Advertisement

Desi Swara: ಪೀಸಾ ನಗರದ ದೀಪಾವಳಿ ಬೆಳಗು

01:33 PM Nov 18, 2023 | Team Udayavani |

ದೀಪಾವಳಿ ಎಂದರೆ ಬೆಳಕಿನ ಸಡಗರ. ಭಾರತೀಯರಾದ ನಮಗೆ ದೀಪಾವಳಿ ಎಲ್ಲಿಲ್ಲದ ಸಂಭ್ರಮವನ್ನು ತಂದುಕೊಡುತ್ತದೆ. ಭಾರತದ ನೆಲದಿಂದ ದೂರವಿರುವ ಪೀಸಾದಲ್ಲಿಯೂ ದೀಪಗಳ ತೋರಣ ಹೊಸ ಬೆಳಕನ್ನು ಮೂಡಿಸಿತ್ತು. ಆತ್ಮೀಯತೆ, ಪ್ರೀತಿ, ವಿಶ್ವಾಸಕ್ಕೆ ಈ ದೀಪಾವಳಿ ಸಾಕ್ಷಿಯಾಗಿತ್ತು. ಇದು ಕನಸಾ ಅಥವಾ ನನಸಾ ಎಂದು ತಿಳಿಯಲು ಕ್ಷಣ ಕಾಲ ಬೇಕಾಯಿತು. ಸಂಜಯ್‌, ನೀರಜ್‌, ಭಾಸ್ಕರ್‌, ರೇಣುಕಾ, ಆಯುಷಿ, ಮೇಘನಾ, ಆಂಜೆಲಾ ಮತ್ತಿತರರ ಕಲರವ ಧ್ವನಿ ಊಹಾಲೋಕವಲ್ಲ ಎಂದು ನಿಶ್ಚಯವಾಯಿತು.

Advertisement

ಪ್ರೀತಿ, ವಿಶ್ವಾಸದ ಮಾತುಗಳು ಕಿವಿ ನಿಮಿರಿಸಿದವು. ರಫಿ ಅವರ ಹಾಡು “ಏಕ್‌ ವೋ ಭಿ ದಿವಾಲೀ ಥಿ ‘ ಅಂತರದಿಂದ ಕೇಳಿದಾಗ ನಮ್ಮ ಮುಂಬಯಿಯ ಟಿಐಎಫ್ಆರ್‌ ಸದನದಲ್ಲಿ ನೂರು ಸಂಸಾರಗಳು ಒಟ್ಟಿಗೆ ಸಂಭ್ರಮದಿಂದ ಆಚರಿಸುತ್ತಿದ್ದ ದೀಪಾವಳಿ ನೆನಪಿನಾಳದಿಂದ ಹೊರಬಂತು.

ಪೀಸಾ ನಗರದ ನೀರವತೆ ಇದ್ದಕ್ಕಿದ್ದಂತೆ ಮಾತುಕತೆಗಳ, ಮಿತ್ರರ ಸಂಧಿಸಿದ ಆನಂದ, ಭಾರತದ ಯುವಕರು ಯುವತಿಯರ (indian gems) ಸಂಭಾಷಣೆ, ವೈವಿಧ್ಯತೆಯಲ್ಲಿ ಏಕತ್ವ ಸಾರುತ್ತ ನಗುವಿನ ಅಲೆಗಳಲ್ಲಿ ತೇಲುತ್ತ ಇದ್ದ ವಾತಾವರಣ ಬಣ್ಣ ಬಣ್ಣದ ಚಿಲುಮೆಯಾಗಿ ಮಾರ್ಪಟ್ಟಿತ್ತು.

ಗಾಂಧಿ ರೆಸ್ಟೋರೆಂಟ್‌ ರಂಗೋಲಿ ದೀಪಗಳಿಂದ ನಮ್ಮನ್ನು ಸ್ವಾಗತಿಸಿತ್ತು. ಒಳಗೆ ನಡೆಯುತ್ತಿದ್ದಂತೆ ಒಂದು ಚಿಕ್ಕ ಚೊಕ್ಕ ಪೂಜಾ ಮಂಟಪ, ಗಣೇಶನ ಹಾಗೂ ಲಕ್ಷ್ಮೀಯ ವಿಗ್ರಹಗಳು ಮನಸೆಳೆಯಿತು. ಭಾರತೀಯರ ಸಂಗಡ ದೇವಿಗೆ ಆರತಿ ಮಾಡಿದಾಗ ಸ್ವರ್ಗ ಮೂರೇ ಗೇಣು ಅನ್ನಿಸಿತು. ಇದೊಂದು ಮರೆಯಲಾಗದ ಅನುಭವ. ತಮ್ಮ ಪಾದರಕ್ಷೆಗಳನ್ನು ತೆಗೆದು ಭಕ್ತಿಯಿಂದ ಕೈಮುಗಿದು “ಓಂ ಜೈ ಲಕ್ಷ್ಮೀ ಮಾತಾ’ ಅಂತ ಹಾಡಿ ಕಣ್ಣುಮುಚ್ಚಿ ಪ್ರಾರ್ಥನೆ ಸಲ್ಲಿಸಿದಾಗ ನಮ್ಮ ಯುವಜನಾಂಗವು ನಮ್ಮ ಗೌರವ, ನಮ್ಮ ಆಚಾರಗಳನ್ನು ಪಾಲಿಸುವುದರಲ್ಲಿ ಹೆಮ್ಮೆ ಅನ್ನಿಸಿತು.

ಪೂಜೆಯ ಅನಂತರ ಊಟದ ಸಂಭ್ರಮ. ಸಮೋಸದಿಂದ ಹಿಡಿದು ಜಾಮೂನ್‌ ವರೆಗೂ ರುಚಿಕರ ಸ್ವಾದಿಷ್ಟ ಊಟ. ಹೊಟೇಲ್‌ ಸ್ಟಾಫ್ನವರ ನಗುಮುಖದ ಆತ್ಮೀಯತೆ ಊಟವನ್ನು ಬಡಿಸುವುದರಲ್ಲಿ ಕಾಣಬಹುದಿತ್ತು. ಊಟ ಮುಗಿಯುತ್ತಿದ್ದಂತೆ ಎಲ್ಲರೂ ಸಂಭಾಷಣೆಯಲ್ಲಿ ತೊಡಗಿದರು. ನನಗೆ ವಿಶೇಷ ಮರ್ಯಾದೆ. “ನೀವು ಬಂದಿದ್ದು ಸಂತೋಷ’ ಅಂದಾಗ ಕಣ್ಣುಗಳು ತೇವಗೊಂಡವು.

Advertisement

ಸಂಗೀತ ನೃತ್ಯ ಪ್ರಿಯರಲ್ಲವೇ ಭಾರತೀಯರು ! ಹೊಟೇಲ್‌ ಮಾಲಕರು ಹಾಕಿದ್ದ ಬಾಲಿವುಡ್‌ ಹಾಡುಗಳಿಗೆ ಗುಂಪಿನ ನೃತ್ಯ! ಒಂದು ತಾಸು ನೃತ್ಯ ಮುಗಿದ ಮೇಲೆ “ಪಟಾಕಿಗಳಿಲ್ಲದ ದೀಪಾವಳಿ ಬರಡು ಭೂಮಿಯಂತೆ’ ಇಲ್ಲಿಯ ನಿಯಮದ ಪ್ರಕಾರ ದೊಡ್ಡ ಪಟಾಕಿಗಳನ್ನು ನಾವು ಹೊಡೆಯುವ ಹಾಗಿಲ್ಲ . ಸ್ಪಾಕ್ಲìರ್ಸ್‌ ಹಿಡಿದು ಮಕ್ಕಳು, ಹಿರಿಯರು, ಯುವಕ ಯುವತಿಯರು ಹೊರಗೆ ಬಂದು ಹಚ್ಚಿದಾಗ ಪೀಸಾದ ಕತ್ತಲು ಬೆಳಕಾಗಿ ಮಾರ್ಪಟ್ಟು ಎಲ್ಲರಿಗೂ ಆನಂದ ತಂದಿತ್ತು.

ವೇಳೆ ಮುಂದಕ್ಕೆ ಹೋಗಿತ್ತು. ಎಲ್ಲರು ನನ್ನನ್ನು ಬೀಳ್ಕೊಟ್ಟಾಗ ಭಗವಂತ ನಿಮ್ಮೆಲ್ಲರ ಆಸೆ ಆಕಾಂಕ್ಷೆ ಗಳನ್ನು ಪೂರೈಸಲಿ ಎಂದು ಮನೆಕಡೆ ಹೊರಟಾಗ ಹೃದಯ ತುಂಬಿ ಬಂತು. ಕಳೆದ ಒಂದೆರಡು ತಾಸುಗಳು ನೆನಪಿನಾಳದಲ್ಲಿ ಶಾಶ್ವತವಾಗಿ ಬೆಳಕಿನಂತೆ ಬೆಲೆ ಊರಿತ್ತು.

*ಜಯಮೂರ್ತಿ, ಇಟಲಿ

Advertisement

Udayavani is now on Telegram. Click here to join our channel and stay updated with the latest news.

Next