Advertisement

Desi Swara: ಹೊನ್ನುಡಿ – ಆಯ್ಕೆಯಲ್ಲಿಯೇ ನಿಮ್ಮ ಪ್ರತಿಭೆ

01:39 PM Aug 03, 2024 | Team Udayavani |

ನಮ್ಮ ದೇಶದ ಮೊದಲ ರಾಷ್ಟ್ರಪತಿ ಡಾ| ಬಾಬು ರಾಜೇಂದ್ರ ಪ್ರಸಾದರು 1956ರಲ್ಲಿ ಬರೆದ ಲೇಖನವೊಂದನ್ನು ಇಲ್ಲಿ ಪ್ರಸ್ತಾವಿಸುತ್ತಿದ್ದೇವೆ. ಇಂದು ಅವರ ಜನ್ಮದಿನವೂ ಅಲ್ಲ. ಪುಣ್ಯಸ್ಮರಣೆಯ ದಿನವೂ ಅಲ್ಲ. ನಿತ್ಯ ನೆನಪಿನಲ್ಲಿ ಉಳಿಯುವವರು ಬಾಬೂಜಿ. ಆ ವರ್ಷ ನಮ್ಮ ಭಾಷಾವಾರು ಪ್ರಾಂತ ರಚನೆಯಾದ ಸಂದರ್ಭವದು. ದೇಶದ ಐಕ್ಯತೆಗೆ ಧಕ್ಕೆ ಬರಬಾರದೆಂಬ ಮಾತನ್ನು ಮನದಟ್ಟು ಮಾಡುವಾಗ ಅವರು ಲೇಖನದಲ್ಲಿ ಪ್ರತಿಪಾದಿಸಿದ ಮಾತೊಂದು ಸೂಜಿಗಲ್ಲಿನಂತೆ ಸೆಳೆಯುತ್ತದೆ.

Advertisement

ನೀವು ದಟ್ಟ ಅಡವಿಯಲ್ಲಿ ನಡೆಯುತ್ತಿರುವಾಗ ಒಂದು ಸುಂದರವಾದ ಮರ ನಿಮ್ಮ ಮನಸ್ಸನ್ನು ಆಕರ್ಷಿಸುತ್ತದೆ. ಅದನ್ನೇ ನೋಡುತ್ತ ನಿಂತ ನಿಮಗೆ ಸಮಯ ಕಳೆದು ಹೋದದ್ದೇ ಗೊತ್ತಾಗುವುದಿಲ್ಲ. ನಮ್ಮ ನೆರಳು ಉದ್ದವಾಗ ತೊಡಗಿದಾಗ ಸಂಜೆ ಆವರಿಸುವ ಮುನ್ಸೂಚನೆ ದೊರಕುತ್ತದೆ. ಇದ್ದ ಸಮಯವನ್ನೆಲ್ಲ ಒಂದೇ ಮರ ನೋಡುವುದರಲ್ಲಿ ಕಳೆದು ದಟ್ಟವಾದ ಅಡವಿಯನ್ನೆಲ್ಲ ಸುತ್ತಾಡಿ ಬರುವಾಗ ನಿಮಗೆ ಹೆಚ್ಚಿನ ಸುಂದರ ಮರಗಳು, ಗಿಡ, ಬಳ್ಳಿಗಳನ್ನು ನೋಡುವ ಅವಕಾಶ ತಪ್ಪಿ ಹೋಗುತ್ತದೆ. ಬದುಕು ಕೂಡಾ ಹೀಗೆ ಅಲ್ಲವೇ? ಯಾವುದೋ ಒಂದು ಸಣ್ಣ ಆಯ್ಕೆಯಿಂದ ಆಕರ್ಷಿತರಾಗಿ ಇನ್ನೂ ದೊರೆಯಬಹುದಾಗಿದ್ದ ಅನೇಕ ಅವಕಾಶಗಳನ್ನು ಕಳೆದುಕೊಂಡು ಬಿಡುತ್ತೇವೆ.

ಈ ಮಾತನ್ನು ಬಹಳ ಎಚ್ಚರದಿಂದ ಹೇಳುತ್ತಿದ್ದೇನೆ. ಆಯ್ಕೆ ಮಾಡುವುದರಲ್ಲಿಯೇ ಜೀವನ ಕರಗಿ ಹೋಗಬಾರದು. ಯಾವುದನ್ನು ಆಯ್ದುಕೊಳ್ಳುವುದರಿಂದ ಜೀವನ ಹೆಚ್ಚು ಸಫಲವಾಗುತ್ತದೆ ಎಂಬುದನ್ನು ನಮ್ಮ ಸೂಕ್ಷ್ಮ ಸಂವೇದನೆಯಿಂದ ಅರಿತುಕೊಂಡು ಕಾರ್ಯಪ್ರವೃತ್ತರಾಗಬೇಕು. ಈಗ ಬದುಕು ಮೊದಲಿನಂತಿಲ್ಲ. ನಮ್ಮ ಯುವಕರ ಎದುರು ಅನೇಕ ಆಯ್ಕೆಗಳಿವೆ. ಅದರಲ್ಲಿ ಅವರ ಯೋಗ್ಯತೆ, ಸಾಮರ್ಥ್ಯ ಅನುಸರಿಸಿ ಒಂದನ್ನು ಆಯ್ಕೆ ಮಾಡಿಕೊಳ್ಳಲಿ. ಬಿಟ್ಟು ಬಿಡದೇ ಅದರ ಹಿಂದೆ ಬಿದ್ದು ಅದನ್ನೆ ಧ್ಯಾನಿಸಿ, ಚಿಂತಿಸಲಿ.

ಪರಿಶ್ರಮಪಡಲಿ. ನಿಮ್ಮ ಆಯ್ಕೆ ಸುಪ್ತ ಪ್ರಜ್ಞೆಯಿಂದಲೂ ಜಾರಿಹೋಗದಿರಲಿ. ಜಾಗೃತಾವಸ್ಥೆಯಲ್ಲೂ ಅದೇ ಕಣ್ಣಿನ ಮುಂದೆ ಇರಲಿ. ಯಾವ ಹಿರಿದಾದ ಆಯ್ಕೆಯೂ ಸುಮ್ಮನೇ ಸಾಕಾರಗೊಳ್ಳುವುದಿಲ್ಲ. ಯಶಸ್ಸಿನ ಹಾದಿ ಅಂದವಾದ ಸಿಮೆಂಟಿನ ದಾರಿಯಲ್ಲ. ಅದು ಕಲ್ಲು ಮುಳ್ಳಿನ ದಾರಿ. ಸಾಧಿಸುವ ಛಲವೊಂದಿದ್ದರೆ ಏನೆಲ್ಲವೂ ಸಾಧ್ಯ!

Advertisement
Advertisement

Udayavani is now on Telegram. Click here to join our channel and stay updated with the latest news.

Next