಳುತ್ತಾನೆ. ನನಗೆ ಬೇರೆ ಕೆಲಸ ಕೊಡಿ, ಇಲ್ಲವೆಂದರೆ ನಿಮ್ಮನ್ನು ತಿನ್ನುತ್ತೇನೆ ಎನ್ನುತ್ತಾನೆ. “ಹೇ…ಇಷ್ಟು ಬೇಗ ಆ ಕೆಲಸ ಮುಗಿಯಿತಾ? ಸಾಧ್ಯವಿಲ್ಲ ನೀನು ಅದನ್ನು ಸರಿಯಾಗಿ ಮಾಡಿಲ್ಲ ಎಂದು ಮೀನಾನಾಥ್‌ ಉಸುರಿದಾಗ, ನಾನು ಸುಳ್ಳು ಹೇಳಲಾರೆ ನಿಮಗೆ ನನ್ನ ಮೇಲೆ ನಂಬಿಕೆ ಇಲ್ಲವೆಂದರೆ ನನ್ನ ಜತೆ ಬನ್ನಿ ನಾನು ತೋರಿಸುತ್ತೇನೆ ಎನ್ನುತ್ತಾನೆ ರಾಕ್ಷಸ.

ರಾಕ್ಷಸನ ಜತೆ ತೆರಳುತ್ತಾನೆ ಮೀನನಾಥ್‌. ಆತ ಹೇಳಿದಂತೆ ಆತ ಕಣ್ಣು ಹಾಯಿಸಿದೆಲೆಲ್ಲ ಪೂರ್ತಿ ಸ್ವಚ್ಛತೆಯೇ ಕಣ್ಣಿಗೆ ಗೋಚರಿಸುತ್ತದೆ. ಹೌದು! ಈತ ಹೇಳಿದ್ದು ಸತ್ಯ ವಿಚಾರ. ಏನು ಕೆಲಸ ಕೊಡಲಿ ? ಯಾವುದಾದರೂ ದೊಡ್ಡ ಕೆಲಸ ಕೊಡಬೇಕು ಎಂದು ಆಲೋಚಿಸುತ್ತಾ, “ಹೋಗು ಕೆರೆಯ ಹೂಳನ್ನು ಎತ್ತು’ ಎಂದು ಮೀನಾನಾಥ್‌ ಹೇಳುತ್ತಾನೆ. ಮಾಲಕನ ಅಪ್ಪಣೆಯಂತೆ ರಾಕ್ಷಸ ಕೆರೆಯ ಹೂಳನ್ನು ಎತ್ತುವುದಕ್ಕೆ ಮುಂದಾಗುತ್ತಾನೆ. ಎಷ್ಟೇ ವೇಗವಾಗಿ ಮಾಡಿದರೂ, ಕಡಿಮೆ ಎಂದರೂ ಎರಡು ದಿನ ಅಗತ್ಯವಾಗಿ ತಗುಲುತ್ತದೆ ಅಲ್ಲಿಯವರೆಗೆ ಒಂದು ಒಳ್ಳೆ ಊಟಮಾಡಿ ನಿದ್ದೆ ಮಾಡುತ್ತೇನೆ ಎಂದು ಆಲೋಚಿಸುತ್ತಾನೆ ಮೀನಾನಾಥ್‌.

ಇನ್ನೇನು, ಊಟಕ್ಕೆ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ರಾಕ್ಷಸನ ಆಗಮನವಾಗುತ್ತದೆ. ಮಾನ್ಯರೇ, ನೀವು ಹೇಳಿದ ಕೆಲಸ ಮುಗಿಯಿತು, ಬೇರೆ ಕೆಲಸ ಕೊಡಿ. ತಡ ಮಾಡಿದರೆ ನಿಮ್ಮನ್ನು ತಿನ್ನುತ್ತೇನೆ ನಾನು ಎಂದು ರಾಕ್ಷಸ ಹೇಳುತ್ತಿದ್ದಂತೆ, “ಅಯ್ಯೋ ವಿಧಿಯೇ ! ಇದು ದೊಡ್ಡ ಸಂಕಷ್ಟವಾಯಿತಲ್ಲ. ಯಾವುದೇ ಕೆಲಸ ಹೇಳಿದರೂ, ಈ ರಾಕ್ಷಸ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುತ್ತಾನೆ. ಮುಂದೇನು ಕೆಲಸ ಕೊಡಲಿ ? ಎಂದು ಮನದಲ್ಲೇ ಲೆಕ್ಕ ಹಾಕುತ್ತಿರುವ ಆತನಿಗೆ ಒಂದು ಉಪಾಯ ಹೊಳೆಯುತ್ತದೆ. ನಾನು ಮಲಗುತ್ತೇನೆ ನನ್ನ ಕಾಲನ್ನು ಚೆನ್ನಾಗಿ ಒತ್ತು ಎನ್ನುತ್ತಾನೆ. ಈತನ ಬಳಿ ಕಾಲನ್ನು ಒತ್ತಿಸಿಕೊಂಡು ಆರಾಮಾಗಿ ನಿದ್ದೆ ಮಾಡಬಹುದು ಎಂಬ ಆಲೋಚನೆ ಮೀನನಾಥ್‌ದು ಆಗಿತ್ತು. ರಾಕ್ಷಸ ಮೀನನಾಥನ ಕಾಲನ್ನು ಜೋರಾಗಿ ಒತ್ತಲು ಆರಂಭಿಸುತ್ತಾನೆ. ರಾಕ್ಷಸ ತನ್ನ ಶಕ್ತಿಯನ್ನು ಬಲಪಡಿಸಿ ಜೋರಾಗಿ ಒತ್ತುತ್ತಾನೆ. ಅಯ್ಯೋ! ನನ್ನ ಕಾಲಿನ ಮೂಳೆ ಪುಡಿಯಾಗುತ್ತಿದೆ ಎಂದು ಭಾಸವಾಗುತ್ತದೆ. ಬಿಟ್ಟು ಬಿಡು. ದಯಮಾಡಿ, ಬಿಟ್ಟು ಬಿಡು ನಿನಗೆ ಬೇರೆ ಕೆಲಸವನ್ನು ಕೊಡುತ್ತೇನೆ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ ಮೀನನಾಥ್‌. ಇದನ್ನು ಮರೆಯಲ್ಲಿ ನಿಂತು ಗಮನಿಸುತ್ತಿದ್ದ ಪತ್ನಿ ವಸಂತಿ ಮುಸಿಮುಸಿ ನಗುತ್ತಿರುತ್ತಾಳೆ.

ನೋವನ್ನು ತಡೆಯಲಾರದೆ ಪತ್ನಿಯನ್ನು ಜೋರಾಗಿ ಕರೆಯುತ್ತಾನೆ. ” ವಸಂತಿ ಬೇಗ ಬಾ, ಈ ರಾಕ್ಷಸನ ಕೈಯಿಂದ ನನ್ನನ್ನು ಬಿಡಿಸು’ ಎಂದು ಗೋಗರೆಯುತ್ತಾನೆ. ವಸಂತಿ ಅವರ ಮುಂದೆ ಬಂದ ಆಕೆ, “ಇದಕ್ಕೆಲ್ಲ ಕಾರಣ ನೀವೇ ಅಲ್ಲವೇ ? ಯಾಕೆ ಕೆಲಸದಾಳು ಬೇಕು ಎಂದು ಸನ್ಯಾಸಿಯ ಬಳಿ ವರ ಪಡೆದಿದ್ದೀರಿ? ಅದು ನಿಮ್ಮ ತಪ್ಪು ಅಲ್ಲವೇ ? ಈಗ ನೀವೇ ಅದನ್ನು ಅನುಭವಿಸಿ’ ಎಂದು ಹೇಳುತ್ತಾಳೆ. “ಹಾಗೆ ಹೇಳಬೇಡ ವಸಂತಿ. ನನ್ನ ಪರಿಸ್ಥಿತಿ ಅರ್ಥಮಾಡಿಕೊ ಎನ್ನುತ್ತಾನೆ’. ಅದಕ್ಕೆ ವಸಂತಿ “ಸರಿ ! ರಾಕ್ಷಸನ ತೊಂದರೆಯಿಂದ ನಾನು ಪಾರು ಮಾಡುತ್ತೇನೆ.

ಆದರೆ ನೀವು ಒಂದು ಷರತ್ತಿಗೆ ಒಪ್ಪಿಕೊಂಡರೆ ಮಾತ್ರ’ ಎಂದಾಗ ಅದೇನೇ ಷರತ್ತು ಆದರೂ ನಾನು ಒಪ್ಪಿಗೆ ನೀಡುತ್ತೇನೆ. ಈ ರಾಕ್ಷಸನಿಂದ ನನ್ನನ್ನು ಮೊದಲು ಬಿಡುಗಡೆಗೊಳಿಸು ಎಂದು ವಿನಂತಿ ಮಾಡಿಕೊಳ್ಳುತ್ತಾನೆ. ನೀವು ನಿಮ್ಮ ಕೆಲಸ ಕಾರ್ಯವನ್ನು ನೀವೇ ಸ್ವಂತವಾಗಿ ಮಾಡಬೇಕು ಇದಕ್ಕೆ ಒಪ್ಪಿಗೆ ಇದೆಯಾ? ವಸಂತಿ ಕೇಳುತ್ತಾಳೆ. ” ಸರಿ ಇದಕ್ಕೆ ಪೂರ್ಣ ಒಪ್ಪಿಗೆ ಸೂಚಿಸುತ್ತೇನೆ. ನನ್ನ ಎಲ್ಲ ಕೆಲಸವನ್ನು ನಾನೇ ಮಾಡಿ ಮುಗಿಸುತ್ತೇನೆ’ ಎಂದು ಮೀನಾನಾಥ್‌ ಹೇಳುತ್ತಾನೆ. ಆಗ ವಸಂತಿ ರಾಕ್ಷಸನ ಬಳಿ ಮೀನನಾಥನ ಕಾಲನ್ನು ಬಿಡುವಂತೆ ಹೇಳುತ್ತಾಳೆ. ಅದಕ್ಕೆ ಒಪ್ಪಿದ ರಾಕ್ಷಸ ಅವನ ಕಾಲನ್ನು ಬಿಟ್ಟು, ನನಗೆ ಬೇರೆ ಕೆಲಸಬೇಕು, ಕೊಡಿ ಎನ್ನುತ್ತಾನೆ.

ಅದಕ್ಕೆ ಆಕೆ “ಹೋಗು ಮನೆಯ ಹಿಂದೆ ಮೋತಿ ಎನ್ನುವ ನಾಯಿ ಮರಿ ಇದೆ. ಅದರ ಬಾಲವನ್ನು ನೇರವಾಗಿ ಮಾಡು, ಇದೆ ನಿನ್ನ ಕೆಲಸ’ ಎಂದು ಹೇಳುತ್ತಾಳೆ. ಆತ ಸರಿ ಎಂದು ನಾಯಿಯ ಬಾಲ ಹಿಡಿದು ನೇರವಾಗಿ ಮಾಡಲು ಎಷ್ಟೇ ಪ್ರಯತ್ನಪಟ್ಟರೂ ಅದು ಪುನಃ ಮೊದಲಿನ ರೀತಿಯಲ್ಲಿ ಇರುತ್ತದೆ. ದಿನ, ವಾರ, ತಿಂಗಳು ವರ್ಷಗಳು ಕಳೆದರೂ ರಾಕ್ಷಸನಿಂದ ಆ ಕೆಲಸ ಸಾಧ್ಯವಾಗದೇ ಹೋಗುತ್ತದೆ. ಇತ್ತ ಮೀನಾನಾಥ್‌ ಪತ್ನಿಯ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಉದುರಿಸುವ ಬುದ್ಧಿವಂತಿಕೆಯನ್ನು ಮೆಚ್ಚುತ್ತಾನೆ ಹಾಗೂ ಆತ ತನ್ನ ಸೋಮಾರಿತನವನ್ನು ಬಿಟ್ಟು ಪ್ರಾಮಾಣಿಕವಾಗಿ ತನ್ನ ಕೆಲಸ ಕಾರ್ಯಗಳ ಜತೆಗೆ ಹೊಲದಲ್ಲಿ ದುಡಿದು ಸುಂದರ ಜೀವನ ಸಾಗಿಸುತ್ತಾನೆ.

*ಶಿವಕುಮಾರ್‌ ಹೊಸಂಗಡಿ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next