Advertisement

Desi Swara: ಹೊನ್ನುಡಿ-ಅರಿವಿಗೆ ಗುಣದ ಜ್ಞಾನ ಮುಖ್ಯ

12:08 PM Aug 10, 2024 | Team Udayavani |

ಗುಣಾತೀತನಾದ ಭಗವಂತನನ್ನು ಸೇರಲು ದೈವಗುಣವನ್ನು ಬೆಳೆಸಿಕೊಳ್ಳಬೇಕು ಎನ್ನುತ್ತದೆ ರಾಮಾಯಣ. ತ್ರಿಗುಣಗಳಲ್ಲಿ ಸತ್ವಗುಣವೇ ಶ್ರೇಷ್ಠ ದಶರಥನ ಮಗ ಶ್ರೀರಾಮನನ್ನು ಯಜ್ಞದ ರಕ್ಷಣಾರ್ಥವಾಗಿ ವಿಶ್ವಾಮಿತ್ರರು ಕಾಡಿಗೆ ಕರೆದುಕೊಂಡು ಹೋಗುತ್ತಾರೆ. ವಿಶ್ವಾಮಿತ್ರರ ಆಜ್ಞೆಯಂತೆ ಶ್ರೀರಾಮ ಮೊದಲಿಗೆ ತಾಟಕಿಯನ್ನು ಸಂಹರಿಸುತ್ತಾನೆ. ತಾಟಕಿ ತಮೋಗುಣದ ಸಂಕೇತ. ತಮೋಗುಣವನ್ನು ಖಂಡಿಸದ ಹೊರತು ರಜೋಗುಣದ ಅನುಭವವಾಗುವುದಿಲ್ಲ.

Advertisement

ಗುರುವಿನ ಆಜ್ಞೆಯಂತೆ ತಾಟಕಾಳನ್ನು ಸಂಹರಿಸಿದ ಶ್ರೀರಾಮನಿಗೆ ರಜೋಗುಣದ ಅನುಭವವಾಗುತ್ತದೆ. ಮುಂದೆ ಶ್ರೀರಾಮ ಅಹಲ್ಯಾಳ ಶಾಪವಿಮೋಚನೆ ಮಾಡುತ್ತಾನೆ. ಅಹಲ್ಯಾದೇವಿಗೆ ಶಾಪ ಬರಲೊಂದು ಕಾರಣವಿದೆ. ಪರಪುರುಷನನ್ನು ಕನಸು ಮನಸಲ್ಲೂ ನೆನೆಸದ ಗೌತಮನ ಪತ್ನಿ ಅಹಲ್ಯೆಯ ಮನಸ್ಸಿನಲ್ಲಿ ಒಮ್ಮೆ ಇಂದ್ರ ಸುಳಿದು ಹೋಗುತ್ತಾನೆ. ಅಂದರೆ ಅರೆಕ್ಷಣ ಆಕೆ ಇಂದ್ರಿಯ ನಿಗ್ರಹವನ್ನು ಕಳೆದುಕೊಳ್ಳುತ್ತಾಳೆ. ಇಲ್ಲಿ ಇಂದ್ರ ಎಂದರೆ ಇಂದ್ರಿಯ ಎಂದರ್ಥ. ಇಂದ್ರಿಯಗಳನ್ನು ನಿಗ್ರಹಿಸದೆ ಸಾಧನೆಯಿಲ್ಲ. ಅದನ್ನು ಅರಿತ ಗೌತಮ ಅಹಲ್ಯಾಳನ್ನು ಶಪಿಸುತ್ತಾನೆ. ಸಾಧಕ ಇಂದ್ರಿಯ ನಿಗ್ರಹ ಮಾಡಿಕೊಳ್ಳದಿದ್ದರೆ ಅನರ್ಥ ಎಂಬುದನ್ನು ಸೂಚಿಸುತ್ತಾನೆ. ಅಹಲ್ಯಾ ಶಾಪ ವಿಮೋಚನೆಯ ಅನಂತರ ವಿಶ್ವಾಮಿತ್ರರು ರಾಮಲಕ್ಷ್ಮಣರಿಬ್ಬರನ್ನೂ ಮಿಥಿಲಾ ನಗರಕ್ಕೆ ಕರೆದುಕೊಂಡು ಹೋಗುತ್ತಾರೆ.

ಜನಕರಾಜನ ಮಗಳು ಸೀತೆ. ಸತ್ವಗುಣದ ಸಂಕೇತ. ಯಾವಾಗಲು ಸತ್ವಗುಣವನ್ನು ನಮ್ಮದಾಗಿಸಿಕೊಳ್ಳಬೇಕು. ಶ್ರೀರಾಮ ಶಿವ ಧನುಸ್ಸನ್ನು ಮುರಿದು ಸೀತೆಯನ್ನು ವರಿಸುತ್ತಾನೆ. ಹೀಗೆ ನಾವು ತಮೋಗುಣವನ್ನು ಖಂಡಿಸಿ, ರಜೋಗುಣವನ್ನು ಸಂಸ್ಕರಿಸಿ ಸತ್ವಗುಣವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸುತ್ತದೆ ರಾಮಾಯಣ.

Advertisement

ಜ್ಞಾನ ಮುದ್ರೆಯಲ್ಲಿಯೂ ಈ ಮೂರೂ ಗುಣಗಳೇ ಅಡಗಿವೆ. ಕಿರುಬೆರಳು ತಾಮಸಿಕ ಗುಣಕ್ಕೆ ಸಂಕೇತ. ಅದನ್ನು ಮೊದಲು ಬಿಡಬೇಕು. ಎರಡನೆಯದು ರಾಜಸಿಕ ಗುಣಕ್ಕೆ ಸಂಕೇತ. ಅದನ್ನು ಸಂಸ್ಕರಿಸಿಕೊಳ್ಳಬೇಕು. ಮೂರನೆಯದು ಮಧ್ಯದ ಬೆರಳು ಸಾತ್ವಿಕ ಗುಣದ ಸಂಕೇತ. ಗುಣಾತೀತನಾದ ಪರಮಾತ್ಮನನ್ನು ಸೇರಲು ಮೂರೂ ಗುಣಗಳನ್ನು ತೊರೆದು ಜೀವಾತ್ಮ ಪರಮಾತ್ಮನನ್ನು ಸೇರುವುದರ ಸಂಕೇತವೇ ಈ ಜ್ಞಾನಮುದ್ರೆ, ತೋರು ಬೆರಳು ಹೆಬ್ಬೆರಳನ್ನು ಸೇರಿಸುವುದೇ ಚಿನ್ಮುದ್ರೆ ಹೀಗೆ ನಮ್ಮ ಋಷಿಮುನಿಗಳು ಬ್ರಹ್ಮಜ್ಞಾನದ ಅರಿವನ್ನು ತಿಳಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next