Advertisement
ಮೊದಲಿಗೆ ಈ ಪೆನ್ ಡ್ರೈವ್ ಎಂದರೇನು ಅಂತ ಅರ್ಥೈಸಿಕೊಳ್ಳೋಣ. ಈ ಆಧುನಿಕ ಅಥವಾ ಐಟಿ ಯುಗದಲ್ಲಿ ಪೆನ್ ಡ್ರೈವ್ ಬಗ್ಗೆ ಯಾರಿಗಾದರೂ ಏಕೆ ಹೇಳಬೇಕು? ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಆದರೂ ಇರುವ, ಗೊತ್ತಿರುವ ವಿಷಯವನ್ನೇ ಬೇರೆ ಬೇರೆ ರೀತಿ ಹೇಳಿದಾಗ ವಿಷಯಗಳ ಗಾಢವಾಗಿ ಅರ್ಥವಾಗುತ್ತದೆ, ಆಳಕ್ಕೆ ಇಳಿಯುತ್ತದೆ.
Related Articles
Advertisement
ಸರಳವಾಗಿ ಮೇಲಿನ ವಿಷಯ ಹೇಳೋದು ಹೇಗೆ? ಮೊದಲಿಗೆ Internet ಎಂಬುದೇ ಬೇರೆ, ಸಾಮಾಜಿಕ ತಾಣ ಎಂದರೇ ಬೇರೆ. ಒಂದು ದೇಹ, ಒಂದು ಆತ್ಮ. ಅಂತರ್ಜಾಲ ಎಂಬುದು ಆತ್ಮ. ಆತ್ಮ ಎಂಬುದು ತಂಪಾದ ಗಾಳಿಯಲ್ಲಿ ಓಡಾಡುತ್ತಿದೆ ಎಂದರೆ ಅದು ಕೂತಿದ್ದ ದೇಹ ಢಮಾರ್ ಎಂದೇ ಅರ್ಥ. ಆತ್ಮ ಒಳಗಿದ್ದರೆ ಜೀವ. ಇಲ್ಲವಾದರೆ ಅಜೀವ. ಸಾಮಾಜಿಕ ತಾಣ ಎಂಬುದು ಬಾಹ್ಯ ಹಾಗಾಗಿ ಹೊರಮೈ. ಏನೇ ಹೇಳಿದರೂ ಡಂಗೂರವೇ ಹೌದು. ಈಗ ಪೆನ್ ಡ್ರೈವ್ ವಿಷಯಕ್ಕೆ ಬರೋಣ.
Pen Drive ಎಂಬುದು ಒಂದು ಸಾಧನ. ಒಂದು ಹೆಬ್ಬೆಟ್ಟಿನ ಆಕಾರ ಅಥವಾ ಗಾತ್ರದಲ್ಲಿ ಇರುವ ಸಾಧನ. ಅದರ ಹೊಟ್ಟೆಯಲ್ಲಿ ಅದೆಷ್ಟು ಶೇಖರಿಸಬಹುದೋ ಅಷ್ಟನ್ನು ಮಾತ್ರ ಅಥವಾ ಅದಕ್ಕಿಂತ ಕಡಿಮೆ ಮಾಹಿತಿ ಹೊತ್ತಿರುತ್ತದೆ. ಒಂದು ಕಂಪ್ಯೂಟರ್‌ನಿಂದ ಮತ್ತೊಂದು ಕಂಪ್ಯೂಟರ್‌ಗೆ ಮಾಹಿತಿಯನ್ನು ವರ್ಗಾಯಿಸಬೇಕಾದಾಗ ಬಳಸುವ ಸಾಧನ. ಎಷ್ಟು ಸರಳ ಅಲ್ಲವೇ? ಎಲ್ಲವೂ ಶುರುವಾಗೋದೇ ಇಷ್ಟು ಸರಳವಾಗಿ, ಹುಟ್ಟಿದ ಮಗುವಿನಂತೆ. ಅನಂತರ ಆಗುವ ಮಾರ್ಪಾಡು ಎಷ್ಟರ ಮಟ್ಟಿಗೆ ಎಂದರೆ ಊಹಿಸಲೂ ಆಗದಷ್ಟು.
ಪೆನ್ ಡ್ರೈವ್ ವಿಷಯಕ್ಕೂ ದೇವನೊಬ್ಬ ನಾಮ ಹಲವು ಎಂಬುದಕ್ಕೆ ನಿಕಟವಾದ ಸಂಬಂಧ, ಆದರೆ ಮಾನವನಿಗೆ ಹೋಲಿಸೋಣ ಅಷ್ಟೇ. ಪೆನ್ ಡ್ರೈವ್ ಎಂಬುದು ದೇಹವಿದ್ದಂತೆ, ಅದರೊಳಗಿರುವ ಮಾಹಿತಿ ಅಥವಾ ಡೇಟಾ ಎಂಬುದು ಆತ್ಮ. ಈ ಪೆನ್ ಡ್ರೈವ್‌ಗೆ ನಾನಾ ಹೆಸರುಗಳು. ಸಾಮಾನ್ಯವಾಗಿ ಭಾರತದಲ್ಲಿ ಪೆನ್ ಡ್ರೈವ್ ಎಂದು ಕರೆಸಿಕೊಳ್ಳುವ ಇದನ್ನು UKಯಲ್ಲಿ ಮೆಮೊರಿ ಸ್ಟಿಕ್ ಎಂದು ಹೆಸರು. ಅಮೆರಿಕದಲ್ಲಿThumb Drive ಅಥವಾ USB Flash Drive ಎಂಬ ಹೆಸರು. ಈ ಎಲ್ಲ ಹೆಸರಿಗೂ ಅದನ್ನು ಜೋಡಿಸಿರುವ ಪರಿಯೂ ಒಂಥರಾ ಹಾಸ್ಯವೇ ಸರಿ.
Pen Drive ಎಂಬ ಹೆಸರನ್ನು ಬಗೆದರೆ ಈ ಪೆನ್-ಡ್ರೈವ್ ನಲ್ಲಿ ಪೆನ್ನೂ ಇಲ್ಲ, ಡ್ರೈವೂ ಇಲ್ಲ. ಪೆನ್ನಿನ ಆಕಾರವೂ ಅಲ್ಲ, ಗಾತ್ರವೂ ಅಲ್ಲ. ಡ್ರೈವ್ ಅನ್ನಲು ತಂತಾನೇ ವಿಹಾರಕ್ಕೂ ಹೋಗೋದಿಲ್ಲ. ಇದೊಂದು ರೀತಿ ಹೇಗೆ ಎಂದರೆ ಮೈಸೂರು ಪಾಕ್‌ನಲ್ಲಿ ಮೈಸೂರು ನಗರವೂ ಇಲ್ಲ, ಪಾಕ್ ದೇಶವೂ ಇಲ್ಲ ಎಂಬಂತೆ. ಇಲ್ಲಿ ವಿಷಯ ಇಷ್ಟೇ Pendrive ಎಂಬುದನ್ನು Pen ಮತ್ತು Drive ಎಂದು ವಿಂಗಡಿಸಿ ಅರ್ಥೈಸಿಕೊಂಡರೆ ಹೀಗೇ ಆಗೋದು.
ಆದರೂ Pendrive ಎಂಬುದಕ್ಕೆ ಸರಿಯಾದ ಅರ್ಥವೇ ಇದೆ. ಒಂದು ಪೆನ್ ಎಂದುಕೊಂಡರೆ ಅದಕ್ಕಿರುವ ನಿಬ್ ಅದರ ಜೀವಾಳ ಅಥವಾ ಶಿರ. ಇದರಂತೆಯೇ ಒಂದು ಪೆನ್ ಡ್ರೈವ್‌ಗೆ ಇರುವ ಸಂಪರ್ಕ ಸಾಧನವೂ ಅದರ ಜೀವಾಳ. ಒಂದು ಪೆನ್‌ಗೆ ಇರುವ ಕ್ಯಾಪ್‌ನಂತೆಯೇ pendriveಗೂ ಕ್ಯಾಪ್ ಇರುತ್ತದೆ. ಹೇಗೆ ನಾವು ಕಾರಿನಲ್ಲಿ ಡ್ರೈವ್ ಅಂತ ಹೋದರೆ ನಾವೇ ಹೋಗದೇ ಬದಲಿಗೆ ಒಂದು ವಾಹನ ನಮ್ಮನ್ನು ಒಯ್ಯುತ್ತದೋ ಹಾಗೆ Pendrive ಒಳಗೆ ಮಾಹಿತಿಯೂ ಸಹ ಮಾನವನಂತೆ ಜಂ ಅಂತ ಕೂತು ಸಾಗುತ್ತದೆ. ಇದರಿಂದಾಗಿಯೇ Pendrive ಎಂಬ ಹೆಸರು.
ಇನ್ನು Thumbdrive. ಹೆಸರಿನಲ್ಲೇ ಇರುವಂತೆ ಹೆಬ್ಬಟ್ಟಿನ ಆಕಾರದಲ್ಲಿದೆ. ಇದರಲ್ಲಿ ಹೆಬ್ಬೆಟ್ಟೂ ಇಲ್ಲ, ಡ್ರೈವೂ ಇಲ್ಲ ಎನಿಸಿದರೂ, ಮೇಲೆ ಹೇಳಿದ ವಾದವೇ ಇಲ್ಲೂ ನಡೆಸಬಹುದು. ಈಗ ಏಕಲವ್ಯನ ಬಗ್ಗೆ ಆಲೋಚಿಸುವಾ. ನಾಟುವ ಬಾಣದ ಕಲೆಯ ಈ ಏಕಲವ್ಯ ಆಸ್ತಿಯೇ ಹೆಬ್ಬೆಟ್ಟು. ಆ ಹೆಬ್ಬೆಟ್ಟು ಅವನನ್ನು ಅರ್ಜುನನನ್ನೂ ಮೀರಿಸುವಂತೆ drive ಮಾಡಿರೋದು. ಆದರೆ ಅದರ Steering Wheel ಅವನ್ನು ಕಿತ್ತುಕೊಂಡು ಡ್ರೈವ್ ಮಾಡಲಾಗದಂತೆ ಆಗಿದ್ದು ವಿಧಿ. ನಾಟುವ ಬಾಣವೇ Pendriveನ ಸಂಪರ್ಕ ಸಾಧನ. ಅದಕ್ಕೆ ಬೇಕಿರುವುದೇ thumb. ಅದನ್ನು ನೂಕುವ ಕ್ರಿಯೆಯೇ ಡ್ರೈವ್. ಇಷ್ಟನ್ನೂ ಒಟ್ಟುಗೂಡಿಸಿದರೆ Thumb Drive ಅಂತ ಅಮೆರಿಕನ್ನರು ಆಲೋಚಿಸಲಿಲ್ಲ ಬದಲಿಗೆ ನನ್ನ ಅನಿಸಿಕೆ ಅಷ್ಟೇ.
ಈ ಸಾಧನದ ಹೊಟ್ಟೆಯಲ್ಲಿ ಅದಾವ ಮಾಹಿತಿ ಅಡಗಿರುತ್ತದೋ ಅದು ಕಣ್ಣಿಗೆ ಕಾಣುವುದಿಲ್ಲ. ನಮ್ಮಲ್ಲಿರುವ memoryಯಂತೆ. ಕೆಲವೊಮ್ಮೆ ಪ್ರೈಮರಿ ತರಗತಿಯಲ್ಲಿ ಆಡುತ್ತಿದ್ದ ಆಟಗಳು, ಸ್ನೇಹಿತರು, ಪರಿಸರ, ಘಟನೆ ಇತ್ಯಾದಿಗಳು ನೆನಪಿನಲ್ಲಿ ಇರುತ್ತದೆ. ಆದರೆ ಹತ್ತು ನಿಮಿಷದ ಹಿಂದೆ ಕನ್ನಡಕವನ್ನು ಅದೆಲ್ಲಿ ಇಟ್ಟಿದ್ದೇವೋ ಎಂಬ ನೆನಪು ಜಪ್ಪಯ್ಯ ಎಂದರೂ ತಲೆಗೆ ಬರುವುದೇ ಇಲ್ಲ. ಕೆಲವು ನೆನಪುಗಳೇ ಹಾಗೆ, ಮನಸಿನಲ್ಲಿ ಅಂಟಿಕೊಂಡಿರುತ್ತದೆ. ಕೆಲವು ನೆನಪುಗಳು ಕಮಲದ ಎಲೆಯ ಮೇಲಿನ ಹನಿಯಂತೆ. ಅದಾವಾಗ ಕೂರುತ್ತದೋ, ಅದಾವಾಗ ಸಂಪರ್ಕವಿಲ್ಲದೇ ಜಾರುತ್ತದೋ ಗೊತ್ತೇ ಆಗುವುದಿಲ್ಲ. ಏನನ್ನು ಹೇಳ ಹೊರಟೆ ಎಂದರೆ pendrive ಒಳಗಿರುವ ಮಾಹಿತಿಯೂ ಹಾಗೆಯೇ. ಎಲ್ಲವೂ ಚೆನ್ನ ಎಂದರೆ memory ಎಂಬುದು stick ಆಗಿರುತ್ತದೆ ಅಂದರೆ ಅಂಟಿಕೊಂಡಿರುತ್ತದೆ ಇಲ್ಲವಾದರೆ non&stick ತವದ ಮೇಲಿನ ದೋಸೆ-ಚಪಾತಿಯಂತೆ ಸಂಪರ್ಕವೇ ಇಲ್ಲದಂತೆ ಇರಬಹುದು. ಹೀಗಾಗಿ ಇದಕ್ಕೆ Memory Stick ಎಂಬ ಹೆಸರನ್ನೂ ಕೊಡಬಹುದು. ಒಟ್ಟಾರೆ ಹೇಳ್ಳೋದಾದ್ರೆ ಯಾವುದೇ ಹೆಸರಿನ ಹಿಂದೆಯೂ ಅಗಾಧವಾದ ಅರ್ಥಗಳ ಭಂಡಾರವೇ ಇರುತ್ತದೆ, ಬಗೆದು ನೋಡಿದಾಗ ಮಜಾ ಇರುತ್ತೆ. ಏನಂತೀರಾ?